ಸಂಜಯ್‌ ಮೋಹನ್‌ಗೆ ಆಯಕಟ್ಟಿನ ಹುದ್ದೆ; ಪುನಟಿ ಶ್ರೀಧರ್‌ ಶಿಫಾರಸ್ಸಿಗೆ ಕಿಮ್ಮತ್ತಿಲ್ಲ

ಬೆಂಗಳೂರು; ನಾಗರಹೊಳೆ ಮತ್ತು ಬಂಡಿಪುರ ಹುಲಿ ಸಂರಕ್ಷಣಾ ಪ್ರದೇಶ ವ್ಯಾಪ್ತಿಯಲ್ಲಿನ ಕಾಳ್ಗಿಚ್ಚು ನಿಯಂತ್ರಿಸಲು ಯಾವುದೇ ಕ್ರಮ ಕೈಗೊಳ್ಳದ ಮತ್ತು ಆ ಪ್ರದೇಶಗಳ ವ್ಯಾಪ್ತಿಯಲ್ಲಿ ಕಳಪೆ ರಸ್ತೆ ಕಾಮಗಾರಿಗಳು ನಡೆದಿರುವ ಆರೋಪಕ್ಕೆ ಗುರಿಯಾಗಿ ಗಂಭೀರ ಶಿಸ್ತು ಕ್ರಮಕ್ಕೆ ಶಿಫಾರಸ್ಸಾಗಿದ್ದ ಐಎಫ್‌ಎಸ್‌ ಅಧಿಕಾರಿ ಸಂಜಯ್‌ ಮೋಹನ್‌ ಅವರಿಗೆ ಬಿಜೆಪಿ ಸರ್ಕಾರ ಆಯಕಟ್ಟಿನ ಜಾಗ ಅನುಗ್ರಹಿಸಿದೆ.
ಪುನಟಿ ಶ್ರೀಧರ್‌ ಅವರ ನಿವೃತ್ತಿಯಿಂದ ತೆರವುಗೊಂಡಿರುವ ಅರಣ್ಯ ಪಡೆ ವಿಭಾಗದ ಮುಖ್ಯಸ್ಥ ಹುದ್ದೆಗೆ ಸಂಜಯ್‌ ಮೋಹನ್‌ ಅವರನ್ನು ನೇಮಿಸಿರುವುದು ಇದೀಗ ವಿವಾದಕ್ಕೆಡೆ ಮಾಡಿಕೊಟ್ಟಿದೆ.
ವಿಶೇಷವೆಂದರೆ ಗುರುತರ ಆರೋಪಗಳನ್ನು ಎದುರಿಸುತ್ತಿರುವ ಸಂಜಯ್‌ ಮೋಹನ್‌ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಪುನಟಿ ಶ್ರೀಧರ್‌ ಅವರು 2020ರ ಮಾರ್ಚ್‌ 21ರಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿ ಪುನಟಿ ಶ್ರೀಧರ್‌ ಅವರು ಬರೆದಿದ್ದ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ. 

ಆರೋಪಿತ ಅಧಿಕಾರಿ ಸಂಜಯ್‌ ಮೋಹನ್‌ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರ,  ಪುನಟಿ ಶ್ರೀಧರ್‌ ಅವರು ಮಾಡಿದ್ದ ಶಿಫಾರಸ್ಸನ್ನೂ  ಬದಿಗೊತ್ತಿ ಒಂದೇ ತಿಂಗಳಲ್ಲಿ ಅಂದರೆ 2020ರ ಏಪ್ರಿಲ್‌ 27ರಂದು ಅರಣ್ಯ ಪಡೆಯ ವಿಭಾಗಕ್ಕೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ನೇಮಿಸಿ ಆದೇಶ ಹೊರಡಿಸಿದೆ. ಈ ನೇಮಕಾತಿಗೆ ಅರಣ್ಯ ಸಚಿವ ಆನಂದ್‌ಸಿಂಗ್‌ ಅವರು ಅನುಮೋದಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

‘ವನ್ಯಜೀವಿ ವಿಭಾಗದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಯಾಗಿ 2019ರ ಮಾರ್ಚ್ 1ರಂದು ಅಧಿಕಾರ ವಹಿಸಿಕೊಂಡ ದಿನದಿಂದ ಅಶಿಸ್ತು ಮತ್ತು ಅವಿಧೇಯತೆಯಿಂದ ನಡೆದುಕೊಂಡಿದ್ದಾರೆ. ವನ್ಯಜೀವಿ ವಿಭಾಗಕ್ಕೆ ಸಂಬಂಧಿಸಿದಂತೆ ಆಯೋಜಿಸಿದ್ದ ಹಲವು ಸಭೆಗಳಿಗೆ ಹಾಜರಾಗದೇ ತಪ್ಪಿಸಿಕೊಂಡಿದ್ದಾರೆ. ಅಲ್ಲದೆ, ವನ್ಯಜೀವಿ ವಿಭಾಗದ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಸರ್ಕಾರವನ್ನು ಕತ್ತಲಲ್ಲಿಟ್ಟಿದ್ದಾರೆ. ಅಲ್ಲದೆ, ಸರ್ಕಾರ ಕಾಲಕಾಲಕ್ಕೆ ನೀಡಿದ್ದ ನಿರ್ದೇಶನಗಳನ್ನು ಉದ್ದೇಶಪೂರ್ವಕವಾಗಿ ಪಾಲಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು,’ ಎಂದು ದೋಷಾರೋಪಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿರುವುದು ಪತ್ರದಿಂದ ತಿಳಿದು ಬಂದಿದೆ.
ಹಾಗೆಯೇ ಬಂಡಿಪುರ ಹುಲಿ ಅಭಯಾರಣ್ಯದಲ್ಲಿ ನಡೆದಿದ್ದ ಬೆಂಕಿ ಅವಘಢಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ವಿಚಾರಣಾ ತಂಡವು ಸಂಜಯ್‌ ಮೋಹನ್‌ ಅವರ ವಿರುದ್ಧ ಆರೋಪಗಳ ಪಟ್ಟಿ ಮಾಡಿತ್ತು ಎಂಬ ಅಂಶವೂ ದೋಷಾರೋಪ ಪಟ್ಟಿಯಿಂದ ಗೊತ್ತಾಗಿದೆ.
ವನ್ಯಜೀವಿ ವ್ಯಾಪ್ತಿಯಲ್ಲಿ ಅಗ್ನಿ ಸುರಕ್ಷತೆ ಸಂಬಂಧ ಜಾರಿಗೊಳಿಸಿದ್ದ ಯೋಜನೆಯಲ್ಲಿ ಹಣಕಾಸು ದುರುಪಯೋಗ ನಡೆದಿತ್ತು ಎಂದು ವಿಚಾರಣೆ ತಂಡ ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು ಎಂಬುದು ಲಭ್ಯ ಇರುವ ದಾಖಲೆಯಿಂದ ತಿಳಿದು ಬಂದಿದೆ.
ನಾಗರಹೊಳೆ ಹುಲಿ ಸಂರಕ್ಷಣಾ ಪ್ರದೇಶ ವ್ಯಾಪ್ತಿಯಲ್ಲಿ ನಿಯಮಬಾಹಿರವಾಗಿ ರೆಸಾರ್ಟ್‌ ಕಾರ್ಯಾಚರಣೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದ್ದರೂ ಸಂಜಯ್‌ ಮೋಹನ್‌ ಅವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಕುರಿತು ನೀಡಿದ್ದ ಅರಣ್ಯ ವಿಭಾಗ ನೀಡಿದ್ದ ನಿರ್ದೇಶನಗಳನ್ನು ಪಾಲಿಸಿರಲಿಲ್ಲ ಮಾತ್ರವಲ್ಲದೆ, ಈ ಕುರಿತು ಆಳವಾದ ತನಿಖೆಯನ್ನೂ ಕೈಗೊಂಡಿರಲಿಲ್ಲ. ಅದೇ ರೀತಿ ಹುಲಿ ಯೋಜನೆಯ ಹೆಚ್ಚುವರಿ ಅರಣ್ಯ ಸಂರಕ್ಷಣಾಧಿಕಾರಿಗೆ ಯಾವುದೇ ವರದಿಯನ್ನೂ ನೀಡಿರಲಿಲ್ಲ. ಈ ವಿಚಾರದಲ್ಲಿ ಅಖಿಲ ಭಾರತ ಸೇವೆಗಳ ನಿಯಮ 1968ರ 3(2) ಉಲ್ಲಂಘಿಸಿದ್ದರು ಎಂಬ ಸಂಗತಿ ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.
ಅದೇ ರೀತಿ ಇಲಾಖೆ ಕಾಲಕಾಲಕ್ಕೆ ನಡೆಸುತ್ತಿದ್ದ ಸಭೆಗಳಿಗೆ ಸತತವಾಗಿ ಗೈರು ಹಾಜರಾಗಿದ್ದ ಸಂಜಯ್‌ ಮೋಹನ್‌ ಅವರು, ಇಲಾಖೆ ಮುಖ್ಯಸ್ಥರ ನಿರ್ದೇಶನಗಳನ್ನು ನಿರ್ಲಕ್ಷ್ಯಿಸಿದ್ದರು. ಸಭೆಗಳಿಗೆ ಗೈರಾಗುವ ಮೂಲಕ ಅಖಿಲ ಭಾರತ ಸೇವೆಗಳು ನಿಯಮ 1968ರ 3(1)4ನ್ನು ಉಲ್ಲಂಘಿಸಿದ್ದರು ಎಂದು ದೋಷಾರೋಪಣೆ ಪಟ್ಟಿ ವಿವರಿಸಿದೆ.
ವೈಲ್ಡ್‌ಲೈಫ್‌ ವಾರ್ಡನ್‌ಗಳ ನೇಮಕಾತಿ ಸಂಬಂಧವೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಸಂಬಂಧ ನಡೆದಿದ್ದ ವನ್ಯಜೀವಿ ಮಂಡಳಿಯ ಸಭೆಗಳಿಗೂ ಸಂಜಯ್‌ ಮೋಹನ್‌ ಅವರು ಹಾಜರಾಗಿರಲಿಲ್ಲ.
ಬಂಡಿಪುರ ಹುಲಿ ಸಂರಕ್ಷಣಾ ಪ್ರದೇಶದಲ್ಲಿ 2019-19ರಲ್ಲಿ ಅಗ್ನಿ ಸುರಕ್ಷತೆ ಸಂಬಂಧ ಬಿಡುಗಡೆಯಾಗಿದ್ದ ಹಣಕಾಸಿನಲ್ಲಿ ದುರುಪಯೋಗ ನಡೆದಿತ್ತು ಎಂದು ಸತ್ಯಶೋಧನೆ ವರದಿಯಲ್ಲಿ ವಿವರಿಸಲಾಗಿತ್ತಲ್ಲದೆ, ನಿಯಮಬಾಹಿರವಾಗಿ ನಡೆದುಕೊಂಡಿದ್ದ ಗುರುತರ ಆರೋಪವನ್ನು ಸತ್ಯಶೋಧನೆ ತಂಡ ಹೊರಿಸಿತ್ತು ಎಂಬ ಸಂಗತಿ ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಕಾರಣ ಕೇಳಿ ಬರೆದಿದ್ದ ಪತ್ರಕ್ಕೆ ಒಂದು ತಿಂಗಳ ನಂತರ ಪ್ರತಿಕ್ರಿಯಿಸುವ ಮೂಲಕ ಕಾಲಹರಣ ಮಾಡಿದ್ದರು. ಶೇ.60ರಷ್ಟು ಸಿಬ್ಬಂದಿ ಕೊರತೆ ಇದೆ ಎಂದು ಗೊತ್ತಿದ್ದರೂ ಈ ಸಂಬಂಧ ತಡವಾಗಿ ಉತ್ತರಿಸಿದ್ದರಲ್ಲದೆ, ಹಣಕಾಸು ದುರುಪಯೋಗಕ್ಕೆ ಸಂಬಂಧಿಸಿದಂತೆ ಯಾವುದೇ ಉತ್ತರವನ್ನೂ ನೀಡಿರಲಿಲ್ಲ ಎಂದು ದೋಷಾರೋಪಣೆ ಪಟ್ಟಿಯಲ್ಲಿ ಪ್ರಸ್ತಾಪಿಸಲಾಗಿದೆ.
ನಾಗರಹೊಳೆ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದಂತೆಯೂ ಹಲವು ಆರೋಪಗಳಿಗೆ ಸಂಜಯ್‌ ಮೋಹನ್‌ ಗುರಿಯಾಗಿದ್ದರು. ರಸ್ತೆ ಕಾಮಗಾರಿಗಳಲ್ಲಿ ಗುಣಮಟ್ಟದ ಕಾಯ್ದುಕೊಳ್ಳದೇ ಕಳಪೆ ಕಾಮಗಾರಿಗಳಿಗೆ ಕಾರಣರಾಗಿದ್ದರು ಎಂದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.
2019ರ ಸೆಪ್ಟಂಬರ್‌ 4ರಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆಗೆ ಹಾಜರಾಗಬೇಕು ಎಂದು ಮೇಲಾಧಿಕಾರಿಗಳು ಮೊದಲೇ ಸೂಚಿಸಿದ್ದರೂ ಅದೇ ದಿನದಂದು ಮಹಾರಾಷ್ಟ್ರಕ್ಕೆ ತೆರಳುವ ಮೂಲಕ ಸಭೆಗೆ ಗೈರಾಗಿದ್ದರು ಎಂದು ವಿಚಾರಣೆ ವರದಿ ಹೊರಗೆಡವಿದೆ.
ಕುಣಿಗಲ್‌ನಲ್ಲಿ ನಾಲ್ವರನ್ನು ಕೊಂದು ಹಾಕಿದ್ದ ನರಹಂತಕ ಚಿರತೆಯನ್ನು ಕಂಡಲ್ಲಿ ಗುಂಡು ಹೊಡೆಯಲು ನೀಡಿದ್ದ ಆದೇಶವನ್ನು ಅನುಷ್ಠಾನಗೊಳಿಸಿರಲಿಲ್ಲ. ಅಲ್ಲದೆ ಶಾರ್ಪ್‌ ಶೂಟರ್‌ಗಳನ್ನು ನೇಮಕಗೊಳಿಸಿರಲಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.

SUPPORT THE FILE

Latest News

Related Posts