ನರೇಗಾದಲ್ಲಿ ಸಾವಿರಾರು ಕೋಟಿ ರು. ಖೊಟ್ಟಿ ಬಿಲ್‌ ಸೃಷ್ಟಿ; ಅಧಿಕಾರಿ ವಿರುದ್ಧ ವಿಚಾರಣೆಗೆ ಅನುಮತಿ

ಬೆಂಗಳೂರು; ಚಾಮರಾಜನಗರ, ಕೊಳ್ಳೆಗಾಲ ಮತ್ತು ಯಳಂದೂರು ತಾಲೂಕು ವ್ಯಾಪ್ತಿಯ 43 ಗ್ರಾಮ ಪಂಚಾಯ್ತಿಗಳಲ್ಲಿ ಸಾವಿರಾರು ಕೋಟಿ ರು.ಗಳ ಖೊಟ್ಟಿ ಬಿಲ್‌ಗಳನ್ನು ಸೃಷ್ಟಿಸಿರುವ ಪ್ರಕರಣದಲ್ಲಿ ನಿವೃತ್ತ ಸಹಾಯಕ ನಿರ್ದೇಶಕ ಎನ್‌ ಮಹದೇವಯ್ಯ ಎಂಬುವರ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲು ರಾಜ್ಯ ಸರ್ಕಾರ ಆದೇಶಿಸಿದೆ.


10 ವರ್ಷದ ಹಿಂದೆ ನಡೆದಿದ್ದ ಪ್ರಕರಣವನ್ನು ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳು ಆರೋಪಿತ ಅಧಿಕಾರಿಗಳನ್ನು ಅಭಿಯೋಜನೆಗೊಳಪಡಿಸಲು 2019ರ ಜೂನ್‌ 12ರಂದು ಪತ್ರ ಬರೆದಿದ್ದರು. ಆರೋಪಿತ ಅಧಿಕಾರಿಗಳಲ್ಲೊಬ್ಬರಾದ ನಿವೃತ್ತ ಜಂಟಿ ಕೃಷಿ ನಿರ್ದೇಶಕ ಎನ್‌ ಮಹದೇವಯ್ಯ ಅವರ ವಿರುದ್ಧ ವಿಚಾರಣೆಗೆ ಅನುಮತಿ ನೀಡಿ 2020ರ ಮೇ 19ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿ ‘ದಿ ಫೈಲ್‌’ ಗೆ ಲಭ್ಯವಾಗಿದೆ.

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಅಂಬಳೆ ಮತ್ತು ಹೊನ್ನೂರು ಗ್ರಾಮ ಪಂಚಾಯ್ತಿಯಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಅವಧಿಯಲ್ಲಿ ನರೇಗಾ ಕಾರ್ಯಕ್ರಮದಡಿ ಸಾಮಗ್ರಿ ಖರೀದಿ ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳ ಜತೆ ಶಾಮೀಲಾಗಿ ಹೆಚ್ಚುವರಿ ಹಣ ಪಾವತಿಸಲು ಚೆಕ್‌ಗೆ ಸಹಿ ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿತ್ತು.


ಯಳಂದೂರು ತಾಲೂಕಿನ ಅಗರ, ಅಂಬಳೆ, ಗೌಡಳ್ಳಿ, ಗುಂಬಳ್ಳಿ, ಹೊನ್ನೂರು, ಕೆಸ್ತೂರು, ಮದ್ದೂರು, ಮಾಂಬಳ್ಳಿ, ಯೆರಿಯೂರು, ಯರಂಗಬಳ್ಳಿ ಸೇರಿದಂತೆ ಒಟ್ಟು 10 ಗ್ರಾಮ ಪಂಚಾಯ್ತಿಗಳಲ್ಲಿ 2007ರ ಏಪ್ರಿಲ್‌ನಿಂದ 2012ರ ಮಾರ್ಚ್‌ವರೆಗಿನ ನರೇಗಾ ಕಾರ್ಯಕ್ರಮದಡಿ ಒಟ್ಟು 3,53,833 ರು. ಮೊತ್ತದ ಹೆಚ್ಚುವರಿ ಬಿಲ್‌ಗಳನ್ನು ಸಲ್ಲಿಸಿದ್ದನ್ನು ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಉಲ್ಲೇಖಿಸಲಾಗಿತ್ತು.


ಅದೇ ರೀತಿ ಯಳಂದೂರು ತಾಲೂಕಿನ 5 ಗ್ರಾಮ ಪಂಚಾಯ್ತಿಗಳಲ್ಲಿ ಕಿಟ್‌ ಖರೀದಿ ಸಂಬಂಧ ಪ್ರತಿ ತಾಲೂಕಿಗೆ 25,536 ರು.ನಂತೆ ಹೆಚ್ಚುವರಿಯಾಗಿ ಪಾವತಿಸಿ ಮೊತ್ತವನ್ನು ಜಮೆ ಮಾಡಲಾಗಿತ್ತು. ಮಾರುಕಟ್ಟೆ ದರ ಹಾಗೂ ಸಂಬಂಧಪಟ್ಟ ಸಂಸ್ಥೆಯ ದರ ಪಟ್ಟಿಯಲ್ಲಿ ನಿಗದಿಪಡಿಸಿದ ದರವನ್ನು ತುಲನೆ ಮಾಡದೇ ಸಂಸ್ಥೆ ನಮೂದಿಸಿದ್ದ ದರವನ್ನು ಅಂಗೀಕರಿಸಿ 3 ತಾಲೂಕುಗಳಲ್ಲಿ ನಾಮಫಲಕಗಳನ್ನು ಖರೀದಿ ಮಾಡುವಾಗ ಮಾರುಕಟ್ಟೆ ದರಕ್ಕಿಂತ ಅಧಿಕ ಹಣ ಪಾವತಿ ಮಾಡಿರುವುದನ್ನು ಸಿಎಜಿ ದೃಢಪಡಿಸಿತ್ತು.


ಯಳಂದೂರು ತಾಲೂಕಿನ ಅಂಬಳೆ ಗ್ರಾಮ ಪಂಚಾಯ್ತಿಗೆ ಎನ್‌ ಮಹದೇವಯ್ಯ ಅವರು 2010ರ ಏಪ್ರಿಲ್‌ 1ರಿಂದ 2010ರ ಜೂನ್‌ 24ರವರೆಗೆ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಅವಧಿಯಲ್ಲಿ 25 ಬೋರ್ಡ್‌ಗಳು ಖರೀದಿಯಾಗಿತ್ತು. ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಕೆ ಪಿ ಪರಶಿವ ಅವರು ಆದಿತ್ಯ ಎಂಟರ್‌ಪ್ರೈಸೆಸ್‌ನ ಮಾಲೀಕ ಆರ್‌ ಮೂರ್ತಿ ಅವರೊಂದಿಗೆ ಶಾಮೀಲಾಗಿ ಹೆಚ್ಚುವರಿಯಾಗಿ 53,826 ರು. ಪಾವತಿಸಿದ್ದರು.


ಇದರಲ್ಲಿ 32,574 ರು. ಹೆಚ್ಚುವರಿಯಾಗಿತ್ತು. ಆದರೆ ಈ ಮೊತ್ತವನ್ನು ಯಳಂದೂರು ತಾಲೂಕು ಪಂಚಾಯ್ತಿಯ ಕಾರ್ಯನಿರ್ವಾಹಕ ಅಧಿಕಾರಿಗಳ ಖಾತೆಗೆ ಮಹದೇವಯ್ಯ ಅವರು ಮರು ಪಾವತಿಸಿರಲಿಲ್ಲ ಎಂಬುದು ತನಿಖೆಯಿಂದ ದೃಢಪಟ್ಟಿತ್ತು.


ಹಾಗೆಯೇ ಇದೇ ತಾಲೂಕಿನ ಹೊನ್ನೂರು ಗ್ರಾಮ ಪಂಚಾಯ್ತಿಯ ಕಾರ್ಯದರ್ಶಿ ವೈ ಎಂ ಶಂಕರಶೆಟ್ಟಿ ಅವರೊಂದಿಗೆ ಶಾಮೀಲಾಗಿ 25 ಬೋರ್ಡ್‌ಗಳನ್ನು ಖರೀದಿಸಿದ್ದರು. ಇದರಲ್ಲಿಯೂ ಹೆಚ್ಚುವರಿಯಾಗಿ ಜಮೆಯಾಗಿದ್ದ 29,390 ರು.ಗಳನ್ನು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಖಾತೆಗೆ ಮರು ಪಾವತಿಸಿರಲಿಲ್ಲ.
ಕೊಳ್ಳೆಗಾಲ ತಾಲೂಕಿನ 26 ಗ್ರಾಮ ಪಂಚಾಯ್ತಿ, ಚಾಮರಾಜನಗರ ತಾಲೂಕಿನಲ್ಲಿ 3 ಗ್ರಾಮ ಪಂಚಾಯ್ತಿಗಳಲ್ಲಿ 2010-11ನೇ ಸಾಲಿನಲ್ಲಿ 31.22 ಲಕ್ಷ ರು. ಮೌಲ್ಯದಲ್ಲಿ 1,452 ನಾಮಫಲಕಗಳನ್ನು ಖರೀದಿಸಲಾಗಿತ್ತು. ಆದರೆ ಈ ಪ್ರಕ್ರಿಯೆಗಳಲ್ಲಿ ಕರ್ನಾಟಕ ಪಾರದರ್ಶಕ ಕಾಯ್ದೆ ಅನುಸರಿಸಿರಲಿಲ್ಲ.


ಅದೇ ರೀತಿ 17.76 ಲಕ್ಷ ರು. ಅಧಿಕ ಮೊತ್ತವನ್ನು ಪಾವತಿಸುವ ಮೂಲಕ ಖರೀದಿಸಲಾಗಿತ್ತಲ್ಲದೆ 05 ಗ್ರಾಮ ಪಂಚಾಯ್ತಿಗಳಲ್ಲಿ 2010-11ನೇ ಸಾಲಿನಲ್ಲಿ 2.22 ಲಕ್ಷ ರು. ವೆಚ್ಚದಲ್ಲಿ 5 ಕಿಟ್‌ಗಳ ಖರೀದಿಯಲ್ಲಿಯೂ ನಿಯಮಗಳನ್ನು ಪಾಲಿಸಿರಲಿಲ್ಲ ಎಂಬುದು ದಾಖಲೆಯಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts