ಪಿ ಎಂ ಕೇರ್ಸ್‌ ದೇಣಿಗೆಯಿಂದ ವೆಂಟಿಲೇಟರ್‌ ಖರೀದಿ; ಖಾಸಗಿ ಕಂಪನಿಗಳಿಗೆ ಭರ್ತಿ ಲಾಭ?

ಬೆಂಗಳೂರು; ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಗಳು ಕೈಗೆಟುಕುವ ದರದಲ್ಲಿ ಅಭಿವೃದ್ಧಿಪಡಿಸಿದ್ದ ವೆಂಟಿಲೇಟರ್‌ಗಳನ್ನು ಬದಿಗೊತ್ತಿರುವ ಕೇಂದ್ರ ಸರ್ಕಾರ, ಮೇಡ್‌ ಇನ್‌ ಇಂಡಿಯಾ ಹೆಸರಿನಲ್ಲಿ ಖಾಸಗಿ ಕಂಪನಿಗಳಿಂದ ದುಪ್ಪಟ್ಟು ದರದಲ್ಲಿ ಖರೀದಿಸಲು ಮುಂದಾಗಿದೆ. ಪಿ ಎಂ ಕೇರ್ಸ್‌ ದೇಣಿಗೆ ನಿಧಿಯಿಂದ ಈ ಮೊತ್ತವನ್ನು ಭರಿಸಲಿರುವ ಸರ್ಕಾರ, ಖಾಸಗಿ ಕಂಪನಿಗಳ ಲಾಭಕೋರತನಕ್ಕೆ ಕುಮ್ಮಕ್ಕು ನೀಡಿದಂತಾಗಿದೆ.


ಸರ್ಕಾರಿ ಸ್ವಾಮ್ಯದ ಕಂಪನಿಗಳ ದರಕ್ಕಿಂತಲೂ ದುಬಾರಿ ದರದಲ್ಲಿ 50,000 ವೆಂಟಿಲೇಟರ್‌ಗಳನ್ನು ಖರೀದಿಸಲು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರದಿಂದ ಹೆಚ್ಚುವರಿಯಾಗಿ ಒಟ್ಟು 75 ರಿಂದ 150 ಕೋಟಿ ರು. ಖಾಸಗಿ ಕಂಪನಿಗಳ ಪಾಲಾಗಲಿದೆ. ಆದರೆ ಇದಕ್ಕಿಂತ ದುಪ್ಪಟ್ಟು ಮೊತ್ತ ಕಮಿಷನ್‌ ರೂಪದಲ್ಲಿ ಮಧ್ಯವರ್ತಿಗಳ ತಿಜೋರಿ ಸೇರಲಿದೆ. ಒಂದು ವೆಂಟಿಲೇಟರ್‌ಗೆ ಕನಿಷ್ಠ 50,000 ರು. ಕಮಿಷನ್‌ ಎಂದಿಟ್ಟುಕೊಂಡರೂ ಅಂದಾಜು 1,750 ಕೋಟಿ ರು. ಆಗಲಿದೆ.


ಎರಡು ದಿನದ ಹಿಂದೆ ವೆಂಟಿಲೇಟರ್‌ ಖರೀದಿಗೆ ಪಿಎಂ ಕೇರ್ಸ್‌ ನಿಧಿಯಿಂದ 2,000 ಕೋಟಿ ರು. ಬಿಡುಗಡೆ ಮಾಡಿದ ಬೆನ್ನಲ್ಲೇ ನ್ಯಾಷನಲ್‌ ಹೆರಾಲ್ಡ್‌ ಜಾಲ ತಾಣ ಈ ಮಾಹಿತಿಯನ್ನೂ ಹೊರಗೆಡವಿದೆ.


ವೆಂಟಿಲೇಟರ್‌ವೊಂದಕ್ಕೆ 4 ಲಕ್ಷ ರು. ದರದಂತೆ ಒಟ್ಟು 200 ಕೋಟಿ ಮೊತ್ತದಲ್ಲಿ ಖಾಸಗಿ ಕಂಪನಿಗಳಿಂದ 50,000 ವೆಂಟಿಲೇಟರ್‌ಗಳನ್ನು ಖರೀದಿಸಲಿದೆ. ಸರ್ಕಾರಿ ಸ್ವಾಮ್ಯದ ಕಂಪನಿಗಳು ನಮೂದಿಸಿದ್ದ ದರಕ್ಕಿಂತಲೂ ಹೆಚ್ಚಿನ ದರದಲ್ಲಿ ಖಾಸಗಿ ಕಂಪನಿಗಳಿಂದ ಖರೀದಿಸುತ್ತಿರುವುದಕ್ಕೆ ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗಿವೆ.


4 ಲಕ್ಷ ರು. ದರದಲ್ಲಿ ವೆಂಟಿಲೇಟರ್‌ಗಳನ್ನು ಖರೀದಿಸುತ್ತಿರುವುದು ಐಐಟಿ ರೂರ್ಕಿ ಉಲ್ಲೇಖಿಸಿದ್ದಕ್ಕಿಂತ ಶೇ. 1600 ರಷ್ಟು ಹೆಚ್ಚಿನ ವೆಚ್ಚ ಮತ್ತು ಭಾರತೀಯ ರೈಲ್ವೆ ನೀಡಿರುವ ದರಕ್ಕೆ ಹೋಲಿಸಿದರೆ ಶೇ. 4000% ಹೆಚ್ಚಿನ ವೆಚ್ಚವಾಗಲಿದೆ. ಪಿಎಂ ಕೇರ್ಸ್‌ಗೆ ಹರಿದು ಬಂದಿರುವ ಸಾವಿರಾರು ಕೋಟಿ ರು. ಮೊತ್ತದ ದೇಣಿಗೆ, ಖಾಸಗಿ ಕಂಪನಿಗಳ ಬೊಕ್ಕಸಕ್ಕೆ ನಿರಾಯಸವಾಗಿ ಸೇರಲಿದೆ.


10,000 ರು.ನಿಂದ 25,000 ರು. ದರದಲ್ಲಿ ವೆಂಟಿಲೇಟರ್‌ಗಳನ್ನು ಪೂರೈಸಲು ಮುಂದೆ ಬಂದಿದ್ದ ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಖರೀದಿ ಆದೇಶ ನೀಡಿದ್ದರೆ 50 ರಿಂದ 125 ಕೋಟಿ ರು. ವೆಚ್ಚವಾಗುತ್ತಿತ್ತು. 4 ಲಕ್ಷ ರು. ದರಕ್ಕೆ ಹೋಲಿಸಿದರೆ ವೆಂಟಿಲೇಟರ್‌ವೊಂದಕ್ಕೆ 3.75 ಮತ್ತು 3.90 ಲಕ್ಷ ರು. ಹೆಚ್ಚುವರಿಯಾಗಿದೆ. 4 ಲಕ್ಷ ರು.ದರದಲ್ಲಿ ಖರೀದಿಸುವುದರಿಂದ ಕ್ರಮವಾಗಿ 150 ಮತ್ತು 75 ಕೋಟಿ ರು. (10,000 ರು.-25,000 ರು.) ಖಾಸಗಿ ಕಂಪನಿಗಳ ಪಾಲಾಗಲಿದೆ.


10,000 ರು.ಗಳಿಂದ 25,000 ರು.ಗಳಿಗೆ ವೆಂಟಿಲೇಟರ್‌ಗಳನ್ನು ಉತ್ಪಾದಿಸಲು ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಗಳು ಮುಂದೆ ಬಂದಿದ್ದರೂ ಖಾಸಗಿ ಕಂಪನಿಗಳು ತಲಾ 4 ಲಕ್ಷ ರು. ವೆಚ್ಚದಲ್ಲಿ ಉತ್ಪಾದಿಸಿರುವ ವೆಂಟಿಲೇಟರ್‌ಗಳನ್ನು ಅನುಮೋದಿಸಿರುವುದು ಪಿಎಂ ಕೇರ್ಸ್‌ಗೆ ಹರಿದು ಬಂದಿರುವ ದೇಣಿಗೆಯ ಲಾಭವನ್ನು ಯಾರು ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಸುಲಭವಾಗಿ ಯಾರು ಬೇಕಾದರೂ ಊಹಿಸಬಹುದು.


ಖಾಸಗಿ ಕಂಪನಿಗಳ ಪೈಕಿ ಬೆಂಗಳೂರು ಮೂಲದ ಇಂಜಿನಿಯರಿಂಗ್‌ ಉತ್ಪನ್ನಗಳ ತಯಾರಿಕೆ ಕಂಪನಿಯಾಗಿರುವ ಡೈನಾಮ್ಯಾಟಿಕ್‌ ಟೆಕ್ನಾಲಜೀಸ್‌ ಕಂಪನಿ, ಅತ್ಯಂತ ಕನಿಷ್ಠ ದರದಲ್ಲಿ ಉತ್ಪಾದಿಸಿರುವ ವೆಂಟಿಲೇಟರ್‌ನ್ನೂ ಕೇಂದ್ರ ಸರ್ಕಾರ ಅನುಮೋದಿಸಿದೆ ಎಂದು ಜಾಲ ತಾಣ ವರದಿ ಮಾಡಿದೆ.


ಕೇಂದ್ರ ಸರ್ಕಾರಿ ಸಂಸ್ಥೆಗಳು 10,000 ರು.ಗಳಿಂದ 25,000 ರು.ವರೆಗೆ ಗುಣಮಟ್ಟದ ವೆಂಟಿಲೇಟರ್‌ಗಳನ್ನು ತಯಾರಿಸಿದ್ದರೂ ಭಾರತದಲ್ಲೇ ತಯಾರಿಸಿರುವ (MADE IN INDIA) ಖಾಸಗಿ ಕಂಪನಿಗಳಿಗೆ ಮಣೆ ಹಾಕಿರುವುದಕ್ಕೆ ಸಾಕಷ್ಟು ಆಕ್ಷೇಪಗಳು ಕೇಳಿ ಬಂದಿವೆ. ಕೇಂದ್ರ ಸರ್ಕಾರಿ ಸಂಸ್ಥೆಗಳು ತಯಾರಿಸಿರುವ ವೆಂಟಿಲೇಟರ್‌ಗಳನ್ನು ಖರೀದಿಸಿದ್ದರೆ ಸರ್ಕಾರಿ ಸಂಸ್ಥೆಗೆ ಆದಾಯ ಬರುತ್ತಿತ್ತು. ಆದರೆ ಮೇಡ್‌ ಇನ್‌ ಇಂಡಿಯಾ ಹೆಸರಿನಲ್ಲಿ ಖಾಸಗಿ ಕಂಪನಿಗಳ ಖಜಾನೆಗೆ ತುಂಬಲು ಕೇಂದ್ರ ಸರ್ಕಾರ ಹೊರಟಿದೆ ಎಂಬ ಆರೋಪಗಳು ವ್ಯಕ್ತವಾಗಿವೆ.


ಕಳೆದ ಏಪ್ರಿಲ್‌ನಲ್ಲೇ ಐಐಟಿ ರೂರ್ಕಿ 25 ಸಾವಿರ ರೂ.ಗಳ ವೆಚ್ಚದಲ್ಲಿ ಸಂಪೂರ್ಣ ಕ್ರಿಯಾತ್ಮಕತೆಯೊಂದಿಗೆ ಸಂಪೂರ್ಣ ಸ್ಥಳೀಯ ವೆಂಟಿಲೇಟರ್ ಅನ್ನು ಅಭಿವೃದ್ಧಿಪಡಿಸಿತ್ತು. ಅಲ್ಲದೆ, ಇಂಡಿಯನ್ ರೈಲ್ವೆ ತನ್ನ ಕಪುರ್ಥಾಲಾ ರೈಲು ಕೋಚ್ ಕಾರ್ಖಾನೆಯಲ್ಲಿ ಕಡಿಮೆ ಬೆಲೆಯ ವೆಂಟಿಲೇಟರ್‌ನ್ನು ಅಭಿವೃದ್ಧಿಪಡಿಸಿತ್ತು. ಇದಕ್ಕೆ ಕೇವಲ 10,000 ರೂ. ವೆಚ್ಚವಾಗಲಿದೆ ಎಂದು ಹೇಳಿತ್ತಲ್ಲದೆ, ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲು ಐಸಿಎಂಆರ್ ಅನುಮತಿಯನ್ನು ಕೋರಿತ್ತು. ಆದರೆ ಕೇಂದ್ರ ಸರ್ಕಾರ ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಈವರೆವಿಗೂ ಖರೀದಿ ಆದೇಶ ನೀಡಿಲ್ಲ ಎಂಬುದು ಜಾಲ ತಾಣದ ವರದಿಯಿಂದ ತಿಳಿದು ಬಂದಿದೆ.


ಕಳೆದ 3 ವಾರಗಳ ಹಿಂದೆಯಷ್ಟೇ ಬೆಂಗಳೂರು ಮೂಲದ ಇಂಜಿನಿಯರಿಂಗ್‌ ಉತ್ಪನ್ನಗಳ ಉತ್ಪಾದನಾ ಕಂಪನಿಯಾಗಿರುವ ಡೈನಾಮ್ಯಾಟಿಕ್‌ ಟೆಕ್ನಾಲಜೀಸ್‌ ಕಂಪನಿ ಬಳಸಿ ಬಿಸಾಡಬಹುದಾದ ವೆಂಟಿಲೇಟರ್‌ಗಳ ಮೂಲ ಮಾದರಿಯನ್ನು ಅಭಿವೃದ್ಧಿಪಡಿಸಿತ್ತು. ಕೇಂದ್ರ ಸರ್ಕಾರ ಈ ಉತ್ಪನ್ನವನ್ನು ಅನುಮೋದಿಸಿದೆ ಎಂದು ನ್ಯಾಷನಲ್‌ ಹೆರಾಲ್ಡ್‌ ವರದಿ ಮಾಡಿದೆ.
ಕೇಂದ್ರ ಸರ್ಕಾರ ಮೇಡ್‌ ಇನ್‌ ಇಂಡಿಯಾ ಹೆಸರಿನಲ್ಲಿ ಖಾಸಗಿ ಕಂಪನಿಗಳ ಬೊಕ್ಕಸವನ್ನು ತುಂಬಿಸಲು ಹೊರಟಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಖಾಸಗಿ ಕಂಪನಿಗಳ ಲಾಬಿಗೆ ಕೇಂದ್ರ ಸರ್ಕಾರ ಮಂಡಿಯೂರಿ ಕುಳಿತಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ.


ಮೊದಲ ಮೂರು ವಾರಗಳ ಲಾಕ್‌ಡೌನ್ ಘೋಷಿಸುವಾಗ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನಿ ಮೋದಿ ಭಾಷಣದಲ್ಲಿ ತಿಳಿಸಿದ್ದರು. ಅಲ್ಲದೆ ಯುರೋಪಿಯನ್ ಮತ್ತು ಅಮೇರಿಕದಲ್ಲಿ ಪ್ರಕರಣಗಳು ಮತ್ತು ಅಲ್ಲಿನ ಸರ್ಕಾರಗಳು ನಿಭಾಯಿಸಿರುವ ರೀತಿಗೆ ಹೋಲಿಸಿದರೆ ಭಾರತದಲ್ಲಿಯೂ ಕೋವಿಡ್‌ ಸೋಂಕಿತರಿಗೆ ವೆಂಟಿಲೇಟರ್ ಐಸಿಯುಗಳು ಮಹತ್ವದ್ದಾಗಿವೆ ಎಂದು ಹೇಳಿದ್ದರು.


ಈಗಾಗಲೇ ಸುಮಾರು 40,000 ವೆಂಟಿಲೇಟರ್‌ಗಳನ್ನು ಹೊಂದಿದ್ದೇವೆ. ಅವು ಈಗಾಗಲೇ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸೇರಿವೆ ಎಂದೂ ತಿಳಿಸಿದ್ದರು. ವಿಪರ್ಯಾಸವೆಂದರೆ ಸರ್ಕಾರಿ ಆಸ್ಪತ್ರೆಗಳಲ್ಲಿನ ಅನೇಕ ವೆಂಟಿಲೇಟರ್‌ಗಳು ನಿಷ್ಕ್ರಿಯವಾಗಿದ್ದವು.
ತಲಾ 4 ರಿಂದ 5 ಲಕ್ಷ ರೂ. ವೆಚ್ಚದಲ್ಲಿ ನಮ್ಮದೇ ಆದ ವೆಂಟಿಲೇಟರ್‌ಗಳನ್ನು ಉತ್ಪಾದಿಸುವ ವೈಜ್ಞಾನಿಕ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಹೊಂದಿದ್ದೇವೆ ಎಂದು ಹೇಳುವ ಮೂಲಕ ಹೆಮ್ಮೆಯಿಂದ ಬೀಗಿದ್ದರು. ಆದರೆ ಈ ಹೇಳಿಕೆ ನೀಡಿ 2 ತಿಂಗಳಾದರೂ ವೆಂಟಿಲೇಟರ್‌ಗಳು ನಿರೀಕ್ಷೆಯಂತೆ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆಯಾಗಲಿಲ್ಲ.


ಇಷ್ಟು ಮಾತ್ರವಲ್ಲ ವೆಂಟಿಲೇಟರ್‌ಗಳ ಭಾಗಗಳನ್ನು ಆಮದು ಮಾಡಿಕೊಂಡು ಡಿಜಿಟಲ್‌ ವೆಂಟಿಲೇಟರ್‌ಗಳನ್ನು ಅಭಿವೃದ್ಧಿಪಡಿಸಿದ್ದೇವೆ ಎಂದು ಹೇಳಿ ಪ್ರಚಾರ ಗಿಟ್ಟಿಸಿಕೊಂಡಿದ್ದರಲ್ಲದೆ ತಲಾ 1.50 ಲಕ್ಷ ರು.ವೆಚ್ಚದಲ್ಲಿ ಉತ್ಪಾದಿಸಬಹುದು ಎಂದು ಹೇಳಿದ್ದರು. ಆದರೆ ಆ ಹೇಳಿಕೆ ಗೋಡೆ ಮೇಲಿನ ಬರಹದಂತಿತ್ತು.


‘ದೇಶದ ಲಕ್ಷಾಂತರ ಜನ ಬಹಳ ವಿಶ್ವಾಸವಿಟ್ಟು ಪಿಎಂ ಕೇರ್ಸ್‌ ನಿಧಿಗೆ ದೇಣಿಗೆ ನೀಡಿದ್ದಾರೆ. ಅದರ ಪ್ರತಿಯೊಂದು ಪೈಸೆಯನ್ನೂ ಜವಾಬ್ದಾರಿಯಿಂದ ವೆಚ್ಚ ಮಾಡಬೇಕು. ಇಂತಹ ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಉತ್ತೇಜಿಸುವ ಮತ್ತು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಅತ್ಯಾಧುನಿಕ ಮತ್ತು ಸುಧಾರಿತ ವೈದ್ಯಕೀಯ ಉಪಕರಣಗಳನ್ನು ಉತ್ಪಾದಿಸುವವರಿಗೆ ಪ್ರೋತ್ಸಾಹ ನೀಡಬೇಕಿತ್ತು. ಆದರೆ ದುಬಾರಿ ಬೆಲೆಗೆ ಕೊಂಡುಕೊಳ್ಳುತ್ತಿರುವುದರ ಹಿಂದೆ ಭ್ರಷ್ಟಾಚಾರ ಮತ್ತು ಪಕ್ಷಪಾತ ಇರುವ ಸಾಧ್ಯತೆಗಳಿವೆ,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ

the fil favicon

SUPPORT THE FILE

Latest News

Related Posts