ಒಂದೇ ಒಂದು ಅಗಳು ಅಕ್ಕಿಯೂ ಇಲ್ಲ; ವಲಸಿಗರ ತಾರತಮ್ಯವೂ ನಿಂತಿಲ್ಲ

ಬೆಂಗಳೂರು; ಕೇಂದ್ರ ಮತ್ತು ರಾಜ್ಯದ ಮಧ್ಯೆ ಸಮನ್ವಯತೆ ಇಲ್ಲದ ಕಾರಣ ಹೊರರಾಜ್ಯದ ವಲಸಿಗರು ಇನ್ನೂ ತವರೂರಿಗೆ ತೆರಳಲಾಗದೇ ಬಸ್‌ ಶೆಲ್ಟರ್‌ಗಳಲ್ಲೇ ಆಶ್ರಯ ಪಡೆದು ಒಪ್ಪೊತ್ತಿನ ಗಂಜಿಗಾಗಿ ಪರದಾಡುತ್ತಿದ್ದಾರೆ. ರೈಲುಗಳ ಸಂಖ್ಯೆ ಕಡಿಮೆ ಇರುವ ಕಾರಣ ನಿತ್ಯವೂ ವಲಸಿಗ ಕಾರ್ಮಿಕರ ಸಂಖ್ಯೆ ದಿನೇ ದಿನೇ ಏರುತ್ತಿದೆ.


ಅಲ್ಲದೆ ಹೊರರಾಜ್ಯಗಳಿಗೆ ಕಳಿಸುವ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿರುವ ವಲಸಿಗರಿಗಷ್ಟೇ ಹೆಚ್ಚಿನ ಆದ್ಯತೆ ಸಿಗುತ್ತಿದೆಯೇ ಹೊರತು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಮಾವಣೆಗೊಂಡಿರುವ ಹೊರ ರಾಜ್ಯದ ವಲಸಿಗರಿಗೆ ಸಿಗುತ್ತಿಲ್ಲ. ಸೇವಾ ಸಿಂಧು ಮೂಲಕ ಹೆಸರು ನೋಂದಾಯಿಸಿ ಹಲವು ದಿನಗಳಾದರೂ ಹಲವರಿಗೆ ರೈಲು ಸಂಚಾರಕ್ಕೆ ಅವಕಾಶ ಸಿಗುತ್ತಿಲ್ಲ.
ಹೊರರಾಜ್ಯದ ವಲಸಿಗರನ್ನು ತವರೂರಿಗೆ ಕಳಿಸುವ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೆಲೆಗೊಂಡಿರುವ ಹೊರರಾಜ್ಯದ ವಲಸಿಗರ ವಿಚಾರದಲ್ಲಿ ತಾರತಮ್ಯ ಎಸಗುತ್ತಿರುವುದು ಕಂಡು ಬಂದಿದೆ.


ಹೊಸಕೋಟೆ ತಾಲೂಕಿನ ಮಾರಶೆಟ್ಟಿಹಳ್ಳಿಯಲ್ಲಿ ಎಲ್ಲೆಂದರಲ್ಲಿ ಬೀಡುಬಿಟ್ಟಿರುವ ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್‌, ಮಧ್ಯ ಪ್ರದೇಶ, ಅಸ್ಸಾಂ, ಒಡಿಶಾ ರಾಜ್ಯಗಳಿಗೆ ಸೇರಿರುವ ನೂರಾರು ಸಾವಿರಾರು ಸಂಖ್ಯೆಯ ವಲಸಿಗರು ರೈಲ್ವೇ ಅಧಿಕಾರಿಗಳಿಂದ ಯಾವ ಪ್ರತಿಕ್ರಿಯೆ ಬಾರದ ಕಾರಣ ಅಸಹಾಯಕ ಸ್ಥಿತಿಯಲ್ಲಿದ್ದಾರೆ.


ಇನ್ನು, ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಶಾಸಕ ಶರತ್‌ ಬಚ್ಚೇಗೌಡ, ಮಾಜಿ ಶಾಸಕ ಎಂಟಿಬಿ ನಾಗರಾಜ್‌ ಅವರು ಇತ್ತ ಸುಳಿದಿಲ್ಲ. ಆಹಾರ ಪೊಟ್ಟಣದ ಮಾತಿರಲಿ, ಒಂದೇ ಒಂದು ಅಗಳು ಅಕ್ಕಿಯೂ ದೊರೆತಿಲ್ಲ. ಈ ಭಾಗದ ಚುನಾಯಿತ ಜನಪ್ರತಿನಿಧಿಗಳು ಹೊರರಾಜ್ಯದ ವಲಸಿಗರಿಗೆ ಟೋಕನ್‌ ನೀಡದೇ ಇರುವುದೇ ಇದಕ್ಕೆ ಮುಖ್ಯ ಕಾರಣ ಎಂದು ತಿಳಿದು ಬಂದಿದೆ.


ಮಲ್ಲಸಂದ್ರ, ನಡುವತ್ತಿ, ಕೊರಳೂರು ಭಾಗಗಳಲ್ಲಿ ರೇಷನ್‌ ಅಂಗಡಿಗಳಲ್ಲೂ ಇವರಿಗೆ ಆಹಾರ ಧಾನ್ಯಗಳು ದೊರೆತಿಲ್ಲ ಎಂದು ಹೇಳಲಾಗುತ್ತಿದೆಯಲ್ಲದೆ, ಈ ಭಾಗದ ಮತದಾರರ ಪಟ್ಟಿಯಲ್ಲಿ ಹೊರರಾಜ್ಯದ ವಲಸಿಗರು ಹೆಸರು ಇರದ ಕಾರಣ ಚುನಾಯಿತ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗೊತ್ತಾಗಿದೆ.


2020ರ ಮೇ 10ರಂದು ಬಿಹಾರದ 98, ಮೇ 13ರಂದು ಪಶ್ಚಿಮ ಬಂಗಾಳದ 12, ಜಾರ್ಖಂಡ್‌ನ 128, ಉತ್ತರ ಪ್ರದೇಶದ 120, ಮಧ್ಯ ಪ್ರದೇಶದ 80 , ಮೇ 16ರಂದು ಬಿಹಾರದ 150, ಜಾರ್ಖಂಡ್‌ನ 138, ಒಡಿಶಾದ 45, ಅಸ್ಸಾಂನ 48, ಉತ್ತರ ಪ್ರದೇಶದ 65, ಪಶ್ಚಿಮ ಬಂಗಾಳದ 16 ಮಂದಿ ವಲಸಿಗ ಕಾರ್ಮಿಕರನ್ನು ಮಾಲೂರು ರೈಲ್ವೇ ನಿಲ್ದಾಣ ಮೂಲಕ ಆಯಾ ರಾಜ್ಯಗಳಿಗೆ ಕಳಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ತಿಳಿಸಿದರು.


ಹೊರರಾಜ್ಯಗಳ ಕಾರ್ಮಿಕರನ್ನು ಕಳಿಸುವಾಗ ನಗರ ಪ್ರದೇಶಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ. ವಲಸಿಗ ಕಾರ್ಮಿಕರ ಸಂಖ್ಯೆ ಎಲ್ಲಿ ಹೆಚ್ಚಿದೆಯೋ ಮತ್ತು ಕಂಪನಿ, ಗುತ್ತಿಗೆದಾರರ ಬೆದರಿಕೆ ಎಲ್ಲಿ ಹೆಚ್ಚಿದೆಯೋ ಅಂತಹ ಭಾಗಗಳ ಕಾರ್ಮಿಕರನ್ನು ಬೆಂಗಳೂರಿನಿಂದ ಕಳಿಸುತ್ತಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

SUPPORT THE FILE

Latest News

Related Posts