ಅರ್ಹ ರೈತರಿಗೆ ಉಚಿತವಾಗಿ ವಿತರಿಸುವ ಉದ್ದೇಶ ಹೊಂದಿರುವ ಮೇವಿನ ಬೀಜ ಖರೀದಿ ಪ್ರಕ್ರಿಯೆಯಲ್ಲಿ 5 ಕೋಟಿ ರು.ಗೂ ಹೆಚ್ಚಿನ ಮೊತ್ತದ ಅಕ್ರಮ ನಡೆದಿದೆ! ಮೇವಿನ ಬೀಜ ಹಗರಣ ಸುಳಿಯಲ್ಲಿ ಸಿಲುಕಿರುವ ಬಿಜೆಪಿ ಸರ್ಕಾರ, ರಾಜ್ಯದ ಬೊಕ್ಕಸಕ್ಕೆ ಇನ್ನಷ್ಟು ಹೊರೆ ಹೊರಿಸಿದೆ.
ಈ ಅವ್ಯವಹಾರವನ್ನು ಆರಂಭಿಕ ಹಂತದಲ್ಲೇ ತಡೆಹಿಡಿದಿದ್ದ ಪಶು ಸಂಗೋಪನೆ ಇಲಾಖೆಯ ಕಾರ್ಯದರ್ಶಿ ರಶ್ಮಿ ಮಹೇಶ್ ಅವರನ್ನು ವರ್ಗಾವಣೆಗೊಳಿಸಿದ ಅತ್ಯಲ್ಪ ದಿನಗಳಲ್ಲೇ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಲು ಬಿಜೆಪಿ ಸರ್ಕಾರ ನೀಡಿರುವ ನಿರ್ದೇಶನವೇ ಅಕ್ರಮಕ್ಕೆ ಇನ್ನಷ್ಟು ಪುಷ್ಠಿ ಕೊಟ್ಟಂತಾಗಿದೆ.
2019-20ನೇ ಸಾಲಿಗೆ ಮೇವಿನ ಬೀಜ ಖರೀದಿಸಲು ಟೆಂಡರ್ ಕರೆದು ದರ ಅಂತಿಮಗೊಳಿಸಬೇಕಿದ್ದ ಹಿಂದಿನ ಸಮ್ಮಿಶ್ರ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ. ಸರ್ಕಾರದ ಮಟ್ಟದಲ್ಲಿ ಲಾಬಿ ಮಾಡಿದ್ದ ಖಾಸಗಿ ಏಜೆನ್ಸಿಗಳ ಪರ ಸಚಿವ ಪ್ರಭು ಚೌಹಾಣ್ ವಕಾಲತ್ತು ಹಾಕಿರುವುದು ಬೊಕ್ಕಸಕ್ಕೆ ನೇರ ಹೊಡೆತ ಕೊಟ್ಟಂತಾಗಿದೆ.
ಮೇವಿನ ಬೀಜ ಪೂರೈಸುವ ಖಾಸಗಿ ಏಜೆನ್ಸಿಗಳೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಕ್ಕೆ ಗುರಿಯಾಗಿರುವ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಉನ್ನತ ಅಧಿಕಾರಿಗಳು, ರಾಜ್ಯ ಬಿಜೆಪಿ ಸರ್ಕಾರವನ್ನು ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ದೂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’ಗೆ ಕೆಲ ದಾಖಲೆಗಳು ಲಭ್ಯವಾಗಿವೆ.
ಬೆಂಗಳೂರು ಮೂಲದ ಖಾಸಗಿ ಏಜೆನ್ಸಿಯೊಂದು ಮಾರುಕಟ್ಟೆಯಲ್ಲಿ ಸದ್ಯ ಪ್ರತಿ ಕೆ ಜಿ ಗೆ ಇರುವ ದರಕ್ಕಿಂತಲೂ ಹತ್ತು ಪಟ್ಟು ಹೆಚ್ಚು ದರ ನಮೂದಿಸಿದ್ದನ್ನು ಪತ್ತೆ ಹಚ್ಚಿದ್ದ ರಶ್ಮಿ ಮಹೇಶ್ ಅವರು ಇದಕ್ಕೆ ಸಂಬಂಧಿಸಿದ ಏಕ ಕಡತವನ್ನು ತಡೆ ಹಿಡಿದಿದ್ದರು.
ಅಲ್ಲದೆ, ದರ ಗುತ್ತಿಗೆ ಒಪ್ಪಂದ ರದ್ದುಪಡಿಸಿ ನಿಗದಿತ ಅನುದಾನದಲ್ಲಿಯೇ ಮುಕ್ತ ಟೆಂಡರ್ ಕರೆದು ಹೆಚ್ಚಿನ ಫಲಾನುಭವಿಗಳಿಗೆ ಮೇವಿನ ಬೀಜ ದೊರಕಿಸಿಕೊಡಲು ಮುಂದಾಗಿದ್ದರು ಎಂದು ವಿಶ್ವಸನೀಯ ಅಧಿಕಾರಿಯೊಬ್ಬರು ‘ದಿ ಫೈಲ್’ ಗೆ ತಿಳಿಸಿದ್ದಾರೆ.
ಖಾಸಗಿ ಏಜೆನ್ಸಿಗಳ ಒತ್ತಡಕ್ಕೆ ಮಣಿಯದ ರಶ್ಮಿ ಮಹೇಶ್ ಅವರನ್ನು 2020ರ ಜನವರಿ 17ರಂದು ಬಿಜೆಪಿ ಸರ್ಕಾರ ವರ್ಗಾವಣೆ ಮಾಡಿತ್ತು. ವರ್ಗಾವಣೆ ಮಾಡಿದ 15 ದಿನಗಳ ಅಂತರದಲ್ಲಿ ಅಂದರೆ 2020ರ ಫೆ. 3 ರಂದು ಮೇವಿನ ಬೀಜ ಖರೀದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ಕಾರ ನಿರ್ದೇಶನ ನೀಡಿತ್ತು. ಮೇವಿನ ಬೀಜ ಖರೀದಿಯಲ್ಲಿ ಅವ್ಯವಹಾರವನ್ನು ತಡೆಹಿಡಿದಿದ್ದೇ ಇವರ ವರ್ಗಾವಣೆಗೆ ಮೂಲ ಕಾರಣ ಎಂದು ಹೇಳಲಾಗಿದೆ.
30 ಲಕ್ಷ ರು.ಗಳಲ್ಲಿ ಖರೀದಿಸಬಹುದಾಗಿದ್ದ ಮೇವಿನ ಬೀಜವನ್ನು ಹತ್ತು ಪಟ್ಟು ಹೆಚ್ಚಳ ಇರುವ ದರದಲ್ಲಿ ಖರೀದಿಸಲು ಮುಂದಾಗಿರುವ ಅಧಿಕಾರಿಗಳು, ಸರ್ಕಾರಕ್ಕೆ 5 ಕೋಟಿ ರು. ಅಧಿಕ ಮೊತ್ತದ ಹೊರೆಗೆ ಕಾರಣರಾಗಿದ್ದಾರೆ. ಏಜೆನ್ಸಿ ಪರ ವಕಾಲತ್ತು ಹಾಕಿರುವ ಕೆಲ ಹಿರಿಯ ಅಧಿಕಾರಿಗಳು, ಮುಕ್ತ ಟೆಂಡರ್‌ಗೆ ಅವಕಾಶ ಕೊಡದೆ ದರ ಗುತ್ತಿಗೆ ಒಪ್ಪಂದಕ್ಕೆ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು ಮೂಲದ ಖಾಸಗಿ ಏಜೆನ್ಸಿ ನೆಪ ಮಾತ್ರಕ್ಕೆ ಗುತ್ತಿಗೆ ಪಡೆದು ವಿದೇಶಿ ಕಂಪನಿಗಳಿಗೆ ಉಪ-ಗುತ್ತಿಗೆ ನೀಡುವ ಸಂಚು ಕೂಡ ಇದರಲ್ಲಿದೆ ಎಂಬ ಆರೋಪ ಕೇಳಿ ಬಂದಿದೆ.
ಹಲವು ವರ್ಷಗಳಿಂದಲೂ ಮೇವಿನ ಬೀಜ ಖರೀದಿಸುತ್ತಿದ್ದರೂ ಹಾಲಿ ಏಜೆನ್ಸಿ ನಮೂದಿಸಿರುವ ದರ ಹತ್ತುಪಟ್ಟು ಹೆಚ್ಚಿದೆ. ಹಿಂದಿನ ವರ್ಷಗಳಲ್ಲಿ ಪ್ರತಿ ಕೆ ಜಿ ಗೆ 50 ರಿಂದ 60 ರು. ದರ ನೀಡಿ ಖರೀದಿಸಲಾಗುತ್ತಿತ್ತು. ಆದರೆ ಏಜೆನ್ಸಿಯೊಂದು 2019-20ನೇ ಸಾಲಿಗೆ ಪ್ರತಿ ಕೆ ಜಿ ಗೆ 570 ರು. ದರ ನಮೂದಿಸಿದೆ. ಇದೇ ದರವನ್ನೇ ಒಪ್ಪಿಕೊಂಡಿರುವ ಸರ್ಕಾರ ಮೇವು ಬೀಜ ಪಡೆಯುವ ಫಲಾನುಭವಿಗಳ ಸಂಖ್ಯೆಯನ್ನು ಕಡಿತಗೊಳಿಸಿದೆ.
ಪ್ರತಿ ಕೆ ಜಿ ಗೆ 570 ರು. ದರದಂತೆ ಖರೀದಿಸಿದಲ್ಲಿ ಜಿಲ್ಲೆಯೊಂದಕ್ಕೆ ಕೇವಲ 1,700 ಕ್ವಿಂಟಾಲ್ ಪೂರೈಕೆಯಾಗಲಿದೆ. ಅಲ್ಲದೆ ಇದರಿಂದ ಅರ್ಹ ಫಲಾನುಭವಿಗಳ ಸಂಖ್ಯೆಯೂ ಕಡಿಮೆ ಆಗಲಿದೆ. ಅಂದಾಜು 100 ಮಂದಿ ರೈತರಿಗೆ ಸಿಗುವ ಸೌಲಭ್ಯ ಕೇವಲ 5 ಮಂದಿಗಷ್ಟೇ ಸಿಗಲಿದೆ. ಅದೇ ಪ್ರತಿ ಕೆ ಜಿ ಗೆ 50 ರು.ನಂತೆ ಖರೀದಿಸಿದರೆ ಜಿಲ್ಲೆಯೊಂದಕ್ಕೆ 19,000 ಕ್ವಿಂಟಾಲ್ ಪ್ರಮಾಣದಲ್ಲಿ ಮೇವಿನ ಬೀಜ ಲಭ್ಯವಾಗಲಿದೆ. ಇದರಿಂದ ಸಹಜವಾಗಿಯೇ ಫಲಾನುಭವಿಗಳ ಸಂಖ್ಯೆಯೂ ಹೆಚ್ಚಲಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ನಾಲ್ಕು ಲಕ್ಷ ರೈತರಿಗೆ ಮೇವಿನ ಬೀಜ ವಿತರಣೆ ಮಾಡಲಾಗಿತ್ತು. ರೈತರು ತಮಗೆ ಬೇಕಾದಷ್ಟು ಮೇವು ಬಳಸಿ ಉಳಿದದನ್ನು ಇಲಾಖೆಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಿತ್ತು. ಕುಡಿಯುವ ನೀರಿಗೆ ಎದುರಾಗಿರುವ ತತ್ವಾರ ಸಂದರ್ಭದಲ್ಲಿ ಮೇವಿನ ಬೀಜ ಮೊಳಕೆಯೊಡಿಸುವುದು ಅಷ್ಟು ಸುಲಭವಲ್ಲ.
ಸಕಾಲಕ್ಕೆ ಮಳೆ ಆಗದ ಕಾರಣ ರಾಜ್ಯದಲ್ಲಿ ಈಗಲೂ ಕೆಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ತೇವಾಂಶ ಕೊರತೆಯಿಂದ ಅಂತರ್ಜಲ ಮಟ್ಟ ಗಣನೀಯ ಕುಸಿದಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಖುಷ್ಕಿ, ನೀರಾವರಿ ಭಾಗದ ಜಮೀನುಗಳು ಕಳೆದ ಹಲವು ತಿಂಗಳಿಂದ ನೀರು ಕಾಣದೇ ಬಿರಿದಿವೆ.
2012ರ ಜಾನುವಾರು ಗಣತಿ ಪ್ರಕಾರ, ರಾಜ್ಯದಲ್ಲಿ 34,70,505 ಎಮ್ಮೆ ಸೇರಿ 95,16,484 ಜಾನುವಾರುಗಳಿವೆ. ಗೋಶಾಲೆಗಳಲ್ಲಿ ಒಣ ಮೇವು ಇದೆ ಎಂದು ಸರ್ಕಾರ ಹೇಳುತ್ತಿದೆಯಾದರೂ ಜಾನುವಾರುಗಳಿಗೆ ಸಾಲುತ್ತಿಲ್ಲ. ವಿವಿಧೆಡೆ ಹಸಿ ಮೇವಿಗೆ ಬೇಡಿಕೆ ವ್ಯಕ್ತವಾಗಿದೆ. ಹಸಿ ಮೇವು ಖರೀದಿ ಅಸಾಧ್ಯ. ಮೇವು ಬೆಳೆಸಲು ಬೀಜ ವಿತರಿಸಲಾಗುತ್ತಿದೆ. ಹಿಂದಿನ ವರ್ಷದಲ್ಲಿ ಆಯಾ ಜಿಲ್ಲೆಯ ಪಶುಪಾಲನಾ ಇಲಾಖೆ ಸಲ್ಲಿಸಿದ ಬೇಡಿಕೆಯನ್ವಯ ರಾಜ್ಯದ 30 ಜಿಲ್ಲೆಗಳಿಗೆ ಒಟ್ಟು 3.90ಲಕ್ಷ ಮೇವಿನ ಬೀಜದ ಪ್ಯಾಕೆಟ್ ವಿತರಿಸಲಾಗಿತ್ತು.
ಇದೇ ಅವಧಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ‘ಸಮೃದ್ಧ ಮೇವು, ಗೋವುಗಳ ನಲಿವು’ ಯೋಜನೆಗೆ ಸಾವಿರಾರು ರೈತರು ಹೆಸರು ನೋಂದಾಯಿಸಿಕೊಂಡಿದ್ದರು. ರೈತರ ಅರ್ಜಿಗಳಿಗೆ ಅನುಮೋದನೆ ನೀಡಿದ್ದ ಇಲಾಖೆ ಉಚಿತವಾಗಿ ಮೇವಿನ ಬೀಜದ ಕಿಟ್ ವಿತರಿಸಿತ್ತು.