ಕೃಷ್ಣಾ ಜಲಾನಯನ; ಭೀಮರಾಯನಗುಡಿಯಲ್ಲೀಗ ಅಕ್ರಮಗಳದ್ದೇ ಪಾರುಪತ್ಯ

ಕೃಷ್ಣ ಜಲಾನಯನ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧೀನದಲ್ಲಿರುವ  ಕೃಷ್ಣ ಕಾಡಾ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆಯಲ್ಲಿನ ಲೋಪದೋಷಗಳು, ನಿಯಮಬಾಹಿರ ಚಟುವಟಿಕೆಗಳು, ಅಧಿಕಾರಿಗಳ ದುಂಡಾವರ್ತನೆಗಳನ್ನು ಸರ್ಕಾರಿ ಲೆಕ್ಕ ಪರಿಶೋಧಕರು ಬಹಿರಂಗಗೊಳಿಸಿದ್ದಾರೆ. 

ಹಿಂದಿನ ಕಾಂಗ್ರೆಸ್‌ ಸರ್ಕಾರ ಕೃಷ್ಣ ಕಾಡಾ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ  ರಾಜ್ಯ ಲೆಕ್ಕಪತ್ರ ಇಲಾಖೆ  ಮತ್ತು ಲೆಕ್ಕ ಪರಿಶೋಧನೆ ಅಧಿಕಾರಿಗಳು ಭೀಮರಾಯನಗುಡಿಗೆ ಸಂಬಂಧಿಸಿದಂತೆ ನೀಡಿರುವ ವರದಿ (2017-18) ಕಾಡಾ ವ್ಯಾಪ್ತಿಯಲ್ಲಿ ನಡೆದಿರುವ ಹಲವು ಅಕ್ರಮಗಳನ್ನು ಬಯಲಿಗೆಳೆದಿದೆ. ವರದಿ ಪ್ರತಿ ‘ದಿ ಫೈಲ್‌’ ಗೆ ಲಭ್ಯವಾಗಿದೆ.  

ಕಾಡಾದ ಆಯವ್ಯಯದ ಅಂದಾಜುಗಳು ಹಾಗೂ ವಾಸ್ತವಿಕ ಲೆಕ್ಕ ಪತ್ರಗಳಲ್ಲಿ  ಅಜಗಜಾಂತರ ವ್ಯತ್ಯಾಸವನ್ನು ಪತ್ತೆ ಹಚ್ಚಿರುವ ಲೆಕ್ಕ ಪರಿಶೋಧನೆ ಅಧಿಕಾರಿಗಳು, ನಗದು ಪುಸ್ತಕ ಮತ್ತು ವೆಚ್ಚದಲ್ಲಿನ ವ್ಯತ್ಯಾಸ ಸೇರಿದಂತೆ ಇನ್ನಿತರೆ ನಿಯಮಬಾಹಿರ  ಚಟುವಟಿಕೆಗಳನ್ನು ಹೊರಗೆಳೆದಿದ್ದಾರೆ. 

ಅಧಿಕಾರಿಗಳಿಂದಾಗಿರುವ ಕರ್ತವ್ಯಲೋಪ,  ಕೃಷ್ಣ ಕಾಡಾದ ಬೊಕ್ಕಸದ ಮೇಲೆ  ಬರೆ ಎಳೆದಿದೆ. ಅಧಿಕಾರಿಗಳ ದುಂಡಾವರ್ತಿಯಿಂದಾಗಿ 2017-18ರ ಒಂದೇ ಸಾಲಿನಲ್ಲಿ 22,49,24,941 ರು.ಗಳನ್ನು ಲೆಕ್ಕ ಪರಿಶೋಧಕರು ಆಕ್ಷೇಪಣೆಯಲ್ಲಿರಿಸಿದ್ದರೂ ಈ ಪೈಕಿ ಕೇವಲ 2,24,839 ರು.ಗಳನ್ನಷ್ಟೇ ವಸೂಲಿ ಮಾಡಿರುವುದು ವರದಿಯಿಂದ ತಿಳಿದು ಬಂದಿದೆ. 

ಭೀಮರಾಯನಗುಡಿ ಆಡಳಿತಾಧಿಕಾರಿಗಳು ಸಿದ್ಧಪಡಿಸಿದ್ದ ಆಯವ್ಯಯದ ಅಂದಾಜುಗಳೇ ಅಸ್ಪಷ್ಟವಾಗಿತ್ತು. 2017-18ನೇ ಸಾಲಿನ ಆಯವ್ಯಯದ ಅಂದಾಜುಗಳು 448.75 ಕೋಟಿ ರು.ಗಳಿದ್ದರೆ,  ವಾಸ್ತವದಲ್ಲಿ ಕೇವಲ 92.42  ಕೋಟಿ ರು ಮಾತ್ರ ಖರ್ಚು ಮಾಡಲಾಗಿತ್ತು. ಇದು ಕಾಡಾದಲ್ಲಿ ಆಯವ್ಯಯ  ಅಂದಾಜುಗಳು ಅಸ್ಪಷ್ಟವಾಗಿ  ಸಿದ್ಧಪಡಿಸಲಾಗಿತ್ತು ಎಂಬುದಕ್ಕೆ ನಿದರ್ಶನವಾಗಿದೆ.

ಕೃಷ್ಣ ಜಲಭಾಗ್ಯ ನಿಗಮದಿಂದ ಕಾಡಾಕ್ಕೆ ಬಿಡುಗಡೆಯಾಗಿದ್ದ ಒಟ್ಟು 16,08,77,000 ರು. ಮೊತ್ತದ ಅನುದಾನ ಬಳಕೆ ಆಗಿರುವ ಕುರಿತು ಸರ್ಕಾರಕ್ಕೆ ಬಳಕೆ ಪ್ರಮಾಣ  ಪತ್ರವನ್ನು ಅಧಿಕಾರಿಗಳು ಸಲ್ಲಿಸಿಲ್ಲ. ಹೀಗಾಗಿ ಲೆಕ್ಕ ಪರಿಶೋಧಕರು 16 ಕೋಟಿ  ರು.ಹಣವನ್ನು ಆಕ್ಷೇಪಣೆಯಲ್ಲಿರಿಸಿರುವುದು ವರದಿಯಿಂದ ಗೊತ್ತಾಗಿದೆ. 

ಅದೇ ರೀತಿ ಟೆಂಡರ್‌ ಪ್ರಕ್ರಿಯೆಯಲ್ಲಿ ಹಲವು ನ್ಯೂನತೆಗಳನ್ನು ಪತ್ತೆಯಾಗಿವೆ. ಬಿಡ್‌ದಾರರು ತಮ್ಮ ಬಿಡ್‌ಗಳನ್ನು ಅಪ್‌ಲೋಡ್‌ ಮಾಡಲು ಕೇವಲ 12 ದಿನಗಳ ಕಾಲಾವಕಾಶ ನೀಡಿರುವುದರ ಹಿಂದೆ ಲೆಕ್ಕ ಪರಿಶೋಧಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇನ್ನು ಟೆಂಡರ್ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಸುತ್ತೋಲೆಗಳನ್ನು ಉಲ್ಲಂಘಿಸಿರುವುದನ್ನು ಹೊರಗೆಳೆದಿರುವ ಲೆಕ್ಕ ಪರಿಶೋಧಕರು ಎರಡು ಕಾಮಗಾರಿಗಳ ಗುತ್ತಿಗೆ  ಮೊತ್ತ 2,13,15,029 ರು.ಗಳನ್ನು ಆಕ್ಷೇಪಣೆಯಲ್ಲಿರಿಸಿದ್ದಾರೆ. 

ಭೀಮರಾಯನಗುಡಿ ವ್ಯಾಪ್ತಿಯ ಅಧಿಕಾರಿಗಳು ಅಂದಾಜು ತಯಾರಿಸುವಾಗ  ಸಿ  ಡಿ ಕಾಮಗಾರಿಗಳ ಕುರಿತು ಗಮನಹರಿಸಿಲ್ಲ. ಕನಕನಗರ ತಾಲೂಕಿನ ಸುರಪುರ ವ್ಯಾಪ್ತಿಯಲ್ಲಿ 16000.00 ಮೀಟರ್‌ ರಸ್ತೆ  ನಿರ್ಮಾಣಕ್ಕೆ  ಅಂದಾಜು ಪತ್ರಿಕೆ ತಯಾರಿಸಿದ್ದ ಅಧಿಕಾರಿಗಳು, ರೈತರ ಒತ್ತಾಯ ಮಾಡಿದರು  ಎಂಬ ನೆಪವನ್ನೊಡ್ಡಿ 255 ಮೀಟರ್‌ ನಷ್ಟು ಹೆಚ್ಚಿಸಿರುವುದು ವರದಿಯಿಂದ ಗೊತ್ತಾಗಿದೆ. 

‘ಮೂಲ  ಅಂದಾಜು ಪತ್ರಿಕೆಯಲ್ಲಿ ಕಾಮಗಾರಿಯ ಉದ್ದ 1600 ಮೀಟರ್‌ ಮಾತ್ರ ಇಡಲು ಕಾರಣಗಳೇನು,  ಮುಂದಿನ  ಊರು ಕನಕನಗರದವರೆಗಿನ ರಸ್ತೆಗಾಗಿ ಅಂದಾಜು ಏಕೆ  ತಯಾರಿಸಿಲ್ಲ  ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ತಗಾದೆ ಎತ್ತಿದ್ದಾರೆ. ಅಲ್ಲದೆ ಈ ಕಾಮಗಾರಿಗೆ ಪಾವತಿಸಿರುವ 83,60,865 ರು.ಗಳನ್ನು ಆಕ್ಷೇಪಣೆಯಲ್ಲಿರಿಸಿದ್ದಾರೆ. 

ಟೆಂಡರ್‌ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಸರ್ಕಾರ 2005ರಿಂದಲೂ ಹೊರಡಿಸುತ್ತಿರುವ ಮಾರ್ಗಸೂಚಿಗಳನ್ನು ಕೃಷ್ಣ ಕಾಡಾ ಅಧಿಕಾರಿಗಳು ಪಾಲಿಸಿಲ್ಲ. ಓಬಿರಾಯನ  ಕಾಲದ ಟೆಂಡರ್‌ ನಮೂನೆಗಳನ್ನು ಬಳಸುತ್ತಿರುವ ಅಧಿಕಾರಿಗಳು ಸರ್ಕಾರದಿಂದ  ಸತತವಾಗಿ  ಹೊರಡಿಸುತ್ತಿರುವ ಸುತ್ತೋಲೆಗಳನ್ನು ಜಾರಿಗೆ ತರದೇ  ಉಲ್ಲಂಘಿಸುತ್ತಿದ್ದಾರೆ ಎಂದು  ಲೆಕ್ಕಪರಿಶೋಧಕರು ವರದಿಯಲ್ಲಿ ವಿವರಿಸಿದ್ದಾರೆ.

ಟೆಂಡರ್‌ ಪ್ರಕ್ರಿಯೆಯಲ್ಲಿ STANDRARD TENDER DOCUMENTಗಳನ್ನು ಬಳಸದ ಅಧಿಕಾರಿಗಳು ಒಟ್ಟು 75.79 ಲಕ್ಷ ರು.ಮೊತ್ತದ  ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ್ದಾರೆ. ಅಧಿಕಾರಿಗಳ  ಈ  ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿರುವ ಲೆಕ್ಕ ಪರಿಶೋಧಕರು ಪುರಾತನ ಕಾಲದ ಟೆಂಡರ್‌ ಕ್ಲಾಸ್‌ಗಳನ್ನು ಕೈಬಿಡಬೇಕು ಎಂದು ಸೂಚಿಸಿರುವುದು ವರದಿಯಿಂದ  ತಿಳಿದು ಬಂದಿದೆ. 

ಅದೇ  ರೀತಿ ಬಾಡಿಗೆ ಆಧಾರದ ಮೇಲೆ ವಾಹನಗಳನ್ನು ಪಡೆದುಕೊಳ್ಳುವ ಸಂಬಂಧ  ಟೆಂಡರ್‌ ಕರೆಯದ ಅಧಿಕಾರಿಗಳು ನೇರವಾಗಿ ದರಪಟ್ಟಿ ಮೂಲಕ ವಾಹನ  ಸೌಲಭ್ಯ ಪಡೆದುಕೊಂಡಿದ್ದಾರೆ. ಇದನ್ನೂ ಗಂಭೀರವಾಗಿ ಪರಿಗಣಿಸಿರುವ ಲೆಕ್ಕ ಪರಿಶೋಧಕರು ಈಗಾಗಲೇ ಪಾವತಿಯಾಗಿರುವ ಒಟ್ಟು 27,57,760 ರು.ಗಳನ್ನು ಆಕ್ಷೇಪಣೆಯಲ್ಲಿರಿಸಿದ್ದಾರೆ.

ಕೃಷ್ಣ ಕಾಡಾ ಕಚೇರಿ ವಿವಿಧ ಬ್ಯಾಂಕ್‌ಗಳಲ್ಲಿರಿಸಿದ್ದ ಮುದ್ದತ್‌ ಠೇವಣಿಗಳಲ್ಲಿ  ಆದಾಯಕರ ಕಡಿತಗೊಳ್ಳುತ್ತಿದೆಯಲ್ಲದೆ ನವೀಕರಣಗೊಳ್ಳುತ್ತಿದೆ. ಒಟ್ಟಾರೆ  ಟಿ ಡಿ ಆರ್‌ ಗಳಲ್ಲಿ ಕಡಿತಗೊಳಿಸಿರುವ 6,49,295 ರು.ಗಳನ್ನು ಮರಳಿ ಪಡೆಯಲು ಕಾಡಾ ಅಧಿಕಾರಿಗಳು ಯಾವ ಕ್ರಮವನ್ನೂ ಕೈಗೊಂಡಿಲ್ಲ. 

‘ಠೇವಣಿ ಮಾಡಿದ ಮೊತ್ತವು ಸರ್ಕಾರದಿಂದ  ಬಿಡುಗಡೆಯಾದ  ಅನುದಾನವಾಗಿದೆ. ಆದಾಯಕರ ಕಡಿತ ಮಾಡದಂತೆ ವಿನಾಯಿತಿ  ಪಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ,’ ಎಂದು ಲೆಕ್ಕಪರಿಶೋಧಕರು ವರದಿಯಲ್ಲಿ ದಾಖಲಿಸಿದ್ದಾರೆ.  

the fil favicon

SUPPORT THE FILE

Latest News

Related Posts