ಮಂಗಳೂರು ವಿಮಾನ ನಿಲ್ದಾಣ; ಆದಿತ್ಯರಾವ್‌ ವಿಚಾರಣೆ ಅನುಮತಿ ಪ್ರಕರಣ ಕೇಂದ್ರದ ಅಂಗಳಕ್ಕೆ

ಬೆಂಗಳೂರು; ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಧೇಶಪೂರ್ವಕವಾಗಿ ಸ್ಪೋಟಿಸಿ ಸಾರ್ವಜನಿಕ, ಸರ್ಕಾರಿ ಆಸ್ತಿ ಹಾನಿ ಮತ್ತು ಮಾನವ ಪ್ರಾಣ ಹಾನಿ ಆಗುವಂತಹ ದುಷ್ಕೃತ್ಯ ಎಸಗಲು ಯತ್ನಿಸಿದ್ದ ಆರೋಪಿ ಆದಿತ್ಯರಾವ್‌ನನ್ನು ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲು ರಾಜ್ಯ ಗೃಹ ಇಲಾಖೆ, ಇದೀಗ ಕೇಂದ್ರದ ಬಾಗಿಲು ತಟ್ಟಬೇಕಿದೆ.


ಆರೋಪಿ ಆದಿತ್ಯರಾವ್‌ನನ್ನು ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸುವುದಕ್ಕೆ ಸಂಬಂಧಿಸಿದ ಕಡತವನ್ನು ಇಲಾಖೆಯ ಕಾನೂನು ಅಧಿಕಾರಿಗಳು ಈಗಾಗಲೇ ಪರಿಶೀಲಿಸಿದ್ದಾರೆ ಎಂದು ತಿಳಿದು ಬಂದಿದೆ. ಕಾನೂನು ಅಧಿಕಾರಿಗಳಿಗೆ ಸಲ್ಲಿಕೆಯಾಗಿರುವ ಕಡತದಲ್ಲಿ ಹಲವು ಮಹತ್ವದ ಮಾಹಿತಿಗಳೇ ಲಭ್ಯವಿಲ್ಲ ಎಂಬ ಅಂಶವೂ ಗೊತ್ತಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.


ದೇಶದ ಸುಭದ್ರತೆಗೆ ಧಕ್ಕೆ ತರುವಂತಹ ಕೃತ್ಯ ಎಸಗಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಫೋಟಿಸುವ ಪ್ರಯತ್ನದಂತಹ ದುಷ್ಕೃತ್ಯ ಎಸಗಿದ್ದಾನೆ ಎಂಬ ಬಗ್ಗೆ ಪೂರಕ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿರುವ ತನಿಖಾ ತಂಡ, ಕಡತದಲ್ಲಿ ಮಹತ್ವದ ದಾಖಲೆಗಳನ್ನೇಕೆ ಇರಿಸಿಲ್ಲ ಎಂಬುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.


ನಾಗರಿಕ ವಿಮಾನಯಾನ ಕಾಯ್ದೆಯ ಸುರಕ್ಷತೆ ಮತ್ತು ಕಾನೂನುಬಾಹಿರ ಕೃತ್ಯವನ್ನು ನಿಗ್ರಹಿಸುವುದು(Suppression of Unlawful Act against Saftey of Civil Aviation Act 1982)ರ ಅಡಿಯಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲು ಕೇಂದ್ರ ಸರ್ಕಾರದಿಂದ ಪೂರ್ವಾನುಮತಿ ಪಡೆಯುವ ಸಂಬಂಧದ ಕಡತಕ್ಕೆ ಅನುಮೋದನೆ ಪಡೆಯಲು ಗೃಹ ಸಚಿವ ಬಸವರಾಜ ಬೊಮ್ಮಯಿ ಅವರ ಮುಂದೆ 2020ರ ಮೇ 26ರಂದು ಮಂಡಿಸಿರುವುದು ಗೊತ್ತಾಗಿದೆ.


ಕಾನೂನುಬಾಹಿರ ಚಟುವಟಿಕೆಗಳ ಅಡಿಯಲ್ಲಿ ಆರೋಪಿಯನ್ನು ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲು ರಾಜ್ಯ ಸರ್ಕಾರದ ಪೂರ್ವಾನುಮತಿ ಅಗತ್ಯವಿಲ್ಲ. ಆದರೆ ನಾಗರಿಕ ವಿಮಾನಯಾನ ಕಾಯ್ದೆಯ ಸುರಕ್ಷತೆ ಮತ್ತು ಕಾನೂನುಬಾಹಿರ ಕೃತ್ಯವನ್ನು ನಿಗ್ರಹಿಸುವ ಕಾಯ್ದೆ ಅಡಿಯಲ್ಲಿ ವಿಚಾರಣೆಗೊಳಪಡಿಸಲು ಕೇಂದ್ರ ಸರ್ಕಾರದ ಪೂರ್ವಾನುಮತಿ ಅಗತ್ಯ ಎಂದು ಗೃಹ ಇಲಾಖೆಯ ಕಾನೂನು ಅಧಿಕಾರಿಗಳು ಅಭಿಪ್ರಾಯ ನೀಡಿದ್ದಾರೆ. ಇದನ್ನಾಧರಿಸಿ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಬೇಕು ಎಂದು ಡಿಜಿಐಜಿಪಿಗೆ ಶೀಘ್ರದಲ್ಲೇ ಸೂಚಿಸಲಿದೆ ಎಂದು ತಿಳಿದು ಬಂದಿದೆ.


‘ಕಾನೂನುಬಾಹಿರ ಚಟುವಟಿಕೆಗಳು(Sec Unlawful Activities(Prevention Act 1967) ಅಡಿ ಮತ್ತು ನಾಗರಿಕ ವಿಮಾನಯಾನ ಕಾಯ್ದೆಯ ಸುರಕ್ಷತೆ ಮತ್ತು ಕಾನೂನುಬಾಹಿರ ಕೃತ್ಯವನ್ನು ನಿಗ್ರಹಿಸುವುದು (Suppression of Unlawful Act against Saftey of Civil Aviation Act 1982)ರ ಅಡಿಯಲ್ಲಿಯೂ ಆರೋಪಿ ಅಪರಾಧ ಎಸಗಿರುವುದು ತನಿಖೆಯಿಂದ ದೃಢಪಟ್ಟಿರುವ ಕಾರಣ ಕೇಂದ್ರ ಸರ್ಕಾರದ ಪೂರ್ವಾನುಮತಿ ಅಗತ್ಯ,’ ಎಂದು ಗೃಹ ಇಲಾಖೆಯ ಕಾನೂನು ಅಧಿಕಾರಿಗಳು ಅಭಿಪ್ರಾಯ ಪಟ್ಟಿರುವುದು ದಾಖಲೆಯಿಂದ ತಿಳಿದು ಬಂದಿದೆ.

ನಾಗರಿಕ ವಿಮಾನಯಾನ ಕಾಯ್ದೆಯ ಸುರಕ್ಷತೆ ಮತ್ತು ಕಾನೂನುಬಾಹಿರ ಕೃತ್ಯವನ್ನು ನಿಗ್ರಹಿಸುವ ಕಾಯ್ದೆ ಅನ್ವಯ ಯಾವುದೇ ಆರೋಪಿಯ ವಿರುದ್ಧ ತನಿಖೆ ಕೈಗೊಳ್ಳಬೇಕಾದಲ್ಲಿ ಕೇಂದ್ರ ಸರ್ಕಾರವು ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಬೇಕು. ಹಾಗೇ ಆರೋಪಿಯನ್ನು ಬಂಧಿಸುವ ಮತ್ತು ಆತನ ವಿರುದ್ಧ ತನಿಖೆ ಕೈಗೊಳ್ಳುವ, ಆರೋಪಿಯನ್ನು ವಿಚಾರಣೆಗೊಳಪಡಿಸುವ ಅಧಿಕಾರ ಅಧಿಕಾರಿಗಿದೆ.


ಪ್ರಸ್ತುತ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಪೊಲೀಸ್‌ ಅಧಿಕಾರಿ ತನಿಖೆ ಕೈಗೊಂಡಿರುವುದು ಮತ್ತು ಆ ರೀತಿ ತನಿಖೆ ಕೈಗೊಳ್ಳಲು ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆದುಕೊಳ್ಳಲಾಗಿದೆಯೇ ಇಲ್ಲವೇ ಎಂಬ ಬಗ್ಗೆ ಸಂಬಂಧಿಸಿದ ಮಾಹಿತಿ ಕಡತದಲ್ಲಿ ಲಭ್ಯವಿಲ್ಲ ಎಂದು ಗೃಹ ಇಲಾಖೆಯ ಕಾನೂನು ಅಧಿಕಾರಿ ಅಭಿಪ್ರಾಯಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ.
ಹಾಗೆಯೇ ಇದೇ ಕಾಯ್ದೆಯಡಿ ಆರೋಪಿಯನ್ನು ವಿಚಾರಣೆಗೊಳಪಡಿಸುವ ಮುನ್ನ ಕಾಯ್ದೆಯ ಕಲಂ 9ರ ಅನ್ವಯ ಕೇಂದ್ರ ಸರ್ಕಾರದಿಂದ ಅಭಿಯೋಜನಾ ಮಂಜೂರಾತಿ ಪಡೆದುಕೊಳ್ಳುವುದು ಕಡ್ಡಾಯ. ಕೇಂದ್ರ ಸರ್ಕಾರಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿ ಮಂಜೂರಾತಿ ಪಡೆದುಕೊಳ್ಳಲಾಗಿದೆಯೇ ಎಂಬ ಬಗ್ಗೆ ಮಾಹಿತಿಯೂ ಇಲ್ಲ ಎಂದು ಕಾನೂನು ಅಧಿಕಾರಿ ತಿಳಿಸಿರುವುದು ಗೊತ್ತಾಗಿದೆ.


ಇದಷ್ಟೇ ಅಲ್ಲ, ಆರೋಪಿಯನ್ನು ಕೇಂದ್ರ ಸರ್ಕಾರದಿಂದ ನಿಗದಿಪಡಿಸಿದ ನ್ಯಾಯಾಲಯದಲ್ಲಿಯೇ ವಿಚಾರಣೆಗೊಳಪಡಿಸುವುದು ಕಡ್ಡಾಯ. ಈ ಕುರಿತು ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಂದ ರಾಜ್ಯ ಸರ್ಕಾರವು ಒಪ್ಪಿಗೆ ಪತ್ರ ಪಡೆಯಬೇಕು. ಅದೇ ರೀತಿ ಪ್ರಕರಣದ ವಿಚಾರಣೆಯನ್ನು ನಡೆಸಲು ವಿಶೇಷ ನ್ಯಾಯಾಲಯವನ್ನು ನಿಗದಿಪಡಿಸಿದೆಯೇ ಎಂಬ ಮಾಹಿತಿಯನ್ನೂ ಸಂಬಂಧಿಸಿದ ಕಡತದಲ್ಲಿ ಲಭ್ಯವಿಲ್ಲ ಎಂಬುದು ದಾಖಲೆಯಿಂದ ತಿಳಿದು ಬಂದಿದೆ.


ಅದಿತ್ಯರಾವ್‌ ಇಟ್ಟಿದ್ದ ಸ್ಫೋಟಕ ವಸ್ತುವಿನ ಬಗ್ಗೆ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಈಗಾಗಲೇ ವರದಿ ನೀಡಿದ್ದಾರೆ. ‘ ತಜ್ಞರು ಸಂಗ್ರಹಿಸಲಾದ ವಸ್ತುಗಳಲ್ಲಿ ಪೊಟಾಶಿಯಂ ಕ್ಲೋರೈಡ್‌, ಪೊಟಾಸಿಯಂ ನೈಟ್ರೇಟ್‌, ಸಲ್ಫರ್‌, ಚಾರ್‌ಕೋಲ್‌ಗಳಿದ್ದು ಈ ಮಿಶ್ರಣಗಳು ಸಮ್ಮಿಳಿತಗೊಂಡು ಸ್ಫೋಟಿಸಿದಲ್ಲಿ ಮಾನವ ಪ್ರಾಣಹಾನಿ ಹಾಗೂ ಆಸ್ತಿಪಾಸ್ತಿ ಹಾನಿ ಉಂಟಾಗುವ ಸಂಭವ ಇದೆ,’ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವುದು ದಾಖಲೆಯಿಂದ ಗೊತ್ತಾಗಿದೆ. 

ವಿಮಾನ ನಿಲ್ದಾಣವನ್ನು ಸ್ಫೋಟಿಸುವ ಉದ್ದೇಶದಿಂದ ಪೂರ್ವ ತಯಾರಿ ಕೈಗೊಂಡಿದ್ದನಲ್ಲದೆ ಇದಕ್ಕಾಗಿ ಅಮೆಜಾನ್‌ ನಿಂದ ಸುಧಾರಿತ ಸ್ಫೋಟಕ ವಸ್ತುಗಳನ್ನು (Improvised Explosive Device) ತರಿಸಿಕೊಂಡಿದ್ದ ಎಂಬುದನ್ನು ತನಿಖಾ ತಂಡ ದೃಢಪಡಿಸಿದೆಯಲ್ಲದೆ ಸಾರ್ವಜನಿಕರಲ್ಲಿ ಭಯ ಉಂಟು ಮಾಡುವ ಹಾಗೂ ಅವರ ಜೀವಕ್ಕೆ ಅಪಾಯಕಾರಿ ಆಗುವಂತಹ ಕೃತ್ಯವನ್ನು ಎಸಗುವ ಉದ್ದೇಶದಿಂದಲೇ ಬಜ್ಪೆ ವಿಮಾನ ನಿಲ್ದಾಣದಲ್ಲಿ ಇರಿಸಿದ್ದ ಎಂಬುದನ್ನು ತನಿಖಾ ತಂಡ ಸಾಬೀತುಪಡಿಸಿದೆ.


ಈ ಪ್ರಕರಣದ ಹಿಂದೆ ಕೇರಳದಿಂದ ಬಂದಿರುವ ಜನರು ಹಾಗೂ ಸಿಎಎ ವಿರೋಧಿಗಳ ಪಾತ್ರ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅನುಮಾನ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts