ಬೆಂಗಳೂರು; ದೆಹಲಿಯಿಂದ ಬೆಂಗಳೂರಿಗೆ ಬಂದಿಳಿದು ಕ್ವಾರಂಟೈನ್‌ಗೆ ಒಳಗಾಗದೇ ಇದ್ದ ಕೇಂದ್ರ ಸಚಿವ ಡಿ ವಿ ಸದಾನಂದಗೌಡರ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಮಾರ್ಗಸೂಚಿಗೆ ಹೆಚ್ಚುವರಿ ಅಂಶಗಳನ್ನು ಸೇರ್ಪಡೆಗೊಳಿಸಿ ಬಿಡುಗಡೆಗೊಳಿಸಿದೆ.
ಕೇಂದ್ರ ಸಚಿವರಿಗೆ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗಿದೆ ಎಂಬುದನ್ನು ಜಾರಿಯಲ್ಲಿರುವ ಮಾರ್ಗಸೂಚಿಗೆ ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಿರುವ ರಾಜ್ಯ ಬಿಜೆಪಿ ಸರ್ಕಾರ, ಸದಾನಂದಗೌಡರ ನಡೆಯಿಂದ ಎದುರಾಗಿದ್ದ ಮುಜುಗರ ಮತ್ತು ಸಾರ್ವಜನಿಕ ವಲಯದಲ್ಲಿ ಎದ್ದಿದ್ದ ವಿರೋಧದಿಂದ ತಪ್ಪಿಸಿಕೊಳ್ಳಲು ಯತ್ನಿಸಿದಂತಿದೆ.
ಕ್ವಾರಂಟೈನ್‌ಗೆ ಒಳಗಾಗದೇ ಇದ್ದ ಇವರ ನಡೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ರಾತ್ರಿ ಹೊತ್ತಿಗೆ ಹೆಚ್ಚುವರಿ ಅಂಶಗಳನ್ನು ಸೇರ್ಪಡೆಗೊಳಿಸಿರುವ ಮಾರ್ಗಸೂಚಿಯೂ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಡಿ ವಿ ಸದಾನಂದಗೌಡ ಅವರು ಮೇ 25ರ ಬೆಳಗ್ಗೆಯೇ ದೆಹಲಿಯಿಂದ ಬೆಂಗಳೂರಿಗೆ ಬಂದಿಳಿದಿದ್ದರೂ ರಾತ್ರಿಯವರೆಗೂ ಹಿಂದೆ ಹೊರಡಿಸಿದ್ದ ಮಾರ್ಗಸೂಚಿಯೇ ಜಾರಿಯಲ್ಲಿತ್ತು.
ಕೇಂದ್ರ ಸಚಿವರು ಅಥವಾ ರಾಜ್ಯ ಸಚಿವರು, ಅಧಿಕಾರಿಗಳು ಸರ್ಕಾರಿ ಕೆಲಸದ ನಿಮಿತ್ತ ಅಂತರರಾಜ್ಯಗಳಿಗೆ ಪ್ರಯಾಣಿಸಿದಲ್ಲಿ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗಿದೆ ಎಂದು ಎರಡು ದಿನದ ಹಿಂದೆ ಹೊರಡಿಸಿದ್ದ ಮಾರ್ಗಸೂಚಿಗೆ ಸೇರ್ಪಡೆಗೊಳಿಸಲಾಗಿದೆ.
ಸದಾನಂದಗೌಡರ ಬೆನ್ನಿಗೆ ನಿಂತ ಬಿಜೆಪಿ ಸರ್ಕಾರ, ತೀವ್ರ ಮುಜಗರದಿಂದ ತಪ್ಪಿಸಿಕೊಳ್ಳಲು ಮೇ 23ರ ದಿನಾಂಕದಂದು ಹೊರಡಿಸಿದಂತೆ ಹೆಚ್ಚುವರಿ ಅಂಶಗಳ ಸೇರ್ಪಡೆಗೊಳಿಸಿದ್ದ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿತು. ಮೇ 23ರಂದೇ ಮಾರ್ಗಸೂಚಿ ಹೊರಡಿಸಿದ್ದು ನಿಜವಾಗಿದ್ದಲ್ಲಿ ಅದನ್ನು ಬಹಿರಂಗಪಡಿಸಿರಲಿಲ್ಲವೇಕೆ ಎಂಬ ಪ್ರಶ್ನೆಗಳು ಎದುರಾಗಿವೆ.
‘ನನ್ನನ್ನು ಇತರರೊಂದಿಗೆ ಹೋಲಿಸಬೇಡಿ. ಕ್ವಾರಂಟೈನ್ ಮಾರ್ಗಸೂಚಿಗಳು ಇತರೆ ನಾಗರಿಕರಿಗಷ್ಟೇ ಅನ್ವಯವಾಗಲಿದೆ. ನನಗೆ ಅನ್ವಯಿಸಬೇಡಿ,’ ಎಂದು ಸಮಜಾಯಿಷಿ ನೀಡುವ ಮೂಲಕ ಕ್ವಾರಂಟೈನ್‌ನಿಂದ ನುಣುಚಿಕೊಂಡಿದ್ದರು.
ರಾಜ್ಯ ಸರ್ಕಾರ 2020ರ ಮೇ 23ರಂದು ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ದೆಹಲಿ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ರಾಜಸ್ಥಾನ ಮತ್ತು ಮಧ್ಯಪ್ರದೇಶ ಸೇರಿದಂತೆ ಹೊರ ರಾಜ್ಯ ಮತ್ತು ವಿದೇಶಗಳಿಂದ ವಿಮಾನಗಳ ಮೂಲಕ ರಾಜ್ಯಕ್ಕೆ ಬಂದಿರುವರನ್ನು 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಬೇಕಿತ್ತು.
ಅಲ್ಲದೆ, ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪರೀಕ್ಷೆಗಳಿಗೆ ಒಳಪಡಬೇಕಿತ್ತು. ಕೋವಿಡ್ ದೃಢಪಟ್ಟಿಲ್ಲ ಎಂದು ಪ್ರಯೋಗಾಲದ ವರದಿ ನೀಡಿದ ಬಳಿಕವಷ್ಟೇ ಮನೆಗೆ ತೆರಳಬೇಕು. ಮನೆಗೆ ತೆರಳಿದ ನಂತರವೂ 7 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿರಬೇಕು.
ಈ ಮಾರ್ಗಸೂಚಿಗಳಿಂದ ಮುಖ್ಯಮಂತ್ರಿ, ಸಚಿವರು ಸೇರಿದಂತೆ ಯಾರನ್ನೂ ಹೊರಗಿಟ್ಟಿರಲಿಲ್ಲ. ಹೊರಗಿನಿಂದ ಬಂದ ಎಲ್ಲರೂ ಇದನ್ನು ಪಾಲಿಸಬೇಕು. ಈ ಎಲ್ಲಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಇತರರಿಗೆ ಮೇಲ್ಪಂಕ್ತಿ ಹಾಕಿಕೊಡಬೇಕಿದ್ದ ಕೇಂದ್ರ ಸಚಿವರೇ ಪಾಲಿಸದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
10 ವರ್ಷದ ಮಕ್ಕಳಿಗೆ, ಗರ್ಭಿಣಿಯರಿಗೆ, 80 ವರ್ಷ ದಾಟಿರುವ ಹಿರಿಯ ನಾಗರಿಕರನ್ನು ಮಾತ್ರ ಕ್ವಾರಂಟೈನ್‌ಗೆ ಒಳಪಡುವುದರಿಂದ ವಿನಾಯಿತಿ ನೀಡಲಾಗಿದೆ. ಇದನ್ನು ಹೊರತುಪಡಿಸಿದರೆ ಹೊರರಾಜ್ಯ ಮತ್ತು ವಿದೇಶಗಳಿಂದ ಬಂದ ಯಾರೊಬ್ಬರಿಗೂ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗಿರಲಿಲ್ಲ.
‘ನಾನೊಬ್ಬ ಸಚಿವ. ನಾನು ಔಷಧ ಸಚಿವಾಲಯವನ್ನೂ ಮುನ್ನಡೆಸುತ್ತಿದ್ದೇನೆ. ಔಷಧ ಸಾಮಗ್ರಿಗಳು ದೇಶದ ಎಲ್ಲೆಡೆ ಸರಬರಾಜು ಅಗುತ್ತಿವೆಯೇ ಇಲ್ಲವೇ, ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇದೆಯೇ ಇಲ್ಲವೇ ಎಂಬ ಬಗ್ಗೆ ಮೇಲುಸ್ತುವಾರಿಯನ್ನು ನಾನೇ ಮಾಡಬೇಕು. ಔಷಧ ಸಾಮಗ್ರಿಗಳು ನಿಯಮಿತವಾಗಿ ಸರಬರಾಜು ಆಗದೇ ಇದ್ದಲ್ಲಿ ವೈದ್ಯರು ತಾನೇ ಏನು ಮಾಡಿಯಾರು? ಒಂದು ವೇಳೆ ಔಷಧ ಸಾಮಗ್ರಿಗಳು ಸರಿಯಾದ ಸಮಯಕ್ಕೆ ಪೂರೈಕೆ ಆಗದೇ ಇದ್ದಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಅರ್ಥವಲ್ಲವೇ,’ ಎಂದು ಸಚಿವ ಡಿ ವಿ ಸದಾನಂದಗೌಡ ಅವರು ಮಾಧ್ಯಮ ಪ್ರತಿನಿಧಿಗಳನ್ನು ಪ್ರಶ್ನಿಸಿದ್ದರು.
ಕ್ವಾರಂಟೈನ್‌ಗೆ ಒಳಪಡದೇ ಇರುವುದಕ್ಕೆ ಮತ್ತಷ್ಟು ಕಾರಣಗಳನ್ನು ಮುಂದೊಡ್ಡಿದ ಸಚಿವರು, ತಮ್ಮ ಬಳಿ ಇರುವ ಆರೋಗ್ಯ ಸೇತು ಆಪ್‌ನ್ನು ತೋರಿಸಿದರು. ಇದರಲ್ಲಿ ಯಾವುದೇ ಮುನ್ನೆಚ್ಚರಿಕೆಯೂ ಬಂದಿಲ್ಲ ಎಂದು ಹೇಳುವ ಮೂಲಕ ಕ್ವಾರಂಟೈನ್‌ಗೆ ನಿರಾಕರಿಸಿರುವುದನ್ನು ಸಮರ್ಥಿಸಿಕೊಂಡಿದ್ದರು.
‘ನೋಡಿ ನನ್ನ ಬಳಿ ಆರೋಗ್ಯ ಸೇತು ಆಪ್ ಇದೆ. ಇದು ಈಗಲೂ ನಾನು ಸೇಫ್ ಎಂದು ಹಸಿರು ಸಂಕೇತವನ್ನು ತೋರಿಸುತ್ತಿದೆ. ಇದಲ್ಲದೆ ದೆಹಲಿ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದೇನೆ. 3-4 ದಿನಗಳಿಗೊಮ್ಮೆ ಏಮ್ಸ್ ವೈದ್ಯರು ನನ್ನನ್ನು ಪರೀಕ್ಷಿಸಿದ್ದಾರೆ. ಔಷಧ ಪೂರೈಕೆ ಆಗದೇ ಇದ್ದಲ್ಲಿ ಏನಾಗುತ್ತದೆ? ಕರೊನಾ ವೈರಾಣು ಪೀಡಿತರ ಸಂಖ್ಯೆ ದುಪ್ಪಟ್ಟುಗೊಳ್ಳಲಿದೆ. ಇತರೆ ಸಚಿವರೊಂದಿಗೆ ನಾನು ಹಲವು ಬಾರಿ ಸಭೆ ನಡೆಸಿದ್ದೇನೆ. ನಾನೇನಾದರೂ ಕ್ವಾರಂಟೈನ್ ಗೆ ಒಳಪಟ್ಟರೆ ಯಾರು ಇದನ್ನೆಲ್ಲ ನೋಡುತ್ತಾರೆ? ಇತರರನ್ನು ನನ್ನೊಂದಿಗೆ ಹೋಲಿಸಬಾರದು,’ ಎಂದು ಇನ್ನಷ್ಟು ಸಮಜಾಯಿಷಿ ನೀಡಿದ್ದನ್ನು ಸ್ಮರಿಸಬಹುದು.