ವಲಸಿಗರ ಒಳಬಿಟ್ಟುಕೊಳ್ಳಲು ಒಪ್ಪುತ್ತಿಲ್ಲ; ಕಾರ್ಮಿಕರಿಗೆ ಕಾಲ್ನಡಿಗೆ ತಪ್ಪಲಿಲ್ಲ

ಬೆಂಗಳೂರು; ಸ್ವಂತ ಸ್ಥಳಗಳಿಗೆ ತೆರಳುವ ಹೊರಾಜ್ಯದ ವಲಸಿಗ ಕಾರ್ಮಿಕರಿಗಾಗಿ ವಿಶೇಷ ರೈಲುಗಳನ್ನು ಪುನರಾರಂಭಿಸಿರುವ ರಾಜ್ಯ ಸರ್ಕಾರಕ್ಕೆ ಇದೀಗ ಮತ್ತೊಂದು ತಲೆನೋವು ಎದುರಾಗಿದೆ. ಬಿಹಾರ ರಾಜ್ಯ ಹೊರತುಪಡಿಸಿ ಉಳಿದ 9 ರಾಜ್ಯಗಳು ಬೆಂಗಳೂರಿನಲ್ಲಿರುವ ವಲಸಿಗ ಕಾರ್ಮಿಕರನ್ನು ಒಳಬಿಟ್ಟುಕೊಳ್ಳಲು ಒಪ್ಪಿಗೆ ನೀಡಿಲ್ಲ!


ಬಿಹಾರ ರಾಜ್ಯ ಸರ್ಕಾರ ಮಾತ್ರ ಮೇ 8ರಿಂದ 15ರವರೆಗೆ ಕೇವಲ ಒಂದೇ ಒಂದು ರೈಲು ಸಂಚಾರಕ್ಕೆ ಒಪ್ಪಿದೆ. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌ ಮತ್ತು ಪಶ್ಚಿಮ ಬಂಗಾಳದೊಂದಿಗೆ ಸಂಪರ್ಕದಲ್ಲಿರುವ ನೋಡಲ್‌ ಅಧಿಕಾರಿಗಳು, ಆ ರಾಜ್ಯಗಳ ಒಪ್ಪಿಗೆಗಾಗಿ ಎದುರು ನೋಡುತ್ತಿದ್ದಾರೆ. ಒಪ್ಪಿಗೆ ದೊರೆತ ನಂತರ ವಿಶೇಷ ರೈಲುಗಳು ಸಂಚರಿಸಲಿದೆ. ಒಪ್ಪಿಗೆ ದೊರೆಯದಿದ್ದರೆ ವಲಸಿಗ ಕಾರ್ಮಿಕರು ಇಲ್ಲಿಯೇ ಉಳಿಯುವಂತಹ ಅನಿವಾರ್ಯ ಸ್ಥಿತಿ ಎದುರಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ತ್ರಿಪುರ, ಮಣಿಪುರ, ಉತ್ತರ ಪ್ರದೇಶ, ಮಧ್ಯಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೆಚ್ಚುವರಿ ಸರ್ಕಾರಿ ವಕೀಲ ವಿಕ್ರಂ ಹುಯಿಲಗೋಳ ಅವರು ಹೈಕೋರ್ಟ್‌ಗೆ ಲಿಖಿತ ಹೇಳಿಕೆ ಸಲ್ಲಿಸಿದ್ದಾರೆ. ಅಲ್ಲದೆ ಬೇರೆ ಬೇರೆ ರಾಜ್ಯಗಳಿಂದಲೂ ಅಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ತೆರಳುತ್ತಿರುವುದು ಕೂಡ ನೆರೆ ರಾಜ್ಯಗಳಿಗೂ ತಲೆಬಿಸಿಯಾಗಿದೆ.


ಕ್ವಾರಂಟೈನ್‌, ಆರೋಗ್ಯ ತಪಾಸಣೆ ಸೇರಿದಂತೆ ಇನ್ನಿತರೆ ವೈದ್ಯಕೀಯ ವ್ಯವಸ್ಥೆಗಳನ್ನು ಸಿದ್ಧತೆ ಮಾಡಿಕೊಳ್ಳಬೇಕಿದೆ. ಹೀಗಾಗಿ ಕರ್ನಾಟಕ ಸೇರಿದಂತೆ ಇನ್ನಿತರೆ ರಾಜ್ಯಗಳಿಂದ ವಲಸೆ ಬರುತ್ತಿರುವ ಕಾರ್ಮಿಕರನ್ನು ಒಳಬಿಟ್ಟುಕೊಳ್ಳಲು ನಿರಾಕರಿಸುತ್ತಿದ್ದಾರೆ.
ಈ ಬೆಳವಣಿಗೆ ನಡುವೆಯೇ ನೂರಾರು ಸಂಖ್ಯೆಯ ವಲಸಿಗ ಕಾರ್ಮಿಕರು ಬೆಂಗಳೂರಿನಿಂದ ತಮ್ಮ ಸ್ವಂತ ಸ್ಥಳಗಳಿಗೆ ಕಾಲ್ನಡಿಗೆಯಲ್ಲಿಯೇ ತೆರಳುತ್ತಿದ್ದಾರೆ. ವಿಶೇಷ ರೈಲು ಸಂಚಾರ ರದ್ದುಗೊಳಿಸುತ್ತಿದ್ದಂತೆ ಶಿವಮ್‌ ಯಾದವ್‌(30) ಎಂಬುವರು ಬೆಂಗಳೂರಿನಿಂದ 2,000 ಕಿ ಮೀ ದೂರ ಇರುವ ಗೋರಖ್‌ಪುರಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ್ದಾರೆ ಎಂದು ಗೊತ್ತಾಗಿದೆ.


ಕಾರ್ಮಿಕ ಇಲಾಖೆ ಮೂಲಗಳ ಪ್ರಕಾರ 2 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ವಲಸಿಗ ಕಾರ್ಮಿಕರು ಸೇವಾ ಸಿಂಧು ಜಾಲ ತಾಣದಲ್ಲಿ ಹೆಸರು ನೋಂದಾಯಿಸಿದ್ದಾರೆ. ಜಾಲ ತಾಣದಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಮುಗಿಬಿದ್ದಿದ್ದರೂ ಕೆಲ ನಿರ್ಬಂಧಗಳಿಂದಾಗಿ ಸಾವಿರಾರು ಸಂಖ್ಯೆಯ ವಲಸಿಗ ಕಾರ್ಮಿಕರು ನೋಂದಾಯಿಸಿಕೊಳ್ಳಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.


ಉತ್ತರ ಪ್ರದೇಶ, ಜಾರ್ಖಂಡ್‌, ಬಿಹಾರ ಮತ್ತು ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರು ಬೆಂಗಳೂರಿನಿಂದ ಕಾಲ್ನಡಿಗೆಯಲ್ಲಿ ತಮ್ಮ ಸ್ವಂತ ಸ್ಥಳಗಳಿಗೆ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ‘ ನಾವು ಯಾವಾಗ ನಮ್ಮ ಊರುಗಳನ್ನು ತಲುಪುತ್ತೇವೆಯೋ ನಮಗೇ ಗೊತ್ತಿಲ್ಲ. ಇಲ್ಲಿ ಯಾವ ಕೆಲಸವೂ ಇಲ್ಲ, ಊಟವೂ ಸಿಗುವುದಿಲ್ಲ. ಹೀಗಿರುವಾಗ ನಾವೇನು ತಾನೇ ಮಾಡಬೇಕು,’ ಎಂದು ಉತ್ತರ ಪ್ರದೇಶದ ಝಾನ್ಸಿ ಮೂಲದ ಕಾರ್ಪೆಂಟರ್‌ ಉಪೇಂದ್ರ ಮೊರಿಯಾ ಪ್ರಶ್ನಿಸುತ್ತಾರೆ.


ಬೆಂಗಳೂರು ತೊರೆದು ರಾಷ್ಟ್ರೀಯ ಹೆದ್ದಾರಿ ಹಿಡಿದು ಹೈದರಾಬಾದ್‌ನತ್ತ ಕಾಲ್ನಡಿಗೆಯಲ್ಲಿ ತೆರಳುತ್ತಿರುವ ಕಾರ್ಮಿಕರು, ತೀವ್ರ ಬಿಸಿಲಿನಿಂದ ರಸ್ತೆ ಮಧ್ಯೆಯೇ ದಣಿವಾರಿಸಿಕೊಳ್ಳುತ್ತಿದ್ದಾರೆ. ಯಲಹಂಕ ಬಳಿ ಇರುವ ಚಿಕ್ಕಜಾಲ ಪೊಲೀಸ್‌ ಠಾಣೆ ವ್ಯಾಪ್ತಿಯ ಚೆಕ್‌ಪೋಸ್ಟ್‌ವೊಂದರಿಂದಲೇ 100ಕ್ಕೂ ಹೆಚ್ಚು ವಲಸಿಗ ಕಾರ್ಮಿಕರು ಗುರುವಾರ ಬೆಳಗ್ಗೆಯೇ ತೆರಳಿದ್ದಾರೆ. ಅದೇ ರೀತಿ ರಾಮಮೂರ್ತಿ ನಗರದಲ್ಲಿರುವ ವಲಸಿಗರು ಯಲಹಂಕ ಮಾರ್ಗವಾಗಿ ತೆರಳಿದ್ದಾರೆ ಎಂದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts