ಬಿಲ್ಲಾಪುರ ಪ್ರಕರಣದಲ್ಲಿ ಸಚಿವ ಈಶ್ವರಪ್ಪ ಮೌನ?; ಪಿಡಿಒಗೆ ನೋಟೀಸ್‌ ನೀಡಿ ಕೈತೊಳೆದುಕೊಂಡ ಇಒ

ಬೆಂಗಳೂರು; ಲಾಕ್‌ಡೌನ್‌ ನಡುವೆಯೇ ಸರ್ಕಾರಿ ಜಮೀನಿಗೆ  ಅಕ್ರಮವಾಗಿ 273 ಖಾತೆಗಳನ್ನು ಮಾಡಿಕೊಟ್ಟಿದ್ದ ಬಿಲ್ಲಾಪುರ ಗ್ರಾಮ ಪಂಚಾಯ್ತಿ ಪ್ರಕರಣದಲ್ಲಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಆರೋಪಿ ಪಿಡಿಒಗೆ ಕಾರಣ  ಕೇಳಿ ನೋಟಿಸ್‌ ಜಾರಿ ಮಾಡಿದ್ದಾರೆ. 

ಆದರೆ ಪಿಡಿಒ ಅಕ್ರಮವಾಗಿ ಮಾಡಿಕೊಟ್ಟಿರುವ 273 ಖಾತೆಗಳನ್ನು ಈವರೆವಿಗೂ  ರದ್ದುಗೊಳಿಸಲು ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೆ  ಈ ಪ್ರಕರಣದಲ್ಲಿ ಸಚಿವ  ಈಶ್ವರಪ್ಪ ಅವರು ಮೌನ ವಹಿಸಿರುವುದು ಕೂಡ ಸಂಶಯಗಳಿಗೆ ಕಾರಣವಾಗಿದೆ.  

ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಯಾಮಾರಿಸಿದ ನಂತರ ಎಚ್ಚೆತ್ತುಕೊಂಡಿದ್ದ  ಪಂಚಾಯ್ತಿ ಸದಸ್ಯರು, ಪಿಡಿಒ ಕೆ ವಿ  ಜಯರಾಮ್‌  ಅವರ ವಿರುದ್ಧ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ನೀಡಿದ್ದ ದೂರಿನ ಮೇಲೂ ಈವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ. 

ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ  ಕೆ ಎಸ್‌ ಈಶ್ವರಪ್ಪ ಅವರ ಬಳಿ ನಿಯೋಗ ಕೊಂಡೊಯ್ದಿರುವ ಬಿಜೆಪಿ ಸಂಸದರೊಬ್ಬರು, ಪ್ರಕರಣ ಮೇಲೆ ಯಾವ ಕ್ರಮವನ್ನೂ ಕೈಗೊಳ್ಳದಿರುವಂತೆ ಒತ್ತಡ ಹೇರಿದ್ದಾರೆ ಎಂದು ಗೊತ್ತಾಗಿದೆ. ಹೀಗಾಗಿಯೇ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಯೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ  ಎಂದು  ಹೇಳಲಾಗಿದೆ. 

ಆನೇಕಲ್‌ ತಾಲೂಕಿನ ಬಿಲ್ಲಾಪುರ ಗ್ರಾಮ ಪಂಚಾಯ್ತಿ ಸದಸ್ಯರನ್ನೂ ಯಾಮಾರಿಸಿದ್ದ ಅಭಿವೃದ್ಧಿ ಅಧಿಕಾರಿ, 300 ಕೋಟಿ  ರು. ಮೌಲ್ಯದ 79 ಎಕರೆ ವಿಸ್ತೀರ್ಣ ಜಮೀನಿಗೆ ಒಂದೇ ದಿನದಲ್ಲಿ ಹೌಸಿಂಗ್‌ ಸೊಸೈಟಿಯ ಅಧ್ಯಕ್ಷರ ಹೆಸರಿಗೆ 273 ಖಾತೆ ಮಾಡಿಕೊಟ್ಟಿದ್ದ ಆರೋಪ ಪಿಡಿಒ  ಕೆ ವಿ ಜಯರಾಮ್‌ ಅವರ ಮೇಲಿದೆ. 

ಪ್ರಕರಣವನ್ನು ‘ದಿ ಫೈಲ್‌’ ಹೊರಗೆಡವಿದ ನಂತರ ಪಿಡಿಒ ಕೆ  ವಿ ಜಯರಾಮ್‌  ಕಾನೂನುಬಾಹಿರವಾಗಿ ರೆಮ್ಕೋ ಹೌಸಿಂಗ್‌ ಸೊಸೈಟಿ ಅಧ್ಯಕ್ಷ ವಿಜಯಕುಮಾರ್‌ ಅವರ ಹೆಸರಿಗೆ 273 ಖಾತೆಗಳನ್ನು ಮಾಡಿಕೊಟ್ಟಿದ್ದಾರೆ ಎಂದು ಲಿಖಿತವಾಗಿ ಬೆಂಗಳೂರು ನಗರ  ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ಸಲ್ಲಿಸಿದ್ದನ್ನು ಸ್ಮರಿಸಬಹುದು. 

‘ಈ ಪ್ರಕರಣ ಲೋಕಾಯುಕ್ತ, ಎಸಿಬಿ ಮತ್ತು ಭೂ ಕಬಳಿಕೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನಮ್ಮಗಳ  ಗಮನಕ್ಕೆ ಬರದೇ ಅಕ್ರಮ ಮತ್ತು ಕಾನೂನುಬಾಹಿರವಾಗಿ ಖಾತೆ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಈ ಕೂಡಲೇ ಪಿಡಿಒ ಜಯರಾಂ ಅವರನ್ನು ಸೇವೆಯಿಂದ ವಜಾ  ಮಾಡಬೇಕು ಮತ್ತು 273 ಖಾತೆಗಳನ್ನು ರದ್ದುಗೊಳಿಸಬೇಕು,’ ಎಂದು ದೂರಿನಲ್ಲಿ ಕೋರಿದ್ದರು. 

ರೆಮ್ಕೋ ಬಿಎಚ್‌ಇಎಲ್‌ ಹೌಸಿಂಗ್‌ ಸೊಸೈಟಿ ಅಧ್ಯಕ್ಷ ವಿಜಯಕುಮಾರ್‌ ಅವರ ಹೆಸರಿಗೆ 2020ರ ಏಪ್ರಿಲ್‌ 1ರಂದು ಖಾತೆ ಮಾಡಿಕೊಡಲಾಗಿತ್ತು. ಖಾತೆ ಮಾಡಿಕೊಡುವುದಕ್ಕೆ ಸಂಬಂಧಿಸಿದಂತೆ ತೆರೆದಿರುವ ಕಡತದಲ್ಲಿ ಯಾವುದೇ ಮಾಹಿತಿ, ದಾಖಲೆಯೂ ಇರಲಿಲ್ಲ. ವಿಧಾನಪರಿಷತ್‌ ಸದಸ್ಯ ಸಿ ಆರ್‌ ಮನೋಹರ್‌ ಅವರ ಹೆಸರು ಈ ಪ್ರಕರಣದಲ್ಲಿ ಥಳಕು ಹಾಕಿಕೊಂಡಿತ್ತು. 

ಆನೇಕಲ್‌ ತಾಲ್ಲೂಕಿನ ಸರ್ಜಾಪುರ ಹೋಬಳಿಯ ಅಡಿಗಾರಕಲ್ಲಹಳ್ಳಿಯಲ್ಲಿ ಮೂಲ ಸರ್ವೇ ನಂಬರ್‌ 47ರ 103 ಎಕರೆ 33 ಗುಂಟೆ  ಗೋಮಾಳ ಜಮೀನಿನ ಮಂಜೂರಾತಿ ಹಾಗೂ ಪೋಡಿ ದುರಸ್ತಿಯಲ್ಲಿ ಅಕ್ರಮ ನಡೆದಿದೆ ಎಂದು  ಹಿಂದಿನ ಜಿಲ್ಲಾಧಿಕಾರಿ ನೇಮಿಸಿದ್ದ ವಿಚಾರಣಾ ಸಮಿತಿಯ ತನಿಖೆ ವೇಳೆಯಲ್ಲಿ ಪತ್ತೆಯಾಗಿತ್ತು. 

the fil favicon

SUPPORT THE FILE

Latest News

Related Posts