ಲೋಕಾಯುಕ್ತರ ಶಿಫಾರಸ್ಸು ಕಡೆಗಣನೆ; ವರದಿಗಳ ಪರಿಶೀಲನೆ ಸಂಪ್ರದಾಯಕ್ಕೆ ಮನ್ನಣೆ

ಬೆಂಗಳೂರು; ಕರ್ತವ್ಯಲೋಪ, ಅಧಿಕಾರ ಮತ್ತು ಹಣಕಾಸು ದುರುಪಯೋಗ, ನಿಯಮಬಾಹಿರ ಚಟುವಟಿಕೆ ಮತ್ತು ನಿಯಮಗಳ ಉಲ್ಲಂಘನೆ ಪ್ರಕರಣಗಳಲ್ಲಿ ಭಾಗಿ ಆಗಿರುವ ಅಧಿಕಾರಿ, ಸಿಬ್ಬಂದಿ ವಿರುದ್ಧ  ಇಲಾಖೆ ವಿಚಾರಣೆ  ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರದ ಇಲಾಖೆಗಳು ಲೋಕಾಯುಕ್ತರ ಶಿಫಾರಸ್ಸನ್ನು ಕಡೆಗಣಿಸುತ್ತಿವೆ. 

ಅಲ್ಲದೆ,  ಇಂತಹ ಪ್ರಕರಣಗಳಲ್ಲಿ ಅಧಿಕಾರಿಗಳು ಅಂತಿಮ ಆದೇಶಗಳನ್ನು ಹೊರಡಿಸದೇ ಕಾಲಹರಣ ಮಾಡುತ್ತಿದ್ದಾರೆ. ವರದಿಗಳ ಆಧರಿಸಿ ಸಂಬಂಧಪಟ್ಟ ಇಲಾಖೆಯ ಅಭಿಪ್ರಾಯಪಡೆದು ಪರಿಶೀಲಿಸುವ ಸಂಪ್ರದಾಯ ಈಗಲೂ ಮುಂದುವರೆದಿದೆ. 

ಅಷ್ಟೇ ಅಲ್ಲ  ಲೋಕಾಯುಕ್ತ, ಉಪ ಲೋಕಾಯುಕ್ತರ ತನಿಖೆಯಲ್ಲಿ ಅಧಿಕಾರಿಗಳು ಎಸಗಿರುವ ಲೋಪಗಳು, ನಿಯಮ ಉಲ್ಲಂಘನೆ,  ನಿಯಮಬಾಹಿರ ಚಟುವಟಿಕೆಗಳು ಸಾಬೀತಾಗಿದ್ದರೂ ಅಧಿಕಾರಿಗಳು ಪುನಃ ಅದೇ ವರದಿ ಮೇಲೆ ಇಲಾಖೆಯ ಅಭಿಪ್ರಾಯ ಪಡೆಯುವ  ತಂತ್ರಗಾರಿಕೆ ನಡೆಸುತ್ತಿರುವುದು ಇದೀಗ ಬಹಿರಂಗವಾಗಿದೆ. 

ಇಲಾಖೆ ವಿಚಾರಣೆ ನಡೆಸಬೇಕಲ್ಲದೆ ಆರೋಪಿತ ಅಧಿಕಾರಿಗಳ  ವಿರುದ್ಧ ಕೈಗೊಂಡಿರುವ ಕ್ರಮಗಳ ವರದಿ ಸಲ್ಲಿಸಬೇಕು ಎಂದು ಲೋಕಾಯುಕ್ತ ಸಂಸ್ಥೆ ಹಲವು ಬಾರಿ ಬರೆದಿರುವ ನೆನಪೋಲೆಗಳು ಇಲಾಖೆಗಳ  ಕಸದ ಬುಟ್ಟಿಗೆ ಸೇರಿವೆ. ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್‌, ಕಂದಾಯ, ನಗರಾಭಿವೃದ್ಧಿ ಇಲಾಖೆಗಳಲ್ಲಿ ಅತಿ ಹೆಚ್ಚು ಇಂತಹ ಪ್ರಕರಣಗಳು ಬಾಕಿ ಇರುವುದು ತಿಳಿದು ಬಂದಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌ ಅಧ್ಯಕ್ಷತೆಯಲ್ಲಿ 2020ರ ಜನವರಿ 27ರಂದು ಈ ಕುರಿತು ಸಭೆ ನಡೆದಿದೆ. ‘ ಲೋಕಾಯುಕ್ತ ಪ್ರಕರಣಗಳಲ್ಲಿ ಲೋಕಾಯುಕ್ತರು ನೀಡುತ್ತಿರುವ ವರದಿ ಆಧಾರದ ಮೇಲೆ ಸಂಬಂಧಪಟ್ಟ ಇಲಾಖೆಯ ಅಭಿಪ್ರಾಯ ಪಡೆದು ಪರಿಶೀಲಿಸುವ ಸಂಪ್ರಾಯವನ್ನು ಕೈ ಬಿಟ್ಟು ತಮ್ಮ ಹಂತದಲ್ಲಿ  ಪರಿಶೀಲಿಸಿ ಶೀಘ್ರ  ಕ್ರಮ ಕೈಗೊಂಡು ಅಂತಿಮ ಆದೇಶ ಹೊರಡಿಸಿ,’ ಎಂದು ಸಭೆಯಲ್ಲಿ ಸೂಚಿಸಿರುವುದು ಸಭೆ ನಡವಳಿಯಿಂದ ಗೊತ್ತಾಗಿದೆ. 

ಇನ್ನು, ಪ್ರಾಥಮಿಕ, ಪ್ರೌಢಶಿಕ್ಷಣ, ಸಿಬ್ಬಂದಿ, ಆಡಳಿತ ಸುಧಾರಣೆ,  ಅಲ್ಪಸಂಖ್ಯಾತರ ಕಲ್ಯಾಣ,  ಆರ್ಥಿಕ ಮತ್ತು ನಗರಾಭಿವೃದ್ಧಿ ಇಲಾಖೆಗಳಲ್ಲಿನ ಇಲಾಖೆ ವಿಚಾರಣೆಗಳ ಪ್ರಕರಣಗಳು ಇತ್ಯರ್ಥಗೊಂಡಿಲ್ಲ. ‘ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣಾಧಿಕಾರಿಗಳಿಂದ ವರದಿ ಬಂದಿದ್ದರೂ ಅಂತಿಮ ಆದೇಶ  ಹೊರಡಿಸಿದ  ಪ್ರಕರಣಗಳ ಸಂಖ್ಯೆ ಅತ್ಯಂತ ಕಡಿಮೆ ಇದೆ. ಈ ಸಂಬಂಧ  ಎಲ್ಲ  ಕಾರ್ಯದರ್ಶಿಗಳು ಗಮನಹರಿಸಬೇಕು,’ ಎಂದು ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ. 

ಅದೇ ರೀತಿ ಅಮಾನತು ಪ್ರಕರಣಗಳಿಗೆ ಸಂಬಂಧಿಸಿದಂತೆ 6 ತಿಂಗಳಿಗೂ  ಮೀರಿ ಹೆಚ್ಚು ಪ್ರಕರಣಗಳಿವೆ. ಕಂದಾಯ, ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಗಳಲ್ಲಿ ಇಂತಹ ಪ್ರಕರಣಗಳಿರುವುದು ಸಭೆ ನಡವಳಿಯಿಂದ ತಿಳಿದು ಬಂದಿದೆ. 

ಬಾಕಿ ಕಡತಗಳಿಗೆ  ಸಂಬಂಧಿಸಿದಂತೆಯೂ ಸಭೆಯಲ್ಲಿ ಚರ್ಚೆಯಾಗಿದೆ. ಕಾರ್ಮಿಕ, ಜಲ ಸಂಪನ್ಮೂಲ, ಸಾರ್ವಜನಿಕ ಉದ್ದಿಮೆ, ಕೃಷಿ, ಕನ್ನಡ ಮತ್ತು ಸಂಸ್ಕೃತಿ, ಅರಣ್ಯ, ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌, ಮತ್ತು ವಾಣಿಜ್ಯ, ಕೈಗಾರಿಕೆ ಇಲಾಖೆಗಳಲ್ಲಿ ಕಡತಗಳು ವಿಲೇವಾರಿ ಆಗದೇ ಸಾವಿರಾರು ಸಂಖ್ಯೆಯಲ್ಲಿ ಬಾಕಿ ಇವೆ. ಅದೇ ರೀತಿ ಜನತಾದರ್ಶನದ ಅರ್ಜಿಗಳಿಗೆ ಸಂಬಂಧಿಸಿದಂತೆಯೂ ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ  ಕಲ್ಯಾಣ, ಮಹಿಳಾ,  ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಹೆಚ್ಚಿನ ಅರ್ಜಿಗಳು ಇತ್ಯರ್ಥಗೊಳ್ಳದೇ ವಿಲೇವಾರಿಗೆ ಬಾಕಿ ಇರುವುದು ನಡವಳಿಯಿಂದ ಗೊತ್ತಾಗಿದೆ. 

the fil favicon

SUPPORT THE FILE

Latest News

Related Posts