ಬೆಂಗಳೂರು; ಬಸ್ ಶೆಲ್ಟರ್ ತುಂಬೆಲ್ಲಾ ಮೆತ್ತಿಕೊಂಡಿದ್ದ ಧೂಳಿನಲ್ಲೇ ಕುಳಿತಿದ್ದವರ ಮುಖ ಬಿಸಿಲಿಗೆ ಬಾಡಿ ಹೋಗಿತ್ತು. ಬಾಯಾರಿಸಿಕೊಳ್ಳಲು ಹನಿ ನೀರು ಸಿಗಬಹುದೇ ಎಂದು ಅತ್ತಿಂದಿತ್ತ ಒಂದಷ್ಟು ಮಂದಿ ಕಣ್ಣಾಯಿಸುತ್ತಿದ್ದರು. ಬಾಟಲಿಗಳನ್ನಿಡಿದು ನೀರು ಹುಡುಕಲು ಕೆಲವರು ತೆರಳಿದ್ದರೇ, ಇನ್ನು ಹಲವರು ಶೆಲ್ಟರ್‌ನ ಗೋಡೆಯೊಂದಕ್ಕೆ ಒರಗಿ ದಣಿವಾರಿಸಿಕೊಳ್ಳುತ್ತಿದ್ದರು. ಇಲ್ಲಿ ಜಾಗ ಸಿಗದೇ ಇದ್ದವರು ಶೆಲ್ಟರ್ ಎದುರಿನ ರಸ್ತೆ ಬದಿಯಲ್ಲಿದ್ದ ಮರಗಳ ಕೆಳಗೆ ಕುಳಿತಿದ್ದರು.
ಇವಿಷ್ಟು ಹೊರರಾಜ್ಯದ ವಲಸಿಗರ ಸದ್ಯದ ಸ್ಥಿತಿಗತಿಯನ್ನು ಕಟ್ಟಿಕೊಡುವ ದೃಶ್ಯಗಳು. ಬೆಂಗಳೂರು ತೊರೆದು ತವರೂರಿನತ್ತ ತೆರಳಲು ಕಾದು ಕುಳಿತಿದ್ದರೂ ರೈಲ್ವೇ ಇಲಾಖೆಯಿಂದ ಹಸಿರು ನಿಶಾನೆ ದೊರೆತಿಲ್ಲ. ಅಧಿಕಾರಿಗಳಿಂದ ಕರೆ ಬರುವವರೆಗೂ ಉಪವಾಸವೋ ವನವಾಸವೋ ಎಂಬಂತೆ ಬಸ್ ಶೆಲ್ಟರ್ ಬಿಟ್ಟು ಕದಲಲೂ ಸಿದ್ಧರಿರಲಿಲ್ಲ. ಇವರಲ್ಲಿ ತುಂಬು ಗರ್ಭಿಣಿಯರೂ ಇದ್ದರು.
ವಾಸವಿದ್ದ ಜೋಪಡಿಗಳನ್ನು ಕಿತ್ತೊಗೆದು ಸರಕು ಸರಂಜಾಮುಗಳ ಸಮೇತ ಬಸ್ ಶೆಲ್ಟರ್‌ಗಳಲ್ಲಿ ಠಿಕಾಣಿ ಹೂಡಿರುವ ಇವರು, ಹಸಿವನ್ನೂ ಲೆಕ್ಕಿಸದೆಯೇ ತವರೂರಿಗೆ ತೆರಳಲು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ರೈಲು ಅಧಿಕಾರಿಗಳ ಕರೆ ಬಂದ ಕ್ಷಣವೇ ಒಂದೇ ಉಸಿರಿನಲ್ಲಿ ತವರೂರು ಸೇರಲು ಕಣ್ಣು ರೆಪ್ಪೆಗಳನ್ನು ಬಡಿಯದೇ ಕುಳಿತವರಿವರು.
ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿ ಸುತ್ತಮುತ್ತ ಇಂತಹ ದೃಶ್ಯಗಳು ಸರ್ವೇ ಸಾಮಾನ್ಯ. ಶ್ರಮಿಕ್ ರೈಲುಗಳ ಸಂಖ್ಯೆಯಲ್ಲಿ ಹೆಚ್ಚಳಗೊಳ್ಳದ ಕಾರಣ ತಮ್ಮ ಸರದಿ ಯಾವಾಗ ಬರುವುದು ಎಂದು ಪೊಲೀಸ್ ಠಾಣೆಗಳ ಮೆಟ್ಟಿಲಿಳಿದು ಬಸವಳಿದು ಹೋಗಿರುವ ವಲಸಿಗ ಕಾರ್ಮಿಕರಿಗೆ ಠಾಣೆಗಳ ಆವರಣ, ಮುಂಭಾಗದಲ್ಲಿರುವ ಬಯಲು, ಬಸ್ ಶೆಲ್ಟರ್, ರಸ್ತೆಯ ಬದಿಯಲ್ಲಿರುವ ಮರಗಳೇ ಇವರಿಗೆ ಸದ್ಯಕ್ಕೆ ಆಶ್ರಯತಾಣಗಳು.
ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿ ಹಳ್ಳಿ ಪೊಲೀಸ್ ಠಾಣೆಯ ಸರಹದ್ದಿಗೆ ‘ದಿ ಫೈಲ್’ ಕಾಲಿಟ್ಟಾಗ ಸುಡುಸುಡು ಬಿಸಿಲು. ಡಾಂಬರು ರಸ್ತೆ ಕಾದ ಹೆಂಚಿನಂತಾಗಿತ್ತು. ಎರಡು ಮೂರು ದಿನದಿಂದ ಊಟವಿಲ್ಲದೆ ನಿತ್ರಾಣರಾಗಿದ್ದ ಹೊರ ರಾಜ್ಯದ ವಲಸಿಗರು ತಿರುಮಲಶೆಟ್ಟಿ ಹಳ್ಳಿಯ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿರುವ ಶೆಲ್ಟರ್‌ನಲ್ಲಿ ಮುದುಡಿ ಮಲಗಿದ್ದರು.
ಜಾರ್ಖಂಡ್, ಬಿಹಾರ, ಮಧ್ಯ ಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ, ಉತ್ತರ ಪ್ರದೇಶ ಮೂಲದ ವಲಸಿಗರು ಕೊಠಡಿಗಳನ್ನು ತೆರವು ಮಾಡಿ ಸರಕು ಸರಂಜಾಮುಗಳನ್ನು ಹೇರಿಕೊಂಡು ಪೊಲೀಸ್ ಠಾಣೆಯ ಎದುರಿನ ರಸ್ತೆ ಬದಿಯಲ್ಲಿರುವ ಮರಗಳು ಮತ್ತು ಠಾಣೆಗೆ ಹೊಂದಿಕೊಂಡಂತಿದ್ದ ಬಸ್ ಶೆಲ್ಟರ್‌ಗಳಲ್ಲಿ ಠಿಕಾಣಿ ಹೂಡಿದ್ದಾರೆ. ಸ್ವಚ್ಛತೆ ಮತ್ತು ನೈರ್ಮಲ್ಯವೇ ಇಲ್ಲದ ಇಡೀ ಬಸ್ ಶೆಲ್ಟರ್ ತುಂಬಾ ಧೂಳು ಮೆತ್ತಿಕೊಂಡಿತ್ತು.
ಕೊರೊನಾ ವೈರಸ್ ಎಲ್ಲಿ ತಮ್ಮನ್ನು ಸೋಂಕುತ್ತದೆ ಎಂಬ ಅತೀವ ಭೀತಿ ಇವರಲ್ಲಿ ಆವರಿಸಿತ್ತು. ರಾತ್ರೋರಾತ್ರಿ ಕೊಠಡಿಗಳನ್ನು ತೆರವು ಮಾಡಿಕೊಂಡು ಬಸ್ ಶೆಲ್ಟರ್‌ಗಳಲ್ಲಿ ಠಿಕಾಣಿ ಹೂಡಿರುವುದನ್ನು ಪತ್ತೆ ಹಚ್ಚಿದ್ದ ಸ್ಥಳೀಯ ಗುತ್ತಿಗೆದಾರರು ಇವರನ್ನು ಬೆಂಬೆತ್ತಿದ್ದರು. ‘ಅದು ಹೇಗೆ ನಿಮ್ಮ ಊರುಗಳಿಗೆ ಹೋಗುತ್ತೀರೋ ನಾವೂ ನೋಡೇ ಬಿಡುತ್ತೇವೆ,’ ಎಂದು ಸರಿ ರಾತ್ರಿಯಲ್ಲಿ ಬೆದರಿಕೆ ಹಾಕಿ ಹೋಗಿದ್ದರು ಎಂದು ವಲಸಿಗ ಕಾರ್ಮಿಕರೊಬ್ಬರು ‘ದಿ ಫೈಲ್’ ಪ್ರತಿನಿಧಿಗೆ ತಿಳಿಸಿದರು.
ಗುತ್ತಿಗೆದಾರನ ಬೆದರಿಕೆ ಬಗ್ಗೆ ಹೇಳುತ್ತಿದ್ದ ಜಾರ್ಖಂಡ್ ಮೂಲದ ಕಾರ್ಮಿಕನಿಗೆ ಸಹ ಕಾರ್ಮಿಕ ಅರ್ಧದಲ್ಲಿಯೇ ತಡೆಹಿಡಿದು ಬೇಡ ಹೇಳಬೇಡ ಎಂದು ತಡೆಯೊಡ್ಡಿದರು. ಅದನ್ನು ಲೆಕ್ಕಿಸದೆಯೇ ಮಾತು ಮುಂದುವರೆಸಿದ ಆತ ‘ನಮಗೆ ಕೆಲಸವೂ ಇಲ್ಲ, ಮಾಡಿದ ಕೆಲಸಕ್ಕೆ ವೇತನವೂ ಸಿಕ್ಕಿಲ್ಲ. ಊಟವೂ ಇಲ್ಲ, ಉಳಿಯಲು ಕೊಠಡಿಯೂ ಇಲ್ಲ, ಇಲ್ಲಿದ್ದುಕೊಂಡು ನಾವೇನು ಮಾಡುವುದು, ಇಲ್ಲಿಯೇ ಉಳಿದು ಕೆಲಸ ಮಾಡಿ ಎನ್ನುವ ಗುತ್ತಿಗೆದಾರರು ವೇತನವನ್ನು ನೀಡುತ್ತಿಲ್ಲ. ಈಗ ಹೇಳಿ ನಾವೇನು ಮಾಡಬೇಕು,’ ಎಂದು ಹೇಳುವಾಗ ಆತನ ಗಲ್ಲದ ಮೇಲೆ ಕಣ್ಣೀರು ದಳದಳನೇ ಇಳಿಯುತ್ತಿತ್ತು.
ಇದೇ ಗುಂಪಿನಲ್ಲಿದ್ದ ಮತ್ತೊಂದಿಷ್ಟು ಕಾರ್ಮಿಕರನ್ನು ಬಿರ್ಲಾ ಲೈಟ್ ಹೆಸರಿನ ಕಂಪನಿ ಹೊರದಬ್ಬಿದೆ. ಅಲ್ಲಿಂದ ಹೊರದಬ್ಬಿಸಿಕೊಂಡು ಬಂದಿದ್ದ ಇವರಿಗೆ ಆಶ್ರಯ ನೀಡಿದ್ದು ತಿರುಮಲಹಳ್ಳಿ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಬಸ್ ಶೆಲ್ಟರ್. ದಿನವೊಂದಕ್ಕೆ ಹತ್ತಿಪ್ಪತ್ತು ಬಾರಿ ಠಾಣೆ ಮೆಟ್ಟಿಲಿಳಿಯುವ ಈ ಕಾರ್ಮಿಕರು, ತಮ್ಮ ಸರದಿ ಯಾವಾಗ ಬರುವುದು ಎಂದು ಕೇಳುವುದು, ಪೊಲೀಸ್ ಪೇದೆಗಳು ಇವರನ್ನು ಗದರುವುದು ಸಾಮಾನ್ಯವೆಂಬತ್ತಿತ್ತು.
ಬಿಹಾರ ಪಾಟ್ನಾದ ಜಿಲಾನಾಬಾದ್‌ನ ಸಂಗೀತಾ ದೇವಿ ಈಗ ತುಂಬು ಗರ್ಭಿಣಿ. 8 ತಿಂಗಳಾಗಿರುವ ಈಕೆಗೆ ಎರಡು ದಿನದಿಂದ ಊಟ ಸಿಗದ ಕಾರಣ ಸೊರಗಿ ಹೋಗಿದ್ದಳು. ಠಾಣೆಯ ಆವರಣಕ್ಕೆ ಏದುಸಿರುವ ಬಿಡುತ್ತಲೇ ಹೆಜ್ಜೆಗಳನ್ನಿರಿಸುತ್ತ ಬಂದ ಸಂಗೀತಾದೇವಿ, ಅಲ್ಲಿಯೇ ಇದ್ದ ಪೊಲೀಸ್ ಜೀಪಿಗೆ ಒರಗಿಕೊಂಡು ಆಯಾಸ ನೀಗಿಸಿಕೊಳ್ಳಲು ಯತ್ನಿಸುತ್ತಲೇ ತನ್ನ ಗಂಡನಿಗಾಗಿ ಎದುರು ನೋಡುತ್ತಿದ್ದಳು. ಈಕೆಯ ಕಷ್ಟ ನೋಡಲಾರದೇ ಪತಿ ಉಮೇಶ್, ಪೊಲೀಸ್ ಪೇದೆ ನಟರಾಜ್ ಎಂಬುವರ ಬಳಿ ಹಣ ಪಡೆದು ಊಟ ತರಲು ಹೋಗಿದ್ದ.
ಅಳುತ್ತಲೇ ಮಾತು ಆರಂಭಿಸಿದ ಪಶ್ಚಿಮ ಬಂಗಾಳದ ಮಹಿಳೆಯೊಬ್ಬಳು ನಮ್ಮನ್ನು ನಮ್ಮೂರಿಗೆ ಕಳಿಸಿಕೊಡಲು ಪೊಲೀಸಿನವರಿಗೆ ಹೇಳಿ ಎಂದು ದುಂಬಾಲು ಬಿದ್ದಳು. ಈಕೆಯ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿದ ಪೊಲೀಸ್ ಪೇದೆ, ಇನ್ನು ನಾಲ್ಕೈದು ದಿನಗಳ ಕಾಲ ಕಾಯಲೇಬೇಕು. ನಿನ್ನ ನಂಬರ್ ಹತ್ತಿರ ಬಂದಾಗ ನಾವು ಕರೆಯುತ್ತೇವೆ ಎಂದು ಮನವೊಲಿಸಲು ಯತ್ನಿಸಿದರು. ‘ಊಟ ಮಾಡಿ ನಾಲ್ಕೈದು ದಿನಗಳಾಗಿವೆ. ಇನ್ನೂ ನಾಲ್ಕೈದು ದಿನಗಳು ಎಂದರೆ ನಾನೆಲ್ಲಿಗೆ ಹೋಗಲಿ, ಈಗಲೇ ನನ್ನನ್ನು ಕಳಿಸಿಕೊಡಿ,’ ಎಂದು ಕಣ್ಣೀರುಗರೆಯುತ್ತಿದ್ದ ದೃಶ್ಯ ಎಂಥವರನ್ನೂ ಕರಗಿಸಲಿತ್ತು.
ಇದು ಹೊರರಾಜ್ಯದ ವಲಸಿಗರ ಪಾಡಾದರೆ, ರಾಜ್ಯದ ವಿವಿಧ ಜಿಲ್ಲೆಗಳಿಂದ ವಲಸೆ ಬಂದಿರುವವರದ್ದು ಮತ್ತೊಂದು ಕಥೆ. ರಾಯಚೂರು, ಕಲಬುರ್ಗಿ, ಹುಬ್ಬಳ್ಳಿ, ವಿಜಯಪುರ, ಬಳ್ಳಾರಿಯಿಂದ ಮಕ್ಕಳು ಮರಿಗಳೊಂದಿಗೆ ಬಂದಿರುವ ಅಂತರಜಿಲ್ಲಾ ವಲಸಿಗರ ಪೈಕಿ ಬಹುತೇಕರು ಬೆಂಗಳೂರು ಬಿಟ್ಟಿದ್ದಾರೆ. ಬೆಂಗಳೂರು ನಗರದ ವೈಟ್ ಫೀಲ್ಡ್ ಸುತ್ತಮುತ್ತಲಿನ ಖಾಲಿ ಜಾಗ ಮತ್ತು ಬಯಲು ಪ್ರದೇಶದಲ್ಲಿ ಕಟ್ಟಿಕೊಂಡಿದ್ದ ತಾಡಪಾಲಿನ ಜೋಪಡಿಗಳು ಬಣಗುಡುತ್ತಿದ್ದವು. ಹಲವು ಜೋಪಡಿಗಳಿಗೆ ಬೀಗ ಜಡಿಯಲಾಗಿತ್ತು.
ಊರಿಗೆ ಹೋಗಲು ಹಣವಿಲ್ಲದ, ರೈಲು ಪಾಸ್ ಸಿಗದ ಕಾರಣ ಮತ್ತು ಊರಿನಲ್ಲಿ ಕೆಲಸ ದೊರೆಯುವುದಿಲ್ಲ ಎಂಬ ಕಾರಣಗಳಿಗಾಗಿ ಒಂದಷ್ಟು ಮಂದಿ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದಾರೆ. ಆದರೆ ಅವರಿಗೆ ಇಲ್ಲಿ ಸದ್ಯಕ್ಕೆ ಕೆಲಸವಿಲ್ಲ. ಕೆಲಸ ಮಾಡಿದರೂ ವೇತನ ಸಿಗಲಿದೆ ಎಂಬ ಖಾತ್ರಿಯೂ ಅವರಲ್ಲಿಲ್ಲ. ಹೀಗಾಗಿ ಮುಂದೇನು ಎಂಬ ಆತಂಕದಲ್ಲೇ ದಿನ ದೂಡುತ್ತಿದ್ದಾರೆ.
‘ದಿ ಫೈಲ್’ಗೆ ಪ್ರತಿಕ್ರಿಯಿಸಿದ ಕಲಬುರ್ಗಿಯ ಹಿರಿಯ ಮಹಿಳಾ ಕಾರ್ಮಿಕರೊಬ್ಬರು ‘ಗುಲ್ಬರ್ಗಾದಾಗೂ ಕರೊನಾ ವೈರಸ್ ಬಂದೈತಂತ್ರಿ. ಹಂಗಾಗಿ ಇಲ್ಲೇ ಉಳ್ಕೊಂಡದಿವಿ. ಊರಾಗ್ ಹೋಗಿ ಏನ್ ಮಾಡೋದು, ಅಲ್ಲೀನೂ ಕೆಲ್ಸ ಇಲ್ರೀ. ಇಲ್ಲೇ ಏನಾದ್ರೂ ಕೆಲ್ಸ ಸಿಗತೈತಾ ಏನೂ ಅಂತ ಕಾಯ್ತಾ ಕುಂತಿವ್ರಿ,’ ಎಂದು ಹೇಳಿದರು.
ರೈಲು ಸಂಚಾರ ಆರಂಭಗೊಳಿಸಿದ ಮರುಗಳಿಗೆಯಲ್ಲೇ ರೈಲು ಸಂಚಾರವನ್ನು ರದ್ದುಗೊಳಿಸಿದ್ದರಿಂದಾಗಿ ಈ ಭಾಗದ ವಲಸಿಗರು ಇನ್ನೂ ಅತಂತ್ರಗಳಿಂದ ಮುಕ್ತವಾಗಿಲ್ಲ. ರೈಲು ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದ ಕಾರಣಕ್ಕೆ ಜೋಪಡಿಗಳನ್ನು ಕಿತ್ತೊಗೆದು ಬಂದವರೀಗ ಮಲಗಲು ಜಾಗವಿಲ್ಲದೇ ಪಡಿಪಾಟಲು ಪಡುತ್ತಿದ್ದಾರೆ. ಆದರೆ ಈ ಭಾಗದ ಶಾಸಕ ಶರತ್ ಬಚ್ಚೇಗೌಡ ಅವರಾಗಲೀ, ಮಾಜಿ ಶಾಸಕ ಎಂಟಿಬಿ ನಾಗರಾಜ್ ಅವರಾಗಲೀ ಇತ್ತ ಸುಳಿದಿಲ್ಲ ಎಂಬುದನ್ನು ವಲಸಿಗರು ಪಡುತ್ತಿರುವ ಬವಣೆಯೇ ವಿವರಿಸಿತ್ತು.