ಲಾಕ್‌ಡೌನ್‌ ; ರಕ್ತ ಶೇಖರಣೆಯಲ್ಲಿನ ಕೊರತೆ ಗಂಭೀರ ರೋಗಿಗಳ ಮೇಲೆ ಪರಿಣಾಮ ಬೀರಿತೇ ?

ಬೆಂಗಳೂರು; ಕೊರೊನಾ ವೈರಸ್‌ನ್ನು ತಡೆಗಟ್ಟುವ ನಿಟ್ಟಿನಲ್ಲಿ ಘೋಷಿಸಿರುವ ಲಾಕ್‌ಡೌನ್‌, ರಕ್ತ ಶೇಖರಣೆಯ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ. ಕಡಿಮೆ  ಸಿಬ್ಬಂದಿಯೊಂದಿಗೆ ಕೆಲಸ  ಮಾಡುತ್ತಿರುವ ಸಾರ್ವಜನಿಕ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ರಕ್ತ ಸರಬರಾಜಿನಲ್ಲಿ ಕೊರತೆ ಎದುರಾಗಿದೆ. ಇದು ಕ್ಯಾನ್ಸರ್‌ ಮತ್ತು ತಲಸ್ಮೇಮಿಯಾದಿಂದ ಬಳಲುತ್ತಿರುವ ರೋಗಿಗಳು ಮತ್ತು ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾಗುವ  ರೋಗಿಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. 

ಕೋವಿಡ್‌-19 ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನಿಗಳ  ಸಂಖ್ಯೆಯಲ್ಲಿಯೂ ಇಳಿಮುಖವಾಗಿದೆ ಎಂದು ತಿಳಿದು ಬಂದಿದೆ. ಇದೇ ಪರಿಸ್ಥಿತಿ ಮಹಾರಾಷ್ಟ್ರ, ಪಶ್ಚಿಮ ಬಂಗಾಳ  ಮತ್ತು ಒಡಿಶಾದಲ್ಲಿಯೂ ಇದೆ.  

‘ದಿ ಫೈಲ್‌’ ಜತೆ  ಮಾತನಾಡಿದ ರೆಡ್‌ಕ್ರಾಸ್‌  ಸಂಸ್ಥೆಯ ಕರ್ನಾಟಕ ಘಟಕದ  ಪ್ರಧಾನ ಕಾರ್ಯದರ್ಶಿ ಪ್ರಶಾಂತ ಚಂದ್ರಶೇಖರ್‌ ‘ರಕ್ತ ಹೀನತೆಯಿಂದ ಬಳಲುತ್ತಿರುವವರು, ಡಯಾಲಿಸಿಸ್‌ಗೆ ಒಳಗಾಗುತ್ತಿರುವವರು ಸೇರಿದಂತೆ ರಕ್ತದ ಅವಶ್ಯಕತೆ ಇರುವ  ರೋಗಿಗಳಿಗೆ  ರಕ್ತ  ಪೂರೈಕೆ  ಮಾಡುವುದು ತುರ್ತಿನ  ಕೆಲಸ. ಆದರೀಗ ಲಾಕ್‌ಡೌನ್‌ ಆದ ದಿನದಿಂದಲೂ ಹತ್ತಿರದ ಪ್ರದೇಶಗಳಲ್ಲಿಯೂ ಹೊಸ ದಾನಿಗಳನ್ನು ಹುಡುಕುವುದು ಕೂಡ ಒಂದು ಸವಾಲಾಗಿದೆ,’ ಎನ್ನುತ್ತಾರೆ 

ರಕ್ತದಾನಿಗಳು ಮತ್ತು ಜನರು ರಕ್ತ ಬ್ಯಾಂಕ್‌ಗಳಿಗೆ ಬರಲು ಹಿಂದೇಟು ಹಾಕುತ್ತಿರುವುದಕ್ಕೆ ಕೋವಿಡ್‌-19 ಸೋಂಕಿಗೆ ಒಳಗಾಗುವ ಭೀತಿಯೇ ಕಾರಣ. ಅಲ್ಲದೆ ವಿಶೇಷವಾಗಿ  ಆಸ್ಪತ್ರೆಯೊಳಗಿನ ರಕ್ತ ಬ್ಯಾಂಕ್‌ಗಳಿಗೆ ಹೋಗಲು ಬಯಸುತ್ತಿಲ್ಲ ಎನ್ನುತ್ತಾರೆ ರೋಗಶಾಸ್ತ್ರಜ್ಞರೊಬ್ಬರು. 

ರಾಜ್ಯದ ಬೆಂಗಳೂರು ನಗರ  ಸೇರಿದಂತೆ ವಿವಿಧೆಡೆಯೂ ರಕ್ತದಾನ ಶಿಬಿರ ನಿಂತಿದೆ. ತುರ್ತು ಪ್ರಕರಣಗಳಿಗಷ್ಟೇ ರಕ್ತ ಸಂಗ್ರಹವಿಟ್ಟುಕೊಂಡಿರುವ ರೆಡ್‌ ಕ್ರಾಸ್‌  ಸಂಸ್ಥೆ, ಅಪಾರ್ಟ್‌ಮೆಂಟ್‌ ಸೇರಿದಂತೆ ಇನ್ನಿತರೆ ಕಡೆಗಳಿಗೆ  ಸಂಸ್ಥೆಯ ಕಾರ್ಯಕರ್ತರೇ ತೆರಳಿ ರಕ್ತ ಸಂಗ್ರಹಿಸುವ ಅನಿವಾರ್ಯತೆ ಎದುರಾಗಿದೆ. ಆದರೂ ಅಲ್ಲಿನ ನಿವಾಸಿಗಳು ಕೋವಿಡ್‌-19 ಭೀತಿ ಎದುರಿಸುತ್ತಿದ್ದಾರೆ. ಹೀಗಾಗಿ ಅಲ್ಲಿಯೂ ಉತ್ತಮ ಸ್ಪಂದನೆ ದೊರೆತಿಲ್ಲ  ಎಂದು ಗೊತ್ತಾಗಿದೆ. 

ಪ್ರತಿ ವರ್ಷ 4 ಲಕ್ಷ  ಯುನಿಟ್‌ಗಳ ಪ್ರಮಾಣದಲ್ಲಿ ರಕ್ತ ಸಂಗ್ರಹದಲ್ಲಿ ಕೊರತೆ ಇರುತ್ತದೆ. ಅದರಲ್ಲೂ ಬೆಂಗಳೂರು ನಗರದಲ್ಲಿ ಪ್ರತಿ ನಿತ್ಯ 2,500 ಯುನಿಟ್‌ಗಳಷ್ಟು ರಕ್ತಕ್ಕೆ ಬೇಡಿಕೆ ಇದೆ. ಸದ್ಯಕ್ಕೆ ಬೆಂಗಳೂರು ನಗರದಲ್ಲಿ 100 ಯುನಿಟ್‌ ಮಾತ್ರ ರಕ್ತ ಸಂಗ್ರಹವಿದೆ. ಕೆಂಪು ರಕ್ತ ಕಣಕ್ಕೆ  ಬೇಡಿಕೆ  ಇದೆಯಲ್ಲದೆ, ನೆಗೆಟಿವ್‌ ಗ್ರೂಪ್‌ ರಕ್ತವೇ ಇಲ್ಲದಂತಾಗಿದೆ ಎಂದು ತಿಳಿದು ಬಂದಿದೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಇದಕ್ಕಿಂತ ಕಠಿಣ ಪರಿಸ್ಥಿತಿ ಇದೆ ಎನ್ನಲಾಗಿದೆ. 

ರಾಜ್ಯದಲ್ಲಿ ಒಟ್ಟು 28  ರಕ್ತದ  ಬ್ಯಾಂಕ್‌ಗಳಿವೆ. ಲಾಕ್‌ಡೌನ್‌ಗೂ ಮೊದಲು ಪ್ರತಿ ದಿನ ಸ್ವಯಂಪ್ರೇರಿತ ದಾನಿಗಳಿಂದ 4,000 ಯುನಿಟ್‌ ಸಂಗ್ರಹವಾಗುತ್ತಿತ್ತು. ಇದನ್ನು ಬ್ಲಡ್‌ ಬ್ಯಾಂಕ್‌ಗಳಿಗೆ ಕಳಿಸಿ  ಪ್ರತ್ಯೇಕಿಸಲಾಗುತ್ತಿತ್ತು. ಈ ಮೂಲಕವೇ ಪ್ಲೆಟ್‌ಲೆಟ್ಸ್‌ ಮತ್ತು ವಿವಿಧ ಗುಂಪಿನ ರಕ್ತ ಪೂರೈಕೆ ಆಗುತ್ತಿತ್ತು. ಆದರೀಗ ಲಾಕ್‌ಡೌನ್‌ನಿಂದಾಗಿ ಸಂಗ್ರಹವಾಗುತ್ತಿದ್ದ ಯುನಿಟ್‌ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೀಗಾಗಿ ಬ್ಲಡ್‌ ಬ್ಯಾಂಕ್‌ಗಳಲ್ಲಿಯೂ ರಕ್ತದ  ಕೊರತೆ ಎದುರಾಗುವ  ಸಾಧ್ಯತೆಗಳಿವೆ  ಎಂದು ತಿಳಿದು ಬಂದಿದೆ.  

ಇಂಡಿಯನ್‌ ರೆಡ್‌ ಕ್ರಾಸ್‌ ಘಟಕ, ಎಲ್ಲಾ  ರಕ್ತ ಘಟಕಗಳಿಗೂ ಕೇಂದ್ರವಾಗಿತ್ತು. ತುಂಬಾ ಪ್ರಮುಖವಾಗಿ ಸಾರ್ವಜನಿಕ ಆಸ್ಪತ್ರೆಗಳು ಇದನ್ನೇ ನೆಚ್ಚಿಕೊಂಡಿವೆ. ಸ್ವಯಂ ಪ್ರೇರಿತ ರಕ್ತದಾನಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿರುವ  ಕಾರಣ ಸಾರ್ವಜನಿಕ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ರಕ್ತದ ಅಗತ್ಯ  ಹೆಚ್ಚಿದೆ. ಕಾರ್ಪೋರೇಟ್‌ ಆಸ್ಪತ್ರೆಗಳು ತಮ್ಮ ಹಂತದಲ್ಲಿಯೇ ನಿರ್ವಹಿಸುತ್ತಿರುವ ಕಾರಣ ಅಲ್ಲಿನ ರೋಗಿಗಳು ರಕ್ತಕ್ಕಾಗಿ ಪರದಾಡುವ ಸ್ಥಿತಿ ಇರುವುದಿಲ್ಲ. 

ದೇಶದ ಜನಸಂಖ್ಯೆಯ ಶೇ.1ರಷ್ಟು ರಕ್ತದ ಅಗತ್ಯವನ್ನು ಅದರ ರಕ್ತದ ಅಗತ್ಯಗಳ ಅಂದಾಜಿನಂತೆ ಬಳಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ. ಇದರ ಪ್ರಕಾರ, ಭಾರತವು ವರ್ಷಕ್ಕೆ 1.9 ಮಿಲಿಯನ್ ಯುನಿಟ್ ರಕ್ತದ ಕೊರತೆಯನ್ನು ಹೊಂದಿತ್ತು. 

ಮಹಾರಾಷ್ಟ್ರದ ಪರಿಸ್ಥಿತಿ ಕರ್ನಾಟಕಕ್ಕಿಂತಲೂ ಭಿನ್ನವಾಗಿದೆ. ಲಾಕ್‌ಡೌನ್‌  ಘೋಷಣೆ ಆಗುವ ಮೊದಲೇ ರಕ್ತದ ಕೊರತೆ ಇದೆ  ಎಂದು ಅಲ್ಲಿನ ಆರೋಗ್ಯ ಸಚಿವರು ಘೋಷಿಸಿದ್ದರಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಪ್ರೇರಿತವಾಗಿ ಮುಂದೆ ಬಂದು ರಕ್ತದಾನ ಮಾಡಬೇಕು ಎಂದು ಮನವಿ  ಮಾಡಿದ್ದರು.  ಆದರೀಗ ಅಲ್ಲಿಯೂ ಕೋವಿಡ್‌-19 ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ  ಹೆಚ್ಚುತ್ತಲೇ ಇದೆ. ಪಶ್ಚಿಮ ಬಂಗಾಳ ಮತ್ತು ಒಡಿಶಾದಿಂದ ಇದೇ ರೀತಿಯ ಪರಿಸ್ಥಿತಿಯಿದೆ. 

ಹಿಮೋಗ್ಲೋಬಿನ್‌ ಮಟ್ಟವನ್ನು ಅವಲಂಬಿಸಿ ಪ್ರತಿ ದಿನ 15-18 ದಿನಗಳಿಗೊಮ್ಮೆ  ರಕ್ತದ ವರ್ಗಾವಣೆ  ಅಗತ್ಯವಿರುವ ಪ್ರಕರಣಗಳ ಮೇಲೆ ಲಾಕ್‌ಡೌನ್‌ ಗಾಢ ಪರಿಣಾಮ ಬೀರಿವೆ. 

ಒಂದು ವೇಳೆ ಜನರು ಬಂದಾಗ ಯಾರು ರಕ್ತದಾನ ಮಾಡುತ್ತಾರೆ ಎಂಬ ಬಗ್ಗೆ ವೈದ್ಯರು ಜಾಗರೂಕರಾಗಿರಬೇಕು. ದಾನಿಗಳಿಗೆ ಪ್ರಯಾಣದ ಇತಿಹಾಸದ ಬಗ್ಗೆ ಅಥವಾ ವಿದೇಶ ಪ್ರವಾಸ ಮಾಡಿದವರೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಪ್ರಶ್ನಿಸಬೇಕು ಎಂದು  ರೆಡ್‌ ಕ್ರಾಸ್‌ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ರಕ್ತದ ಕೊರತೆ ಇರುವ  ಕಾರಣ ಕೆಲ ಸರ್ಕಾರಿ ಆಸ್ಪತ್ರೆಗಳಲ್ಲಿ ಈಗಾಗಲೇ ನಿಗದಿಯಾಗಿರುವ ಎಲ್ಲಾ ಬಗೆಯ ಶಸ್ತ್ರಚಿಕಿತ್ಸೆಗಳನ್ನು ತಡೆಹಿಡಿಯಲಾಗಿದೆ ಎಂದು ತಿಳಿದು ಬಂದಿದೆಯಲ್ಲದೆ, ಅನಿವಾರ್ಯವಲ್ಲದ ಶಸ್ತ್ರಚಿಕಿತ್ಸೆಗಳನ್ನು ತಡೆಹಿಡಿದಿದ್ದರೂ ಪ್ರತಿದಿನ ರಕ್ತದ ಅಗತ್ಯವಿದ್ದೇ ಇರುತ್ತದೆ. 

‘ದಿ ಫೈಲ್‌’ ಜತೆ ಮಾತನಾಡಿದ ಸಂಕಲ್ಪ ಇಂಡಿಯಾ ಫೌಂಡೇಷನ್‌ ನ ಶೋಮಿ ‘ಲಾಕ್‌ಡೌನ್‌ ಘೋಷಣೆ ಆದ ದಿನದಿಂದ 14 ಶಿಬಿರಗಳು ಈಗಾಗಲೇ ರದ್ದುಗೊಂಡಿವೆ. ಇದರಿಂದ ಕ್ಯಾನ್ಸರ್‌ ಮತ್ತು ತಲಸ್ಮೇಮಿಯಾ ರೋಗಿಗಳು ಸಂಕಷ್ಟದಲ್ಲಿ ಸಿಲುಕುವ ಸಾಧ್ಯತೆಗಳಿವೆ. ಸ್ವಯಂ ಪ್ರೇರಿತ ರಕ್ತದಾನಿಗಳು ಹತ್ತಿರದ  ಕೇಂದ್ರಗಳಿಗೆ ತೆರಳಿ ರಕ್ತದಾನ ಮಮಾಡಲು ಮುಂದಾಗಬೇಕು,’ಎಂದು ಕೋರುತ್ತಿದ್ದೇವೆ ಎಂದು ಹೇಳಿದರು.

ತಲಸ್ಮೇಮಿಯಾ ರೋಗಿಗಳಿಗೆ 15-20 ದಿನಗಳಿಗೊಮ್ಮೆ ರಕ್ತವನ್ನು ಬದಲಾಯಿಸುವ ಅವಶ್ಯಕತೆ ಇದೆ. ಈ ರೋಗಿಗಳಿಗೆ ರಕ್ತ  ಸರಬರಾಜು ಮಾಡುವುದು ಒಂದು ನಿರಂತರ ಪ್ರಕ್ರಿಯೆ. ಸಂಕಲ್ಪ ಇಂಡಿಯಾ ಫೌಂಡೇಷನ್‌ ನೀಡಿರುವ ಮಾಹಿತಿಯಂತೆ ಕರ್ನಾಟಕದಲ್ಲಿ 900 ಮಕ್ಕಳು ತಲಸ್ಮೇಮಿಯಾದಿಂದ ಬಳಲುತ್ತಿದ್ದಾರೆ. ಬೆಂಗಳೂರಿನಲ್ಲಿ 60 ಪ್ರಕರಣಗಳಿವೆ. 

ಲಾಕ್‌ ಡೌನ್‌ಗಿಂತ ಮೊದಲು ಸಂಕಲ್ಪ ಫೌಂಡೇಷನ್‌ 12 ಶಿಬಿರಗಳನ್ನು ನಡೆಸಿತ್ತು. ಆದರೆ ಲಾಕ್‌ಡೌನ್‌ ಆದ ನಂತರ  ಶಿಬಿರಗಳನ್ನು ನಡೆಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎನ್ನುವ ಶೋಮಿ,  ಏಪ್ರಿಲ್‌ ನಿಂದ ಜುಲೈ ಮಧ್ಯದವರೆಗೆ ರಕ್ತದ ಕೊರತೆ ಕಾಣಲಿದೆ. ಹಾಲಿ 16,000 ಯುನಿಟ್‌ ಇದ್ದರೂ ಇದು ಬೇಸಿಗೆ ಅವಧಿಗಷ್ಟೇ ಸಾಕಾಗಲಿದೆ ಎಂದು ಕಳವಳ ವ್ಯಕ್ತಪಡಿಸುತ್ತಾರೆ. 

ಇನ್ನು, ಕ್ಯಾನ್ಸರ್‌ ರೋಗಿಗಳಿಗೆ ಪ್ಲೇಟ್‌ಲೆಟ್ಸ್‌ ಸರಬರಾಜು  ಮಾಡಲೇಬೇಕಾದ ಅನಿವಾರ್ಯತೆ ಇದೆ. ಅದೇ ರೀತಿ ಕಿಮೋ ಥೆರಪಿಗೆ ಒಳಗಾಗುವರು ಮತ್ತು ತಲಸ್ಮೇಮಿಯಾ ರೋಗಿಗಳಿಗೆ 2-3 ದಿನಗಳಿಗೊಮ್ಮೆ ರಕ್ತ ಸರಬರಾಜು ಮಾಡಬೇಕಿರುತ್ತದೆ. ದಿನವೊಂದಕ್ಕೆ  ಸರಾಸರಿ 50-60 ಯುನಿಟ್‌ಗಳು ಬೇಕು. ಆದರೆ ಕಿದ್ವಾಯಿಯಲ್ಲಿ ರಕ್ತ  ಸಂಗ್ರಹ ಕಡಿಮೆ ಇದೆ ಎಂದು ತಿಳಿದು ಬಂದಿದೆ. 

the fil favicon

SUPPORT THE FILE

Latest News

Related Posts