‘ದಿ ಫೈಲ್‌’ ವರದಿ ಪರಿಣಾಮ; ಕೊರೋನಾ ವಿರುದ್ಧ ಹೋರಾಟಕ್ಕೆ ಶಾಸಕರ ನಿಧಿ ಬಳಕೆ

ಬೆಂಗಳೂರು; ಕೊರೊನಾ ವೈರಸ್‌ ಸೋಂಕಿನ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಲು ನಾಗರಿಕರು ‘ಮುಖ್ಯಮಂತ್ರಿಗಳ ಪರಿಹಾರ ನಿಧಿ’ ಗೆ ಉದಾರವಾಗಿ ದೇಣಿಗೆ ನೀಡಬೇಕು ಎಂದು ಜೋಳಿಗೆ ಹಿಡಿದಿದ್ದ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಇದೀಗ ಆರಂಭಿಕ ಹಂತದಲ್ಲಿ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನವನ್ನು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿದ್ದಾರೆ. 

ಈ  ಸಂಬಂಧ 2020ರ ಏಪ್ರಿಲ್‌ 1ರಂದು ಆದೇಶ ಹೊರಡಿಸಿರುವ ಯೋಜನೆ, ಸಾಂಖ್ಯಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್‌ ಅವರು, ಜಿಲ್ಲಾಧಿಕಾರಿಗಳು ತಕ್ಷಣವೇ ಆಯಾ ಜಿಲ್ಲೆಯ ಶಾಸಕರನ್ನು ಸಂಪರ್ಕಿಸಿ ಅವರಿಂದ ಪ್ರಸ್ತಾವನೆಯನ್ನು ಸ್ವೀಕರಿಸಲು ಸೂಚಿಸಿದ್ದಾರೆ.

ಈ ಕುರಿತು ‘ದಿ ಫೈಲ್‌’ 2020ರ ಮಾರ್ಚ್ 28ರಂದು ವರದಿ ಪ್ರಕಟಿಸುವ ಮೂಲಕ ಸರ್ಕಾರದ ಗಮನ ಸೆಳೆದಿತ್ತು. ಈ ವರದಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಗೊಳಗಾಗಿತ್ತು. ವರದಿ ಪ್ರಕಟಿಸಿದ 4 ದಿನದ ಅಂತರದಲ್ಲಿ ಸರ್ಕಾರದಿಂದ ಈ ಆದೇಶ ಹೊರಬಿದ್ದಿದೆ. 

‘ಕರ್ನಾಟಕ ಶಾಸಕರ  ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಪರಿಷ್ಕೃತ ಮಾರ್ಗಸೂಚಿ 2014ರ ಕಂಡಿಕೆ 2.13ರಲ್ಲಿ ಪ್ರಕೃತಿ ವಿಪತ್ತು ಮತ್ತು ವಿಕೋಪದಡಿಯಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನವನ್ನು ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿರುವುದರಿಂದ ಕೊರೊನಾ ವೈರಸ್‌ನ್ನು ನಿಯಂತ್ರಿಸಲು ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ  ನಿಧಿಯನ್ನು 2020-21ನೇ ಸಾಲಿನಲ್ಲಿ ಮಾತ್ರ ಬಳಕೆ ಮಾಡಲು ಅನುಮತಿಸಲಾಗಿದೆ. ಹಾಗೂ ಮಾನ್ಯ ಶಾಸಕರುಗಳು ಇಚ್ಛಿಸಿದಲ್ಲಿ ಸದರಿ ನಿಧಿಯನ್ನು ಮುಖ್ಯಮಂತ್ರಿಯವರ ‘ಸಿಎಂ  ಕೋವಿಡ್‌ 19 ಪರಿಹಾರ ನಿಧಿಗೆ ದೇಣಿಗೆ ನೀಡಲು ಸಹ ಅನುಮತಿಸಲಾಗಿದೆ,’ ಎಂದು ಆದೇಶಿಸಲಾಗಿದೆ. 

ಎಲ್ಲಾ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಜಿಲ್ಲೆಗಳ  ಶಾಸಕರನ್ನು ಸಂಪರ್ಕಿಸಿ ಅವರ ಪ್ರಸ್ತಾವನೆಯನ್ನು ತುರ್ತಾಗಿ  ಲಭ್ಯವಿರುವ ಪಿ ಡಿ ಖಾತೆಯ ಅನುದಾನದಿಂದ ತಲಾ 2.00 ಕೋಟಿ ರು.ಗಳಿಗೆ ಸೀಮಿತಗೊಳಿಸಿ  ಕ್ರಮ ವಹಿಸತಕ್ಕದ್ದು ಎಂದೂ ಆದೇಶದಲ್ಲಿ ಸೂಚಿಸಲಾಗಿದೆ.   

2018-19ನೇ ಸಾಲಿನಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಎಲ್ಲಾ ಸದಸ್ಯರುಗಳಿಗೆ ಒಟ್ಟು 481.69 ಕೋಟಿ ರು. ಬಿಡುಗಡೆಯಾಗಿದೆ. 2019-20ನೇ ಸಾಲಿನಲ್ಲಿ 299.67 ಕೋಟಿ ರು ಇದೆ. ಅದೇ ರೀತಿ 2019ರ ಏಪ್ರಿಲ್‌ 1ರ ಅಂತ್ಯಕ್ಕೆ ರಾಜ್ಯದ ಜಿಲ್ಲಾಧಿಕಾರಿಗಳ ಪಿ ಡಿ ಖಾತೆಗಳಲ್ಲಿ 948.97 ಕೋಟಿ ರು. ಇದೆ.  

ಹಾಗೆಯೇ 2020ರ ಜನವರಿ ಅಂತ್ಯಕ್ಕೆ ಜಿಲ್ಲಾಧಿಕಾರಿಗಳ ಉಳಿತಾಯ ಖಾತೆಯಲ್ಲಿ 648.70 ಕೋಟಿ ರು. ಉಳಿದಿದೆ. ಅದೇ ರೀತಿ 2019-20ನೇ ಸಾಲಿನಲ್ಲಿ ಇದೇ ಯೋಜನೆಯಡಿ 2020ರ ಮಾರ್ಚ್‌ 17ರ ಅಂತ್ಯಕ್ಕೆ 188.67 ಕೋಟಿ ರು  ಸೇರಿದಂತೆ ಒಟ್ಟು 837.67 ಕೋಟಿ ರು. ಲಭ್ಯವಿರುವುದು ತಿಳಿದು ಬಂದಿದೆ. 

ಬಹುತೇಕ ಶಾಸಕರು ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನವನ್ನು ಬಳಕೆ  ಮಾಡಿಕೊಳ್ಳದ ಕಾರಣ ಜಿಲ್ಲಾಧಿಕಾರಿಗಳ ಪಿ ಡಿ ಖಾತೆಯಲ್ಲಿ ಉಳಿದಿತ್ತು. 

Your generous support will help us remain independent and work without fear.

Latest News

Related Posts