ಏಪ್ರಿಲ್‌ 14ಕ್ಕೆ ಲಾಕ್‌ಡೌನ್‌ ಮುಕ್ತಾಯ!; ಗೊಂದಲಕ್ಕೆ ಕಾರಣವಾಯಿತೇ ಟಿಪ್ಪಣಿ?

ಬೆಂಗಳೂರು; ಲಾಕ್‌ಡೌನ್‌ ವಿಸ್ತರಣೆ ಮಾಡಬೇಕೇ ಬೇಡವೇ ಎಂಬ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಇನ್ನೂ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಈ ಬಗೆಗಿನ ಜಿಜ್ಞಾಸೆ ಇನ್ನೂ ಮುಂದುವರೆದಿರುವಾಗಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌ ಅವರು ಲಾಕ್‌ಡೌನ್‌ ಅವಧಿ ಮುಕ್ತಾಯಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಟಿಪ್ಪಣಿಯು ಗೊಂದಲಕ್ಕೆ ಕಾರಣವಾಗಿದೆ. 

‘ಕೋವಿಡ್‌-19ರ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ವಿಧಿಸಲಾಗಿದ್ದ ಲಾಕ್‌-ಡೌನ್‌ ಅವಧಿಯು ದಿನಾಂಕ 14-04-2020ರಂದು ಮುಕ್ತಾಯವಾಗಲಿದ್ದು, ತದನಂತರ ತಮ್ಮ  ಅಧೀನದಲ್ಲಿರುವ ಇಲಾಖೆಗಳಲ್ಲಿ ತೆಗೆದುಕೊಳ್ಳಬೇಕಾಗಿರುವ ಪ್ರಮುಖ 10 ಕ್ರಮಗಳ  ಬಗ್ಗೆ ಪಟ್ಟಿಮಾಡಿ 09-04-2020ರೊಳಗೆ ಕಳುಹಿಸಬೇಕು,’ ಎಂದು ರಾಜ್ಯ ಸರ್ಕಾರದ  ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌ ಅವರು ಕೋರಿರುವುದು ಟಿಪ್ಪಣಿಯಿಂದ ತಿಳಿದು ಬಂದಿದೆ.

ಈ ಟಿಪ್ಪಣಿಯನ್ನು 2020ರ ಏಪ್ರಿಲ್‌ 7ರಂದು ರಾಜ್ಯ ಸರ್ಕಾರದ ಎಲ್ಲಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳಿಗೆ ಟಿಪ್ಪಣಿ ಕಳಿಸಿದ್ದಾರೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ. 

ಲಾಕ್‌ಡೌನ್‌ ವಿಸ್ತರಣೆ  ಮಾಡಬೇಕೇ ಬೇಡವೇ ಎಂಬ  ಬಗ್ಗೆ  ಆರೋಗ್ಯ ತಜ್ಞರೊಂದಿಗೆ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಒಂದು ದಿನದ ಹಿಂದೆಯಷ್ಟೇ ಸ್ಪಷ್ಟಪಡಿಸಿದ್ದರು. ಇದರ ಬೆನ್ನಲ್ಲೇ ಮುಖ್ಯ ಕಾರ್ಯದರ್ಶಿ ಅವರು ಹೊರಡಿಸಿರುವ ಟಿಪ್ಪಣಿ, ವಾಟ್ಸಾಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲದೆ, ಟಿಪ್ಪಣಿಯಲ್ಲಿನ ಉಲ್ಲೇಖಿಸಿರುವ  ವಿಷಯವನ್ನು ಲಾಕ್‌ಡೌನ್‌  ಏಪ್ರಿಲ್‌ 14ರಂದು ತೆರವುಗೊಳ್ಳಲಿದೆ ಎಂದೇ ಅರ್ಥೈಯಿಸಿಕೊಳ್ಳಲು ದಾರಿ ಮಾಡಿ ಕೊಟ್ಟಂತಾಗಿದೆ. 

ಕೋವಿಡ್‌–19ರ ನಿಯಂತ್ರಣ ಸಂಬಂಧ ಆರೋಗ್ಯ ತಜ್ಞರ ತಂಡದ ಜತೆಗೆ ಚರ್ಚಿಸಿ, ಅವರ ಸಲಹೆ ಪಡೆಯುತ್ತೇವೆ. ಡಾ.ಸಿ.ಎನ್. ಮಂಜುನಾಥ್  ಹಾಗೂ ಡಾ. ದೇವಿ ಶೆಟ್ಟಿ ನೇತೃತ್ವದ ಸಮಿತಿಯು ಎರಡು ದಿನಗಳಲ್ಲಿ ವರದಿ ನೀಡುವ ನಿರೀಕ್ಷೆಯಿದೆ. ಬಳಿಕ ಲಾಕ್‌ ಡೌನ್‌ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸುರೇಶ್‌ಕುಮಾರ್‌ ಅವರು ಮಾಹಿತಿ ಒದಗಿಸಿದ್ದನ್ನು ಸ್ಮರಿಸಬಹುದು. 

ಕೋವಿಡ್‌-19 ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 181ಕ್ಕೆ ತಲುಪಿದೆಯಲ್ಲದೆ, ಬೆಂಗಳೂರು, ಮೈಸೂರು  ಸೇರಿದಂತೆ ಕೆಲ ಜಿಲ್ಲೆಗಳನ್ನ ಸೂಕ್ಷ್ಮತಾಣಗಳೆಂದು ಗುರುತಿಸಲಾಗಿದೆ. ಅಲ್ಲದೆ  ದೇಶದಾದ್ಯಂತವೂ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನ್ನು ವಿಸ್ತರಿಸುವುದರತ್ತಲೇ   ಕೇಂದ್ರ  ಸರ್ಕಾರವೂ ಚಿಂತಿಸಿದೆ. 

Your generous support will help us remain independent and work without fear.

Latest News

Related Posts