ಸಹಭಾಗಿ ; ‘ದಿ ಫೈಲ್‌’ ವರದಿಯನ್ನು ವಿಸ್ತರಿಸಿದ ಪ್ರಜಾವಾಣಿ

ಬೆಂಗಳೂರು; ಕೊರೊನಾ ವೈರಾಣು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಔಷಧ ಸಾಮಗ್ರಿ ಮತ್ತು ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಕರ್ನಾಟಕ ಡ್ರಗ್‌ ಲಾಜಿಸ್ಟಿಕ್‌ ಸಂಸ್ಥೆ ನಡೆಸಿದ್ದ ವಿವಿಧ ರೀತಿಯ ಅಕ್ರಮಗಳನ್ನು ಮೊತ್ತ ಮೊದಲ ಬಾರಿಗೆ ‘ದಿ ಫೈಲ್‌’ ಹೊರಗೆಡವಿದ್ದ ಸರಣಿ ವರದಿಗಳನ್ನೇ ಇದೀಗ ಪ್ರಜಾವಾಣಿ ಪತ್ರಿಕೆಯೂ ವಿಸ್ತರಿಸಿದೆ.


ಈ ಮೂಲಕ ಸಹಭಾಗಿ ಪತ್ರಿಕೋದ್ಯಮವನ್ನು ಮುಂದುವರೆಸಿದೆ. ಪ್ರಜಾವಾಣಿ ಇಂದು ಮುಖಪುಟದಲ್ಲಿ ಪ್ರಕಟಿಸಿರುವ ವರದಿಯಲ್ಲಿ ಪ್ರಸ್ತಾಪಿಸಿರುವ ಅಕ್ರಮಗಳನ್ನು ‘ದಿ ಫೈಲ್‌’ 2020ರ ಏಪ್ರಿಲ್‌ 21ರಿಂದಲೇ ದಾಖಲೆಗಳ ಸಮೇತ ಎಳೆಎಳೆಯಾಗಿ ಹೊರಗೆಡವುತ್ತಲೇ ಬಂದಿದೆ.


ನಮಗೆ ದೊರೆತಿದ್ದ ದಾಖಲೆಗಳನ್ನು ಪರಿಶೀಲಿಸಿದ್ದ ನಮ್ಮ ತನಿಖಾ ತಂಡ, ಉಪಕರಣಗಳ ತಯಾರಿಸಿದ್ದ ಕಂಪನಿಗಳ ನೈಜತೆ ಮತ್ತು ಉಪಕರಣಗಳನ್ನು ಪೂರೈಕೆ ಮಾಡಿದ್ದ ಸರಬರಾಜುದಾರರ ಹಿನ್ನೆಲೆ, ಸರ್ಕಾರಕ್ಕೆ ಆಗಿದ್ದ ನಷ್ಟದ ಕುರಿತಾದ ದಾಖಲೆಗಳನ್ನು ಕಲೆ ಹಾಕಿತ್ತಲ್ಲದೆ ಈ ಬಗ್ಗೆ ಸರಣಿ ವರದಿಗಳನ್ನು ಪ್ರಕಟಿಸಿತ್ತು.


ಪಿಪಿಇ ಕಿಟ್‌, ಸ್ಯಾನಿಟೈಸರ್‌, ಗ್ಲೂಕೋಸ್‌, ವೆಂಟಿಲೇಟರ್‌, ಡಯಾಲಿಸಿಸ್‌, ಮಾಸ್ಕ್‌, ಸಿರಿಂಜ್‌ ಸೇರಿದಂತೆ ಇನ್ನಿತರೆ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಾಗಿರುವ ಅಕ್ರಮಗಳ ಕುರಿತು ಕರ್ನಾಟಕ ರಾಷ್ಟ್ರಸಮಿತಿ ಕೂಡ ದನಿ ಎತ್ತಿತ್ತು.


ಅಲ್ಲದೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ದಾಖಲಿಸಿದ್ದ ದೂರಿನಲ್ಲಿಯೂ ‘ದಿ ಫೈಲ್‌’ ಹೊರಗೆಡವಿದ್ದ ವರದಿಗಳನ್ನು ಉಲ್ಲೇಖಿಸಿತ್ತು. ಹಾಗೆಯೇ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಂಗಳಕ್ಕೆ ಕೊಂಡೊಯ್ದಿದ್ದ ಕರ್ನಾಟಕ ರಾಷ್ಟ್ರಸಮಿತಿ ಅಲ್ಲಿಯೂ ದೂರು ದಾಖಲಿಸಿದ್ದನ್ನು ಸ್ಮರಿಸಬಹುದು.


ಆರೋಗ್ಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕೊರೊನಾ ವೈರಾಣು ಹರಡುವಿಕೆಯನ್ನು ತಡೆಗಟ್ಟುವ ಹೆಸರಿನಲ್ಲಿ ಕಮಿಷನ್‌ ದಂಧೆಗಿಳಿದಿದ್ದ ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳ ಮುಖವಾಡವನ್ನು ಕಳಚುವ ನಿಟ್ಟಿನಲ್ಲಿ ಸಹಭಾಗಿ ಪತ್ರಿಕೋದ್ಯಮವು ಹೆಚ್ಚು ಪರಿಣಾಮಕಾರಿ. ಇದನ್ನೇ ‘ದಿ ಫೈಲ್‌’ ಕೂಡ ನಂಬಿದೆಯಲ್ಲದೆ ಹೆಚ್ಚಿನ ವಿಶ್ವಾಸವೂ ಇರಿಸಿಕೊಂಡಿದೆ.

Your generous support will help us remain independent and work without fear.

Latest News

Related Posts