ಮಲ್ಲೇಶ್ವರಂ ಬಾಂಬ್‌ ಸ್ಫೋಟ ಪ್ರಕರಣ; ಆರೋಪಿಗಳಿಂದ ತಪ್ಪೊಪ್ಪಿಗೆ ಪತ್ರ?

ಬೆಂಗಳೂರು; ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಬಳಿ 7 ವರ್ಷದ ಹಿಂದೆ ನಡೆದಿದ್ದ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿಗಳ ಪೈಕಿ 13 ಮಂದಿ ನ್ಯಾಯಾಲಯಕ್ಕೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.


ಆರೋಪಿಗಳು ಸಲ್ಲಿಸಿರುವ ತಪ್ಪೊಪ್ಪಿಗೆ ಪತ್ರಗಳನ್ನು ಮಾನ್ಯ ಮಾಡಬಾರದು ಎಂದು ಸರ್ಕಾರಿ ವಿಶೇಷ ಅಭಿಯೋಜಕ ಸಿ ಎ ರವೀಂದ್ರ ಅವರು ಆಕ್ಷೇಪ ವ್ಯಕ್ತಪಡಿಸಿ ತಕರಾರು ಅರ್ಜಿ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.


ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ವಿಚಾರಣೆ ಮಧ್ಯದಲ್ಲಿ ತಪ್ಪೊಪ್ಪಿಗೆ ಪತ್ರವನ್ನು ನ್ಯಾಯಾಲಯ ಮಾನ್ಯ ಮಾಡಬಾರದು ಎಂದು 2020ರ ಮಾರ್ಚ್‌ನಲ್ಲಿ ಸರ್ಕಾರಿ ವಿಶೇಷ ಅಭಿಯೋಜಕರು ತಕರಾರು ಅರ್ಜಿಯಲ್ಲಿ ಕೋರಿದ್ದಾರೆ ಎಂದು ವಿಶ್ವಸನೀಯ ಮೂಲಗಳು ‘ದಿ ಫೈಲ್‌’ಗೆ ಖಚಿತಪಡಿಸಿವೆ.


ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಗುರಿಪಡಿಸುವಂತಹ ಗಂಭೀರ ಅಪರಾಧ ಎಸಗಿರುವ ಆರೋಪಕ್ಕೆ ಗುರಿಯಾಗಿರುವ ಈ ಆರೋಪಿಗಳು, ಶಿಕ್ಷೆ ಅವಧಿ ಕಡಿಮೆ ಮಾಡಿಕೊಳ್ಳುವ ಅಥವಾ ವಿಚಾರಣೆಯನ್ನು ಇನ್ನಷ್ಟು ದಿನಗಳ ಕಾಲ ಮುಂದೂಡುವ ತಂತ್ರಗಾರಿಕೆಯ ಭಾಗವಾಗಿ ತಪ್ಪೊಪ್ಪಿಗೆ ಪತ್ರ ಬರೆದಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.


ವಿಚಾರಣೆ ಮಧ್ಯಂತರದಲ್ಲಿರುವಾಗ ಆರೋಪಿಗಳು ಬರೆದಿರುವ ತಪ್ಪೊಪ್ಪಿಗೆ ಪತ್ರವನ್ನು ಮಾನ್ಯ ಮಾಡಲೇಬೇಕು ಎಂಬುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಒಂದು ವೇಳೆ ಈ ತಪ್ಪೊಪ್ಪಿಗೆ ಪತ್ರವನ್ನು ಒಪ್ಪಿಕೊಂಡಿದ್ದೇ ಆದಲ್ಲಿ ಇದೇ ಪ್ರಕರಣದಲ್ಲಿ ಗಂಭೀರ ಆರೋಪಗಳಿಗೆ ಗುರಿಯಾಗಿರುವ ಇತರೆ ಆರೋಪಿಗಳ ವಿಚಾರಣೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.ಈ ಪ್ರಕರಣದಲ್ಲಿ ಸಿ ಎ ರವೀಂದ್ರ ಅವರನ್ನು 2020ರ ಫೆಬ್ರುವರಿಯಲ್ಲಿ ವಿಶೇಷ ಅಭಿಯೋಜಕರನ್ನಾಗಿ ನೇಮಿಸಲಾಗಿತ್ತು.


ಪ್ರಕರಣದ ಹಿನ್ನೆಲೆ


2013ರ ಏಪ್ರಿಲ್ 17 ರಂದು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಬಳಿ ಬಾಂಬ್‌ವೊಂದು ಸ್ಫೋಟಗೊಂಡಿತ್ತು. ಘಟನೆಯಲ್ಲಿ 18 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಬಾಂಬ್ ಸ್ಫೋಟದ ಹಿಂದೆ ನಿಷೇಧಿತ ಅಲ್-ಉಮ್ಮಾ ಉಗ್ರ ಸಂಘಟನೆ ಇದೆ ಎಂಬ ಆರೋಪ ಕೇಳಿ ಬಂದಿತ್ತು.


ಬಾಂಬ್ ಸ್ಫೋಟದಲ್ಲಿ ಮೂವರು ಉಗ್ರರು ಭಾಗಿಯಾಗಿದ್ದು, ಇದರಲ್ಲಿ ಪನ್ನಾ ಇಸ್ಮೇಲ್, ಬಿಲಾಲ್ ಮಲಿಕ್ ಹಾಗೂ ಫಕ್ರುದ್ದೀನ್ ಎಂಬುವವರನ್ನು ಆಂಧ್ರಪ್ರದೇಶದ ಪುತ್ತೂರಿನಲ್ಲಿ ಬಂಧನಕ್ಕೊಳಪಡಿಸಲಾಗಿತ್ತು. ಈ ಮೂವರು ಹಿಂದೂ ಸಂಘಟನೆ ಕಾರ್ಯಕರ್ತರನ್ನು ಹತ್ಯೆ ಮಾಡಿದ ಆರೋಪಗಳನ್ನು ಹೊತ್ತಿದ್ದರು. ಬಾಂಬ್ ಸ್ಪೋಟದ ಪ್ರಮುಖ ಆರೋಪಿ ಎಂದು ಹೇಳಲಾಗಿದ್ದ ಡೇನಿಯಲ್ ಪ್ರಕಾಶ್‌ ಎಂಬಾತನನ್ನು ಬೆಂಗಳೂರು ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದರು.


ಪ್ರಕರಣ ಸಂಬಂಧ 14 ಆರೋಪಿಗಳ ವಿರುದ್ಧ ನಗರ ಪೊಲೀಸರು ನ್ಯಾಯಾಲಯಕ್ಕೆ 2013ರ ಅಕ್ಟೋಬರ್‌ 20ರಂದು ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 6 ತಿಂಗಳು ಕಾಲ ತನಿಖೆ ನಡೆಸಿದ್ದ ಪೊಲೀಸರು 3 ಆವೃತ್ತಿಗಳಲ್ಲಿ 7,445 ಪುಟಗಳನ್ನೊಳಗೊಮಡ ಆರೋಪ ಪಟ್ಟಿ ಸಲ್ಲಿಸಿದ್ದರು. ಇದರಲ್ಲಿ 201 ದಾಖಲೆಗಳು ಮತ್ತು 260 ಸಾಕ್ಷಿಗಳ ವಿವರಗಳು ಇದ್ದವು.


ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 120 (ಬಿ), 121,121 (ಎ), 123,332, 307, 435,201 ಸಿಡಿಮದ್ದು ಬಳಕೆ ಕಾಯಿದೆ 1908 ರ ಉಪ ಸೆಕ್ಷನ್ 3,4,5 ಮತ್ತು 6 ರ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ನಿಯಂತ್ರಣ ಕಾಯಿದೆ 1984 ರ ಉಪ ಸೆಕ್ಷನ್ 4 ಕಾನೂನುಬಾಹಿರ ಚಟುವಟಿಕೆ (ನಿಯಂತ್ರಣ) ಕಾಯಿದೆ 1967 ರ ಉಪ ಸೆಕ್ಷನ್ 10,13,15,16,17,18,19 ಹಾಗೂ 20 ಅನ್ವಯ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ತಮಿಳುನಾಡಿನ ಮಧುರೈ ಮೂಲದ ಬಿಲಾಲ್ ಮಲೀಕ್, ಫಕ್ರುದ್ದೀನ್ ಅಲಿಯಾಸ್ ಪೊಲೀಸ್ ಫಕ್ರುದ್ದೀನ್, ಪನ್ನಾ ಇಸ್ಮಾಯಿಲ್ ಅಲಿಯಾಸ್ ಮಹಮ್ಮದ್ ಇಸ್ಮಾಯಿಲ್ (39) ಸೇರಿ 14 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.

the fil favicon

SUPPORT THE FILE

Latest News

Related Posts