‘ದಿ ಫೈಲ್‌’ ವರದಿ ಪರಿಣಾಮ; ಡ್ರಗ್ಸ್‌ ಲಾಜಿಸ್ಟಿಕ್ಸ್‌ ಅಧಿಕಾರಿಗಳ ವಿರುದ್ಧ ಎಸಿಬಿಗೆ ದೂರು

ಬೆಂಗಳೂರು; ಕೊರೊನಾ ವೈರಸ್‌ನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆ ಔಷಧ ಖರೀದಿಯಲ್ಲಿ ನಡೆಸಿದೆ ಎನ್ನಲಾಗಿರುವ ಅಕ್ರಮ, ಅವ್ಯವಹಾರಗಳ ಕುರಿತಾದ ದೂರು ಇದೀಗ ಭ್ರಷ್ಟಾಚಾರ ನಿಗ್ರಹ ದಳದ ಮೆಟ್ಟಿಲೇರಿದೆ.


ಪಿಪಿಇ ಕಿಟ್‌, ಸ್ಯಾನಿಟೈಸರ್‌, ವೆಂಟಿಲೇಟರ್‌ ಸೇರಿದಂತೆ ಇನ್ನಿತರೆ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿದ್ದ ಅಕ್ರಮಗಳ ಕುರಿತು ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಷ್ಟ್ರಸಮಿತಿ ಎಸಿಬಿ ಎಡಿಜಿಪಿ ಅವರಿಗೆ 2020ರ ಮೇ 12ರಂದು ದೂರು ನೀಡಿದೆ. ಈ ದೂರಿನ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ವೈದ್ಯಕೀಯ ಉಪಕರಣ ಮತ್ತು ಔಷಧ ಸಾಮಗ್ರಿಗಳನ್ನು ಖರೀದಿ ಪ್ರಕ್ರಿಯೆಯಲ್ಲಿ ನಡೆದಿರುವ ಅವ್ಯವಹಾರಗಳ್ಲಿ ಪ್ರಮುಖ ಪಾತ್ರ ವಹಿಸಿರುವ ಡಾ ಪ್ರಿಯಲತಾ ಮತ್ತು ಡಾ ಲತಾಪರಿಮಳ ಅವರು ಸೇರಿದಂತೆ ಇದಕ್ಕೆ ಕಾರಣರಾದ ಎಲ್ಲಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು,’ ಎಂದು ದೂರಿನಲ್ಲಿ ಕರ್ನಾಟಕ ರಾಷ್ಟ್ರಸಮಿತಿಯ ಪ್ರಧಾನ ಕಾರ್ಯದರ್ಶಿ ದೀಪಕ್‌ ಸಿ ಎನ್‌ ಕೋರಿದ್ದಾರೆ.


ಮಹಾರಾಷ್ಟ್ರದ ಅಮರಾವತಿ ಮೂಲದ ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್‌ ಮೂಲಕ ಖರೀದಿಸಿರುವ ಪಿಪಿಇ ಕಿಟ್‌ಗಳ ಗುಣಮಟ್ಟದ ಬಗ್ಗೆ ಸಾಕಷ್ಟು ದೂರುಗಳು ಬಂದ ನಂತರ ಅವುಗಳ ಬಳಕೆಯನ್ನು ತಡೆಹಿಡಿಯಲಾಗಿದೆ. ಈ ಸಂಸ್ಥೆ ಮೂಲಕ 2 ಬಾರಿ ಖರೀದಿ ಮಾಡಿದೆಯಾದರೂ ಎರಡು ಖರೀದಿಗಳ ನಡುವಿನ ಬೆಲೆಯಲ್ಲಿ ಭಾರೀ ಅಂತರವಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.


ಚೀನಾದ 2 ಕಂಪನಿಗಳಿಂದ ಖರೀದಿಸಿದ್ದ ಪರೀಕ್ಷಾ ಕಿಟ್‌ಗಳನ್ನು ರಾಜಸ್ಥಾನ ಸರ್ಕಾರ ಬಳಕೆಯನ್ನು ನಿಲ್ಲಿಸಿತ್ತು. ಆದರೆಲ ಕರ್ನಾಟಕ ಸರ್ಕಾರ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಮೂಲಕ ವಿಶ್ವಾಸಾರ್ಹವಲ್ಲದ ಕಿಟ್‌ಗಳನ್ನು ಖರೀದಿಸಿ ಆ ನಂತರ ಬಳಕೆಯನ್ನು ನಿಲ್ಲಿಸಿತ್ತು. ಇದರಿಂದ ರಾಜ್ಯದಲ್ಲಿ ವ್ಯಾಪಕವಾಗಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲವಲ್ಲದೆ ಅಧಿಕಾರಿಗಳ ಅವ್ಯವಹಾರದಿಂದ ಸರ್ಕಾರಕ್ಕೆ ನಷ್ಟವುಂಟಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.


ಕಪ್ಪು ಪಟ್ಟಿಯಲ್ಲಿರುವ ಗುಜರಾತ್‌ನ ಅಹಮದಾಬಾದ್‌ ಮೂಲದ ಆಕ್ಯುಲೈಫ್‌ ಹೆಲ್ತ್‌ ಕೇರ್‌ ಕಂಪನಿಯ ಮೂಲಕ ಗ್ಲುಕೋಸ್‌ ಖರೀದಿಸಲಾಗಿದೆ. ಈ ಹಿಂದೆ ಇದೇ ಕಂಪನಿ ಸರಿಯಾದ ಸಮಯಕ್ಕೆ ಪೂರೈಕೆ ಮಾಡದ ಕಾರಣ ನೋಟೀಸ್‌ ಕೂಡ ಜಾರಿಗೊಳಿಸಿತ್ತು. ಹಾಗೆಯೇ ಈ ಕಂಪನಿಯನ್ನು ದೇಶದ ಹಲವು ರಾಜ್ಯಗಳು ಕಪ್ಪು ಪಟ್ಟಿಗೆ ಸೇರಿಸಿವೆ. ಆದರೂ ಇದೇ ಕಂಪನಿಯಿಂದ ಹೆಚ್ಚಿನ ಮೊತ್ತಕ್ಕೆ ಗ್ಲುಕೋಸ್‌ ಖರೀದಿಸಿದೆ ಎಂದು ದೂರಿನಲ್ಲಿ ವಿವರಿಸಿದೆ.


ಬಳಸಿದ್ದ ವೆಂಟಿಲೇಟರ್‌ಗಳನ್ನು ಆರ್‌ ಕೆ ಮೆಡಿಕಲ್‌ ಸೊಲ್ಯೂಷನ್ಸ್‌ ನಿಂದ ಖರೀದಿಸಿರುವ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆ, ಇದಕ್ಕಾಗಿ 3.88 ಕೋಟಿ ರು.ಗಳನ್ನು ಪಾವತಿಸಿದೆ. ಇಷ್ಟೊಂದು ಮೊತ್ತದಲ್ಲಿ ಖರೀದಿ ಮಾಡಿದ್ದರೂ ವೆಂಟಿಲೇಟರ್‌ಗಳು ಬಳಕೆಗೆ ಯೋಗ್ಯವಾಗಿರುವುದಿಲ್ಲ ಎಂದು ದೂರಿನಲ್ಲಿ ಹೇಳಿದೆ.


ಸ್ಯಾನಿಟೈಸರ್‌ ಮತ್ತು ಸಿರಿಂಜ್‌ ಖರೀದಿಯಲ್ಲಿಯೂ ಅಕ್ರಮಗಳು ನಡೆದಿವೆ ಎಂದು ದೂರಿನಲ್ಲಿ ಹೇಳಿರುವ ಕರ್ನಾಟಕ ರಾಷ್ಟ್ರಸಮಿತಿ, ಟೆಂಡರ್‌ ನಿಯಮಾವಳಿಗಳನ್ನು ನೇರಾನೇರ ಉಲ್ಲಂಘಿಸಲಾಗಿದೆ. ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ದರ ನೀಡಿ ಖರೀದಿಸಿರುವ ಕಾರಣ ಸರ್ಕಾರಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗಿದೆ ಎಂದು ತಿಳಿಸಿದೆ.


ಈ ಎಲ್ಲಾ ಅಕ್ರಮಗಳ ಕುರಿತು ‘ದಿ ಫೈಲ್‌’ ಸರಣಿ ತನಿಖಾ ವರದಿಗಳನ್ನು ಪ್ರಕಟಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts