ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ; 5 ವರ್ಷವಾದರೂ ಬಿಡುಗಡೆಯಾಗದ ಅನುದಾನ

ಬೆಂಗಳೂರು; ಖಾಸಗಿ ಅನುದಾನಿತ ಪದವಿ ಕಾಲೇಜುಗಳ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಹೆಸರಿನ ಯೋಜನೆ ಪ್ರಕಟಿಸಿದ್ದ ಹಿಂದಿನ ಕಾಂಗ್ರೆಸ್ ಸರ್ಕಾರ, ಘೋಷಣೆಯಂತೆ ಅನುದಾನ ಬಿಡುಗಡೆ ಮಾಡಿರಲಿಲ್ಲ ಎಂಬ ಸಂಗತಿ ಹೊರಬಿದ್ದಿದೆ. ಪ್ರಸಕ್ತ  ಸಾಲಿನ ಶೈಕ್ಷಣಿಕ ವರ್ಷ  ಇನ್ನೆರೆಡು ತಿಂಗಳಲ್ಲಿ ಆರಂಭಗೊಳ್ಳುತ್ತಿದ್ದರೂ ಈಗಿನ ಬಿಜೆಪಿ ಸರ್ಕಾರವೂ ಇದರ ಬಗ್ಗೆ ಚಕಾರವೆತ್ತಿಲ್ಲ. 

ಹೆಣ್ಣು ಮಕ್ಕಳ ಉಚಿತ ಶಿಕ್ಷಣಕ್ಕೆ ಸಂಬಂಧಿಸಿದಂತೆ 2019ರ ಮಾರ್ಚ್ ಅಂತ್ಯಕ್ಕೆ ಸಿಎಜಿ ವರದಿಯಲ್ಲಿನ ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು 2020ರ ಮಾರ್ಚ್ 20ರಂದು ಸರ್ಕಾರಕ್ಕೆ ಬರೆದಿರುವ ಪತ್ರ, ಹಿಂದಿನ ಕಾಂಗ್ರೆಸ್ ಸರ್ಕಾರದ ಮುಖವಾಡವನ್ನು ಕಳಚಿದೆ.

ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಅನುದಾನಿತ ವಿಷಯಗಳಲ್ಲಿ ಪ್ರವೇಶ ಪಡೆದಿದ್ದ ವಿದ್ಯಾರ್ಥಿನಿಯರಿಗೆ 2014-15ನೇ ಸಾಲಿನಿಂದ ಬೋಧನಾ ಮತ್ತು ಪ್ರಯೋಗಾಲಯ ಶುಲ್ಕದಿಂದ ವಿನಾಯಿತಿ ನೀಡಿ 2014ರ ಜೂನ್ 6ರಂದು ಸರ್ಕಾರ ಆದೇಶ ಹೊರಡಿಸಿತ್ತು. 

2014-15ನೇ ಸಾಲಿನಿಂದ ತಗಲುವ ವಾರ್ಷಿಕ ಅಂದಾಜು ವೆಚ್ಚವನ್ನು ಭರಿಸಲು ಅವಕಾಶ ಮಾಡಿಕೊಟ್ಟಿತ್ತಾದರೂ ಆದೇಶ ಹೊರಬಿದ್ದ ವರ್ಷದಿಂದ 2018-19ನೇ ಸಾಲಿನವರೆಗೆ ಅರ್ಹ ವಿದ್ಯಾರ್ಥಿನಿಯರಿಗೆ ಪಾವತಿ ಮಾಡಬೇಕಾದ ಹಣವನ್ನು ಬಿಡುಗಡೆ ಮಾಡಿರಲಿಲ್ಲ ಎಂಬುದು ಆಯುಕ್ತರ ಪತ್ರದಿಂದ ಗೊತ್ತಾಗಿದೆ.

ವಿದ್ಯಾರ್ಥಿನಿಯರಿಂದ ವಸೂಲಾತಿ ಮಾಡಿದ ಬೋಧನಾ ಮತ್ತು ಪ್ರಯೋಗಾಲಯ ಶುಲ್ಕವನ್ನು ಜಂಟಿ ಖಾತೆಯಲ್ಲಿ ಈಗಾಗಲೇ ಜಮಾ ಆಗಿದೆ. ಆದರೆ ಈ ಹಣ ವಿದ್ಯಾರ್ಥಿನಿಯರ ಕೈಗೆ ಸೇರಿಲ್ಲ. ಹಾಗೆಯೇ ಈ ಹಣ ಪಾವತಿಸಲು ಸರ್ಕಾರ ಈಗಲೂ ಅನುಮತಿ ನೀಡಿಲ್ಲ. 

ಆದರೀಗ 2020-21ನೇ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಅನುದಾನಿತ ಪದವಿ ಕಾಲೇಜುಗಳ ಅನುದಾನಿತ ವಿಷಯಗಳಿಗೆ ಪ್ರವೇಶಾತಿ ಪಡೆಯುವ ವಿದ್ಯಾರ್ಥಿನಿಯರಿಂದ ಬೋಧನಾ ಮತ್ತು ಪ್ರಯೋಗಾಲಯ ಶುಲ್ಕವನ್ನು ವಸೂಲಿ ಮಾಡದೇ ಕಡ್ಡಾಯವಾಗಿ ವಿನಾಯಿತಿ ನೀಡಲಾಗಿದೆ. 

ಅದಕ್ಕೆ ತಗಲುವ ವೆಚ್ಚವನ್ನು ಸರ್ಕಾರದಿಂದ ಮರುಭರಿಕೆ ಮಾಡಿಕೊಳ್ಳಲು ಸುತ್ತೋಲೆ ಹೊರಡಿಸಿದೆ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ ಅಂದಾಜು 3.5 ಲಕ್ಷ ಹೆಣ್ಣು ಮಕ್ಕಳು  ಕಾಲೇಜು ಶಿಕ್ಷಣ ಪಡೆಯುತ್ತಿದ್ದಾರೆ. ಈ ಯೋಜನೆಗೆ ವಾರ್ಷಿಕವಾಗಿ 95 ಕೋಟಿ ರು.ವೆಚ್ಚವಾಗಲಿದೆ. 

SUPPORT THE FILE

Latest News

Related Posts