ಲಾಕ್‌ಡೌನ್‌ ತೆರವಾದರೂ ಪರಿಸ್ಥಿತಿ ಸುಧಾರಿಸದು!; ಆರ್ಥಿಕ ಸವಾಲು ಎದುರಿಸಲು ಸಿದ್ಧವೇ?

ಬೆಂಗಳೂರು; ಸಂಪನ್ಮೂಲ ಸಂಗ್ರಹ ಸ್ಥಗಿತದಿಂದಾಗಿ ಚಿಂತಾಜನಕ ಸ್ಥಿತಿಗೆ ತಲುಪಿರುವ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ರಾಜ್ಯ ಸರ್ಕಾರ ಏದುಸಿರು ಬಿಡುತ್ತಿದೆ. ಲಾಕ್‌ಡೌನ್‌ ತೆರವುಗೊಳಿಸಿದರೂ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಾಕಷ್ಟು ಕಾಲಾವಕಾಶ ಬೇಕಿರುವ ಕಾರಣ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. ಉಳಿದ ಇಲಾಖೆಗಳು ವೆಚ್ಚವನ್ನು ಅಳೆದು ತೂಗಿ ಮಾಡಬೇಕು ಎಂದು ಆರ್ಥಿಕ ಇಲಾಖೆ ಇದೀಗ ಸೂಚಿಸಿದೆ.


ಹಲವು ಇಲಾಖೆಗಳಲ್ಲಿನ ಮುಂದುವರೆದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಂಬಂಧ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್‌ಎನ್‌ ಪ್ರಸಾದ್‌ ಅವರು ಇಲಾಖೆಗಳ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ 2020ರ ಮೇ 4ರಂದು ಸುತ್ತೋಲೆ ಹೊರಡಿಸಿದ್ದಾರೆ. ಈ ಸುತ್ತೋಲೆಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.


‘ಕೆಲವು ಇಲಾಖೆಗಳಲ್ಲಿನ ಮುಂದುವರೆದ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಅಗತ್ಯವಾಗಿರುವುದನ್ನು ಆರ್ಥಿಕ ಇಲಾಖೆ ಮನಗಂಡಿದೆ. ಆದರೆ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಪನ್ಮೂಲ ಸಂಗ್ರಹ ಸ್ಥಗಿತವಾಗಿದೆ. ಲಾಕ್‌ಡೌನ್‌ ತೆರವುಗೊಳಿಸಿದರೂ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಾಕಷ್ಟು ಕಾಲಾವಕಾಶ ಬೇಕಾಗಿರುವುದರಿಂದ ಸರ್ಕಾರವು ವೆಚ್ಚವನ್ನು ಆದ್ಯತೆ ಅನುಸಾರವಾಗಿ ಮಾಡಬೇಕಾಗುತ್ತದೆ,’ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.


ಮುಂದುವರೆದ ಯೋಜನೆಗಳನ್ನು ಅವಶ್ಯಕತೆಗನುಗುಣವಾಗಿ ಅನುಷ್ಠಾನಗೊಳಿಸಬೇಕಾಗಿದ್ದಲ್ಲಿ ಆರ್ಥಿಕ ಇಲಾಖೆಯ ಪೂರ್ವಾನುಮತಿ ಪಡೆಯಬೇಕು. ಆಯವ್ಯಯದಲ್ಲಿ ಘೋಷಿಸಿರುವ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಅವಶ್ಯಕತೆ ಇದ್ದಲ್ಲಿ ಸೂಕ್ತ ಪ್ರಸ್ತಾವನೆಯನ್ನು ಅರ್ಥಿಕ ಇಲಾಖೆಗೆ ಸಲ್ಲಿಸಬೇಕು. ಯಾವುದೇ ಹೊಸ ಯೋಜನೆ ಹಾಗೂ ಕಾಮಗಾರಿಗಳಿಗೆ ಅನುಮೋದನೆ ನೀಡುವ ಮೊದಲು ಆರ್ಥಿಕ ಇಲಾಖೆಯ ಅನುಮತಿ ಪಡೆಯಬೇಕು ಎಂದು ಸೂಚಿಸಿದೆ.


ಈಗಾಗಲೇ ಅನುಮೋದನೆಗೊಂಡು, ಟೆಂಡರ್‌ ಆಗದಿದ್ದಲ್ಲಿ, ಅನುಮೋದನೆಗೊಂಡು ಟೆಂಡರ್‌ ಆಗಿ ಕಾರ್ಯಾದೇಶ ನೀಡದಿದ್ದಲ್ಲಿ ಹಾಗೂ ಟೆಂಡರ್‌ ಆಗಿ ಕಾರ್ಯಾದೇಶ ನೀಡಿದ್ದಲ್ಲಿ ಅಂತಹ ಎಲ್ಲಾ ಕಾಮಗಾರಿಗಳು ಇನ್ನೂ ಕಾರ್ಯಾರಂಭ ಆಗದೇ ಇದ್ದಲ್ಲಿ ಇವುಗಳನ್ನು ಪ್ರಾರಂಭಿಸಲು ಆರ್ಥಿಕ ಇಲಾಖೆಯ ಪೂರ್ವಾನುಮೋದನೆ ಪಡೆಯಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ.


ಕೋವಿಡ್‌-19 ರಾಜ್ಯಗಳ ಹಣಕಾಸಿನ ಮೇಲೆ ಗಂಭೀರವಾದ ಪರಿಣಾಮ ಬೀರಿದೆ. ರಾಜ್ಯಗಳನ್ನು ಒಂದು ದೊಡ್ಡ ವಿತ್ತೀಯ ಸವಾಲುಗಳಿಗೆ ಈ ಪಿಡುಗು ಒಡ್ಡಿದೆ. ಕಳೆದ ಹಲವು ವರ್ಷಗಳಲ್ಲಿ ಎದುರಿಸಿದ್ದ ಸವಾಲುಗಳ ಪೈಕಿ ಇದೊಂದು ಬಹುದೊಡ್ಡ ಸವಾಲು ಕೂಡ ಹೌದು. ಆದರೆ ರಾಜ್ಯಗಳು ಈ ಸವಾಲನ್ನು ಎದುರಿಸಲು ಸಾಕಷ್ಟು ಏದುಸಿರು ಬಿಡಬೇಕಾಗುತ್ತದೆ.


ಕಟ್ಟುನಿಟ್ಟುಗಳಿಂದ ಕೂಡಿದ ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ರಾಜ್ಯದಲ್ಲಿಯೂ ಶೇ.60ರಷ್ಟು ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡವು. ಯಾವ ಸುಳಿವೂ ಇಲ್ಲದೆಯೇ ಬಂದೆರೆಗಿದ ಲಾಕ್‌ಡೌನ್‌ ಜನ ಸಾಮಾನ್ಯರಷ್ಟೇ ಅಲ್ಲ ಬೃಹತ್‌, ಸಣ್ಣ, ಅತಿ ಸಣ್ಣ,ಸೂಕ್ಷ್ಮ ಉದ್ಯಮಗಳು ನೋಡುನೋಡುತ್ತಿದ್ದಂತೆ ಸ್ತಬ್ಧಗೊಂಡವು. ಸರಕು ಮತ್ತು ಸೇವೆಗಳಿಗಷ್ಟೇ ಅವಕಾಶ ನೀಡಿದ್ದರಿಂದಾಗಿ ಉತ್ಪಾದನಾ ಚಟುವಟಿಕೆಗಳಿಗೆ ಅವಕಾಶವಿರದ ಕಾರಣ ಉದ್ಯಮಗಳು ಕಂಗೆಟ್ಟು ಕೂತವು.


ಈ ಬೆಳವಣಿಗೆಯಿಂದ ರಾಜ್ಯದ ಹಣಕಾಸು ಸ್ಥಿತಿಗೆ ಎರಡು ರೀತಿಯಲ್ಲಿ ದೊಡ್ಡಮಟ್ಟದಲ್ಲಿ ಹೊಡೆತ ಬಿತ್ತು. ಲಾಕ್‌ಡೌನ್‌ ಘೋಷಣೆ ಹೊರಬೀಳುತ್ತಿದ್ದಂತೆ ಜನರ ಬದುಕು ಮತ್ತಷ್ಟು ಕಷ್ಟಕ್ಕೆ ಸಿಲುಕಿತು. ಹೀಗಾಗಿ ಇವರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹೆಚ್ಚು ಹಣ ಖರ್ಚು ಮಾಡಬೇಕಾಯಿತು. ಈ ವೆಚ್ಚವಚೂ ಗಣನೀಯವಾಗಿ ಹೆಚ್ಚುತ್ತಲೇ ಹೋಯಿತು. ವೆಚ್ಚ ಮಾಡುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ.


ನಗದು ರೂಪದ ನೆರವಿನ ಪ್ರಮಾಣವನ್ನು ಹೆಚ್ಚಿಸಬೇಕಾಯಿತಲ್ಲದೆ ಉಚಿತವಾಗಿ ಮತ್ತು ರಿಯಾಯಿತಿ ದರದಲ್ಲಿ ನೀಡುತ್ತಿದ್ದ ಆಹಾರ ಪದಾರ್ಥಗಳ ಪ್ರಮಾಣವನ್ನು ಹೆಚ್ಚಿಸದೇ ಬೇರೆ ದಾರಿ ಇರಲಿಲ್ಲ. ಇದರ ಬೆನ್ನ ಹಿಂದೆಯೇ ವಲಸಿಗರ ಸಮಸ್ಯೆಯೂ ಬಿಗಡಾಯಿಸಿದ ಪರಿಣಾಮ ರಾಜ್ಯ ಸರ್ಕಾರದ ಮೇಲೆ ಇದೊಂದು ಹೊರೆಯಾಗಿ ಪರಿಣಿಮಿಸಿತು. ವಲಸಿಗರು ಹೊರಟಿದ್ದ ಸ್ಥಳದಿಂದ ಸ್ವಂತ ಸ್ಥಳಕ್ಕೆ ತೆರಳುವ ಮಾರ್ಗ ಮಧ್ಯೆ ವ್ಯತಿರಿಕ್ತ ಪರಿಣಾಮಗಳು ಬೀರಲಾರಂಭಿಸಿದವು.


ಈ ಹೊರೆಯನ್ನು ಕೆಳಗಿಳಿಸಲು ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿತು. ಸಾಕಷ್ಟು ವಿರೋಧಗಳಿದ್ದರೂ ಅವನ್ನೆಲ್ಲ ಲೆಕ್ಕಿಸದೇ ಮದ್ಯ ಮಾರಾಟಕ್ಕೆ ಅವಕಾಶ ನೀಡಿತು. ಇದು ರಾಜ್ಯ ಸರ್ಕಾರದ ಮೊಗದಲ್ಲಿ ತುಸು ಮಂದಹಾಸ ಮೂಡಿಸಿತು.


ರಾಜ್ಯದ ಬಹುಪಾಲು ತೆರಿಗೆಗಳು ಅವಶ್ಯಕವಲ್ಲದ ಸರಕುಗಳ ಮೂಲಕವೇ ಬರಲಿದೆ. ಲಾಕ್‌ಡೌನ್‌ನಿಂದಾಗಿ ಇಂತಹ ತೆರಿಗೆಗಳು ಸೇರಿದಂತೆ ಕಂದಾಯ ಸಂಗ್ರಹಣೆಯೂ ಕುಸಿತಕ್ಕೆ ಒಳಗಾಯಿತು. ಏಪ್ರಿಲ್‌ 2020ರಲ್ಲೇ ಶೇ.40ರಷ್ಟು ಕಡಿಮೆಯಾಗಿರುವುದು ಚಾಲ್ತಿಯಲ್ಲಿರುವ ಯೋಜನೆಗಳ ಮುಂದುವರಿಕೆ ಹಾದಿ ಕಷ್ಟಕರವಾಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಕೇಂದ್ರದ ಜಿಎಸ್‌ಟಿಯಲ್ಲಿ ಶೇಕಡ 40ರಷ್ಟು ತೆರಿಗೆ ರಾಜ್ಯದೊಂದಿಗೆ ಹಂಚಿಕೊಂಡರೂ ಈ ಬಾರಿ ಜಿಎಸ್‌ಟಿ ಕುಸಿತ ಕಂಡರೆ ರಾಜ್ಯಕ್ಕೆ ಇನ್ನಷ್ಟು ಹೊಡೆತ ಬೀಳಲಿದೆ. ಹೆಚ್ಚುತ್ತಿರುವ ಖರ್ಚಿನ ಜತೆಗೆ ತೆರಿಗೆ ಕೂಡ ಕಡಿಮೆ ಆಗುವುದು ಆರ್ಥಿಕ ಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆಗಳೇ ಹೆಚ್ಚಿವೆ. ಕಠಿಣವಾದ ಬಜೆಟ್ ಮಿತಿಗೊಳಪಟ್ಟಿರುವುದಲ್ಲದೆ ವರಮಾನದ ಮೂಲ ಕೆಲವೇ ಇರುವ ಕಾರಣ ಇದನ್ನು ನೋಡಿಕೊಂಡೇ ಖರ್ಚು ಮಾಡಬೇಕು ಎನ್ನುತ್ತಾರೆ ಆರ್ಥಿಕ ತಜ್ಞರು.


ಸ್ವಂತ ತೆರಿಗೆ ಮತ್ತು ಹಣಕಾಸು ಸಮಿತಿ ನಿರ್ದೇಶಿಸಿದ ಕೇಂದ್ರ ತೆರಿಗೆ ಪಾಲು, ಶಾಸನಬದ್ಧವಲ್ಲದ ವರ್ಗಾವಣೆ ಅಡಿಯಲ್ಲಿ ಕೇಂದ್ರದಿಂದ ಬರು ಹಣ ಮತ್ತು ಮಾರುಕಟ್ಟೆಯಿಂದ ಪಡೆದಿರುವ ಸಾಲ ಇವಷ್ಟನ್ನೇ ಇಟ್ಟುಕೊಂಡು ರಾಜ್ಯ ಖರ್ಚು ಮಾಡಬೇಕಿದೆ. 2020ರ ಏಪ್ರಿಲ್‌ ರಾಜ್ಯಕ್ಕೆ ದೊರೆಯಬೇಕಿದ್ದ ತೆರಿಗೆ ಪಾಲನ್ನಷ್ಟೇ ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿದೆಯಾದರೂ ಇದು ಕೇಂದ್ರ ಹಣಕಾಸು ಸಮಿತಿ ಸೂಚಿಸಿದ್ದಕ್ಕಿಂತ ಒಂದೇ ಒಂದು ಬಿಡಿಗಾಸನ್ನೂ ಹೆಚ್ಚಾಗಿ ಕೊಡುತ್ತಿಲ್ಲ.


ರಾಜ್ಯದ ಪರಿಸ್ಥಿತಿ ಈಗಾಗಲೇ ಶೋಚನೀಯವಾಗಿದೆ. ಅಲ್ಲದೆ ಇದ್ದ ಒಂದೆರಡೂ ದಾರಿಯನ್ನೂ ಬಂದ್‌ ಮಾಡಿ ಇನ್ನಷ್ಟು ಹದಗೆಡಿಸಿದೆ. ಅವಶ್ಯಕ ಸರಕು, ಸೇವೆಗಳ ಪಟ್ಟಿಯಲ್ಲಿರುವ ಮದ್ಯ ಮತ್ತು ಇ-ಕಾಮರ್ಸ್‌ನಿಂದ ರಾಜ್ಯಕ್ಕೆ ಆದಾಯ ಬರುತ್ತಿತಾದರೂ ಮದ್ಯ ನಿಷೇಧ ಇಲ್ಲದ ಬಹುತೇಕ ರಾಜ್ಯಗಳಿಗೆ ಶೇ.30-40ರಷ್ಟುಆದಾಯ ಇದೇ ಮದ್ಯ ಮಾರಾಟದಿಂದ ಬರುತ್ತಿದೆ.


ಇನ್ನು, ಅವಶ್ಯಕವಲ್ಲದ ಪದಾರ್ಥಗಳ ಇ-ಕಾಮರ್ಸ್‌ ಮೇಲೆ ಜಿಎಸ್‌ಟಿ ವಿಧಿಸಲಾಗುತ್ತಿದೆಯಾದರೂ ಏಪ್ರಿಲ್‌ 14ರಂದು ಲಾಕ್‌ಡೌನ್‌ ವಿಸ್ತರಿಸಿದಾಗ ಕೇಂದ್ರ ಸರ್ಕಾರ ಸಕಾರಣಗಳಿಲ್ಲದೆ ಇದನ್ನೂ ರದ್ದುಗೊಳಿಸುವ ಮೂಲಕ ರಾಜ್ಯವನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದೆ. ಕೇಂದ್ರದ ಈ ಕ್ರಮದಿಂದಾಗಿ ರಾಜ್ಯದ ತೆರಿಗೆ ಶೇ.25ರಿಂದ 30ರಷ್ಟು ಕಡಿಮೆಯಾಗಲಿದೆ ಎಂದು ಹೇಳಲಾಗುತ್ತಿದೆ.


ರಾಜ್ಯದ ಆರ್ಥಿಕ ಸಂಕಷ್ಟಗಳು ಇಲ್ಲಿಗೆ ಕೊನೆಯಾಗುವುದಿಲ್ಲ. ಲಾಕ್‌ಡೌನ್‌ನಿಂದಾಗಿ ಇನ್ನೂ ಹಲವು ಪೆಟ್ಟುಗಳನ್ನು ಅನುಭವಿಸಲಿದೆ. ಕೇಂದ್ರ ಸರ್ಕಾರ ಸದ್ದಿಲ್ಲದೆ ಖರ್ಚಿನಲ್ಲಿ ಶೇ. 5-10ರಷ್ಟನ್ನು ಕಡಿತಗೊಳಿಸಿದೆ. ಕೇಂದ್ರ ಪುರಸ್ಕೃತ ಯೋಜನೆಗಳಲ್ಲೇ ಬಹುತೇಕ ಕಡಿತವಾಗಲಿದೆ. ರಾಜ್ಯ ಸರ್ಕಾರವೇ ಇದನ್ನು ಜಾರಿಗೊಳಿಸಲಿದ್ದರೂ ಅನುದಾನ ಒದಗಿಸುವ ಕೇಂದ್ರ ಸರ್ಕಾರವೇ ಇದೀಗ ಅದರ ಖರ್ಚನ್ನು ಕಡಿತಗೊಳಿಸಿರುವುದರಿಂದ ಇದನ್ನು ಹೇಗೆ ನಿಭಾಯಿಸಲಿದೆ ಎಂಬುದರ ಮೇಲೆ ಆರ್ಥಿಕ ಪರಿಸ್ಥಿತಿ ನಿರ್ಧರಿಸಲ್ಪಡುತ್ತದೆ ಎನ್ನುತ್ತಾರೆ ಆರ್ಥಿಕ ತಜ್ಞರು.


ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಮತ್ತು ಬಿಡುಗಡೆಯಾದ ಅನುದಾನದಲ್ಲಿ ಖರ್ಚಿನಲ್ಲಿ ಕಡಿತಗೊಳಿಸುವುದರಿಂದ ಬಜೆಟ್‌ನ್ನು ರಕ್ಷಿಸಿಕೊಳ್ಳಲು ತಿಣುಕಾಟ ಮುಂದುವರೆಯಲಿದೆ. ಈಗಾಗಲೇ ಜಾಗತಿಕ ತೈಲ ಬೆಲೆಯಲ್ಲಿ ಕುಸಿತ ಕಂಡಿರುವುದರಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತದಂತಹ ದೇಶಗಳಿಗೆ ಹೆಚ್ಚುವರಿ ಸಂಪನ್ಮೂಲ ಕ್ರೋಡಿಕರಿಸಲು ಅವಕಾಶ ದೊರೆತಿದೆ.


ಮೊದಲೆಲ್ಲಾ ಈ ಮೂಲದಿಂದ ಬರುತ್ತಿದ್ದ ಆದಾಯವನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆಯಾಗುತ್ತಿತ್ತು. ಆದರೀಗ ಕೇಂದ್ರ ಸರ್ಕಾರ ತಾನೇ ಸ್ವತಂತ್ರವಾಗಿ ತೆರಿಗೆ ವಿಧಿಸುವ ಮೂಲಕ ಇರುವವ ಎಲ್ಲಾ ಅವಕಾಶಗಳನ್ನು ಕಸಿದುಕೊಂಡಿದೆ. ಇದರ ಸುಳಿವು ರಾಜ್ಯಗಳಿಗೆ ಸಿಗುವ ಮೊದಲೇ ಕೇಂದ್ರ ಸರ್ಕಾರವೇ ಅದರ ಮೂಲವನ್ನು ಹಿಡಿದಿಟ್ಟುಕೊಂಡಿದೆ. ಇದು ಮುಂದಿನ ದಿನಗಳಲ್ಲಿ ವ್ಯತಿರಿಕ್ತ ಪರಿಣಾಮಗಳಿಗೆ ಕಾರಣವಾಗಲಿದೆ.


ಸದ್ಯ ಪ್ರಯಾಣದ ಮೇಲೆ ನಿರ್ಬಂಧ ಹೇರಿರುವುದರಿಂದ ಏಕಕಾಲದಲ್ಲಿ ಸಾರಿಗೆ ಮತ್ತು ಕೈಗಾರಿಕೆಗಳು ತೀವ್ರ ಬಿಕ್ಕಟ್ಟಿಲ್ಲಿವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಈಗಾಗಲೇ 250 ಕೋಟಿ ರು.ಗೂ ಹೆಚ್ಚಿನ ನಷ್ಟ ಅನುಭವಿಸಿದೆ. ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸಾರಿಗೆ ಸಂಚಾರ ಪುನರ್‌ ಅರಂಭಿಸಿದರೂ ಸದ್ಯ ಕೋವಿಡ್‌ ಭೀತಿಯಲ್ಲೇ ಇರುವ ಕಾರಣ ನಿರೀಕ್ಷೆಯಂತೆ ಪ್ರಯಾಣಿಕರು ಬರದೇ ಇರಬಹುದು. ಸಾರಿಗೆ ಆದಾಯದಲ್ಲಾಗುತ್ತಿರುವ ಖೋತಾ ಇನ್ನೂ ಮುಂದುವರೆಯಬಹುದು.


ಇದಷ್ಟೇ ಅಲ್ಲ, ಪೆಟ್ರೋಲಿಯಂ ಉತ್ಪನ್ನಗಳು ಬೇಡಿಕೆ ಕಡಿಮೆ ಆಗಿರುವ ಕಾರಣ ತಮ್ಮ ಮಟ್ಟದಲ್ಲೇ ತೆರಿಗೆ ವಿಧಿಸುವ ಸಾಧ್ಯತೆಗಳು ಕ್ಷೀಣಿಸಿವೆ. ಇನ್ನು, ವಿದ್ಯುತ್ ಉತ್ಪಾದಕ ಕಂಪನಿಗಳು ಮುಂಗಡ ಹಣಕ್ಕಾಗಿ ಬೇಡಿಕೆ ಇರಿಸಿದೆ. ಈಗಾಗಲೇ ಸಂಕಷ್ಟಗಳ ಸುಳಿಯಲ್ಲಿ ಸಿಲುಕಿರುವ ರಾಜ್ಯ, ಸಂಕಷ್ಟಗಳ ಸಿಲುಕಿನಿಂದ ಪಾರಾಗಲು ಇನ್ನಷ್ಟು ಹರಸಾಹಸಪಡಬೇಕಾದೀತು ಎನ್ನುತ್ತಾರೆ ಆರ್ಥಿಕ ತಜ್ಞರು.


ಆದಾಯವಿಲ್ಲದೆ ಸೊರಗಿ ಹೋಗಿರುವ ಇಂತಹ ಹೊತ್ತಿನಲ್ಲಿ ವಿದ್ಯುತ್‌ ಕಂಪನಿಗಳು ಮುಂಗಡ ಹಣಕ್ಕಾಗಿ ಬೇಡಿಕೆ ಇರಿಸಿರುವುದು ಬೇರೆ ಕಡೆ ಮಾಡುತ್ತಿರುವ ಖರ್ಚನ್ನು ಕಡಿಮೆ ಮಾಡಲೇಬೇಕಾದ ಅನಿವಾರ್ಯತೆಯೂ ಇದೆ. ಒಂದು ವೇಳೆ ಮುಂಗಡ ಹಣ ನೀಡದಿದ್ದಲ್ಲಿ ವಿದ್ಯುತ್ ಪೂರೈಕೆಯನ್ನೇ ನಿಲ್ಲಿಸಿದರೆ ಜನಸಾಮಾನ್ಯರ ಬದುಕು ಮಾತ್ರವಲ್ಲ ಕೈಗಾರಿಕೆಗಳ ಸ್ಥಿತಿಯೂ ಅಧೋಗತಿಗೆ ಇಳಿಯಲಿದೆ. ಇದು ಸಾಮಾಜಿಕ ಯೋಜನೆಗಳ ಕಾರಣಕ್ಕೆ ಮಾಡುತ್ತಿರುವ ಖರ್ಚಿನ ಮೇಲೂ ಪರಿಣಾಮ ಬೀರಲಿವೆ.

the fil favicon

SUPPORT THE FILE

Latest News

Related Posts