ಕೊರೊನಾ ಪರಿಹಾರ ಪ್ಯಾಕೇಜ್‌; ಆಹಾರ, ಆರೋಗ್ಯ ಭದ್ರತೆ ಬಲಪಡಿಸಲು ಸಾಲುವುದೇ?

ಬೆಂಗಳೂರು; ಕೊರೋನಾ ವೈರಸ್‌ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿರುವ 1.7 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್‌, ಆಹಾರ ಮತ್ತು ಆರೋಗ್ಯ ಭದ್ರತೆ ಬಲಪಡಿಸಲು ಸಾಲದಾಗಲಿದೆ. ಹಾಗೆಯೇ ಅಗತ್ಯ ಸೇವೆಗಳ  ಪೂರೈಕೆ ಕಾಯ್ದೆಯನ್ನು  ಪರಿಣಾಮಕಾರಿಯಾಗಿ ಜಾರಿಗೊಳಿಸದೇ ಇದ್ದಲ್ಲಿ ಕೃತಕ ಅಭಾವ ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗುವ ಸಾಧ್ಯತೆಗಳೂ ಇವೆ. 

ಪರಿಹಾರ ಪ್ಯಾಕೇಜ್‌ ಸುತ್ತ ಚರ್ಚೆಗಳನ್ನಾರಂಭಿಸಿರುವ ಆರ್ಥಿಕ ಮತ್ತು ಸಾಮಾಜಿಕ ತಜ್ಞರು, ಬಡತನ ರೇಖೆ ಮತ್ತು ಬಡತನ ರೇಖೆಗಿಂತ ಕೆಳಗಿರುವವರಿಗೆ ಆಹಾರ ಮತ್ತು ಆರೋಗ್ಯ ಭದ್ರತೆಯನ್ನು ಪರಿಣಾಮಕಾರಿಯಾಗಿ ಒದಗಿಸುವುದು ಅಷ್ಟು ಸುಲಭದ  ಮಾತಲ್ಲ. ಉತ್ಪಾದನೆ, ಪೂರೈಕೆ, ಸಾಗಾಣಿಕೆ ಮತ್ತು ವಿತರಣೆಯಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯಗಳಾದರೂ ಸಾಮಾಜಿಕ ವಲಯದಲ್ಲಿ ಅಶಾಂತಿ ಎದುರಾದರೂ ಅಚ್ಚರಿಯೇನಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  

ಸಾರ್ವತ್ರಿಕ ಪಡಿತರ ವ್ಯವಸ್ಥೆ  ಅಥವಾ ಪದ್ಧತಿಯನ್ನು ತಕ್ಷಣವೇ ಬಲಗೊಳಿಸದ ಹೊರತು ಪರಿಹಾರ ಪ್ಯಾಕೇಜ್‌ ಪರಿಣಾಮಕಾರಿಯಾಗಿ ತಲುಪುವುದು ಕಷ್ಟಕರ ಎಂದು ಹೇಳುತ್ತಿರುವ ಆರ್ಥಿಕ ತಜ್ಞರು, ಲಾಕ್‌ ಡೌನ್‌ ಇನ್ನಷ್ಟು  ತಿಂಗಳುಗಳ ಕಾಲ ವಿಸ್ತರಣೆಯಾಗಿದ್ದೇ ಆದಲ್ಲಿ ವಿಶೇಷವಾಗಿ ಬೃಹತ್‌ ಮತ್ತು ಮಧ್ಯಮ ನಗರಗಳಲ್ಲಿ ಒಪ್ಪತ್ತಿನ ಗಂಜಿಗೆ ಪರದಾಡುವ ಸ್ಥಿತಿ ಎದುರಾಗಲಿದೆ ಎಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ. 

‘ದಿ ಫೈಲ್‌’ನೊಂದಿಗೆ ಅಭಿಪ್ರಾಯ ಹಂಚಿಕೊಂಡಿರುವ ಬೆಂಗಳೂರಿನ ಐಸೆಕ್‌  ಪ್ರಾಧ್ಯಾಪಕ ಪ್ರೊ. ಕೃಷ್ಣರಾಜ್‌ ಅವರ ಪ್ರಕಾರ ಸಾಮಾಜಿಕ ಭದ್ರತೆ ಕಾರ್ಯಕ್ರಮಗಳನ್ನು 1.74 ಲಕ್ಷ  ಕೋಟಿ ರು.ನಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಆಹಾರ ಮತ್ತು ಆರೋಗ್ಯ ಭದ್ರತೆ ದೃಷ್ಟಿಯಿಂದ ಈ ಪ್ಯಾಕೇಜ್‌ ಸಾಲದು ಎನ್ನುತ್ತಾರೆ. 

ಮುಂಜಾಗರೂಕತೆ ಭಾಗವಾಗಿ ಲಾಕ್‌ ಡೌನ್‌ ಘೋಷಿಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ, ಅಸಂಖ್ಯ ದಿನಗೂಲಿ ನೌಕರರು ಮತ್ತು ಅಸಂಘಟಿತ  ವಲಯದ ಕಾರ್ಮಿಕರು ಊಹಿಸಲಾಗದ ಸಂಕಷ್ಟಗಳಲ್ಲಿ ಸಿಲುಕಲಿದ್ದಾರೆ. ಇದರ ತೀವ್ರತೆಯನ್ನು ಅರಿಯದ ಕೇಂದ್ರ ಮತ್ತು ರಾಜ್ಯ ಸರ್ಕಾರ, ಏಪ್ರಿಲ್‌ ಮತ್ತು ಮೇ  ತಿಂಗಳಿಗೆ ಒಮ್ಮೆಲೆ 10 ಕೆ  ಜಿ ಅಕ್ಕಿ ಮತ್ತು 4 ಕೆ ಜಿ ಗೋಧಿ ನೀಡುವ ಬಗ್ಗೆ ಇನ್ನೂ ಸ್ಪಷ್ಟತೆ ಹೊಂದಿಲ್ಲ. 

‘ದಿ ಫೈಲ್‌’ ಜತೆ ಮಾತನಾಡಿದ ಆಹಾರ,  ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಯೊಬ್ಬರು ‘2  ತಿಂಗಳಿಗೆ ಆಗುವಷ್ಟು ಎಷ್ಟು ಪ್ರಮಾಣದಲ್ಲಿ ಅಕ್ಕಿ, ಗೋಧಿ ವಿತರಿಸಬೇಕು ಎಂಬ ಬಗ್ಗೆ ಇನ್ನೂ ಗೊಂದಲವಿದೆ,’ ಎಂದು  ಹೇಳಿದ್ದಾರೆ. 

ರಾಜ್ಯದ ಅಂದಾಜು 11,000 ಮಕ್ಕಳು ಈಗಲೂ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯಲ್ಲದೆ, ಸಹಜವಾಗಿ ಆಹಾರ ಖರೀದಿಸುವ  ಸಾಮರ್ಥ್ಯ ಕಾರ್ಮಿಕರಿಗೆ ಕಡಿಮೆಯಾದಲ್ಲಿ  ಅವರನ್ನು ಅವಲಂಬಿಸಿರುವ ಕುಟುಂಬ ಸದಸ್ಯರೂ ಅಪೌಷ್ಠಿಕತೆಗೆ ತುತ್ತಾಗುವ ಸನ್ನಿವೇಶ ಎದುರಾದಲ್ಲಿ  ಅಚ್ಚರಿಯೇನಿಲ್ಲ. ಈ ಎಲ್ಲದರ  ಹಿನ್ನೆಲೆಯಲ್ಲಿ ಸಾರ್ವಜನಿಕ  ಪಡಿತರ  ಪದ್ಧತಿಯನ್ನು ಇನ್ನಷ್ಟು ವಿಸ್ತರಣೆಗೆ ಮುಂದಾಗಬೇಕಿದೆ ಎಂಬ  ವಾದವೂ ಕೇಳಿ  ಬಂದಿದೆ. 

ಭಾರತದಲ್ಲಿ ಒಟ್ಟು ಜಿಡಿಪಿ ಆದಾಯ ಪರಿಗಣಿಸಿದರೆ 3  ಟ್ರಿಲಿಯನ್‌  ಯುಎಸ್‌ ಡಾಲರ್‌  ಇದೆ. 132 ಕೋಟಿ ಜನಸಂಖ್ಯೆಗೆ 1.74 ಲಕ್ಷ ಕೋಟಿ ಪರಿಹಾರ ಘೋಷಿಸಿದರೆ, ಜಿಡಿಪಿ ಯ ಒಟ್ಟಾರೆ ಶೇಕಡವಾರು 0.8 ಆಗಲಿದೆ. ಆದರೆ ಅಮೇರಿಕ, ಯುಕೆ ಮತ್ತು ಜರ್ಮನಿಯಲ್ಲಿ ಘೋಷಿಸಿರುವುದು ಅವರ ದೇಶದ ಒಟ್ಟಾರೆ ಸಂಪತ್ತಿಗೆ ಶೇ. 20ರಷ್ಟಿದೆ. ಯುಕೆಯಲ್ಲಿ ಶೇ.15, ಯುಎಸ್‌ನಲ್ಲಿ ಶೇ. 10 ರಷ್ಟಿದೆ.  

ಇನ್ನು, ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ 80 ಕೋಟಿ ಬಡವರಿದ್ದಾರೆ. ಅದರಲ್ಲಿ 20 ಕೋಟಿ ಮಂದಿ ನಗರ ಪ್ರದೇಶದಲ್ಲಿದ್ದರೆ, 60 ಕೋಟಿ ಮಂದಿ  ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಇವರಿಗೆಲ್ಲ ಆಹಾರ ಭದ್ರತೆಯನ್ನು ಹೇಗೆ ಒದಗಿಸಲಿದ್ದಾರೆ?  ಬಡತನ ರೇಖೆಗಿಂತ ಕೆಳಗಿರುವವರಿಗೆ ಈಗ  ಕೊಡುತ್ತಿರುವ ಅಕ್ಕಿ ಪ್ರಮಾಣದಲ್ಲಿ ಕೇವಲ 5 ಕೆ ಜಿ ಹೆಚ್ಚಳವಾಗಿದೆಯಾದರೂ ಇದರಲ್ಲಿ  ಬಿಪಿಎಲ್‌ ಕಾರ್ಡ್ ರಹಿತರು,  ಬ್ಯಾಂಕ್‌ ಖಾತೆ ಹೊಂದಿಲ್ಲದವರು ಮತ್ತು ಯಾವುದೇ  ಸಾಮಾಜಿಕ  ಭದ್ರತೆ  ಇಲ್ಲದವರಿಗೆ ಇದು  ಅನ್ವಯಿಸುವುದಿಲ್ಲ. ಅಲ್ಲದೆ  ಇವರಿಗೆಲ್ಲ ಪಡಿತರ ನೀಡುವುದು ಅಸಾಧ್ಯ. ಹೀಗಾಗಿ 20 ಕೋಟಿ ಮಂದಿ ಇದರ ವ್ಯಾಪ್ತಿಗೆ  ಬರುವುದಿಲ್ಲ. ಹಾಗಾದರೆ ಅವರಿಗೆ ಆಹಾರ ಭದ್ರತೆ ಹೇಗೆ ಒದಗಿಸಲಿದೆ ಎಂದು ಪ್ರಶ್ನಿಸುತ್ತಾರೆ ಪ್ರೊ.ಕೃಷ್ಣರಾಜ್‌.  

ಇನ್ನು, ಒಂದು ಕುಟುಂಬದಲ್ಲಿ 4 ಮಂದಿ ಇರುತ್ತಾರೆ ಎಂದಿಟ್ಟುಕೊಂಡರೆ, ಬಿಪಿಎಲ್‌ ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬಕ್ಕೆ 35  ಕೆ ಜಿ ಅಕ್ಕಿ ನೀಡಿದಲ್ಲಿ ಒಬ್ಬರಿಗೆ 9 ಕೆ ಜಿ ಅಕ್ಕಿ ದೊರೆಯುತ್ತದೆ. 9 ಕೆ  ಜಿ ಅಕ್ಕಿ ಒಂದು ತಿಂಗಳಿಗಷ್ಟೇ ಸಾಲದು. ಒಂದು ದಿನಕ್ಕೆ 300 ಗ್ರಾಂ  ಅಕ್ಕಿ ಬೇಕಾಗುತ್ತದೆ. ಒಪ್ಪತ್ತಿನ ಊಟಕ್ಕೆ 100 ಗ್ರಾಂ ಅಕ್ಕಿ ಬೇಕು.  ಬೇಳೆ, ಎಣ್ಣೆ, ಉಪ್ಪು  ಸೇರಿದಂತೆ  ಇನ್ನಿತರೆ ಅವಶ್ಯಕ ಸಾಮಗ್ರಿಗಳ ಕಥೆಯೂ ಇದಕ್ಕಿಂತ  ಭಿನ್ನ.  

ಅದೇ ರೀತಿ ನರೇಗಾ ಯೋಜನೆಯಡಿಯಲ್ಲಿ 20 ರು. ಹೆಚ್ಚಿಸಿದ್ದರೂ ನಿಗದಿತ ಪ್ರಮಾಣದಲ್ಲಿ ಆಹಾರ ದೊರೆಯದೇ ಇದ್ದಲ್ಲಿ ಕೂಲಿ ಮಾಡಲು  ದೈಹಿಕವಾಗಿ ಅಸಮರ್ಥರಾಗುತ್ತಾರೆ. ಅದಕ್ಕಿಂತ ಮುಖ್ಯವಾಗಿ ಸಮಾನಂತರವಾಗಿ ಹೇಗೆ ವಿತರಣೆ  ಆಗಲಿದೆ ಎಂಬುದು ಕೂಡ  ಅಷ್ಟೇ  ಮುಖ್ಯ. ಉತ್ಪಾದನೆ, ಪೂರೈಕೆ, ಸಾಗಾಣಿಕೆ ಮತ್ತು ವಿತರಣೆ ಸಮರ್ಪಕ ಮತ್ತು ಪರಿಣಾಮಕಾರಿಯಾದಾಗ ಮಾತ್ರ ಆಹಾರ ಭದ್ರತೆ ಖಾತ್ರಿ ನೀಡಬಹುದು. ಆಹಾರ ದಾಸ್ತಾನು ಇರಬಹುದು, ಆದರೆ  ವ್ಯವಸ್ಥಿತವಾಗಿ ವಿತರಣೆ ಮಾಡುವುದು ಅತಿ ದೊಡ್ಡ ಸವಾಲಿನ ಕೆಲಸ ಎನ್ನುತ್ತಾರೆ ಪ್ರೊ.ಕೃಷ್ಣರಾಜ್‌. 

ಅಗತ್ಯ ಸೇವೆಗಳ  ಪೂರೈಕೆ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೆ  ತಂದು ಕಾಳಸಂತೆಯಲ್ಲಿ ದಾಸ್ತಾನು ಮತ್ತು ಮಾರಾಟ ತಡೆಗಟ್ಟಬೇಕು. ಇದನ್ನು ತಡೆಗಟ್ಟದಿದ್ದಲ್ಲಿ ದೊಡ್ಡ  ಮಟ್ಟದಲ್ಲಿ ಸೃಷ್ಟಿಯಾಗುವ ಕೃತಕ  ಅಭಾವ, ಸಾಮಾಜಿಕ  ವಲಯದಲ್ಲಿ ಅಶಾಂತಿಗೂ  ಕಾರಣವಾಗಲಿದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. 

the fil favicon

SUPPORT THE FILE

Latest News

Related Posts