ಕೋವಿಡ್‌-19; ಆತಂಕ ಎಬ್ಬಿಸಲಿದೆಯೇ ಬಹಿರಂಗಗೊಂಡಿರುವ ಪ್ರತ್ಯೇಕ ನಾಗರಿಕರ ಪಟ್ಟಿ?

ಬೆಂಗಳೂರು; ಕೊರೋನಾ ವೈರಸ್‌ ಹರಡುವುದನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯಾಚರಣೆಗಿಳಿದಿರುವ ಹೊತ್ತಿನಲ್ಲೇ  ವಿದೇಶಗಳಿಂದ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಜಿಲ್ಲಾ ಕೇಂದ್ರ, ನಗರ, ಪಟ್ಟಣ ಮತ್ತು ಹಳ್ಳಿಗಳ ಮನೆಗಳಲ್ಲಿ ಪ್ರತ್ಯೇಕವಾಗಿರುವ ನಾಗರಿಕರ ಪಟ್ಟಿ ಇದೀಗ ಸಾರ್ವಜನಿಕವಾಗಿ ಲಭ್ಯವಾಗುತ್ತಿರುವ ಆತಂಕದ ಸುದ್ದಿ ಹೊರಬಿದ್ದಿದೆ.

ವಿದೇಶಗಳಿಂದ ರಾಜ್ಯಕ್ಕೆ ಬಂದಿರುವ 1,28,000 ಮಂದಿಯ ಪೈಕಿ 14,910 ಮಂದಿಯನ್ನು ಮನೆಗಳಲ್ಲಿ ಪ್ರತ್ಯೇಕವಾಗಿರಿಸಲಾಗಿದೆ. ಈ ಮಾಹಿತಿ ಗೌಪ್ಯವಾಗಿರಬೇಕಿತ್ತಲ್ಲದೇ ಅದೀಗ  ಸಾರ್ವಜನಿಕವಾಗಿ ಲಭ್ಯವಾಗುತ್ತಿದೆ. 

ಯಾವ ದೇಶದಿಂದ  ಬೆಂಗಳೂರಿಗೆ ಬಂದಿಳಿದಿದ್ದಾರೆ ಎಂಬ  ಮಾಹಿತಿಯೂ ಸೇರಿದಂತೆ ವಾರ್ಡ್‌, ಮನೆ ಸಂಖ್ಯೆ,  ಅಪಾರ್ಟ್‌ಮೆಂಟ್‌ ಹೆಸರಿನ ಸಮೇತ ವಿವರಗಳು ಜಾಲ ತಾಣಗಳಲ್ಲಿ ದೊರೆಯುತ್ತಿರುವುದು ಕಾನೂನು ಸುವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಹೆಚ್ಚಿನ ಸಾಧ್ಯತೆಗಳಿವೆ.

ಈ ಕುರಿತು ಟ್ವೀಟ್‌ ಮಾಡಿ ಆತಂಕ ವ್ಯಕ್ತಪಡಿಸಿರುವ ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ‘ಮನೆಗಳಲ್ಲಿ ಪ್ರತ್ಯೇಕವಾಗಿರುವವರ ಮಾಹಿತಿ ಸಾರ್ವಜನಿಕವಾಗಿ ಲಭ್ಯವಾಗುತ್ತಿರುವುದು ಖಾಸಗಿತನ ಹಕ್ಕಿನ ಉಲ್ಲಂಘನೆಯಾಗುವ ಜತೆಯಲ್ಲೇ ನೆರೆಹೊರೆಯವರಲ್ಲಿ ಭೀತಿ ಹುಟ್ಟಿಸಲಿದೆ. ಹಾಗೆಯೇ ಲಭ್ಯವಾಗುತ್ತಿರುವ ಮಾಹಿತಿ ಸಾರ್ವಜನಿಕವಾಗಿ ಹರಿದಾಡುವ ಮುನ್ನವೇ ಎಚ್ಚರಿಕೆ ವಹಿಸಬೇಕು,’ ಎಂದಿದ್ದಾರೆ. 

ಕಳೆದ ಕೆಲ ದಿನಗಳಿಂದಲೂ ಈ ಮಾಹಿತಿ ಸಾರ್ವಜನಿಕವಾಗಿ ಲಭ್ಯವಾಗುತ್ತಿದ್ದರೂ ಗಮನಹರಿಸಬೇಕಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈವರೆವಿಗೂ ಯಾವ ಕ್ರಮವನ್ನೂ ಕೈಗೊಳ್ಳದೆ ಭಂಡ ನಿರ್ಲಕ್ಷ್ಯ ವಹಿಸಿದೆ. ಲಭ್ಯವಾಗುತ್ತಿರುವ ಮಾಹಿತಿಯಲ್ಲಿನ  ದತ್ತಾಂಶಗಳು ಸೋರಿಕೆಯಾದಲ್ಲಿ ಮುಂದಿನ ದಿನಗಳಲ್ಲಿ ಆತಂಕ ಹೆಚ್ಚಿಸುವ ಸಾಧ್ಯತೆಗಳಿವೆ. 

ಕೇರಳದಲ್ಲಿಯೂ ಇಂತಹ ಪ್ರಕರಣ ಬೆಳಕಿಗೆ ಬಂದ  ಕೂಡಲೇ  ಪತಣಮಿತ್ತ  ಜಿಲ್ಲಾಧಿಕಾರಿ ತಕ್ಷಣವೇ ಎಚ್ಚೆತ್ತುಕೊಂಡಿದ್ದಾರಲ್ಲದೆ ಮನೆಗಳಲ್ಲಿ ಪ್ರತ್ಯೇಕವಾಗಿರುವವರ  ಮಾಹಿತಿಯ ಗೌಪ್ಯತೆ ಕಾಯ್ದುಕೊಳ್ಳಲು ಮುಂದಾಗಿದ್ದಾರೆ.  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮುನ್ನವೇ ಕ್ರಮ ಕೈಗೊಂಡಿದ್ದಾರೆ. ಆದರೆ ಕರ್ನಾಟಕದಲ್ಲಿ  ಕೋವಿಡ್‌-19 ಸಮನ್ವಯಕಾರರಾಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈವರೆವಿಗೂ ಎಚ್ಚೆತ್ತುಕೊಂಡಿಲ್ಲ. 

ರಾಜ್ಯದಲ್ಲಿ ಈವರೆವಿಗೆ ಒಟ್ಟು 13,246 ಮಂದಿ(ಇಂದು 840) ಅವಲೋಕನಕ್ಕೆ ಒಳಪಡಿಸಲಾಗಿದೆ. ಆಸ್ಪತ್ರೆಗಳಲ್ಲಿ 214 ಮಂದಿಯನ್ನು ಪ್ರತ್ಯೇಕವಾಗಿರಿಸಲಾಗಿದೆಯಲ್ಲದೆ ಈವರೆವಿಗೂ 2,438  ಮಂದಿ ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಲಾಗಿದೆ.  ಈವರೆವಿಗೂ 51 ಪ್ರಕರಣಗಳು ಮತ್ತು ಕೋವಿಡ್‌-19 ಎಂದು ಖಚಿತಪಡಿಸಿರುವುದು ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯ ದಾಖಲೆಯಿಂದ ತಿಳಿದು ಬಂದಿದೆ. 

2020 ಮಾರ್ಚ್‌ 25ರಂದು ಉಡುಪಿಯಲ್ಲಿ 14  ಮಂದಿ ಒಳರೋಗಿಗಳಾಗಿ ದಾಖಲಾಗಿದ್ದರೆ, ಒಟ್ಟು 54  ಮಂದಿಯನ್ನು ಪ್ರತ್ಯೇಕವಾಗಿರಿಸಲಾಗಿದೆ. 2020ರ ಮಾರ್ಚ್‌  17ರಿಂದ 23ರವರೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾ‍ಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಟ್ಟು 10,773 ಸಂಖ್ಯೆಯ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ತಪಾಸಣೆಗೊಳಪಡಿಸಲಾಗಿದೆ. 

ಅದೇ ರೀತಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈವರೆವಿಗೆ  31,917 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದೆ. ಈ ಪೈಕಿ 6,120 ಪ್ರಯಾಣಿಕರನ್ನು ಮಂಗಳೂರು ಮತ್ತು ಕಾರವಾರ ಕಡಲ ಬಂದರುಗಳಲ್ಲಿ ತಪಾಸಣೆ ಮಾಡಿರುವುದು ತಿಳಿದು ಬಂದಿದೆ. 

ಕೋವಿಡ್‌-19 ಪ್ರಕರಣಗಳ ನಿರ್ವಹಣೆಯಲ್ಲಿ ಹಿಂದೆ ಬಿದ್ದಿದ್ದರು ಎನ್ನಲಾಗಿದ್ದ ಆರೋಗ್ಯ ಸಚಿವ  ಶ್ರೀರಾಮುಲು ಅವರನ್ನು ಇದರ ಹೊಣೆಗಾರಿಕೆಯಿಂದ ಬಿಡುಗಡೆಗೊಳಿಸಲಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್‌  ಅವರು ಈ ಪ್ರಕರಣಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಇವರಿಬ್ಬರೂ ಸಾರ್ವಜನಿಕವಾಗಿ  ಲಭ್ಯವಾಗುತ್ತಿರುವ ನಾಗರಿಕರ ಪಟ್ಟಿಯನ್ನು ಗೌಪ್ಯವಾಗಿರಿಸುವ ಕಡೆ ಇಲಾಖೆಗೆ ಸೂಚನೆ ನೀಡಿಲ್ಲ. ಇನ್ನಾದರೂ ಮಾಹಿತಿಯನ್ನು ರಹಸ್ಯವಾಗಿರಿಸಲು ಅಧಿಕಾರಿಗಳಿಗೆ ನಿರ್ದೇಶಿಸಬೇಕಿದೆ.  

the fil favicon

SUPPORT THE FILE

Latest News

Related Posts