ಸ್ವಾವಲಂಬನೆ ಅಭಿಯಾನ; ರಾಷ್ಟ್ರೀಯವಾದ ಚಿಂತನೆಯ ವಿಸ್ತರಣೆಯೇ?

ಬೆಂಗಳೂರು; ಕೊರೊನಾ ಪ್ಯಾಕೇಜ್‌ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಭಾಷಣವು ಹೊಸ ಬಾಟಲಿಯಲ್ಲಿ ಹಳೆ ಮದ್ಯದಂತೆ ಗೋಚರಿಸುತ್ತಿದೆ. ಭಾಷಣದಲ್ಲಿ ‘ಸ್ವಾವಲಂಬನೆ’ ಅಭಿಯಾನಕ್ಕೆ ಅತಿ ಹೆಚ್ಚು ಒತ್ತು ನೀಡಿರುವುದು ರಾಷ್ಟ್ರೀಯವಾದ ಚಿಂತನೆಯನ್ನು ಇನ್ನಷ್ಟು ವಿಸ್ತರಿಸಿದಂತಾಗಿದೆ.


ಕೊರೊನಾ ವೈರಸ್ ಹರಡುವಿಕೆ ಸುತ್ತ ಚೀನಾ ವಿರುದ್ಧ ವಿಶ್ವದಾದ್ಯಂತ ಹೆಚ್ಚುತ್ತಿರುವ ಅನುಮಾನ ಮತ್ತು ಕೋಪಕ್ಕೆ ‘ಸ್ವಾವಲಂಬನೆ’ ಇನ್ನಷ್ಟು ತುಪ್ಪ ಸುರಿದಿದೆ. ನೆಹರೂ ಕುಟುಂಬವನ್ನು ಆಗಾಗ್ಗೆ ಕೆಣಕುತ್ತಿದ್ದ ಮೋದಿ, ಇದೀಗ ಸ್ವಾವಲಂಬನೆ ಮಂತ್ರವನ್ನು ಇನ್ನಷ್ಟು ಗಟ್ಟಿಯಾಗಿ ಜಪಿಸುವ ಮೂಲಕ ನೆಹರೂ ಅವರನ್ನೂ ತಮ್ಮದೊಂದಿಗೆ ಕರೆತಂದಿರುವುದು ವಿಶೇಷ.


ಚೀನಾದಿಂದ ಮುಖಗವಸು, ಪಿಪಿಇ ಕಿಟ್‌ ಮತ್ತು ಜೀವ ಉಳಿಸುವ ವೆಂಟಿಲೇಟರ್‌ಗಳನ್ನು ಆಮದು ಮಾಡಿಕೊಳ್ಳಲು ರಾಷ್ಟ್ರಗಳು ಪರಸ್ಪರ ಪೈಪೋಟಿ ನಡೆಸುತ್ತಿವೆ. ಚೀನಾ ಸಾಮರ್ಥ್ಯದ ಮೇಲೆ ತಮ್ಮ ಆರ್ಥಿಕತೆಯ ಹೆಚ್ಚಿನ ಅವಲಂಬನೆ ಹೊಂದಿವೆ. ಜಾಗತೀಕರಣವು ಕೆಲವು ದೇಶಗಳಲ್ಲಿ ಚಟುವಟಿಕೆಗಳನ್ನು ಕೇಂದ್ರೀಕರಿಸಲು ಕಾರಣವಾಗಿರುವ ಬೆನ್ನಲ್ಲೇ ಮೋದಿ ಜಪಿಸಿದ್ದ ಸ್ವಾವಲಂಬನೆ ಮಂತ್ರ ಇನ್ನಷ್ಟು ಉತ್ತೇಜಿಸಿದೆ.


ಜಾಗತೀಕರಣದ ವಾತಾವರಣದಲ್ಲಿ ವಿದೇಶಿ ಹೂಡಿಕೆಗಳ ಆಕರ್ಷಣೆ ಮತ್ತು ವ್ಯಾಪಾರ ವಿವಾದಗಳ ಬಗ್ಗೆ ಮಾತುಕತೆ ನಡೆಸುವಾಗ ಭಾರತವು ‘ಸ್ವಾವಲಂಬನೆ’ ಯನ್ನು ನೀತಿಯಾಗಿ ಒತ್ತಾಯಿಸುವುದು ಸವಾಲಿನ ಕೆಲಸ. ಮಲೇರಿಯಾ ನಿಯಂತ್ರಣ ಔಷಧ ಹೈಡ್ರಾಕ್ಸಿಕ್ಲೋರೊಕ್ವಿನ್‌ಗೆ ಪೂರೈಸಬೇಕು ಎಂದು ಅಮೆರಿಕದ ಅಧ್ಯಕ್ಷ ಟ್ರಂಪ್‌ ಒಡ್ಡಿದ್ದ ಬೆದರಿಕೆಗಳಿಗೆ ಅನಿವಾರ್ಯವಾಗಿ ಭಾರತ ಮಣಿಯಬೇಕಾಯಿತು. ಹೀಗಾಗಿ ಸ್ವಾವಲಂಬನೆ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಅಷ್ಟು ಸರಳವಲ್ಲ.


ಘೋಷಣೆಯಾಗಿರುವ 20 ಲಕ್ಷ ಕೋಟಿ ರು ಮೊತ್ತ ಪ್ಯಾಕೇಜ್‌ ಭಾರತದ ಜಿಡಿಪಿಯ ಶೇಕಡ 10 ಕ್ಕೆ ಸಮನಾಗಿದೆಯಲ್ಲದೆ, ಇದು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಲ ವಾರಗಳ ಹಿಂದೆ ಘೋಷಿಸಿದ್ದ ಪರಿಹಾರ ಮಾದರಿಯನ್ನೇ ಹೋಲುತ್ತಿದೆ.
ಮಾರ್ಚ್ 24 ರಂದು ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ ಆರಂಭಿಕ ಹಂತದಲ್ಲಿ ಮೋದಿ ಘೋಷಿಸಿದ್ದ ಪ್ಯಾಕೇಜ್ ₹ 1.7 ಲಕ್ಷ ಕೋಟಿ ಜಿಡಿಪಿಯ ಶೇಕಡವಾರು ಕಡಿಮೆ ಇತ್ತು.


ಭಾರತದ ಪ್ರಸ್ತುತ ರಾಷ್ಟ್ರೀಯ ಬಜೆಟ್ 30 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಇದರ ಗಣನೀಯ ಭಾಗವನ್ನು ಪರಿಹಾರ ಕಾರ್ಯಗಳಿಗಷ್ಟೇ ಬಳಸಿಕೊಳ್ಳಬಹುದು. ಭವಿಷ್ಯದ ದಿನಗಳಲ್ಲಿ ಉದ್ಭವಿಸಬಹುದಾದ ಕೊರತೆಯನ್ನು ನೀಗಿಸಲು ಸರ್ಕಾರವು ಹೆಚ್ಚಿನ ಪ್ರಮಾಣದ ಸಾಲಕ್ಕಾಗಿ ಕೈಯೊಡ್ಡಬಹುದು.


ಭಾರತದ ಒಟ್ಟು ರಾಷ್ಟ್ರೀಯ ಸಾಲವು ಪ್ರಸ್ತುತ 2,219 ಬಿಲಿಯನ್ ಇದೆ. ಅದರಲ್ಲಿ 500 ಶತಕೋಟಿ ಸಾಗರೋತ್ತರ ಸಾಲವಾಗಿದೆ. ಭಾರತವು ತನ್ನದೇ ಆದ ಸಂಪನ್ಮೂಲಗಳನ್ನು ಅವಲಂಬಿಸಿದರೆ, ಅದು ಆಂತರಿಕ ಸಾಲವನ್ನು ಹೆಚ್ಚಿಸುತ್ತದೆ ಎಂಬ ಅಭಿಪ್ರಾಯ ಆರ್ಥಿಕ ತಜ್ಞರ ವಲಯದಲ್ಲಿ ಕೇಳಿ ಬರುತ್ತಿದೆ.


ನೆಹರೂ ಕಾಲದಲ್ಲೇ ಮೊದಲು ಸ್ವಾವಲಂಬನೆ ನೀತಿ ಇತ್ತು. ಆನಂತರ ಇಂದಿರಾಗಾಂಧಿ ಇದನ್ನು ಇನ್ನಷ್ಟು ವಿಸ್ತರಿಸಿದರು. ಇಂದಿರಾಗಾಂಧಿ ಹತ್ಯೆ ನಂತರ ರಾಜೀವ್‌ಗಾಂಧಿ ಕಂಪ್ಯೂಟರ್ ಕ್ರಾಂತಿ ಮೂಲಕ 21ನೇ ಶತಮಾನದ ಭಾರತವನ್ನು ತನ್ನದಾಗಿಸಿಕೊಳ್ಳುವ ಬಗ್ಗೆ ಮಾತನಾಡಿದ್ದರು.


1991ರಲ್ಲಿ ಸೃಷ್ಟಿಯಾಗಿದ್ದ ಕೊಲ್ಲಿ ಬಿಕ್ಕಟ್ಟು ಭಾರೀ ಆರ್ಥಿಕ ಸುಧಾರಣೆಗಳನ್ನು ಕೈಗೊಳ್ಳಲು ಭಾರತವನ್ನು ಉತ್ತೇಜಿಸಿತು. ಇದರ ಪರಿಣಾಮವಾಗಿ ನಂತರದ ದಶಕಗಳಲ್ಲಿ ಎರಡು-ಅಂಕಿಯ ಬೆಳವಣಿಗೆ ಕಂಡು ಬಂದಿತ್ತು. ಅಂದಿನಿಂದ ಈ ಬೆಳವಣಿಗೆಯು ಕಳೆದ ಒಂದು ದಶಕದಲ್ಲಿ ವಿಭಜನೆಯಾಗಿದೆ. ಕೊರೊನಾ ಈಗ ಅದನ್ನೆಲ್ಲ ಬದಲಾಯಿಸಬಹುದೇ, ಮೋದಿ ಹೇಳಿದಂತೆ ಈ ಬಿಕ್ಕಟ್ಟನ್ನು ಅವಕಾಶವನ್ನಾಗಿ ಪರಿವರ್ತಿಸಬಹುದೇ?


ಲಾಕ್‌ಡೌನ್‌ನಿಂದಾಗಿ ಉದ್ಭವಿಸಿರುವ ಆರ್ಥಿಕ ಆಘಾತದ ತೀವ್ರತೆಯು ಮುಂಬರುವ ದಿನಗಳಲ್ಲಿ ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಸರ್ಕಾರ ಅತ್ಯಲ್ಪ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿರುವ ನಿರುದ್ಯೋಗ, ಕಾರ್ಮಿಕರ ಕೊರತೆ, ಪೂರೈಕೆ ಮತ್ತು ಹವಾಮಾನದ ಬದಲಾವಣೆಗಳ ಬಗ್ಗೆ ವ್ಯವಹರಿಸಬೇಕಿದೆ.

ಕಚೇರಿಗಳು ಮತ್ತು ಸಾರ್ವಜನಿಕ ಸಾರಿಗೆಯನ್ನು ಪುನರಾರಂಭಿಸುವುದು ಮತ್ತು ಶಾಲೆಗಳು ಮತ್ತು ಕಾಲೇಜುಗಳಿಗೆ ಮಕ್ಕಳು ಹಾಜರಾಗಲು ಖಾತರಿಪಡಿಸುವ ಮೂಲಕ ಸಾಮಾನ್ಯ ಸ್ಥಿತಿ ಸೃಷ್ಟಿಯಾಗಬೇಕು.

SUPPORT THE FILE

Latest News

Related Posts