ಸಿಗರೇಟು ವಿತರಕರಿಂದ ಲಂಚ; ಮೂವರು ಅಧಿಕಾರಿಗಳು ನಾಪತ್ತೆ?

ಬೆಂಗಳೂರು; ಸಿಗರೇಟ್‌ ವಿತರಕರು ಹಾಗೂ ನಕಲಿ ಮಾಸ್ಕ್‌ ತಯಾರಿಕಾ ಕಂಪನಿಗಳಿಂದ ಲಂಚ ಪಡೆದ ಆರೋಪಕ್ಕೆ ಗುರಿಯಾಗಿರುವ ಸಿಸಿಬಿ ಎಸಿಪಿ ಪ್ರಭುಶಂಕರ್‌, ಇನ್‌ಸ್ಪೆಕ್ಟರ್‌ ಅಜಯ್‌ ಹಾಗೂ ನಿರಂಜನಕುಮಾರ್‌ ಅವರು ತಲೆಮರೆಸಿಕೊಂಡಿದ್ದು, ವಿಚಾರಣೆಗೆ ಹಾಜರಾಗುವಂತೆ ಎಸಿಬಿ ನೋಟೀಸ್‌ ಜಾರಿ ಮಾಡಿದೆ.


ಆರೋಪಿತ ಅಧಿಕಾರಿಗಳ ಕುಟುಂಬ ಸದಸ್ಯರು ನೋಟೀಸ್‌ ಸ್ವೀಕರಿಸಿದ್ದಾರೆ. ಮೂವರು ಅಧಿಕಾರಿಗಳ ಮನೆ ಮೇಲೆ ಕಳೆದ ದಾಳಿ ನಡೆಸಿದ್ದ ಎಸಿಬಿ, ಕಳೆದ ಗುರುವಾರ ಭ್ರಷ್ಟಾಚಾರ ನಿಯಂತ್ರಣಾ ಕಾಯ್ದೆ (ಪಿ.ಸಿ. ಆ್ಯಕ್ಟ್‌) ಅಡಿ ಸೆಕ್ಷನ್‌ 17(ಎ) ಅನ್ವಯ ಸಕ್ಷಮ ಪ್ರಾಧಿಕಾರದ ಒಪ್ಪಿಗೆ ಪಡೆದು ಎಫ್‌ಐಆರ್‌ ದಾಖಲಿಸಿತ್ತು. ಈ ಪ್ರಕರಣದ ತನಿಖೆ ನಡೆಸುವಂತೆ ಡಿಜಿ ಮತ್ತು ಐಜಿ ಪ್ರವೀಣ್‌ ಸೂದ್‌ ಎಸಿಬಿಗೆ ಆದೇಶ ನೀಡಿದ್ದರು. ಅದರಂತೆ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಎಸಿಬಿ ತನಿಖೆ ಕೈಗೊಂಡಿದೆ.


ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಟನ್‌ಪೇಟೆಯಲ್ಲಿ ಮೂವರು ಅಧಿಕಾರಿಗಳ ವಿರುದ್ಧ ಸುಲಿಗೆ ಪ್ರಕರಣವೂ ದಾಖಲಾಗಿದೆ. ಎಸಿಪಿ ಪ್ರಭುಶಂಕರ್‌ ಅವರಿಗೆ ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ದೊರೆತಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ದಾಖಲಿಸಿರುವ ಪ್ರಕರಣದಲ್ಲೂ ಆರೋಪಿ ಅಧಿಕಾರಿಗಳು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.


ಕೋವಿಡ್‌-19ರ ಹಿನ್ನೆಲೆಯಲ್ಲಿ ಜಾರಿಗೊಂಡಿದ್ದ ಲಾಕ್‌ ಡೌನ್‌ ವೇಳೆ ಸಿಗರೇಟ್‌ ಮತ್ತು ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಆದರೆ ಸಿಗರೇಟ್‌ ವಿತರಕರಿಂದ ಲಂಚ ಪಡೆದ ಮೂವರು ಅಧಿಕಾರಿಗಳು ದುಬಾರಿ ಬೆಲೆಗೆ ಸಿಗರೇಟು ಮಾರಾಟ ಮಾಡಲು ಅನುವು ಮಾಡಿಕೊಟ್ಟ ಆರೋಪ ಎದುರಿಸುತ್ತಿದ್ದಾರೆ.


ಕೆ ಆರ್‌ ಪುರಂನ ಎಂ ಡಿ ಆ್ಯಂಡ್‌ ಸನ್ಸ್‌ ಸೇರಿದಂತೆ ಕೆಲವು ಸಿಗರೇಟು ವಿತರಕರಿಂದ 70 ಲಕ್ಷ ರು. ಲಂಚ ಪಡೆದಿದ್ದಾರೆ ಎಂದು ಡಿಸಿಪಿ ರವಿಕುಮಾರ್‌ ನಡೆಸಿದ ವಿಚಾರಣೆಯಿಂದ ಬಹಿರಂಗಗೊಂಡಿತ್ತು. ಇದಲ್ಲದೆ ಹನುಮಂತನಗರದ ಮಹಾವೀರ್‌ ಟ್ರೇಡರ್ಸ್‌ನ ಸಿಗರೇಟು ವಿತರಕರಿಂದ 15 ಲಕ್ಷ ರು.ಗಳನ್ನು ಪ್ರತ್ಯೇಕವಾಗಿ ಲಂಚದ ರೂಪದಲ್ಲಿ ಪಡೆಯಲಾಗಿತ್ತು.


ಈ ಪ್ರಕರಣದಲ್ಲಿ ಭೂಷಣ್‌, ಬಾಬುರಾಜೇಂದ್ರಪ್ರಸಾದ್‌ ಎಂಬುವರು ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಿದ್ದರು. ವಿಚಾರಣೆ ವೇಳೆ ತಮ್ಮ ಮೂಲಕ ಹಣದ ವಹಿವಾಟು ನಡೆದಿದ್ದಾಗಿ ಅವರು ಒಪ್ಪಿಕೊಂಡಿದ್ದರು.


ಇದಲ್ಲದೆ ಎಚ್‌ಆರ್‌ಬಿಆರ್‌ ಲೇ ಔಟ್‌ನ ಕಲ್ಯಾಣ ನಗರದಲ್ಲಿ ಎನ್‌ 95 ನಕಲಿ ಮಾಸ್ಕ್‌ ತಯಾರಿಸಿ ಸಿಕ್ಕಿಬಿದ್ದಿದ್ದ ಉದ್ಯಮಿಯೊಬ್ಬರಿಗೆ ರಕ್ಷಣೆ ನೀಡಲು ಸಿಸಿಬಿ ಅಧಿಕಾರಿಗಳು 15 ಲಕ್ಷ ರು. ಲಂಚ ಪಡೆದಿದ್ದರು. ಈ ಪ್ರಕರಣ ಕುರಿತು ಸಿಸಿಬಿ ಡಿಸಿಪಿ ಕುಲದೀಪ್‌ಕುಮಾರ್‌ ಜೈನ್‌ ವಿಚಾರಣೆ ನಡೆಸಿದ್ದರು.


ಈ ವಿಚಾರಣೆ ಬಳಿಕ ಪ್ರಭುಶಂಕರ್‌, ಅಜಯ್‌ ಮತ್ತು ನಿರಂಜನ್‌ ಅವರನ್ನು ಅಮಾನತುಪಡಿಸಲಾಗಿತ್ತು. ಬಳಿಕ ಈ ಐವರ ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ದಾಳಿ ಮಾಡಿದ್ದರು. ವಿತರಕರು ಹಾಗೂ ಸಿಸಿಬಿ ಅಧಿಕಾರಿಗಳ ನಡುವೆ ಮಧ್ಯವರ್ತಿಗಳಾಗಿ ಕೆಲಸ ಮಾಡಿದ್ದರು ಎನ್ನಲಾಗಿರುವ ಭೂಷಣ್‌ ಮತ್ತು ಯಲಹಂಕದ ಬಾಬು ಎಂಬುವರ ಮನೆಗಳ ಮೇಲೂ ದಾಳಿ ಮಾಡಿ, ಶೋಧ ನಡೆಸಲಾಗಿತ್ತು.

SUPPORT THE FILE

Latest News

Related Posts