ಮುಂಬರುವ ದಿನಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ!

ಬೆಂಗಳೂರು; ಲಾಕ್‌ಡೌನ್‌ ಸಡಿಲಗೊಳಿಸಿದ ನಂತರ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆಯಲ್ಲಿ ಹಠಾತ್‌ ಏರಿಕೆಯಾಗುವ ನಿರೀಕ್ಷೆಯಿದೆ. ಜುಲೈ ಅಂತ್ಯದ ಹೊತ್ತಿಗೆ ದೇಶದಲ್ಲಿ ಕೋವಿಡ್‌-19 ಉತ್ತುಂಗಕ್ಕೇರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಶೇಷ ರಾಯಭಾರಿ ಡಾ ಡೇವಿಡ್‌ ಎಚ್ಚರಿಸಿದ್ದಾರೆ.


ಜೂನ್ ಅಥವಾ ಜುಲೈನಲ್ಲಿ ಗರಿಷ್ಠಗೊಳ್ಳುವ ಸಾಧ್ಯತೆಯಿರುವ ಕಾರಣ ದೇಶದ ಜನತೆ ಸಿದ್ಧರಾಗಿರಬೇಕಲ್ಲದೆ, ಪ್ರಕರಣಗಳ ಸಂಖ್ಯೆ ಕಡಿಮೆಗೊಳ್ಳಲು ಹೆಚ್ಚು ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ. ಈವರೆವಿಗೆ ಭಾರತದಲ್ಲಿ ಪ್ರಕರಣಗಳ ಸಂಖ್ಯೆ 59,662 ಕ್ಕೇರಿದೆಯಲ್ಲದೆ ಕಳೆದ 24 ಗಂಟೆಗಳಲ್ಲಿ 3,320 ಪ್ರಕರಣಗಳ ಹೆಚ್ಚಳವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೆ ಸೋಂಕಿನ ವಾಸ್ತವ ಸಂಖ್ಯೆ ಪೈಕಿ ಶೇ.2.9ರಷ್ಟು ಮಾತ್ರ ವರದಿಯಾಗುತ್ತಿದೆ. ಸೋಂಕು ಪತ್ತೆಹಚ್ಚುವ ದರವೂ ಶೇ. 2.9ರಷ್ಟಿದೆ ಎಂದು ಹೇಳುತ್ತಿರುವ ತಜ್ಞರು ಈ ನಿಟ್ಟಿನಲ್ಲಿ ಪರೀಕ್ಷೆಗೊಳಪಡಿಸುವ ಕಾರ್ಯ ಇನ್ನಷ್ಟು ಬಿರುಸುಗೊಳ್ಳಬೇಕಲ್ಲದೆ ವ್ಯಾಪಕವಾಗಿ ನಡೆಯಬೇಕು ಎಂದು ವಾದಿಸುತ್ತಾರೆ.


ಸೋಂಕು ಹೆಚ್ಚುತ್ತಿರುವ ದರಕ್ಕೆ ಸಮಾನಾಂತರವಾಗಿ ತಪಾಸಣೆ ಮತ್ತು ಪರೀಕ್ಷೆಗೊಳಪಡಿಸದಿದ್ದರೆ ಪತ್ತೆ ಹಚ್ಚುವ ದರ ಏಕಾಏಕಿ ಕಡಿಮೆಯಾಗಲಿದೆ. ಪರೀಕ್ಷೆ ಮತ್ತು ತಪಾಸಣೆಯಲ್ಲಿನ ವ್ಯವಸ್ಥೆ ಒಂದು ಹಂತಕ್ಕೆ ಬಂದರೆ ಕಡಿಮೆ ಆಗುವ ಸಾಧ್ಯತೆಗಳೂ ಇರುತ್ತವೆ. ಇಷ್ಟು ಮಾತ್ರವಲ್ಲ, ಉತ್ತುಂಗಕ್ಕೇರಿದ ನಂತರವೂ ಅದು ಕೆಳಗಿಳಿಗಿಯುವುದಕ್ಕೆ ಶುರು ಮಾಡಿದರೂ ಪತ್ತೆ ದರ ಕಡಿಮೆ ಆಗಲಿದೆ. ಕಳೆದ ಏಪ್ರಿಲ್‌ನಲ್ಲಿ ಶೇ.1.68 ಇದ್ದದ್ದು ಈಗ ಶೇ.2.9 ಆಗಿದೆ. ತಪಾಸಣೆ ಶೇಕಡವಾರು ಹೆಚ್ಚಿದೆಯಾದರೂ ಅದು ಕೂಡ ತುಂಬ ಕಡಿಮೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಬೇಕು ಎನ್ನುತ್ತಾರೆ ತಜ್ಞರು.


ವಿಶ್ವ ಆರೋಗ್ಯ ಸಂಸ್ಥೆಯ ಡಾ ಡೇವಿಡ್‌ ರಾಷ್ಟ್ರೀಯ ಸುದ್ದಿ ಜಾಲತಾಣಕ್ಕೆ ನೀಡಿರುವ ಸಂದರ್ಶನದಲ್ಲಿ ಲಾಕ್‌ಡೌನ್‌ ತೆರವುಗೊಳಿಸುವ ಸಂದರ್ಭದಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬರಬಹುದು. ಆದರೆ ಇದಕ್ಕೆ ಜನರು ಭಯಪಡಬಾರದು. ಏಕೆಂದರೆ ಮುಂಬರುವ ದಿನಗಳಲ್ಲಿಯೂ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಇರುತ್ತದೆ ಎಂದು ಸುಳಿವು ನೀಡಿದ್ದಾರೆ. ಆದರೂ ಈ ವಿಚಾರದಲ್ಲಿ ಭಾರತ ಸ್ಥಿರತೆ ಕಾಯ್ದುಕೊಂಡಿದೆ. ಏಕೆಂದರೆ ತುಲನಾತ್ಮಕವಾಗಿ ಕಡಿಮೆ ಸಂಖ್ಯೆಯ ಕೊರೊನಾ ವೈರಸ್‌ ಪ್ರಕರಣಗಳನ್ನು ವರದಿ ಮಾಡಿದೆ ಎಂದೂ ಹೇಳಿದ್ದಾರೆ.


ರಾಷ್ಟ್ರವ್ಯಾಪಿ ಲಾಕ್‌ಡೌನ್‌ನ ಮಹತ್ವವನ್ನು ಪುನರುಚ್ಚರಿಸಿರುವ ವೈದ್ಯರು, ತ್ವರಿತಗತಿಯಲ್ಲಿ ಲಾಕ್‌ಡೌನ್‌ ವಿಧಿಸಿ ಕ್ರಮಕೈಗೊಂಡಿರುವ ಕಾರಣ ಈ ಸಾಂಕ್ರಾಮಿಕವನ್ನು ನಗರ ಪ್ರದೇಶಗಳಲ್ಲಿರುವ ನಿರ್ದಿಷ್ಟ ಪ್ರದೇಶಗಳಿಗಷ್ಟೇ ಸೀಮಿತಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.


ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 95 ಸಾವುಗಳು ವರದಿಯಾದ ನಂತರ, ಕೋವಿಡ್‌ 19ರ ಸಾವಿನ ಸಂಖ್ಯೆ 2,000 ರ ಗಡಿ ದಾಟಿದೆ. ಶನಿವಾರ ಒಂದೇ ದಿನ ಸೋಂಕು ಪ್ರಕರಣಗಳಲ್ಲಿ 3,320 ಏರಿಕೆಯಾಗಿದೆ. ಪ್ರಕರಣಗಳ ಒಟ್ಟು ಸಂಖ್ಯೆ 59,662 ಎಂದು ಆರೋಗ್ಯ ಇಲಾಖೆ ಹೇಳಿದೆ.


ಡಾ. ಗುಲೇರಿಯಾ ಅವರ ಪ್ರಕಾರ, ಸಾವಿನ ಸಂಖ್ಯೆ ದರವನ್ನು ಹೆಚ್ಚಳಕ್ಕೆ ಅವಕಾಶ ಸಿಗದಿರುವುದು ದೇಶಕ್ಕೆ ಒಂದು ದೊಡ್ಡ ಸಕಾರಾತ್ಮಕವಾದ ವಿಚಾರವಾಗಿದೆಯಲ್ಲದೆ, ಮರಣ ಪ್ರಮಾಣವನ್ನು ಕಡಿಮೆ ಇರಿಸುವಲ್ಲಿ ಭಾರತವು ಉತ್ತಮ ಸಾಧನೆ ಮಾಡಿದೆ ಎಂದು ಹೇಳುತ್ತಾರೆ.


ದೇಶದಲ್ಲಿ ಒಟ್ಟಾರೆ ಪ್ರಕರಣಗಳ ಸಂಖ್ಯೆ ದೊಡ್ಡದಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ ದೇಶದ ಜನಸಂಖ್ಯೆಗೆ ಹೋಲಿಸಿದರೆ ಅದು ತುಂಬಾ ದೊಡ್ಡ ಸಂಖ್ಯೆಯೇನಲ್ಲ. ಇಲ್ಲಿ ವಿವಿಧ ವಯಸ್ಸಿನ ವ್ಯಕ್ತಿಗಳು ಅದರಲ್ಲೂ ತುಂಬಾ ಮುಖ್ಯವಾಗಿ 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಹೆಚ್ಚಿನ ಮರಣ ಪ್ರಮಾಣವನ್ನು ಗಮನಿಸಿದರೆ ಒಟ್ಟು ಸಾವಿನ ಸಂಖ್ಯೆ ತುಲನಾತ್ಮಕವಾಗಿ ಕಡಿಮೆ ಇದೆ ಎನ್ನುತ್ತಾರೆ ತಜ್ಞರು.


ವೃದ್ಧರ ಹೆಚ್ಚಿನ ಸಂಖ್ಯೆ ಹೊಂದಿರುವ ದೇಶಗಳಲ್ಲಿ ಮರಣ ಪ್ರಮಾಣ ಹೆಚ್ಚಾಗಿದೆ ಎಂದು ಅನ್ನಿಸಿದರೂ ಬಿಸಿ ವಾತಾವರಣದಲ್ಲಿ ವೈರಸ್‌ ಬೇಗನೆ ಹರಡುವುದಿಲ್ಲ. ಇತರೆ ದೇಶಗಳಿಗಿಂತ ಭಾರತದಲ್ಲಿ ಇದು ತೀರಾ ಕಡಿಮೆ ಎಂಬ ವಾದಗಳೂ ಇವೆ.
ಕೇಂದ್ರ ಆರೋಗ್ಯ ಸಚಿವಾಲಯ ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, ಕಳೆದ 15 ದಿನಗಳಿಂದ ದಿನನಿತ್ಯದ ಬೆಳವಣಿಗೆಯ ದರವು ಶೇಕಡಾ 4 ರಿಂದ 8 ರಷ್ಟಿದೆ. ಕಳೆದ ವಾರ ಇದು ಶೇಕಡಾ 9 ರಷ್ಟಿತ್ತು. ಏಪ್ರಿಲ್ 7 ರಿಂದ 22 ರವರೆಗೆ ಶೇಕಡಾ 5 ರಿಂದ 16 ರವರೆಗೆ ಏರಿಕೆಯಾಗಿದೆ ಎಂದು ಸಚಿವಾಲಯದ ಮಾಹಿತಿಯಿಂದ ಗೊತ್ತಾಗಿದೆ.


ಸೋಂಕು ಹರಡುವುದಕ್ಕೆ ಮುನ್ನ ಸೋಂಕಿತರ ಸಂಖ್ಯೆ ಯಾರ ನಿಯಂತ್ರಣದಲ್ಲೂ ಇರುವುದಿಲ್ಲ. ಆರಂಭದಲ್ಲಿ ತೀರಾ ಗಂಭೀರವಾದ ಪ್ರಕರಣಗಳಷ್ಟೇ ಪತ್ತೆಯಾದಾಗ ಆಗ ಮರಣ ಸಂಖ್ಯೆಯ ಅನುಪಾತ ಹೆಚ್ಚಿರುತ್ತದೆ. ಆ ನಂತರ ತೀರಾ ಅಷ್ಟೇನೂ ಗಂಭೀರವಲ್ಲದ ಪ್ರಕರಣಗಳೂ ಪತ್ತೆಯಾಗುತ್ತ ಬರುತ್ತವೆ. ಆ ಸಂದರ್ಭದಲ್ಲಿ ಮರಣದ ದರ ಕಡಿಮೆಯಾಗುತ್ತದೆ.
ಇನ್ನು ಮತ್ತೊಂದು ಮುಖ್ಯವಾದ ಸಂಗತಿ ಎಂದರೆ ತೀವ್ರವಲ್ಲದ ಹಾಗೂ ರೋಗ ಲಕ್ಷಣಗಳು ಕಾಣಿಸಿಕೊಂಡಿರದ ಪ್ರಕರಣಗಳು ತಪಾಸಣೆ ಮತ್ತು ಪರೀಕ್ಷೆ ಸಮಯದಲ್ಲಿ ಬೆಳಕಿಗೆ ಬರುತ್ತವೆ. ರೋಗ ಲಕ್ಷಣಗಳು ಕಾಣಿಸಿಕೊಂಡಿರದ ಸೋಂಕಿತರುಕೂಡ ಸೋಂಕನ್ನು ತಮಗೆ ಗೊತ್ತಿಲ್ಲದಂತೆ ಹರಡುತ್ತಿರುತ್ತಾರೆ ಎಂಬ ವಾದವೂ ಇದೆ.


ಸೋಂಕಿತರ ಪರೀಕ್ಷೆ ಹೆಚ್ಚು ಪರಿಣಾಮಕಾರಿಯಾಗಿ ನಡೆದರೆ ಮಾತ್ರ ವಾಸ್ತವ ಪರಿಸ್ಥಿತಿ ಮತ್ತು ಅದರ ಗತಿ ಏನೆಂದು ತಿಳಿಯಲು ಸಾಧ್ಯ. ಇದು ಸಾಧ್ಯವಾದಲ್ಲಿ ಮಾತ್ರ ನೈಜ ಸೋಂಕಿತರ ಸಂಖ್ಯೆ ಮತ್ತು ಸೋಂಕು ಪತ್ತೆಯಾದವರ ಸಂಖ್ಯೆ ಹೆಚ್ಚೂ ಕಡಿಮೆ ಒಂದೇ ತೆರನಾಗಿರುತ್ತದೆ. ಪತ್ತೆಯಾಗಿರದ ಹಾಗೂ ಸೋಂಕಿನ ಯಾವ ಲಕ್ಷಣಗಳು ಕಾಣಿಸಿಕೊಳ್ಳದ ಸೋಂಕಿತರನ್ನೂ ಸ್ಪಷ್ಟವಾಗಿ ಗುರುತಿಸುವುದಕ್ಕೆ ಸಾಧ್ಯವಾಗಬೇಕು.


ಆದರೆ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಭಾರತ ಸೇರಿದಂತೆ ಹೆಚ್ಚಿನ ದೇಶಗಳಲ್ಲಿ ಇನ್ನೂ ವ್ಯಾಪಕವಾಗಿ ಪರೀಕ್ಷೆ ನಡೆಯಬೇಕು. ಅದರಲ್ಲೂ ಭಾರತದಲ್ಲಂತೂ ಹೆಚ್ಚು ವ್ಯಾಪಕವಾಗಿ ಆಗಬೇಕು. ಪರೀಕ್ಷೆಯ ಪ್ರಮಾಣ ಕಡಿಮೆಯಾದಷ್ಟೂ ಸೋಂಕು ಪತ್ತೆಯ ದರ ಕಡಿಮೆಯಾಗುತ್ತದೆ. ಹೀಗಾಗಿ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸುವುದೇ ಏಕೈಕ ಮಾರ್ಗ ಎನ್ನುತ್ತಾರೆ ತಜ್ಞರು.


ಇನ್ನು ಸಾವಿನ ಸಂಖ್ಯೆಯನ್ನು ಆಧರಿಸಿ ಸೋಂಕಿತರ ಸಂಖ್ಯೆ ಅಂದಾಜು ಮಾಡಿದ್ದರೆ ಅದು ವಾಸ್ತವದಲ್ಲಿ ಅಂದಿನ ಸೋಂಕಿತರ ಸಂಖ್ಯೆಯಾಗಿರುವುದಿಲ್ಲ. ಏಕೆಂದರೆ ಮರಣ ಹೊಂದಿದವರಿಗೆ ಸೋಂಕು ತಗಲಿ ಹಲವು ದಿನಗಳಾಗಿರುತ್ತದೆ. ಹಾಗಾಗಿಯೇ ಅದು ಆ ಸಮಯದ ಸೋಂಕಿನ ಸಂಖ್ಯೆ ಎಂದೇ ಪರಿಗಣಿಸಬೇಕು ಎಂದು ವಾದವನ್ನು ಮುಂದೊಡ್ಡುತ್ತಾರೆ ತಜ್ಞರು.


ಇದನ್ನೇ ಮೂಲವನ್ನಾಗಿಟ್ಟುಕೊಂಡು ಲೆಕ್ಕ ಹಾಕಿದರೆ ಏಪ್ರಿಲ್ 19ರಂದು ಭಾರತದಲ್ಲಿ ಮರಣ ಹೊಂದಿದವರ ಸಂಖ್ಯೆ 507. ಏಪ್ರಿಲ್ 5ರಂದು ಸೋಂಕಿತರ ಸಂಖ್ಯೆ 1,23,659 ಎಂದಾಗಬೇಕು. ಆದರೆ ಅಂದಿನ ಅಧಿಕೃತ ಸಂಖ್ಯೆ 3,577. ಅಂದರೆ ವಾಸ್ತವ ಸೋಂಕಿನ ಸಂಖ್ಯೆಯ ಶೇಕಡ 2.9 ರಷ್ಟು ಮಾತ್ರ ವರದಿಯಾಗಿದೆ.

the fil favicon

SUPPORT THE FILE

Latest News

Related Posts