ಸಿರಿಂಜ್‌ ಉಪಕರಣಗಳ ಖರೀದಿಯಲ್ಲೂ ಅಕ್ರಮ; ಕೋಟಿ ರು. ನಷ್ಟ?

ಬೆಂಗಳೂರು; ಕೋವಿಡ್‌-19ರ ಹೆಸರಿನಲ್ಲಿ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆ ಮಾರುಕಟ್ಟೆ ದರಕ್ಕಿಂತಲೂ ದುಪ್ಪಟ್ಟು ದರದಲ್ಲಿ ಸಿರಿಂಜ್‌ ಪಂಪ್‌ ಸೇರಿದಂತೆ ಇನ್ನಿತರೆ ವೈದ್ಯಕೀಯ ಉಪಕರಣ ಮತ್ತು ಔಷಧ ಸಾಮಗ್ರಿಗಳನ್ನು ಖರೀದಿಸಿರುವ ಪ್ರಕರಣ ಇದೀಗ ಹೊರಬಿದ್ದಿದೆ.


ಪಿಪಿಇ ಕಿಟ್‌, ಸ್ಯಾನಿಟೈಸರ್‌, ವೆಂಟಿಲೇಟರ್‌ ಖರೀದಿಯಲ್ಲಿನ ಅಕ್ರಮಗಳು ಈಗಲೂ ಮುಂದುವರೆಯುತ್ತಿವೆ. ಇದಕ್ಕೆ ಸಿರಿಂಜ್‌ ಪಂಪ್‌ ಸೇರಿದಂತೆ ಇನ್ನಿತರೆ ವೈದ್ಯಕೀಯ ಉಪಕರಣಗಳ ಖರೀದಿ ಪ್ರಕರಣಗಳು ಅಕ್ರಮವನ್ನು ಇನ್ನಷ್ಟು ವಿಸ್ತರಿಸಿವೆ.
ಉಪಕರಣಗಳ ದರವನ್ನು ಪರಿಶೀಲಿಸದೆಯೇ ಕಂಪನಿಗಳು ನಮೂದಿಸಿರುವ ದುಪ್ಟಟ್ಟು ದರವನ್ನೇ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆ ಅನುಮೋದಿಸಿ ಖರೀದಿಸಿದೆ. ದುಪ್ಪಟ್ಟು ದರದಲ್ಲಿ ಖರೀದಿಸಿರುವುದು ಸರ್ಕಾರದ ಬೊಕ್ಕಸದ ಮೇಲೆ ನೇರ ಪರಿಣಾಮ ಬೀರಲಿದೆಯಲ್ಲದೆ, ಕೇವಲ ನಾಲ್ಕೈದು ಕಂಪನಿಗಳಿಂದ ಅಂದಾಜು 1.93 ಕೋಟಿ ರು.ಗೂ ಅಧಿಕ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.


ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆಗೆ ಉಪಕರಣಗಳನ್ನು ಸರಬರಾಜು ಮಾಡಿರುವ ಕಂಪನಿಯೊಂದು ತನ್ನದೇ ಉತ್ಪನ್ನಕ್ಕೆ ಎರಡೆರಡು ದರ ನಮೂದಿಸಿ ಅಕ್ರಮ ನಡೆಸಿದ್ದರೆ, ಇನ್ನು ಕೆಲ ಕಂಪನಿಗಳು ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ದರಕ್ಕೆ ಉಪಕರಣಗಳನ್ನು ಸರಬರಾಜು ಮಾಡಿದೆ ಎಂದು ಗೊತ್ತಾಗಿದೆ.


ಸಿರಿಂಜ್‌ ಪಂಪ್‌, ಟೇಬಲ್‌ ಟಾಪ್‌ ಪಲ್ಸ್‌ ಆಕ್ಸಿಮೀಟರ್, ಇಸಿಜಿ ಯಂತ್ರ, ಮಲ್ಟಿ ಪ್ಯಾರಾ ಪೇಶೆಂಟ್‌ ಮಾನಿಟರ್‌ ಉಪಕರಣಗಳ ಖರೀದಿಗೆ ಸ್ಪರ್ಧಾತ್ಮಕ ದರದಲ್ಲಿ ಕೊಟೇಷನ್‌ ಕರೆಯದೇ ನಿರ್ದಿಷ್ಟ ಕಂಪನಿಗಳಿಗೆ ಏಪ್ರಿಲ್‌ನಲ್ಲಿ ಕಂಪನಿಗಳಿಗೆ ಕಾರ್ಯಾದೇಶ ನೀಡಿದೆ ಎಂದು ತಿಳಿದು ಬಂದಿದೆ.


ಮದ್ರಾಸ್‌ ಸರ್ಜಿಕಲ್ಸ್‌ನಿಂದ ಟೇಬಲ್‌ ಟಾಪ್‌ ಪಲ್ಸ್‌ ಆಕ್ಸಿಮೀಟರ್‌ (20 ಉಪಕರಣ), ಇಸಿಜಿ ಯಂತ್ರ(2), ಮಲ್ಟಿ ಪ್ಯಾರಾಪೇಶೆಂಟ್‌ ಮಾನಿಟರ್‌(15) ಉಪಕರಣಗಳನ್ನು ಒಟ್ಟು 29.94 ಲಕ್ಷ ರು. ಮೊತ್ತದಲ್ಲಿ ಖರೀದಿಸಿದೆ ಎಂದು ಲಭ್ಯ ಇರುವ ದಾಖಲೆಯಿಂದ ಗೊತ್ತಾಗಿದೆ.


ಪಲ್ಸ್‌ ಆಕ್ಸಿಮೀಟರ್‌ ಉಪಕರಣವೊಂದಕ್ಕೆ ತಲಾ 56,000 ರು. ನಮೂದಿಸಿ ಸರಬರಾಜು ಮಾಡಿದೆ. ಆದರೆ ಇಂಡಿಯಾ ಮಾರ್ಟ್‌ನಲ್ಲಿ ಈ ಉಪಕರಣಕ್ಕೆ ಕನಿಷ್ಠ 20,000 ರು.ನಿಂದ ಗರಿಷ್ಠ 35,000 ರು. ದರ ಇದೆ. ಆದರೂ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆ ಉಪಕರಣವೊಂದಕ್ಕೆ 21,000 ರು. ಹೆಚ್ಚಿನ ದರ ನೀಡಿ ಖರೀದಿಸಿದೆ ಎಂದು ಮೂಲಗಳು ತಿಳಿಸಿವೆ.


ಟ್ರಾನ್ಸ್‌ ಹೆಲ್ತ್‌ನಿಂದ ವೆಂಟಿಲೇಟರ್‌ಗಳನ್ನು ಖರೀದಿಸಿರುವ ದರದಲ್ಲಿಯೂ ಸಾಕಷ್ಟು ವ್ಯತ್ಯಾಸಗಳು ಕಂಡು ಬಂದಿವೆ. ಒಟ್ಟು 8 ವೆಂಟಿಲೇಟರ್‌ಗಳನ್ನು 74.68 ಲಕ್ಷ ರು.ದರದಲ್ಲಿ ಕಾರ್ಯಾದೇಶ ನೀಡಿರುವ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆ, ಒಂದು ವೆಂಟಿಲೇಟರ್‌ಗೆ 2.42 ಲಕ್ಷ ರು. ಹೆಚ್ಚಿನ ದರ ತೆತ್ತು ಖರೀದಿಸಿದೆ ಎಂಬ ಆರೋಪ ಕೇಳಿ ಬಂದಿದೆ.


ಈ ಕಂಪನಿ ರಾಜ್ಯಕ್ಕೆ ಸರಬರಾಜು ಮಾಡಿರುವ ವೆಂಟಿಲೇಟರ್‌ಗೆ (ಮಾಡಲ್‌ ನಂಬರ್‌ ಎಲ್‌ಟಿವಿ 1200) ಇಂಡಿಯಾ ಮಾರ್ಟ್‌ನಲ್ಲಿ 7 ಲಕ್ಷ ರು. ನಮೂದಿಸಿರುವುದು ಗೊತ್ತಾಗಿದೆ. ಆದರೆ ಕರ್ನಾಟಕಕ್ಕೆ ತಲಾ ಉಪಕರಣವೊಂದಕ್ಕೆ 9.42 ಲಕ್ಷ ರು. ದರದಲ್ಲಿ ಸರಬರಾಜು ಮಾಡಿದೆ. ಒಂದೇ ಕಂಪನಿ ಒಂದೇ ಮಾದರಿಯ ಉಪಕರಣಕ್ಕೆ ಎರಡೆರಡು ದರ ನಮೂದಿಸಿದ್ದರೂ ಅಧಿಕಾರಿಗಳು ಪರಿಶೀಲಿಸುವ ಗೋಜಿಗೆ ಹೋಗಿಲ್ಲ.


ಅದೇ ರೀತಿ ಸಿರಿಂಜ್‌ ಪಂಪ್‌ ಮತ್ತು ಇನ್‌ಫ್ಯೂಷನ್‌ ಪಂಪ್‌ ದರದಲ್ಲಿಯೂ ವ್ಯತ್ಯಾಸಗಳು ಇರುವುದು ಕಂಡು ಬಂದಿದೆ. ಚೆನ್ನೈ ಮೂಲದ ಆಕಾಶ್‌ ಟೆಕ್ನಾಲಜಿ ಒಟ್ಟು 180 ಸಿರಿಂಜ್‌ ಪಂಪ್‌ ಮತ್ತು 100 ಇನ್‌ಫ್ಯೂಷನ್‌ ಪಂಪ್‌ಗಳನ್ನು ಒಟ್ಟು 65.40 ಲಕ್ಷ ರು. ದರದಲ್ಲಿ ಖರೀದಿಸಿದೆ ಎಂದು ತಿಳಿದು ಬಂದಿದೆ.


ಸಿರಿಂಜ್‌ ಪಂಪ್‌ವೊಂದಕ್ಕೆ 23,000 ರು. ಮತ್ತು ಇನ್‌ಫ್ಯೂಷನ್‌ ಪಂಪ್‌ಗೆ 24,000 ರು. ದರ ನಮೂದಿಸಿತ್ತು. ಫ್ರೆಸಿನೀಸ್‌ ಹೆಸರಿನ ಕಂಪನಿಯೊಂದು ಇದೇ ಉಪಕರಣಕ್ಕೆ 18,000 ರು. ದರ ನಿಗದಿಪಡಿಸಿದೆ ಎಂದು ಗೊತ್ತಾಗಿದೆ. ಉಪಕರಣವೊಂದಕ್ಕೆ 6,000 ರು. ಹೆಚ್ಚಿನ ದರದಲ್ಲಿ ಖರೀದಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.


ಚೆನ್ನೈ ಮೂಲದ ಮತ್ತೊಂದು ಕಂಪನಿ ಏಮ್ಸ್‌, ಎಲಕ್ಟ್ರಿಕ್‌ ಸೆಕ್ಷನ್‌ ಆಪರೇಟರ್‌ (ಶ್ವಾಸಕೋಶದಲ್ಲಿರುವ ಕಫವನ್ನು ಹೊರತೆಗೆಯುವ ಸಾಧನ) ಮತ್ತು ಬೈಪ್ಯಾಪ್‌ (BIPAP) ಯಂತ್ರವನ್ನು ಸರಬರಾಜು ಮಾಡಿದೆ. ಎಲಕ್ಟ್ರಿಕ್‌ ಸೆಕ್ಷನ್‌ ಆಪರೇಟರ್‌ವೊಂದಕ್ಕೆ 21,000 ರು. ದರದಲ್ಲಿ ಒಟ್ಟು 2.10 ಲಕ್ಷ ರು.ನಲ್ಲಿ 10 ಉಪಕರಣ, 1.26 ಲಕ್ಷ ರು. ದರದಲ್ಲಿ 150 ಬೈಪ್ಯಾಪ್‌ ಯಂತ್ರಗಳನ್ನು ಒಟ್ಟು 1.89 ಕೋಟಿ ರು.ಮೊತ್ತದಲ್ಲಿ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆ ಖರೀದಿಸಿದೆ ಎಂದು ಗೊತ್ತಾಗಿದೆ.


ಬೈಪ್ಯಾಪ್‌ ಉಪಕರಣಕ್ಕೆ ಮಾರುಕಟ್ಟೆಯಲ್ಲಿ 32,000 ರು. ದರವಿದೆ. ಆದರೆ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ಗೆ ಒಂದು ಉಪಕರಣಕ್ಕೆ 1.26 ಲಕ್ಷ ರು. ದರದಲ್ಲಿ ಮಾರಾಟ ಮಾಡಿದೆ. ಈ ಉಪಕರಣವೊಂದರಲ್ಲೇ 94,000 ರು. ವ್ಯತ್ಯಾಸವಿದೆ. 48 ಲಕ್ಷ ರು.ನಲ್ಲಿ ಖರೀದಿಸಬಹುದಾಗಿದ್ದ ಬೈಪ್ಯಾಪ್‌ ಉಪಕರಣವನ್ನು 1.41 ಕೋಟಿ ರು. ಹೆಚ್ಚುವರಿ ದರದಲ್ಲಿ ಖರೀದಿಸಿದೆ. ಇದು ಸರ್ಕಾರಕ್ಕೆ ಆಗಿರುವ ನಷ್ಟ ಎಂದು ಹೇಳಲಾಗಿದೆ.


ಕೋವಿಡ್‌-19ರ ಹಿನ್ನೆಲೆಯಲ್ಲಿ ಈ ಎಲ್ಲಾ ಉಪಕರಣಗಳನ್ನು ಖರೀದಿಸಲು ಟೆಂಡರ್‌ ಪ್ರಕ್ರಿಯೆಯಿಂದ ವಿನಾಯ್ತಿ ಪಡೆದಿರುವ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆ, ಔಷಧ ಸಾಮಗ್ರಿ ಮತ್ತು ಉಪಕರಣಗಳನ್ನು ಖರೀದಿಗೆ ಕಾರ್ಯಾದೇಶ ಹೊರಡಿಸುವ ಮುನ್ನ ಮಾರುಕಟ್ಟೆಯಲ್ಲಿರುವ ದರ ಮತ್ತು ಕಂಪನಿಗಳು ನಮೂದಿಸಿರುವ ದರವನ್ನು ಒರೆಗೆ ಹಚ್ಚಿಲ್ಲ.
ಸಂಸ್ಥೆಯ ಕೆಲ ಅಧಿಕಾರಿಗಳು ನೇರವಾಗಿ ನಿರ್ದಿಷ್ಟ ಕಂಪನಿಗಳಿಂದ ಕೊಟೇಷನ್‌ ಪಡೆದು ಅದರ ಆಧಾರದ ಮೇಲೆ ಕಾರ್ಯಾದೇಶ ನೀಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.


‘ಕಾರ್ಯಾದೇಶ ಹೊರಡಿಸುವ ಮುನ್ನ ಕೊಟೇಷನ್‌ಗಳನ್ನು ಎಲ್ಲಾ ಸರಬರಾಜುದಾರರಿಗೆ ತಲುಪಿಸಬೇಕಿತ್ತಲ್ಲದೆ ಇ-ಪೋರ್ಟಲ್‌ ಅಥವಾ ಸಂಸ್ಥೆಯ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಬೇಕಿತ್ತು. ಆದರೆ ಈ ಯಾವ ಪ್ರಕ್ರಿಯೆಯನ್ನೂ ನಡೆಸದ ಸಂಸ್ಥೆ ನೇರವಾಗಿ ನಿರ್ದಿಷ್ಟ ಕಂಪನಿಯಿಂದ ಕೊಟೇಷನ್‌ ಆಹ್ವಾನಿಸಿ ಖರೀದಿ ಆದೇಶ ಕೊಟ್ಟಿರುವುವುದರ ಹಿಂದೆ ಅಕ್ರಮ ನಡೆದಿದೆ,’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಸಂಸ್ಥೆಯ ಅಧಿಕಾರಿಯೊಬ್ಬರು.


ಕೊಟೇಷನ್‌ ಪ್ರಕಟಿಸಿದ್ದರೆ ಸ್ಪರ್ಧಾತ್ಮಕ ದರದಲ್ಲಿ ಉಪಕರಣಗಳನ್ನು ಖರೀದಿಸಲು ಅವಕಾಶವಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವೇನೂ ಆಗುತ್ತಿರಲಿಲ್ಲ. ಆದರೆ ಕಮಿಷನ್‌ ಪಡೆಯುವ ಒಂದೇ ಉದ್ದೇಶದಿಂದ ನಿರ್ದಿಷ್ಟ ಕಂಪನಿಗಳಿಂದಲೇ ದುಪ್ಪಟ್ಟು ದರದಲ್ಲಿ ಉಪಕರಣಗಳನ್ನು ಖರೀದಿಸಲಾಗಿದೆ ಎಂಬ ಬಲವಾದ ಆರೋಪವೂ ಕೇಳಿ ಬಂದಿದೆ.


ಕೋವಿಡ್‌-19ರ ಹಿನ್ನೆಲೆಯಲ್ಲಿ ಜಾರಿಗೊಳಿಸಿರುವ ಲಾಕ್‌ಡೌನ್‌ನಿಂದಾಗಿ ಎದುರಾಗಿರುವ ಆರ್ಥಿಕ ಸಂಕಷ್ಟಗಳನ್ನು ನಿಭಾಯಿಸಲು ವೆಚ್ಚಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಡಿವಾಣ ಹಾಕುತ್ತಿದ್ದರೆ, ಇತ್ತ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆ ದುಪ್ಪಟ್ಟು ದರದಲ್ಲಿ ಖರೀದಿಸುವ ಮೂಲಕ ವೆಚ್ಚವನ್ನು ದ್ವಿಗುಣಗೊಳಿಸುತ್ತಿದೆ.


ಉಪಕರಣಗಳ ಖರೀದಿಯಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕಬೇಕಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್‌, ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಕಾರ್ಯದರ್ಶಿ ಪಂಕಜಕುಮಾರ್‌ ಪಾಂಡೆ ಅವರು ಮೌನ ವಹಿಸಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.


‘ಕೋವಿಡ್ ವಿರುದ್ಧ ಹೋರಾಡಲೆಂದು ಅಗತ್ಯ ವೈದ್ಯಕೀಯ ಸಲಕರಣೆ ಮತ್ತು ಔಷಧಗಳ ಖರೀದಿಯಲ್ಲಿ ನಡೆಯುತ್ತಿರುವ ಅಕ್ರಮಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಕೂಡಲೇ ಸರ್ಕಾರ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆಗೆ ನೀಡಿರುವ ಅಧಿಕಾರವನ್ನು ರದ್ದುಗೊಳಿಸಿ ಮಂತ್ರಿಗಳನ್ನೊಳಗೊಂಡ ಸಮಿತಿ ಅಥವಾ ಟಾಸ್ಕ್‌ಪೋರ್ಸ್‌ ಮೂಲಕ ಖರೀದಿಸಬೇಕು. ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ಹೊರಡಿಸಿರುವ ಖರೀದಿ ಕಾರ್ಯಾದೇಶ ಮತ್ತು ಖರೀದಿ ಒಪ್ಪಂದಗಳ ಕುರಿತು ಹೈಕೋರ್ಟ್‌ ನ್ಯಾಯಾಧೀಶರೊಬ್ಬರಿಂದ ನ್ಯಾಯಾಂಗ ತನಿಖೆಗೆ ಸೂಚಿಸಬೇಕು,’ ಎಂದು ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಆಗ್ರಹಿಸಿದ್ದಾರೆ.

SUPPORT THE FILE

Latest News

Related Posts