ಲಾಕ್‌ಡೌನ್‌; 4 ಲಕ್ಷ ಕಟ್ಟಡ ಕಾರ್ಮಿಕರ ಖಾತೆಗೆ ಜಮಾ ಆಗಿಲ್ಲ ಸಹಾಯಧನ

ಬೆಂಗಳೂರು; ಬ್ಯಾಂಕ್‌ ಖಾತೆ ಮತ್ತು ಆಧಾರ್‌ ಸಂಖ್ಯೆ ಹೊಂದಿರುವ ಕರ್ನಾಟಕ ಕಟ್ಟಡ ಕಾರ್ಮಿಕರ ಪೈಕಿ 4 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಕಾರ್ಮಿಕರಿಗೆ ಈವರೆವಿಗೂ ತಲಾ 2,000 ರು. ಜಮಾ ಆಗಿಲ್ಲ. ಲಾಕ್‌ಡೌನ್‌ ಜಾರಿಗೊಂಡು 2 ತಿಂಗಳಾಗಿದ್ದರೂ ಕಟ್ಟಡ ಕಾರ್ಮಿಕರಿಗೆ ಸಹಾಯಧನ ನೀಡುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.
ಅತ್ತ ಕೆಲಸ ಇಲ್ಲದೆ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಮಧ್ಯೆಯೇ ತಾಂತ್ರಿಕ ತೊಡಕಿನಿಂದಾಗಿ 2,000 ರು. ಸಹಾಯಧನ ಸಿಗದ ಕಾರಣ ಕಾರ್ಮಿಕರ ಪರದಾಟಕ್ಕೆ ಕೊನೆಯಿಲ್ಲದಂತಾಗಿದೆ.
ಈಗಾಗಲೇ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡಿರುವ 21 ಲಕ್ಷ ಪೈಕಿ 11.5 ಲಕ್ಷ ಕಾರ್ಮಿಕರಿಗೆ ತಲಾ 2,000 ರು.ನಂತೆ ಈವರೆವಿಗೆ ಒಟ್ಟು 229 ಕೋಟಿ ರು. ಜಮಾ ಆಗಿದೆ. ಬ್ಯಾಂಕ್‌ ಖಾತೆ ಮತ್ತು ಆಧಾರ್ ಸಂಖ್ಯೆಯನ್ನೇ ಹೊಂದಿರದ ಹಾಗೂ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿನ ಸದಸ್ಯತ್ವನ್ನು ನವೀಕರಿಸದ ಕಾರ್ಮಿಕರಿಗೆ ನೆರವಿನ ಹಣ ದೊರೆತಿಲ್ಲ.

ನೋಂದಾಯಿಸಿಕೊಂಡಿರುವವರ ಪೈಕಿ 15 ಲಕ್ಷ ಸಂಖ್ಯೆಯಲ್ಲಿರುವ ಕಾರ್ಮಿಕರು ಆಧಾರ್‌ ಮತ್ತು ಬ್ಯಾಂಕ್‌ ಖಾತೆಗಳನ್ನು ಹೊಂದಿದ್ದಾರೆ. ಬ್ಯಾಂಕ್‌ ಖಾತೆ ಜತೆ ಆಧಾರ್‌ ಸಂಖ್ಯೆ ಜೋಡಣೆ ಆಗದವರ ಸಂಖ್ಯೆ 2.3 ಲಕ್ಷದಷ್ಟಿದೆ ಎಂದು ಗೊತ್ತಾಗಿದೆ.
ಇನ್ನುಳಿದ 4 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಕಾರ್ಮಿಕರಲ್ಲಿಯೂ ಬ್ಯಾಂಕ್‌ ಖಾತೆ ಹೊಂದಿರುವವರ ಸಂಖ್ಯೆ ಕಡಿಮೆ ಇದೆ. ಹಲವರದ್ದು ಬ್ಯಾಂಕ್‌ ಖಾತೆ ಚಾಲ್ತಿಯಲ್ಲಿಲ್ಲ. ಇದರ ಮಧ್ಯೆ ಬ್ಯಾಂಕ್‌ ಖಾತೆ ಮತ್ತು ಆಧಾರ್‌ ಸಂಖ್ಯೆ ಜೋಡಣೆ ಆಗಿಲ್ಲ ಎಂಬ ಕಾರಣದಿಂದ ನೆರವಿನ ಹಣ ಜಮಾ ಆಗಿಲ್ಲ.
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 2007ರಿಂದ ಈವರೆವಿಗೆ ನೋಂದಾಯಿಸಿಕೊಂಡಿರುವ 21 ಲಕ್ಷ ಕಾರ್ಮಿಕರ ಪೈಕಿ 10 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಸದಸ್ಯತ್ವವನ್ನು ನವೀಕರಿಸಿಕೊಂಡಿಲ್ಲ. ಸದಸ್ಯತ್ವ ನವೀಕರಣಗೊಳ್ಳದ ಹೊರತು ಇವರಿಗೂ ನೆರವಿನ ಹಣ ಸಿಗದು.
ಹಾಗೆಯೇ ನವೀಕರಿಸಿಕೊಂಡ ನಂತರ ಇವರ ಬ್ಯಾಂಕ್‌ ಖಾತೆಗಳಿಗೆ ಆಧಾರ್ ಜೋಡಣೆ ಆಗಬೇಕಲ್ಲದೆ ಈ ಸಂಬಂಧ ಪರಿಶೀಲನೆ ಕಾರ್ಯ ಪರಿಪೂರ್ಣಗೊಳ್ಳಬೇಕು. ಅಲ್ಲಿಯವರೆಗೂ ನೆರವಿನ ಹಣ ಬ್ಯಾಂಕ್‌ ಖಾತೆಗಳಿಗೆ ಜಮಾ ಆಗುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸದಸ್ಯತ್ವವನ್ನು ನವೀಕರಿಸಲು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಅವಕಾಶ ನೀಡಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ನವೀಕರಿಸಿಕೊಂಡಿಲ್ಲ ಎಂದು ತಿಳಿದು ಬಂದಿದೆ.
ಈ ಎಲ್ಲ ತೊಡಕುಗಳ ಮಧ್ಯೆಯೂ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಬಾಗಿಲು ತಟ್ಟುತ್ತಿರುವ ಕಟ್ಟಡ ಕಾರ್ಮಿಕರು 2,000 ರು. ಪಡೆಯುವಲ್ಲಿ ಬಸವಳಿದು ಹೋಗಿದ್ದಾರೆ. ಹಾವೇರಿ ಜಿಲ್ಲೆಯೊಂದರಲ್ಲೇ ನೋಂದಾಯಿತ 38 ಸಾವಿರ ಕಾರ್ಮಿಕರ ಪೈಕಿ ಕೇವಲ 4,000 ಕಾರ್ಮಿಕರಿಗೆ ಮಾತ್ರ ಹಣ ಜಮೆಯಾಗಿದೆ. ಬಹುತೇಕ ಜಿಲ್ಲೆಗಳಲ್ಲಿಯೂ ಇದೇ ಪರಿಸ್ಥಿತಿ ಇದೆ.
ಫಲಾನುಭವಿಗಳ ಖಾತೆಗೆ ನೆರವಿನ ಹಣ ಜಮೆ ಮಾಡಲು ಖಾತೆದಾರರ ಆಧಾರ್ ಜೋಡಣೆ ಹಾಗೂ ಪರಿಶೀಲನೆ ಕಾರ್ಯ ತೆವಳುತ್ತಿರುವುದರಿಂದ ಲಕ್ಷಾಂತರ ಸಂಖ್ಯೆಯ ಕಟ್ಟಡ ಕಾರ್ಮಿಕರ ಖಾತೆಗಳಿಗೆ ಹಣ ದೊರೆಯುತ್ತಿಲ್ಲ. ಇದರಿಂದಾಗಿ ಕಟ್ಟಡ ಕಾರ್ಮಿಕರ ಸಂಕಷ್ಟ ಮತ್ತಷ್ಟು ಅತಿರೇಕಕ್ಕೆ ತಲುಪುತ್ತಿದೆ.
ಆಯಾ ಜಿಲ್ಲೆಗಳಲ್ಲಿ ಪರಿಶೀಲನೆ ಕಾರ್ಯ ಪೂರ್ಣಗೊಂಡ ಬಳಿಕವಷ್ಟೇ ಕೇಂದ್ರ ಕಚೇರಿಯಿಂದಲೇ ನೇರವಾಗಿ ಕಾರ್ಮಿಕರ ಖಾತೆಗೆ ಹಣ ಜಮೆಯಾಗಲಿದೆ ಎಂದು ಕಾರ್ಮಿಕ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ತಿಳಿಸಿದ್ದಾರೆ.
ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಈವರೆವಿಗೆ ಸಂಗ್ರಹವಾಗಿರುವ ಮೊತ್ತ 8,000 ಕೋಟಿ ರು.ನಷ್ಟಿದೆ. ಈ ಹಣವನ್ನು ಬಳಸಿಕೊಂಡು ಕಾರ್ಮಿಕರ ಖಾತೆಗಳಿಗೆ ತಲಾ 2,000 ರು. ಜಮಾ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೂಚಿಸಿದ್ದರು.
ಬಳ್ಳಾರಿ, ಕೊಪ್ಪಳ, ರಾಯಚೂರು, ಕಲಬುರಗಿ, ಬೀದರ್‌, ವಿಜಯಪುರ, ಯಾದಗಿರಿ, ಹಾವೇರಿ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ಸಾವಿರಾರು ಸಂಖ್ಯೆಯ ಕಾರ್ಮಿಕರು ಬೆಂಗಳೂರಿನ ವಿವಿಧ ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ದುಡಿಯುತ್ತಿದ್ದಾರೆ.

the fil favicon

SUPPORT THE FILE

Latest News

Related Posts