ಕೋವಿಡ್‌ ಸಂಕಷ್ಟ; ಬಿಎಸ್‌ಎನ್‌ಎಲ್‌ಗೆ 38.54 ಕೋಟಿ ರು. ಬಾಕಿ ಉಳಿಸಿಕೊಂಡ ಸರ್ಕಾರ

ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ರಾಜ್ಯ ಸರ್ಕಾರ ತೀವ್ರತರದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬೆನ್ನಲ್ಲೇ ಸರ್ಕಾರದ ಎಲ್ಲಾ ಇಲಾಖೆಗಳು ಬಾಕಿ ಇರಿಸಿಕೊಂಡಿರುವ ದೂರವಾಣಿ ಬಿಲ್‌ ನ ಒಟ್ಟು 38.54 ಕೋಟಿ ರು. ಪಾವತಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಭಾರತ್‌ ಸಂಚಾರ ನಿಗಮ ಲಿಮಿಟೆಡ್‌(ಬಿಎಸ್‌ಎನ್‌ಎಲ್‌) ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

 

ಬಾಕಿ ಉಳಿಸಿಕೊಂಡಿರುವ ದೂರವಾಣಿ ಬಿಲ್‌ನ್ನು ಪಾವತಿಸಲು ಸರ್ಕಾರದ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಬೇಕು ಎಂದು ಬಿಎಸ್‌ಎನ್‌ಎಲ್‌ನ ಮುಖ್ಯ ವ್ಯವಸ್ಥಾಪಕ ಸುಶೀಲ್‌ಕುಮಾರ್‌ ಮಿಶ್ರಾ ಅವರು 2020ರ ಮಾರ್ಚ್‌ 2ರಂದು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ ಎಸ್‌ ಎನ್‌ ಪ್ರಸಾದ್‌ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಇಲಾಖೆಗಳ ಕಚೇರಿಗಳಲ್ಲಿರುವ ಸ್ಥಿರ ದೂರವಾಣಿ ಬಳಕೆಗೆ ಸಂಬಂಧಿಸಿದಂತೆ 34.59 ಕೋಟಿ ರು., ಅಧಿಕಾರಿ, ನೌಕರರು ಬಳಸಿಕೊಂಡಿರುವ ಮೊಬೈಲ್‌ ಸೇವೆಗಳಿಗೆ ಸಂಬಂಧಿಸಿದಂತೆ 3.95 ಕೋಟಿ ರು. ಬಾಕಿ ಉಳಿದಿರುವುದು ಪತ್ರದಿಂದ ಗೊತ್ತಾಗಿದೆ.

‘ಸರಿಯಾದ ಸಮಯಕ್ಕೆ ಹೊರ ಬಾಕಿ ಪಾವತಿಯಾಗದಿದ್ದರೆ ಸೇವೆಗಳನ್ನು ವಿಸ್ತರಿಸಲು ಕಷ್ಟಕರವಾಗುತ್ತದೆ. ಸರ್ಕಾರದ ಇಲಾಖೆಗಳಿಗೆ ಡಿಜಿಟಲ್‌ ಸಂಪರ್ಕ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಬಾಕಿ ಉಳಿಸಿಕೊಂಡಿರುವ ದೂರವಾಣಿ ಮೊತ್ತವನ್ನು ಪ್ರಮುಖ ಆದ್ಯತೆಯಾಗಿ ಪರಿಗಣಿಸಿ ತಕ್ಷಣವೇ ಪಾವತಿಸಲು ಕ್ರಮ ಕೈಗೊಳ್ಳಬೇಕು,’ ಎಂದು ಸುಶೀಲ್‌ಕುಮಾರ್‌ ಮಿಶ್ರಾ ಕೋರಿರುವುದು ಪತ್ರದಿಂದ ತಿಳಿದು ಬಂದಿದೆ.

 

ದೂರವಾಣಿ ಮೊತ್ತವನ್ನು 2019ರ ಡಿಸೆಂಬರ್‌ 31 ಅಂತ್ಯಕ್ಕೆ ಬಾಕಿ ಉಳಿಸಿಕೊಂಡಿರುವ ಇಲಾಖೆಗಳಲ್ಲಿ ಇ-ಆಡಳಿತ ಇಲಾಖೆ ಅಗ್ರ ಸ್ಥಾನದಲ್ಲಿದೆ. ಈ ಇಲಾಖೆ 11,77,59,953 ಕೋಟಿ ರು. ಬಾಕಿ ಉಳಿಸಿಕೊಂಡಿದ್ದರೆ ಪೊಲೀಸ್ ಇಲಾಖೆ 9,53,23,581 ಕೋಟಿ, ಪಿಡಿಒಗಳಿಂದ 5,47,60,039 ಕೋಟಿ, ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ನಾಡ ಕಚೇರಿಗಳು 2,81,06,219 ಕೋಟಿ ಬಾಕಿ ಉಳಿಸಿಕೊಳ್ಳುವ ಮೂಲಕ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ.

 

ಕಿಯೋನಿಕ್ಸ್‌ 82,96,553 ರು., ಕೃಷಿ ಇಲಾಖೆ 37,21,543 ರು., ಬಿಬಿಎಂಪಿ 38,29,622 ರು., ಶಿಕ್ಷಣ ಇಲಾಖೆ 34,92,708 ರು., ಆರೋಗ್ಯ ಇಲಾಖೆ 35,01,241 ರು., ಅರಣ್ಯ ಇಲಾಖೆ 19,51,259 ರು., ಕಾರ್ಮಿಕ ಇಲಾಖೆ  3,11,780 ರು., ಎಂ-ಗೌರ್ನೆನ್ಸ್‌ 9,06,066 ರು., ತಾಲೂಕು ಪಂಚಾಯ್ತಿಗಳಿಂದ 11,12,518 ರು., ಸಾರಿಗೆ ಇಲಾಖೆ 13,02,495 ರು., ನಗರಾಭಿವೃದ್ಧಿ ಇಲಾಖೆ 11,64,577 ರು., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 4,72,900 ರು., ಸೇರಿದಂತೆ ಇನ್ನಿತರೆ ಇಲಾಖೆಗಳು ಲಕ್ಷಾಂತರ ರು.ಮೊತ್ತವನ್ನು ಬಾಕಿ ಉಳಿಸಿಕೊಂಡಿರುವುದು ದಾಖಲೆಯಿಂದ ತಿಳಿದು ಬಂದಿದೆ.

 

ಭಾರತ ಸಂಚಾರ ನಿಗಮ ಲಿಮಿಟೆಡ್‌ (ಬಿಎಸ್‌ಎನ್‌ಎಲ್‌) ರಾಜ್ಯದ ಸರ್ಕಾರಿ ಸೇವೆಗಳಿಗೆ ದೂರವಾಣಿ ಸೌಲಭ್ಯ ಒದಗಿಸುತ್ತಿದೆ. ನಾಡಕಚೇರಿಗಳು, ಕೆ ಸ್ವಾನ್‌ ಯೋಜನೆ, ಸಿಸಿಟಿಎನ್‌ಎಸ್‌ ಯೋಜನೆ, ಪೊಲೀಸ್‌ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳಿಗೆ ಸ್ಥಿರ ದೂರವಾಣಿ ಉಪಕರಣಗಳನ್ನು ಒದಗಿಸುತ್ತಿದೆ.

SUPPORT THE FILE

Latest News

Related Posts