ಬೆಂಗಳೂರು; ಕೊರೊನಾ ವೈರಸ್ ಸೋಂಕಿನ ವಿರುದ್ಧ ಸೆಣೆಸುತ್ತಿರುವ ಮಧ್ಯೆಯೇ ರಾಜ್ಯದಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಾಗಲಿದೆ ಎಂಬ ಗಾಬರಿ ಹುಟ್ಟಿಸುವ ಅಂಕಿ ಅಂಶಗಳು ಹೊರಬಿದ್ದಿವೆ. ಇದೇ ವರ್ಷದಲ್ಲಿ ರಾಜ್ಯದಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ 70,000ಕ್ಕೆ ತಲುಪಲಿದೆ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಕ್ಯಾನ್ಸರ್ ರೋಗಿಗಳನ್ನು ತಪಾಸಣೆಗೆ ಗುರಿಪಡಿಸಲಾಗಿರುವ ಬೆನ್ನಲ್ಲೇ ವೈದ್ಯಕೀಯ ಶಿಕ್ಷಣ ಇಲಾಖೆ ನೀಡಿರುವ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ. ಕೋವಿಡ್ ವಿರುದ್ಧ ನಿರಂತರವಾಗಿ ಯುದ್ಧ ನಡೆಸಬೇಕಿರುವ ಹೊತ್ತಿನಲ್ಲೇ ಕ್ಯಾನ್ಸರ್ ರೋಗದ ವಿರುದ್ಧವೂ ಸೆಣೆಸಬೇಕಾದ ಅನಿವಾರ್ಯತೆ ಎದುರಾಗಿದೆ.
ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಮಧ್ಯೆಯೇ ಕ್ಯಾನ್ಸರ್ ರೋಗಿಗಳ ಸಂಖ್ಯೆಯೂ ಹೆಚ್ಚಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಅಂದಾಜಿಸಿರುವುದು ಇನ್ನಷ್ಟು ಗಾಬರಿ ಹುಟ್ಟಿಸಿದೆ. ದೇಶದಲ್ಲಿ ಹೆಚ್ಚು ಕ್ಯಾನ್ಸರ್ ರೋಗಿಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕ 5ನೇ ಸ್ಥಾನದಲ್ಲಿದೆ.
‘2015ರ ಅಂದಾಜು ಪ್ರಕಾರ ಕರ್ನಾಟಕದಲ್ಲಿ ಸುಮಾರು 51,000 ಹೊಸ ಕ್ಯಾನ್ಸರ್ ರೋಗಿಗಳಿದ್ದರು. 2020ರಲ್ಲಿ ಇದು ಸುಮಾರು 70,000 ತಲುಪಬಹುದೆಂದು ಅಂದಾಜಿಸಲಾಗಿದೆ,’ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಅವರು 2020ರ ಮಾರ್ಚ್ 2ರಂದು ನಡೆದ ಅಧಿವೇಶನದಲ್ಲಿ ಉತ್ತರಿಸಿದ್ದರು.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ಪೆಟ್ ಸ್ಕ್ಯಾನ್ ಮತ್ತು ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸಾ ಸೌಲಭ್ಯ ಒದಗಿಸಲು ಸರ್ಕಾರ ಕ್ರಮ ವಹಿಸಿದೆ ಎಂಬ ಮಾಹಿತಿ ಸುಧಾಕರ್ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ. ಈಗಾಗಲೇ ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಕ್ಕೆ ಬೇಕಾದ ಎಲ್ಲಾ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳಾದ ರೋಬೋಟಿಕ್ಸ್ ಶಸ್ತ್ರಚಿಕಿತ್ಸೆ, ವಿಕೀರಣ ಚಿಕಿತ್ಸೆ, ರಾಸಾಯನಿಕ ಚಿಕಿತ್ಸೆ ಹಾಗೂ ನೋವು ಉಪಶಮನ ಚಿಕಿತ್ಸೆಗಳು ಲಭ್ಯವಿವೆ.
ಅಲ್ಲದೆ, ಹೆಚ್ಚುತ್ತಿರುವ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಮತ್ತು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಹೊರೆಯನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಕಲ್ಬುರ್ಗಿಯಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಆರಂಭಿಸಿರುವ ರಾಜ್ಯ ಸರ್ಕಾರ, ಮಂಡ್ಯದಲ್ಲಿರುವ ಟರ್ಷಿಯರಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವನ್ನು ಉನ್ನತೀಕರಿಸುತ್ತಿದೆ. ತುಮಕೂರಿನಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರದ ಕಟ್ಟಡ ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭಿಸಲು ಕ್ರಮ ವಹಿಸಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಹುಬ್ಬಳ್ಳಿಯಲ್ಲಿರುವ ಕಿಮ್ಸ್ , ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಹಾಲಿ ಇರುವ ಕ್ಯಾನ್ಸರ್ ಸೌಲಭ್ಯವನ್ನು ಉನ್ನತೀಕರಿಸಲು ಕ್ರಮ ವಹಿಸಿದೆ. ಹಾಗೆಯೇ ವಿಜಯಪುರ ಮತ್ತು ಕಾರವಾರದಲ್ಲಿ ಹೊಸ ಕ್ಯಾನ್ಸರ್ ಚಿಕಿತ್ಸಾ ಘಟಕಗಳನ್ನು ಪ್ರಾರಂಭಿಸಲು ಕ್ರಮ ಕೈಗೊಂಡಿದೆ ಎಂದು ಗೊತ್ತಾಗಿದೆ.
2018ರಲ್ಲಿ ದೇಶವ್ಯಾಪಿ 168,122 ಕ್ಯಾನ್ಸರ್ ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ ಕರ್ನಾಟಕವೊಂದರಲ್ಲೇ 20,084 ಪ್ರಕರಣಗಳಿದ್ದವು. 2017ರಲ್ಲಿ ಕರ್ನಾಟಕದಲ್ಲಿ 3,523 ಪ್ರಕರಣಗಳಷ್ಟೇ ದಾಖಲಾಗಿದ್ದರೆ, 2018ರಲ್ಲಿ ಈ ಸಂಖ್ಯೆ ದುಪ್ಪಟ್ಟಾಗಿತ್ತು. ಬೆಂಗಳೂರು ನಗರವೊಂದರಲ್ಲಿ 1 ಲಕ್ಷ ಜನಸಂಖ್ಯೆಗೆ 126 ಪ್ರಕರಣಗಳು ಪತ್ತೆಯಾಗುತ್ತಿವೆ.
ಪ್ರತಿ ವರ್ಷ 90 ಲಕ್ಷ ಮಂದಿ ದೇಶದಲ್ಲಿ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಕರ್ನಾಟಕದಲ್ಲಿ 5 ವರ್ಷದ ಅವಧಿಯಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ (2015-2020) 20,000ಕ್ಕೆ ತಲುಪಲಿದೆ ಎಂದು ಅಂದಾಜಿಸಿದೆ. ತಂಬಾಕು ಸೇವನೆ ಹಾಗೂ ಅಸಮರ್ಪಕ ಆಹಾರ ಕ್ರಮದಿಂದ ರಾಜ್ಯದಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಲು ಪ್ರಮುಖ ಕಾರಣ ಎಂದು ತಜ್ಞರು ಹೇಳುತ್ತಾರೆ.