ಹಳಿ ತಪ್ಪಿರುವ ಮುಕ್ತ ವಿ ವಿ; ಸರಿದಾರಿಗೆ ತರಲು ಹೊರಟ ಅಧೀನ ಶಾಸನ ರಚನಾ ಸಮಿತಿಗೆ ಅಡ್ಡಗಾಲು!

ಬೆಂಗಳೂರು; ಹಗರಣ, ಅಕ್ರಮಗಳಲ್ಲಿ ಮುಳುಗಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಕರಡು ವರದಿಯೊಂದನ್ನು ತಯಾರಿಸಿರುವ ಅಧೀನ ಶಾಸನ  ರಚನಾ ಸಮಿತಿ, ಮುಕ್ತ ವಿಶ್ವವಿದ್ಯಾಲಯವು ಆರಂಭಗೊಂಡ ದಿನದಿಂದ ಇಲ್ಲಿಯವರೆಗೂ  ರಚನೆ ಮಾಡಿದಂತಹ ಯಾವುದೇ ಅಧಿನಿಯಮಗಳನ್ನು ಸದನಗಳಿಗೆ ಸಲ್ಲಿಸಿಲ್ಲ ಎಂಬ ಸಂಗತಿಯನ್ನು ಹೊರಗೆಡವಿದೆ. 

ಇನ್ನು ಕರಡು ವರದಿಯ ಕರಡು ಪ್ರತಿಯನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ  ಯಾವುದೇ ಮಾಧ್ಯಮದಲ್ಲಿ ಮತ್ತು ಹೊರಗಡೆ ಚರ್ಚೆಯಾಗದಂತೆ ಗೌಪ್ಯತೆ ಕಾಯ್ದುಕೊಳ್ಳಬೇಕು ಎಂದು ಇದು ಚರ್ಚಾ ವಸ್ತು ಆಗಬಾರದು ಎಂದು ಸಮಿತಿ ಅಧ್ಯಕ್ಷ ಎಸ್‌ ಎ ರಾಮದಾಸ್‌ ಅವರು ಸೂಚನೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳು ‘ದಿ ಫೈಲ್‌’ ಗೆ ಲಭ್ಯವಾಗಿವೆ. 

ಆದರೆ ಕರಡು ವರದಿ ಕುರಿತು ಚರ್ಚೆಗೆ ಮುಂದಾಗಿದ್ದ ಅಧ್ಯಕ್ಷ ಶಾಸಕ ಎಸ್‌ ಎ ರಾಮದಾಸ್‌ಗೆ ಸಮಿತಿಯ ಸದಸ್ಯ ಶಾಸಕರಿಂದಲೇ  ವಿರೋಧ ವ್ಯಕ್ತವಾಗಿದೆ.   ಕರಡು ವರದಿ ಕುರಿತು ಚರ್ಚೆಗೆ ಮುಂದಾಗಿದ್ದ ಸಂದರ್ಭದಲ್ಲಿ ಸಮಿತಿಯ ಸದಸ್ಯ ಶಾಸಕ  ಆರ್‌ ಬಿ ತಿಮ್ಮಾಪೂರ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಅಧೀನ ಶಾಸನ  ರಚನಾ ಸಮಿತಿಯ ವಿಷಯಗಳನ್ನು ಹೊರತುಪಡಿಸಿ ಬೇರೆ ವಿಷಯಗಳ ಕುರಿತು ಚರ್ಚೆ ಮಾಡಲು ತಕರಾರು ಎತ್ತಿರುವುದು ದಾಖಲೆಯಿಂದ ತಿಳಿದು ಬಂದಿದೆ.

ನಿರ್ದಿಷ್ಟವಾಗಿ ಒಬ್ಬರನ್ನೇ ಗುರಿಯಾಗಿಸಿಕೊಳ್ಳುವ ಕೆಲಸವಾಗಬಾರದು ಎಂದು ಹೇಳಿರುವ ಆರ್‌ ಬಿ  ತಿಮ್ಮಾಪೂರ ಅವರು ಸಮಿತಿಯ  ವಿಷಯಗಳನ್ನು ಬಿಟ್ಟು ಬೇರೆ ವಿಷಯಗಳ ಕುರಿತು ಚರ್ಚೆ ಮಾಡುವುದು ಸೂಕ್ತವಲ್ಲ ಎಂದು  ಸಮಿತಿ  ಅಧ್ಯಕ್ಷರಿಗೆ ತಿರುಗೇಟು ನೀಡಿರುವುದು ಗೊತ್ತಾಗಿದೆ. 

ಹಾಗೆಯೇ ‘ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರು ಮತ್ತು ಕುಲಪತಿಗಳು ಏನು  ಮಾಡಿದ್ದಾರೆಂದು ಚರ್ಚಿಸಲು ಈ ಸಮಿತಿಯನ್ನು ಮಾಡಿಲ್ಲ,’ ಎಂದು ಚರ್ಚೆ ವೇಳೆಯಲ್ಲಿ ತಮ್ಮ ಅಭಿಪ್ರಾಯವನ್ನು ದಾಖಲಿಸಿರುವ ಆರ್‌ ಬಿ ತಿಮ್ಮಾಪೂರ ಅವರು ಯಾವುದೋ ಒಂದು ವಿಶ್ವವಿದ್ಯಾಲಯದ  ಬಗ್ಗೆ  ಅಥವಾ ಕುಲಪತಿಗಳ  ಬಗ್ಗೆ ನಿರ್ದಿಷ್ಟವಾಗಿ ಗಮನಹರಿಸುವುದು ಅಷ್ಟು ಸೂಕ್ತವಲ್ಲ. ಎಲ್ಲಾ  ವಿಶ್ವವಿದ್ಯಾಲಯಗಳನ್ನೂ ಚರ್ಚಾ ವ್ಯಾಪ್ತಿಗೆ ಒಳಪಡಿಸಿದರೆ ಸೂಕ್ತ ಎಂದು ಹೇಳಿರುವುದು  ದಾಖಲೆಯಿಂದ ತಿಳಿದು ಬಂದಿದೆ. 

ಅಧಿನಿಯಮಗಳನ್ನು ಸದನಗಳಿಗೆ ಸಲ್ಲಿಸಿಲ್ಲವೇಕೆ?

ವಿಧಾನಮಂಡಲದ ಉಭಯ ಸದನಗಳಲ್ಲಿ ಕಾಯ್ದೆ ಮೂಲಕ ಜಾರಿಗೆ ಬಂದ ನಂತರ ಅಧೀನ ಶಾಸನ ರಚನೆ ಮಾಡಿಕೊಳ್ಳಬೇಕಿದ್ದ ಕರ್ನಾಟಕ  ರಾಜ್ಯ ಮುಕ್ತ ವಿಶ್ವವಿದ್ಯಾಲಯ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿತ್ತು. ಅಲ್ಲದೆ ಅಧೀನ  ಶಾಸನಗಳನ್ನು  ರಚನೆ ಮಾಡಿದ ನಂತರ  ಅದನ್ನು  ವಿಧಾನಮಂಡಲದ ಎರಡೂ ಸದನಗಳಲ್ಲಿ ಮಂಡಿಸಿ ಅಂಗೀಕಾರ ಪಡೆದು ರಾಜ್ಯಪಾಲರಿಂದ ಅನುಮೋದನೆ ಪಡೆದುಕೊಳ್ಳಬೇಕಿತ್ತು. 

ಆದರೆ ಮುಕ್ತ ವಿಶ್ವವಿದ್ಯಾಲಯವು ಆರಂಭಗೊಂಡ ದಿನದಿಂದ ಇಲ್ಲಿಯವರೆಗೂ  ರಚನೆ ಮಾಡಿದಂತಹ ಯಾವುದೇ ಅಧಿನಿಯಮಗಳನ್ನು ಸದನಗಳಿಗೆ ಸಲ್ಲಿಸಿಲ್ಲ. ಹೀಗಾಗಿ ವಿಶ್ವವಿದ್ಯಾಲಯದಿಂದ ಹಕ್ಕುಚ್ಯುತಿಯಾಗಿದೆ ಎಂಬ ವಿಚಾರವನ್ನು ದಾಖಲೆಗಳು ಹೊರಗೆಡವಿದೆ. 

ಮುಕ್ತ  ವಿಶ್ವವಿದ್ಯಾಲಯದ ಕುರಿತು ಸಮಿತಿ ಚರ್ಚೆಗೆ ಕೈಗೆತ್ತಿಕೊಂಡಿರುವುದಕ್ಕೆ ಸಮಿತಿಯ ಕೆಲ ಸದಸ್ಯರು ವ್ಯಕ್ತಪಡಿಸಿರುವ ವಿರೋಧವನ್ನು ಶಮನಗೊಳಿಸಲು ಮುಂದಾಗಿರುವ ಸಮಿತಿ ಅಧ್ಯಕ್ಷ ಎಸ್‌ ಎ ರಾಮದಾಸ್‌ ಅವರು ಇದಕ್ಕೆ  ಕೆಲ  ಸಮರ್ಥನೆಗಳನ್ನೂ ಸಭೆಯಲ್ಲಿಯೇ ಒದಗಿಸಿದ್ದಾರೆ. 

‘ಈ ವಿಷಯವನ್ನು ಇಲ್ಲಿ ಚರ್ಚೆ ಮಾಡಲು ಇನ್ನೊಂದು ಮುಖ್ಯ ಕಾರಣವೆಂದರೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 2,95,000 ಮಕ್ಕಳಿದ್ದಾರೆ. ಆದ್ದರಿಂದ  ಅಧೀನ ಶಾಸನ ರಚನಾ ವಿಷಯದಲ್ಲಿ ಏನು ತಪ್ಪಾಗಿದೆ ಎಂಬುದನ್ನು ಚರ್ಚಿಸಲು ಈ ವಿಷಯವನ್ನು ಇಲ್ಲಿ ತೆಗೆದುಕೊಂಡಿದ್ದೇವೆ. ಆದ್ದರಿಂದ ಇಂದಿನ ಸಭೆಯಲ್ಲಿ ದಾಖಲೆಗಳ ಸಮೇತ  ಕರಡು ವರದಿಯ ಚರ್ಚೆಯನ್ನು ಕೈಗೆತ್ತಿಕೊಳ್ಳಲಾಗಿದೆ,’ ಎಂದು ಸಭೆಯಲ್ಲಿ ಎಸ್‌ ಎ ರಾಮದಾಸ್‌ ಅವರು ಹೇಳಿರುವುದು ದಾಖಲೆಯಿಂದ ಗೊತ್ತಾಗಿದೆ. 

ಆದರೆ ಸಮಿತಿಯ ಮತ್ತೊಬ್ಬ ಸದಸ್ಯ ಶಾಸಕ ಡಾ ಎಚ್‌ ಡಿ ರಂಗನಾಥ್‌ ಅವರು ಇದಕ್ಕೆ  ತಕರಾರು ತೆಗೆದಿದ್ದಾರಲ್ಲದೆ ‘ಇಲ್ಲಿ ಏಕಮುಖವಾದ ಮಾಹಿತಿ ಬಂದಿದೆ. ಇದರ ಬಗ್ಗೆ ಆಳವಾಗಿ  ಚರ್ಚೆ ನಡೆಸಬೇಕು. ಇದರಿಂದ ಏನೇನು ಪರಿಣಾಮಗಳು ಆಗಲಿವೆ  ಎಂಬ  ಕುರಿತು ಚರ್ಚಿಸಬೇಕು. ಹೀಗಾಗಿ ಇದಕ್ಕೆ ಸಾಕಷ್ಟು ಸಮಯವೂ ಬೇಕು,’ ಎಂದು ಹೇಳಿದ್ದಾರೆ.

ಇದಕ್ಕೆ ದನಿಗೂಡಿಸಿರುವ ಆರ್‌ ಬಿ ತಿಮ್ಮಾಪೂರ ಅವರು ವಿಶ್ವವಿದ್ಯಾಲಯಗಳ ಕುರಿತು ಸಮಿತಿ ಸಭೆಯಲ್ಲಿ ಚರ್ಚಿಸುವುದಕ್ಕೆ ಆಕ್ಷೇಪ ಎತ್ತಿದ್ದಾರೆ. ‘ ಸಮಿತಿಯ ಒಳಗಡೆ ಏನೇನು ವಿಷಯಗಳಿವೆ ಎಂಬ ಕುರಿತು ಚರ್ಚಿಸಿದರೆ ಸಮಿತಿಯ  ಘನತೆ  ಹೆಚ್ಚುತ್ತದೆ. ಇದನ್ನು  ಬಿಟ್ಟು ಬೇರೆ ಕಡೆ  ಹೋಗುವುದು ಸರಿಯಾದ ಕ್ರಮವಲ್ಲ. ಇಲ್ಲಿ ಯಾವುದೋ ಒಬ್ಬ ವ್ಯಕ್ತಿಯನ್ನು ಟಾರ್ಗೆಟ್‌ ಮಾಡಿ ಮಾತನಾಡಿದ್ದೇವೆ ಎಂಬ ಅಭಿಪ್ರಾಯ ಮೂಡಬಾರದು,’ ಎಂದು ಹೇಳಿದ್ದಾರೆ. 

ಅಷ್ಟೇ ಅಲ್ಲ.  ಈಗ ಇರುವ ವಿಶ್ವವಿದ್ಯಾಲಯಗಳಿಗೆ ಶಾಸನಬದ್ಧವಾಗಿ ಹೇಗೆ ಮಾನ್ಯತೆ ನೀಡಬೇಕು ಎಂಬ ಕುರಿತು ಚರ್ಚೆ ಮಾಡಬೇಕೆ  ಹೊರತು ಅಧ್ಯಾಪಕರು ಮತ್ತು ಕುಲಪತಿಗಳ ಮೇಲಿರುವ  ದೂರುಗಳನ್ನು ಸಮಿತಿಯೊಳಗಡೆ  ತರುವುದು ಸರಿಯಲ್ಲ ಎಂದು ತಿಮ್ಮಾಪೂರ ಅಭಿಪ್ರಾಯಿಸಿರುವುದು ಗೊತ್ತಾಗಿದೆ. 

ಆರ್‌ ಬಿ ತಿಮ್ಮಾಪೂರ ಅವರು ಹೇಳಿರುವುದನ್ನೇ ಮತ್ತೊಬ್ಬ ಸದಸ್ಯ ಸುನೀಲ್‌ಗೌಡ ಬಸನಗೌಡ ಪಾಟೀಲ್‌ ಮುಂದುವರೆಸಿದ್ದಾರೆ. ‘ಬಿಜಾಪುರ ಮಹಿಳಾ ವಿಶ್ವವಿದ್ಯಾಲಯದಲ್ಲಿಯೂ ಸಾಕಷ್ಟು ಸಮಸ್ಯೆಗಳಿವೆ. ಇದರ ಬಗ್ಗೆ ಪತ್ರಿಕೆಗಳಲ್ಲಿಯೂ ಬಂದಿದೆ. ಈ ವಿಷಯದ ಕುರಿತು ಚರ್ಚೆ ಮಾಡುತ್ತಾ ಹೋದರೆ ಎರಡೂವರೆ ವರ್ಷವನ್ನು ಇದಕ್ಕಾಗಿಯೇ ಮೀಸಲಿಡಬೇಕು. ಆದ್ದರಿಂದ  ಬೇರೆ ಬೇರೆ ಮುಖ್ಯವಾದ ವಿಷಯಗಳ ಕುರಿತು ಚರ್ಚಿಸಿದರೆ ಸಾರ್ವಜನಿಕರಿಗೆ ಉಪಯೋಗವಾಗಲಿದೆ,’ ಎಂದಿದ್ದಾರೆ. 

the fil favicon

SUPPORT THE FILE

Latest News

Related Posts