ಧಾರವಾಡ; ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮನೆ ಹಂಚಿಕೆ, ವಿದ್ಯುತ್ ಬಲ್ಬ್ ಖರೀದಿಯಲ್ಲಿನ ಅವ್ಯವಹಾರ ಸೇರಿದಂತೆ ಇನ್ನಿತರೆ ಅಕ್ರಮಗಳ ಆರೋಪಕ್ಕೆ ಗುರಿಯಾಗಿರುವ ಮೂವರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗಳ ವಿರುದ್ಧ ಇಲಾಖೆ ವಿಚಾರಣೆಗೆ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆ ಆದೇಶಿಸಿದೆ.
ನವಲಗುಂದ ತಾಲೂಕಿನ ಭದ್ರಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದ ವಿಜಯಲಕ್ಷ್ಮಿ ಎಂ ಬರದೂರು, ವೀರಣ್ಣ ಆರ್ ತೊಗ್ಗಿ, ರಾಘವೇಂದ್ರ ಪೂಜಾರ್ ಅವರು ಅಕ್ರಮಗಳಿಗೆ ಕಾರಣರು ಎಂದು ಲೋಕಾಯುಕ್ತ ತನಿಖಾಧಿಕಾರಿಗಳು ವರದಿ ನೀಡಿದ್ದರು.
ಆರೋಪಿತರ ವಿರುದ್ಧ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ 1966ರ ನಿಯಮ 3(1)ರ ಅಡಿಯಲ್ಲಿ ದುರ್ನಡತೆ, ದುರ್ವತನೆ ಪ್ರಕರಣ ದಾಖಲಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಪ್ರಕರಣವನ್ನು ಉಪ ಲೋಕಾಯುಕ್ತರಿಗೆ ವಹಿಸಿ ಆದೇಶಿಸಿದೆ.
ನವಲಗುಂದ ತಾಲೂಕಿನ ಭದ್ರಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿದ್ದ ನರೇಗಾ ಯೋಜನೆಯಡಿ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿತ್ತು. 2016-17ರಿಂದ 2017-18ನೇ ಸಾಲಿನಲ್ಲಿ ಮನೆಗಳ ಹಂಚಿಕೆಯಲ್ಲಿ ಸರ್ಕಾರ ನಿಗದಿಪಡಿಸಿದ್ದ ಮೀಸಲಾತಿಯನ್ನು ಪಾಲಿಸಿರಲಿಲ್ಲ ಎಂಬ ಅಂಶ ಸರ್ಕಾರಿ ಆದೇಶದಿಂದ ತಿಳಿದು ಬಂದಿದೆ.
ಅದೇ ರೀತಿ ತಮಗೆ ಬೇಕಾದ ವ್ಯಕ್ತಿಗಳಿಗೆ ಮನೆಗಳನ್ನು ಹಂಚಿಕೆ ಮಾಡಿ ಅವ್ಯವಹಾರ ನಡೆದಿತ್ತು. ಮನೆಗಳಿಗೆ ವಿದ್ಯುತ್ ಬಲ್ಬ್ ಖರೀದಿಯಲ್ಲಿಯೂ ಅಕ್ರಮ ನಡೆದಿತ್ತು. ಹಾಗೆಯೇ 13ನೇ ಹಣಕಾಸು ಯೋಜನೆಯಡಿ ಶೇಖಪ್ಪ ಅಕ್ಕಿ, ರುದ್ರಮ್ಮ ಅಂಗಡಿ, ಬಸವರಾಜ ಹಸಬಿ, ಆನಂದ ಬಡಿಗೇರ, ರಾಜಸಾಬ ಬಸವಾಡಿ, ಬಸಪ್ಪ ಹಕಾರಿ, ಇಮಾಮಸಾಬ ಬಡೇಖಾನ ಮತ್ತು ತುಕಾರಾಮ ಅವರಿಗೆ ಆರ್‌ಟಿಜಿಎಸ್ ಮೂಲಕ ತಲಾ 12,000, ಮುಕಂದಾರಸಾಬ ಬಡಿಗೇರ ಅವರಿಗೆ 4,700 ರು., ಹನುಮಂತಪ್ಪ ಸುಣಗಾರ ಅವರಿಗೆ 6,000 ರು. ಸೇರಿ ಒಟ್ಟು 1,06,700 ರು.ಗಳನ್ನು ಭರಿಸಿದ್ದ ವೆಚ್ಚಕ್ಕೆ ಓಚರ್‌ಗಳಿರಲಿಲ್ಲ ಎಂಬುದು ಆದೇಶದಿಂದ ಗೊತ್ತಾಗಿದೆ.
ಇನ್ನು, ಪಂಚಾಯ್ತಿಯ ಆರೋಗ್ಯ, ಶಿಕ್ಷಣ, ಗ್ರಂಥಾಲಯ, ಭಿಕ್ಷುಕರ ಕರ ಹೀಗೆ ಒಟ್ಟು 17,130 ರು.ಗಳ ಪೈಕಿ ಸರ್ಕಾರಕ್ಕೆ 16,898 ರು.ಗಳನ್ನು ಜಮಾ ಮಾಡಿರಲಿಲ್ಲ. ಪಂಚಾಯ್ತಿ ಅವಧಿಯಲ್ಲಿ ಒಟ್ಟು 1,27,1377 ರು.ಜಮೆ ಮಾಡಿರಲಿಲ್ಲ ಎಂದು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದರು.
ಗ್ರಾಮ ಪಂಚಾಯ್ತಿ ಖಾತೆ(ಸಂಖ್ಯೆ; 100601011001959-ವಿಜಯ ಬ್ಯಾಂಕ್)ಯಿಂದ 2016ರ ಏಪ್ರಿಲ್‌ರಿಂದ 2017ರ ಜೂನ್‌ವರೆಗೆ ವಿವಿಧ ಖಾತೆಗಳಿಂದ ಸ್ವಂತಕ್ಕೆ ಎಂದು 62,455 ರು.ಗಳನ್ನು ಖರ್ಚು ಮಾಡಲಾಗಿತ್ತು. ಆದರೆ ಇದಕ್ಕೂ ಯಾವುದೇ ದಾಖಲೆಗಳಿರಲಿಲ್ಲ. ಈ ಮೊತ್ತವು ದುರುಪಯೋಗವಾಗಿದೆ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ಉಲ್ಲೇಖಿಸಿದ್ದರು.
ಪಿಡಿಒಗಳ ಜತೆಗೆ ಪಂಚಾಯ್ತಿಯ ಅಧ್ಯಕ್ಷರು ಅಕ್ರಮದಲ್ಲಿ ಪಾಲುದಾರರಾಗಿದ್ದಾರೆ. 2016ರ ಜೂನ್‌ನಿಂದ ಡಿಸೆಂಬರ್‌ವರೆಗೆ 2017ರ ಮಾರ್ಚ್-ಏಪ್ರಿಲ್‌ನಲ್ಲಿ ಒಟ್ಟು 1,10,284 ರು.ಗಳನ್ನು ಖರ್ಚು ಮಾಡಲಾಗಿತ್ತು. ಕರ್ನಾಟಕ ಪಂಚಾಯತ್‌ರಾಜ್ ನಿಯಮಗಳು 2006ರ ನಿಯಮ 49ರ ಅನ್ವಯ ಗುತ್ತಿಗೆದಾರರಿಗೆ ಮತ್ತು ಪೂರೈಕೆದಾರರಿಗೆ ಚೆಕ್ ಮೂಲಕ ಪಾವತಿ ಮಾಡಿರಲಿಲ್ಲ. ಬ್ಯಾಂಕ್ ಖಾತೆಯಿಂದ ಬೇರೆ ಬೇರೆ ದಿನಾಂಕಗಳಂದು ಒಟ್ಟು 1,10,284 ರು.ಗಳನ್ನು ಸಿಬ್ಬಂದಿ ಹೆಸರಿನಲ್ಲಿ ಪಡೆಯಲಾಗಿತ್ತು ಎಂಬ ಅಂಶವನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದರು.
ಭದ್ರಾಪುರ ಗ್ರಾಮದ ಸುರೇಶ್‌ನಾಯಕ ಅವರ ಮನೆಯಿಂದ ಪಂಚಾಯತ್‌ವರೆಗೆ ನಿರ್ವಹಿಸಿರುವ ಸಿಸಿ ರಸ್ತೆ ಕಾಮಗಾರಿಗಳಲ್ಲಿಯೂ ಅಪರಾತಪರಾವಾಗಿದೆ. ಕಾಮಗಾರಿ ನಿರ್ವಹಿಸಿದ್ದ ಗುತ್ತಿಗೆದಾರ ಎ ಬಿ ಚಲವಾದಿ ಅವರಿಗೆ 2017ರ ಮಾರ್ಚ್ 10ರಂದು (ಚೆಕ್ ಸಂಖ್ಯೆ; 259358) 83,791 ರು.ಗಳನ್ನು ನೀಡದೇ ವಿಜಯಲಕ್ಷ್ಮಿ ಎಂ ಬರದೂರು ಮತ್ತು ಪಂಚಾಯ್ತಿ ಅಧ್ಯಕ್ಷ ಕಮಲವ್ವ ಈ ಬಾರಕೇರ ಎಂಬುವರು ಚೆಕ್‌ಗೆ ಹೆಬ್ಬೆಟ್ಟು ಹಾಕಿದ್ದರು. ಅಲ್ಲದೆ ಕಾಮಗಾರಿ ಅಳತೆ ಪುಸ್ತಕವನ್ನು ಕರ್ನಾಟಕ ಪಂಚಾಯತ್‌ರಾಜ್(ಅಯವ್ಯಯ-ಲೆಕ್ಕಪತ್ರಗಳು) 2006ರ ನಿಯಮ 85ರ ಪ್ರಕಾರ ನಿರ್ವಹಿಸಿಲ್ಲ ಎಂದು ತನಿಖಾಧಿಕಾರಿಗಳು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಕಾಮಗಾರಿ ಮೊತ್ತ 25,000 ರು.ಮೀರಿದ್ದು ಮತ್ತು 4 ಲಕ್ಷ ರು.ಒಳಗಡೆ ಇರುವ ಕಾರಣ ನಿಯಮ 86(2)ರ ಪ್ರಕಾರ ಪಂಚಾಯತ್ ಅಧ್ಯಕ್ಷೆ ಕಮಲವ್ವ ಬಾರಕೇರ ಅವರು ಕಾಮಗಾರಿಯ ಚೆಕ್ ಮೆಷರ್‌ಮೆಂಟ್ ಮಾಡಿಲ್ಲ. ಹೀಗಾಗಿ ಇದು ಕರ್ತವ್ಯಲೋಪ ಎಂದು ತನಿಖಾಧಿಕಾರಿಗಳು ವರದಿಯಲ್ಲಿ ವಿವರಿಸಿದ್ದಾರೆ.