ಕೋವಿಡ್‌ ಪರಿಹಾರ ನಿಧಿಗೆ ಚುನಾಯಿತ ಜನಪ್ರತಿನಿಧಿಗಳಿಂದ 100 ಕೋಟಿ ರು. ದೇಣಿಗೆ ಸಾಧ್ಯವೇ?

ಬೆಂಗಳೂರು; ಕೊರೊನಾ ಸೋಂಕಿನ ವಿರುದ್ಧ ನಿರ್ಣಾಯಕ ಹೋರಾಟ ಆರಂಭವಾಗಿರುವ ಈ ಹೊತ್ತಿನಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಉಳಿದ ಸಚಿವರು ಮತ್ತು ಶಾಸಕರು ತಮ್ಮ ಒಂದು ವರ್ಷದ ವೇತನ ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ.  

ಆದರೆ ಈ ಶಾಸಕರಿಗೆ ಒಂದು ವರ್ಷದ ವೇತನ ಎಂಬುದು ಕಡಿಮೆ ಪ್ರಮಾಣದ ಹಣ. ಅವರೇ ಸ್ವಯಂ ಚುನಾವಣಾ ಆಯೋಗದ ಮುಂದೆ ಘೋಷಿಸಿಕೊಂಡಿರುವ ನಿವ್ವಳ  ಆಸ್ತಿ ಮೊತ್ತಕ್ಕೆ ಹೋಲಿಸಿದರೆ ಒಂದು ವರ್ಷದ ವೇತನ ಎಂಬುದು ನಗೆಪಾಟಲಿನ ವಿಚಾರ. 

ಅಲ್ಲದೆ ಶಾಸಕರು ಮತ್ತು ಚುನಾಯಿತ ಜನಪ್ರತಿನಿಧಿಗಳು ಈ ರೀತಿಯ ಒಂದು ವರ್ಷದ ವೇತನ ನೀಡುವ ಆತ್ಮ  ವಂಚನೆ ಮಾತುಗಳನ್ನಾಡುವುದನ್ನು ಬಿಟ್ಟು ನಿಜವಾದ ಪರಿಹಾರದ ಕಡೆಗೆ ಗಮನಹರಿಸಬೇಕು ಎಂದು ಸಾಮಾಜಿಕ  ಜಾಲತಾಣಗಳಲ್ಲಿ ಚರ್ಚೆಗಳು ಅರಂಭವಾಗಿವೆ. ಕಳೆದ 2  ದಿನದ ಹಿಂದೆಯಷ್ಟೇ ಇಂತಹದ್ದೊಂದು ಚರ್ಚೆಗೆ ನಾಂದಿ ಹಾಡಿದ್ದ ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಈ ಕುರಿತು  ಟ್ವೀಟ್‌  ಮಾಡಿದ್ದರು. 

ಈ ಚರ್ಚೆಯನ್ನು ಇದೀಗ ‘ದಿ ಫೈಲ್‌’ ವಿಸ್ತರಿಸಿದೆಯಲ್ಲದೆ ಮುಂದುವರೆಸಿದೆ. 2018 ಮತ್ತು 2019ರ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚುನಾಯಿತ ಜನಪ್ರತಿನಿಧಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ  ಪ್ರಮಾಣ ಪತ್ರಗಳನ್ನು ಆಧರಿಸಿ ಎಡಿಆರ್‌  ಸಂಸ್ಥೆ ಒಟ್ಟು ನಿವ್ವಳ ಆಸ್ತಿ  ಮೊತ್ತವನ್ನು ಸಂಕಲಿಸಿದೆ.  ಇದನ್ನೇ ಆಧರಿಸಿ ಕರ್ನಾಟಕದ ಶಾಸಕರು, ಸಂಸದರು ಚುನಾವಣಾ ಆಯೋಗದ ಮುಂದೆ ಸ್ವಯಂ ಘೋಷಿಸಿಕೊಂಡಿರುವ ಒಟ್ಟು ನಿವ್ವಳ ಆಸ್ತಿಯಲ್ಲಿ ಶೇ.1ರಷ್ಟು ಮೊತ್ತವನ್ನು ಲೆಕ್ಕಾಚಾರವನ್ನು ‘ದಿ ಫೈಲ್‌’ ಇದೀಗ ಮಂಡಿಸಿದೆ. 

ಚುನಾಯಿತ ಜನಪ್ರತಿನಿಧಿಗಳು ನಿವ್ವಳ ಆಸ್ತಿಯಲ್ಲಿನ  ಶೇ.1ರಷ್ಟನ್ನು ದಾನ ಮಾಡಿದರೆ ರಾಜ್ಯದ ಹಿತಾಸಕ್ತಿ ಮಾತ್ರವಲ್ಲದೆ ದೇಶದ ಹಿತಾಸಕ್ತಿಯನ್ನೂ ಕಾಪಾಡಿದಂತಾಗುತ್ತದೆಯಲ್ಲದೆ, ಇದೇ ಮಾದರಿಯನ್ನು ದೇಶದ ಅಷ್ಟೂ ರಾಜ್ಯಗಳು ಮತ್ತು ಕೇಂದ್ರಾಳಿತ ಪ್ರದೇಶಗಳ ಚುನಾಯಿತ ಜನಪ್ರತಿನಿಧಿಗಳು ದಾನ ಮಾಡಲು ಮುಂದಾದಲ್ಲಿ ಪಿಎಂ ಕೇರ್ಸ್ ಫಂಡ್‌ಗೆ ಕನಿಷ್ಠ 30 ಸಾವಿರ ಕೋಟಿ ರು. ಸಂಗ್ರಹವಾಗಬಹುದು.

ರಾಜ್ಯದ ಒಟ್ಟು 224 ಶಾಸಕರ ಪೈಕಿ 60 ಮಂದಿ ವಿಧಾನಸಭೆ ಸದಸ್ಯರು, ಲೋಕಸಭೆಯ 28 ಸದಸ್ಯರ ಪೈಕಿ 15 ಮತ್ತು ರಾಜ್ಯಸಭೆಯ 13 ಸದಸ್ಯರ ಪೈಕಿ 7,  ವಿಧಾನಪರಿಷತ್‌ನ ಒಟ್ಟು 75 ಸದಸ್ಯರ ಪೈಕಿ ಕೇವಲ 8 ಸದಸ್ಯರು ಘೋಷಿಸಿಕೊಂಡಿರುವ ಒಟ್ಟು ನಿವ್ವಳ ಆಸ್ತಿಯ ಮೊತ್ತವನ್ನು ಕ್ರೋಢೀಕರಿಸಿದರೆ 10,113.50  ಕೋಟಿ ರು. ಆಗಲಿದೆ. ಈ  ಒಟ್ಟು  ನಿವ್ವಳ ಆಸ್ತಿಯಲ್ಲಿ ಶೇ.1 ರಷ್ಟು ಲೆಕ್ಕಾಚಾರ ಮಾಡಿದರೆ ಇದರ ಮೊತ್ತ 100 ಕೋಟಿ ರು.ಗೆ ತಲುಪಲಿದೆ. 

ಇನ್ನು, 224  ವಿಧಾನಸಭೆ  ಸದಸ್ಯರು ಲೋಕಸಭೆಯ 28 , ರಾಜ್ಯಸಭೆಯ 13 ವಿಧಾನಪರಿಷತ್‌ನ  75 ಸದಸ್ಯರ ಒಟ್ಟು ನಿವ್ವಳ ಆಸ್ತಿಯಲ್ಲಿ ಶೇ.1ರಷ್ಟನ್ನು ಲೆಕ್ಕಾಚಾರ ಮಾಡಿದರೆ ನೂರಾರು ಕೋಟಿ ರು. ಗೂ ಹೆಚ್ಚಲಿದೆ. 

ಚುನಾಯಿತ ಜನಪ್ರತಿನಿಧಿಗಳು ಆಯೋಗದ ಮುಂದೆ ಘೋಷಿಸಿಕೊಂಡಿರುವ ನಿವ್ವಳ ಆಸ್ತಿ ವಿವರಗಳನ್ನಷ್ಟೇ ಇಲ್ಲಿ ಲೆಕ್ಕಾಚಾರ ಮಾಡಲಾಗಿದೆ. ಚುನಾಯಿತ ಜನಪ್ರತಿನಿಧಿಗಳ ಕುಟುಂಬದ ಸದಸ್ಯರು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿರುವ ದಾಖಲೆಗಳು, ಪರೋಕ್ಷವಾಗಿ ಮಾಲೀಕರಾಗಿರುವ  ಕಂಪನಿಗಳ ವಾಣಿಜ್ಯ ವಹಿವಾಟುಗಳ ಮೊತ್ತದಲ್ಲಿ ಶೇ.1ರಷ್ಟು ಲೆಕ್ಕಾಚಾರ ಮಾಡಿದರೆ ಇದರಿಂದ ಬರುವ  ಮೊತ್ತದಿಂದ ಒಂದು ರಾಜ್ಯವನ್ನೇ ಬೇಕಾದರೂ ಸುಲಭವಾಗಿ ನಡೆಸಬಹುದು ಎಂಬ ಅಭಿಪ್ರಾಯವೂ ಕೇಳಿ ಬಂದಿದೆ. 

ಕಾಂಗ್ರೆಸ್‌ನ ಡಿ  ಕೆ ಶಿವಕುಮಾರ್‌, ಎಂ ಕೃಷ್ಣಪ್ಪ,  ಬಿಜೆಪಿಯ ಉದಯ ಬಿ ಗರುಡಾಚಾರ್‌, ರಮೇಶ್‌ ಜಾರಕಿಹೊಳಿ, ಜೆಡಿಎಸ್‌ನ ಎಚ್‌ ಡಿ ಕುಮಾರಸ್ವಾಮಿ, ಬಿ  ಎಂ  ಫಾರೂಕ್‌ ಅವರೂ ಸೇರಿದಂತೆ  ಈ ಮೂರೂ ಪಕ್ಷಗಳ ಉಳಿದ ಶಾಸಕರು ಆಯೋಗದ ಮುಂದೆ ಸ್ವಯಂ ಘೋಷಿಸಿಕೊಂಡಿರುವ ಒಟ್ಟು ನಿವ್ವಳ ಆಸ್ತಿ ಮೊತ್ತವೇ ನೂರಾರು ಕೋಟಿ ದಾಟುತ್ತದೆ. 

ಆದರೆ ಬಹುತೇಕ ಶಾಸಕರು ಮತ್ತು ಚುನಾಯಿತ ಪ್ರತಿನಿಧಿಗಳು ನಿವ್ವಳ ಆಸ್ತಿಯಲ್ಲಿ ಶೇ.1ರಷ್ಟನ್ನು ದಾನವಾಗಿ ನೀಡಲು ಮುಂದಾಗದೇ ಒಂದು ವರ್ಷದ ವೇತನ ನೀಡುವ ಆತ್ಮ ವಂಚನೆ  ಮಾತುಗಳನ್ನಾಡುತ್ತಿದ್ದಾರೆ  ಎಂಬ  ಟೀಕೆಗಳು ಕೇಳಿ ಬಂದಿವೆ. 

‘ಭಾರತದ ಇಂದಿನ ಬಹುತೇಕ ಜನಪ್ರತಿನಿಧಿಗಳು ಕೋಟ್ಯಾಧೀಶರು; ಕೆಲವರಂತೂ ಸಾವಿರಾರು ಕೋಟಿ ರು.ಗೆ ಬೆಲೆಬಾಳುವ ಆಗರ್ಭ-ನವ ಶ್ರೀಮಂತರು ಚುನಾವಣಾ ಆಯೋಗಕ್ಕೆ ಕೊಟ್ಟಿರುವ ತಮ್ಮ  ಆಸ್ತಿ ವಿವರಗಳ ಆಧಾರದ ಮೇಲೆ ಶೇ.1ರಷ್ಟನ್ನೇ ಲೆಕ್ಕ ಹಾಕಿದರೆ ಸಾವಿರಾರು ಕೋಟಿ ರು.ಗಳಾಗುತ್ತವೆ. ಇದನ್ನೇ ದಾನವಾಗಿ  ನೀಡಿ ಮೇಲ್ಪಂಕ್ತಿ ಹಾಕಿಕೊಡುವ ಮೂಲಕ ದೇ‍ಶವನ್ನು ಸಂಕಷ್ಟದಿಂದ ಪಾರು ಮಾಡಬೇಕು. ಈ ವರ್ಷವಾದರೂ ಎಲ್ಲಾ ಜನಪ್ರತಿನಿಧಿಗಳು ಯಾವುದೇ ಭ್ರಷ್ಟಾಚಾರ ಅಕ್ರಮದಲ್ಲಿ ಭಾಗಿ ಆಗದೇ ಪ್ರಾಮಾಣಿಕವಾಗಿ ಕೆಲಸ  ನಿರ್ವಹಿಸಬೇಕು,’ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.

SUPPORT THE FILE

Latest News

Related Posts