ಅಧಿಕಾರಿ ಮಹಾಂತೇಶ್ ಹತ್ಯೆ ಪ್ರಕರಣ; ವರದಿ ಸಲ್ಲಿಸಲು ಪೊಲೀಸ್, ಸಹಕಾರ ಇಲಾಖೆಗೆ ನಿರ್ದೇಶನ

ಬೆಂಗಳೂರು; ನೌಕರರ ಗೃಹ ನಿರ್ಮಾಣ ಸಹಕಾರ ಸಂಘಗಳಲ್ಲಿ ನಡೆದಿದೆ ಎನ್ನಲಾಗಿದ್ದ ಲಕ್ಷಾಂತರ ಕೋಟಿ ರು.ಮೊತ್ತದ ಹಗರಣದ  ತನಿಖೆ ನಡೆಸುತ್ತಿದ್ದ ಕೆಎಎಸ್‌ ಅಧಿಕಾರಿ ಎಸ್‌ ಪಿ ಮಹಾಂತೇಶ್‌ ಹತ್ಯೆ ಪ್ರಕರಣ 8 ವರ್ಷಗಳ ಬಳಿಕ ಮತ್ತೆ ಮುನ್ನೆಲೆಗೆ ಬಂದಿದೆ.

 

ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ  ಮಾನವ ಹಕ್ಕುಗಳ ಆಯೋಗ 5 ವರ್ಷಗಳ ಹಿಂದೆ ನೀಡಿದ್ದ ತೀರ್ಪಿನ ಅನುಸಾರ ಯಾವ ಕ್ರಮ ಕೈಗೊಂಡಿದೆ ಎಂದು ಹಾಲಿ ಅಧ್ಯಕ್ಷ ಡಿ ಎಚ್‌ ವಘೇಲಾ ಅವರು ಬೆಂಗಳೂರು ಪೊಲೀಸ್‌ ಕಮಿಷನರ್‌ ಮತ್ತು ಸಹಕಾರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2020ರ ಮಾರ್ಚ್‌ 12ರಂದು ಪತ್ರ ಬರೆದಿದ್ದಾರೆ.

ಇದೇ ಪತ್ರವನ್ನು ಆಧರಿಸಿ ಸಹಕಾರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ನಿರ್ದೇಶಕರಿಗೆ ವರದಿಯನ್ನು ಕೇಳಿದ್ದಾರೆ. ಈ ಸಂಬಂಧ 2020ರ ಮೇ 16ರಂದು ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಬರೆದಿರುವ ಪತ್ರ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ಎಸ್‌ ಪಿ ಮಹಾಂತೇಶ್‌ ಇವರ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು 2015ರ ಅಕ್ಟೋಬರ್‌ 19ರಂದು ನೀಡಿದ್ದ ತೀರ್ಪಿನ ಅನ್ವಯ ಇಲಾಖೆ ವತಿಯಿಂದ ಕೈಗೊಂಡಿರುವ ಕ್ರಮದ ಮಾಹಿತಿಯನ್ನು ಕೂಡಲೇ ಒದಗಿಸಬೇಕು,’ ಎಂದು ಸಹಕಾರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಸೂಚಿಸಿರುವುದು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ನಿರ್ದೇಶಕರಿಗೆ ಪತ್ರದಿಂದ ತಿಳಿದು ಬಂದಿದೆ.

 

ಅದೇ ರೀತಿ 2015ರಲ್ಲಿ ತೀರ್ಪಿನಲ್ಲಿ ಮಾಡಿರುವ ಶಿಫಾರಸ್ಸು(ಅಪರಾಧ ಸಂಖ್ಯೆ 121/2012)ಗಳ ಮೇಲೆ ಕೈಗೊಂಡಿರುವ ಕ್ರಮಗಳನ್ನು 2020ರ ಏಪ್ರಿಲ್‌21ರೊಳಗೆ ಆಯೋಗಕ್ಕೆ ಸಲ್ಲಿಸಬೇಕು ಎಂದು ಬೆಂಗಳೂರು ಪೊಲೀಸ್‌ ಕಮಿಷನರ್‌ಅವರಿಗೆ ಆಯೋಗ 2020ರ ಮಾರ್ಚ್‌11ರಂದು ಪತ್ರ ಬರೆದಿದೆ.

 

ಆಯೋಗದ ಆದೇಶದಲ್ಲೇನಿತ್ತು?

 

ಮಹಾಂತೇಶ್‌ ಹತ್ಯೆ ಪ್ರಕರಣದಲ್ಲಿ ಈಗಾಗಲೇ ವಿಚಾರಣೆ ಪೂರೈಸಿ ಆರೋಪಿಗಳ/ತಪ್ಪಿತಸ್ಥರ ಆರೋಪ ಸಾಬೀತಾದ್ದಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿರಬಹುದು. ಒಂದು ವೇಳೆ ಸಲ್ಲಿಸದೇ ಇದ್ದಲ್ಲಿ ಆದಷ್ಟು ಬೇಗ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಬೇಕೆಂದೂ ಬೆಂಗಳೂರು ನಗರ ಪೊಲೀಸ್‍ ಆಯುಕ್ತರಿಗೆ ಸೂಚಿಸುತ್ತಾ ಮುಂದಿನ ಕ್ರಮವು ನ್ಯಾಯಾಲಯಕ್ಕೆ ಬಿಟ್ಟಿರುವುದರಿಂದ ಹಾಗೂ ಮೃತ ಅಧಿಕಾರಿಯವರ ಕುಟುಂಬಕ್ಕೆ ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ದೊರಕಿಸಿಕೊಡಲು ಅಗತ್ಯ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದ ಆಯೋಗದ ಹಿಂದಿನ ಅಧ್ಯಕ್ಷೆ ಮೀರಾ ಸಿ ಸಕ್ಸೆನಾ ಅವರು  ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು.

 

ಮಹಾಂತೇಶ್, ರಾಜ್ಯದ ಕೆಎಎಸ್ ಅಧಿಕಾರಿ. ಸಹಕಾರ ಇಲಾಖೆಯ ಲೆಕ್ಕ ಪರಿಶೋಧನಾ ವಿಭಾಗದ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದವರು. ದಕ್ಷತೆ, ಪ್ರಾಮಾಣಿಕತೆ, ಶ್ರದ್ಧೆ, ಸಮಯ ಪಾಲನೆ ಮೈಗೂಡಿಸಿಕೊಂಡಿದ್ದ ಅಧಿಕಾರಿ ಎಂಬ ಹೆಗ್ಗಳಿಕೆ ಹೊಂದಿದ್ದರು. ಬೆಂಗಳೂರಿನ ಹಲವಾರು ಗೃಹ ನಿರ್ಮಾಣ ಸಹಕಾರ ಸಂಘಗಳ ಅಕ್ರಮಗಳನ್ನು ಬಯಲಿಗೆಳೆದಿದ್ದರು. ಚಿತ್ರದುರ್ಗ, ಬೆಳಗಾವಿ, ಶಿರಸಿ, ದಾವಣಗೆರೆಯಲ್ಲಿ ಸೇವೆ ಸಲ್ಲಿಸಿದ್ದ ಇವರು ಬೆಂಗಳೂರಿನಲ್ಲಿ ಸಹಕಾರ ಸಂಘಗಳ ಲೆಕ್ಕಪರಿಶೋಧನೆ ವಿಭಾಗದ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

 

ಸಹಕಾರ ನಗರದ ಕ್ರೆಡಿಟ್‌ ಕೋ ಆಪರೇಟೀವ್ ಸೊಸೈಟಿಯ ವಹಿವಾಟುಗಳನ್ನು ಲೆಕ್ಕಪರಿಶೋಧನೆಗೆ ಒಳಪಡಿಸಲು ಮುಂದಾಗಿದ್ದ ಹೊತ್ತಿನಲ್ಲೇ ಇವರನ್ನು ಬೆಂಗಳೂರಿನ ಮಹಾರಾಣಿ ಕಾಲೇಜು ವೃತ್ತದ ಬಳಿ ಹತ್ಯೆಗೈಯಲಾಗಿತ್ತು.  ಪ್ರಕರಣವನ್ನು 2012ರ ಮೇ 29ರಂದು ಸಿಸಿಬಿಯ ಎಸಿಪಿ ಎಸ್‌ ವಿ ಗುಳ್ಳೇದ್‌ ಅವರ ನೇತೃತ್ವದ ತಂಡ ತನಿಖೆ ನಡೆಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಕಾರ ನಗರದ ಪತ್ತಿನ ಸಹಕಾರ ಸಂಘದ ಕ್ಯಾಷಿಯರ್‌ಕಿರಣ್‌ಕುಮಾರ್‌, ಅಯ್ಯಪ್ಪ, ಮುರುಳಿ, ಶಿವಕುಮಾರ್‌ ಎಂಬುವರನ್ನು ಬಂಧಿಸಲಾಗಿತ್ತು.

 

ಪತ್ತಿನ ಸಹಕಾರ ಸಂಘದ ವಹಿವಾಟುಗಳನ್ನು ಲೆಕ್ಕಪರಿಶೋಧನೆಗೆ ಒಳಪಡಿಸಿದ್ದ ಮಹಾಂತೇಶ್‌ಅವರು, ಸಂಘದ ಕ್ಯಾಷಿಯರ್‌ ಕಿರಣ್‌ಕುಮಾರ್‌ ಎಂಬುವರು ಸಂಘದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದನ್ನು ಹೊರಗೆಡವಿದ್ದರು ಎಂಬುದನ್ನು ಸಿಸಿಬಿ ಅಧಿಕಾರಿಗಳು ತನಿಖೆಯಲ್ಲಿ ದೃಢಪಡಿಸಿದ್ದರು. ಹತ್ಯೆ ಪ್ರಕರಣ ಸಂಬಂಧ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಅವರು 2012ರ ಜೂನ್‌ 21ರಂದು ವರದಿ ಸಲ್ಲಿಸಿದ್ದರು.

 

ಎಸ್. ಪಿ. ಮಹಾಂತೇಶ್ ಅವರ ಕೊಲೆ ಪ್ರಕರಣ ಟಟ್ರಾ ಟ್ರಕ್ ಹಗರಣದೊಂದಿಗೂ ಥಳಕು ಹಾಕಿಕೊಂಡಿತ್ತು.  ಈ ಸಂಬಂಧ ತನಿಖೆ ಮಾಡಿಸಿ ಅಪರಾಧಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಭಾರತ ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷದ ಕೆ. ಎಸ್. ಬಾಲಗೋಪಾಲ್ (ಕೇರಳ) ರಾಜ್ಯಸಭೆಯಲ್ಲಿ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದನ್ನು ಸ್ಮರಿಸಬಹುದು.

 

ಟಟ್ರಾ ಟ್ರಕ್ ಹಗರಣದ ಆರೋಪಿ ಸ್ಥಾನದಲ್ಲಿ ನಿಂತಿರುವ ಬೆಮೆಲ್ ಕಂಪನಿಯ ಉದ್ಯೋಗಿಗಳ ಸಹಕಾರಿ ಸಂಘ ಹಲವಾರು ಮಂದಿ ಪ್ರಭಾವಿ ಗಣ್ಯರಿಗೆ ನಿಯಮಗಳನ್ನು ಉಲ್ಲಂಘಿಸಿ ಬೆಂಗಳೂರಿನಲ್ಲಿ ನಿವೇಶನಗಳನ್ನು ನೀಡಿದೆ. ಈ ಗೃಹನಿರ್ಮಾಣ ಸಹಕಾರಿ ಸಂಘದ ಅವ್ಯವಹಾರವನ್ನು ಮಹಾಂತೇಶ್ ಬಯಲಿಗೆಳೆದಿದ್ದರು ಎಂದು ರಾಜ್ಯಸಭೆಯಲ್ಲಿ ವಿವರಿಸಿದ್ದರು.

SUPPORT THE FILE

Latest News

Related Posts