ಬಿಡುಗಡೆಯಾಗದ ಹಣ; ತೊಗರಿ, ಕಡಲೆಕಾಳು ಖರೀದಿಗೆ ಹಿನ್ನಡೆ

ಬೆಂಗಳೂರು; ಬಡತನ ರೇಖೆಗಿಂತ ಕೆಳಗಿರುವವರು ಹೊಂದಿರುವ ಪ್ರತಿ ಕಾರ್ಡ್‌ಗೆ 1 ಕೆ ಜಿ ತೊಗರಿಬೇಳೆ ವಿತರಣೆಗೆ ಕೇಂದ್ರ ಸರ್ಕಾರ ಆದೇಶಿಸಿದ್ದರೆ, ಇತ್ತ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮತ್ತು ಬೆಲೆ ಸ್ಥಿರೀಕರಣ ಯೋಜನೆಯಡಿಯಲ್ಲಿ ತೊಗರಿ ಮತ್ತು ಕಡಲೆಕಾಳು ಖರೀದಿಯಲ್ಲಿ ರಾಜ್ಯ ಹಿಂದೆ ಬಿದ್ದಿದೆ. ತೊಗರಿ ಖರೀದಿ ಸಂಬಂಧ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡದೇ ಇರುವುದೇ ಹಿನ್ನಡೆಗೆ ಮೂಲ ಕಾರಣ.
ಬೆಂಬಲ ಬೆಲೆ ಮತ್ತು ಬೆಲೆ ಸ್ಥಿರೀಕರಣ ಯೋಜನೆಯಡಿಯಲ್ಲಿ ತೊಗರಿ ಮತ್ತು ಕಡಲೆಕಾಳು ನಿರೀಕ್ಷಿತ ಪ್ರಮಾಣದಲ್ಲಿ ಖರೀದಿಯಾಗದೇ ಇರುವುದನ್ನು ಗಂಭೀರವಾಗಿ ಪರಿಗಣಿಸದ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡುವ ಬಗ್ಗೆ ಕ್ರಮ ಕೈಗೊಂಡಿಲ್ಲ.
ಈವರೆವಿಗೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ತೊಗರಿ ಖರೀದಿಸಿದೆ. ತೊಗರಿ ಖರೀದಿಗೆ ಹಿನ್ನಡೆಯಾಗಿದೆ. ಕೋವಿಡ್‌-19ರ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದಾಗಿ ಖರೀದಿ ಪ್ರಕ್ರಿಯೆಯಲ್ಲಿ ನಿಗದಿತ ಗುರಿ ತಲುಪಿಲ್ಲ.
ತೊಗರಿ ಕಾಪು ದಾಸ್ತಾನಿನ ಪ್ರಮಾಣವನ್ನು ಸ್ಥಿರವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳ ಸಚಿವಾಲಯ, ಬೆಲೆ ಸ್ಥಿರೀಕರಣ ಯೋಜನೆಯನ್ವಯ 2020ರ ಏಪ್ರಿಲ್‌ 12 ಮತ್ತು 21ರಂದು ಒಟ್ಟು 2 ಲಕ್ಷ ಮೆಟ್ರಿಕ್‌ ಟನ್‌ ತೊಗರಿ ಖರೀದಿಗೆ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿತ್ತು.
ಅದರಂತೆ ರಾಜ್ಯ ಸರ್ಕಾರ ಖರೀದಿಸಬೇಕಿದ್ದ ಒಟ್ಟು 2 ಲಕ್ಷ ಮೆಟ್ರಿಕ್‌ ಟನ್‌ ಪೈಕಿ ಈವರೆವಿಗೆ ಕೇವಲ 30,688 ಮೆಟ್ರಿಕ್‌ ಟನ್‌ನಷ್ಟು ತೊಗರಿ ಖರೀದಿಸಿರುವುದು ಗೊತ್ತಾಗಿದೆ. ಇದಷ್ಟೇ ಅಲ್ಲ, ಕಡಲೆಕಾಳು ಖರೀದಿಯಲ್ಲಿಯೂ ರಾಜ್ಯ ಸರ್ಕಾರ ಹಿಂದೆ ಬಿದ್ದಿದೆ.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಮತ್ತು ತೊಗರಿ ಅಭಿವೃದ್ಧಿ ಮಂಡಳಿಗಳು ಜಿಲ್ಲೆಗಳಲ್ಲಿ ತೊಗರಿ ಖರೀದಿಸುತ್ತಿದ್ದರೂ 2020ರ ಮಾರ್ಚ್‌ 13ರವರೆಗೆ ಬೆಂಬಲ ಬೆಲೆ ಯೋಜನೆಯಡಿ 2,27,500 ಮೆಟ್ರಿಕ್‌ ಟನ್‌ ಪ್ರಮಾಣದಲ್ಲಿ ತೊಗರಿ ಖರೀದಿಸಿದೆ. ಅದೇ ರೀತಿ 2020ರ ಏಪ್ರಿಲ್‌ 30ರ ಅಂತ್ಯಕ್ಕೆ 6.87 ಲಕ್ಷ ಕ್ವಿಂಟಾಲ್‌ ಕಡಲೆಕಾಳು ಖರೀದಿಸಿದೆ.
2020ರ ಮಾರ್ಚ್‌ 12 ಮತ್ತು ಏಪ್ರಿಲ್‌ 21 ರಂದು 2 ಲಕ್ಷ ಮೆಟ್ರಿಕ್‌ ಟನ್‌ ಪ್ರಮಾಣದಲ್ಲಿ ತೊಗರಿ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಅಲ್ಲದೆ, ಏಪ್ರಿಲ್‌ 25ರಂದು ಪುನಃ 2.5 ಲಕ್ಷ ಮೆಟ್ರಿಕ್‌ ಟನ್‌ ತೊಗರಿ ಖರೀದಿಸಲು ಅನುಮತಿ ನೀಡಿತ್ತು ಎಂದು ಗೊತ್ತಾಗಿದೆ.
ಕೇಂದ್ರ ಸರ್ಕಾರದ ಅನುಮತಿಯಂತೆ ರಾಜ್ಯ ಸರ್ಕಾರ ಪ್ರತಿ ಎಕರೆಗೆ 7 ಕ್ವಿಂಟಾಲ್‌ ಹಾಗೂ ಪ್ರತಿ ರೈತರಿಂದ 20 ಕ್ವಿಂಟಾಲ್‌ ತೊಗರಿ ಖರೀದಿಸಲು 2020ರ ಏಪ್ರಿಲ್‌ 29 ಮತ್ತು 30ರಂದು ಆದೇಶ ನೀಡಿತ್ತು. ಇದರ ಜತೆಗೆ ಪ್ರತಿ ಎಕರೆಗೆ 5 ಕ್ವಿಂಟಾಲ್‌ ಮತ್ತು ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್‌ ಕಡಲೆಕಾಳು ಖರೀದಿಗೆ ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ.

SUPPORT THE FILE

Latest News

Related Posts