ಕೋವಿಡ್‌ ಸಂಕಷ್ಟದಲ್ಲೂ ವಿಧಾನಪರಿಷತ್‌ನಲ್ಲಿ ನೇರ ನೇಮಕಾತಿ ಹೆಚ್ಚುವರಿ ಹೊರೆ ಭಾರ?

ಬೆಂಗಳೂರು: ಅನಗತ್ಯ ವೆಚ್ಚ ಮತ್ತು ಅನಗತ್ಯ ಹುದ್ದೆಗಳಿಗೆ ರಾಜ್ಯ ಸರ್ಕಾರ ಕಡಿವಾಣ ಹಾಕಲು ಹೊರಟಿದ್ದರೆ ಇತ್ತ ಕರ್ನಾಟಕ ವಿಧಾನಪರಿಷತ್‌ ಸಚಿವಾಲಯ ನೇರ ನೇಮಕಾತಿ ಹೆಸರಿನಲ್ಲಿ ಹೆಚ್ಚುವರಿ ವೆಚ್ಚದ ಹೊರೆ ಹೊತ್ತುಕೊಳ್ಳಲು ಮುಂದಾಗಿದೆ.  

 

ಕರ್ನಾಟಕ ವಿಧಾನಸಭೆ ಮತ್ತು ವಿಧಾನಪರಿಷತ್‌ ಸಚಿವಾಲಯದ ಕೆಲಸಗಳು ಒಂದೇ ತೆರನಾಗಿರುವುದರಿಂದ ಗ್ರಂಥಾಲಯ, ಸಂಶೋಧನಾ ಉಲ್ಲೇಖನಾ ಶಾಖೆ, ಆಂತರಿಕ ದೂರದರ್ಶನ, ವೆಬ್‌ ಕ್ಯಾಸ್ಟಿಂಗ್‌ ಕಾರ್ಯಗಳನ್ನು ಕರ್ನಾಟಕ ವಿಧಾನಸಭೆ ಸಚಿವಾಲಯವೇ ನಿರ್ವಹಿಸುತ್ತಿದೆ. ಅಲ್ಲದೆ ಕರ್ನಾಟಕ ವಿಧಾನಪರಿಷತ್ತಿನ ಗಣಕ ಕೇಂದ್ರದಲ್ಲಿ ವಿಧಾನಸಭೆ ಸಚಿವಾಲಯದ ಗಣಕ ಕೇಂದ್ರದ ಇಬ್ಬರು ಅಧಿಕಾರಿಗಳು 10 ವರ್ಷಗಳಿಂದ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

 

ಕಳೆದ 4 ವರ್ಷಗಳ ಹಿಂದೆಯೇ ಗಣಕ ಕೇಂದ್ರವನ್ನು ತೆರೆದಿರುವ  ವಿಧಾನಪರಿಷತ್‌ ಸಚಿವಾಲಯ, ಕಿಯೋನಿಕ್ಸ್‌ ಮುಖಾಂತರ ಹೊರ ಗುತ್ತಿಗೆ ಸೇವೆ ಪಡೆದುಕೊಳ್ಳುತ್ತಿದೆ. ಇದಕ್ಕೆ 46.00 ಲಕ್ಷ ರು. ವೆಚ್ಚವಾಗುತ್ತಿದೆ. ಇದರ ಮಧ್ಯೆಯೇ ಗಣಕ ಕೇಂದ್ರಕ್ಕೆ ನೇರ ನೇಮಕಾತಿ ಮಾಡಿಕೊಳ್ಳಲು ಕೈಗೊಂಡಿರುವ ನಿರ್ಧಾರ ಅನಗತ್ಯ ಆರ್ಥಿಕ ಹೊರೆಯಾಗಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

 

‘ವಿಧಾನಪರಿಷತ್‌ನ ಗಣಕ ಕೇಂದ್ರದ ಕಾರ್ಯಗಳನ್ನು ವಿಧಾನಸಭೆಯ ಗಣಕ ಕೇಂದ್ರವೇ ನಿಭಾಯಿಸಿದಲ್ಲಿ ಸರ್ಕಾರದ ಬೊಕ್ಕಸಕ್ಕೆ ತಗಲುವ ಹೆಚ್ಚುವರಿ ವೆಚ್ಚವನ್ನು ತಪ್ಪಿಸಿದಂತಾಗುತ್ತದೆ,’ ಎನ್ನುತ್ತಾರೆ ಸಚಿವಾಲಯದ ಅಧಿಕಾರಿಯೊಬ್ಬರು.

 

ಒಂದು ವೇಳೆ ವಿಧಾನಪರಿಷತ್‌ ಸಚಿವಾಲಯವೇನಾದರೂ ಗಣಕ ಕೇಂದ್ರಕ್ಕೆ ನೇರ ನೇಮಕಾತಿ ಮಾಡಿಕೊಂಡಲ್ಲಿ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಕೋಟ್ಯಂತರ ರು.ಅನಾವಶ್ಯಕ ಹೆಚ್ಚುವರಿ ವೆಚ್ಚಕ್ಕೆ ದಾರಿಮಾಡಿಕೊಟ್ಟಂತಾಗುತ್ತದೆ.

ಕೊರೊನಾ ಸೃಷ್ಟಿಸಿರುವ ಆರ್ಥಿಕ ಬಿಕ್ಕಟ್ಟುಗಳಿಂದ ಹೊರ ಬರಲು ರಾಜ್ಯ ಸರ್ಕಾರ ಅನಗತ್ಯ ವೆಚ್ಚಗಳನ್ನು ತಗ್ಗಿಸಲು ಮುಂದಾಗಿರುವ ಹೊತ್ತಿನಲ್ಲೇ ವಿಧಾನಪರಿಷತ್‌ ಸಚಿವಾಲಯ ನೇರ ನೇಮಕಾತಿ ಮಾಡಿಕೊಳ್ಳುವುದೇಕೆ, ವಿಧಾನಸಭೆ ಸಚಿವಾಲಯದಿಂದಲೇ ಆ ಕಾರ್ಯಗಳನ್ನೂ ನಿಭಾಯಿಸಲಿ ಎಂದು ಮತ್ತೊಬ್ಬ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

1998ರ ಏಪ್ರಿಲ್‌ ಪೂರ್ವದಲ್ಲಿ  ವಿಧಾನಸಭೆ ಮತ್ತು ವಿಧಾನಪರಿಷತ್‌ ಸಚಿವಾಲಯ ಕರ್ನಾಟಕ ವಿಧಾನಮಂಡದ ಹೆಸರಿನಲ್ಲಿಯೇ ಕಾರ್ಯನಿರ್ವಹಿಸುತ್ತಿತ್ತು. ನಂತರದ ವರ್ಷಗಳಲ್ಲಿ ಈ ಎರಡೂ ಸಚಿವಾಲಯಗಳು ವಿಭಜನೆಗೊಂಡ ನಂತರವೂ ಗ್ರಂಥಾಲಯ ಶಾಖೆ, ಸಂಶೋಧನಾ ಉಲ್ಲೇಖನಾ ಶಾಖೆಗಳು ಕರ್ನಾಟಕ ವಿಧಾನಮಂಡಲದ ಹೆಸರಿನಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದವು.

ಕರ್ನಾಟಕ ವಿಧಾನಸಭೆ ಸಚಿವಾಲಯದಲ್ಲಿ 1999ರಲ್ಲಿ ಗಣಕ ಕೇಂದ್ರ ಸೃಜನೆಗೊಂಡಿತ್ತು. ಜಂಟಿ ಕಾರ್ಯದರ್ಶಿಗೆ ಸಮನಾದ ಹುದ್ದೆಯಿಂದ ಸಹಾಯಕ ಹುದ್ದೆಗೆ ಸಮನಾದ ಹುದ್ದೆಯ ಸುಮಾರು 40 ಅಧಿಕಾರಿ/ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಎರಡೂ ಸಚಿವಾಲಯಗಳ ಕೆಲಸ ಕಾರ್ಯಗಳು ಒಂದೇ ವಿಧ ಮಾತ್ರವಲ್ಲದೆ ಸಾಮ್ಯತೆಯನ್ನೂ ಹೊಂದಿವೆ.

 

ಆದರೆ ಕರ್ನಾಟಕ ವಿಧಾನಪರಿಷತ್ ಸಚಿವಾಲಯ ಮಾತ್ರ 4 ವರ್ಷಗಳ ಹಿಂದೆಯೇ ಪ್ರತ್ಯೇಕವಾಗಿ ಗಣಕ ಕೇಂದ್ರವನ್ನು ತೆರೆದಿತ್ತು. ಕಳೆದ 2 ವರ್ಷಗಳಿಂದ ಕಿಯೋನಿಕ್ಸ್‌ ಮೂಲಕ ಜ್ಯೂನಿಯರ್ ಪ್ರೋಗ್ರಾಮರ್‌, ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌, ಕಂಪ್ಯೂಟರ್‌ ಆಪರೇಟರ್‌ ಶ್ರೇಣಿಯ ಹುದ್ದೆಗಳ ಸೇವೆಯನ್ನು ಹೊರಗುತ್ತಿಗೆ ಮೂಲಕ ಪಡೆಯಲಾಗುತ್ತಿದೆ.

the fil favicon

SUPPORT THE FILE

Latest News

Related Posts