ಕೇಂದ್ರದಿಂದ ಬರಬೇಕಿದ್ದ ಸುಮಾರು ₹11 ಸಾವಿರ ಕೋಟಿ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಪಾಲು ರಾಜ್ಯಕ್ಕೆ ದೊರೆಯದ ಕಾರಣ ಈ ಬಾರಿಯ ಅನುದಾನದಲ್ಲಿ ಅಂದಾಜು 8 ಸಾವಿರ ಕೋಟಿ ರು. ಕಡಿಮೆಯಾಗಿದೆ.
ಬಜೆಟ್ ಭಾಷಣದಲ್ಲಿ ಕೇಂದ್ರದಿಂದ ಬರಬೇಕಿದ್ದ ತೆರಿಗೆ ಪಾಲು ಮತ್ತು ಅನುದಾನದ ಬಗ್ಗೆ ಪ್ರಸ್ತಾಪಿಸಿರುವ ಯಡಿಯೂರಪ್ಪ ಅವರು ಜಿಎಸ್‌ಟಿಯಲ್ಲಿನ ಕರ್ನಾಟಕದ ನ್ಯಾಯಬದ್ಧ ಪಾಲು ದೊರೆತಿಲ್ಲ ಎಂಬ ಆರೋಪಗಳಿಗೆ ಪುಷ್ಠಿ ಒದಗಿಸಿದ್ದಾರೆ.
ಸರಕು ಮತ್ತು ಸೇವಾ ತೆರಿಗೆ ರೂಪದಲ್ಲಿ ಕರ್ನಾಟಕದ ಪಾಲು ದೊರೆಯದಿರುವ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ಕೂಡ ಸದನದಲ್ಲಿ ದನಿ ಎತ್ತಿತ್ತು. ‘ತೆರಿಗೆ ಮತ್ತು ಮಾಹಿತಿ ತಂತ್ರಜ್ಞಾನ ಆಧರಿತ ಉತ್ಪನ್ನಗಳ ಮೂಲಕ ಕರ್ನಾಟಕ ರಾಜ್ಯವು ದೇಶಕ್ಕೆ ಆದಾಯ ತಂದುಕೊಡುತ್ತಿದೆ. ಆದರೆ ರಾಜ್ಯ ಸರ್ಕಾರಕ್ಕೆ ಹೆಚ್ಚು ಆದಾಯ ಬರುತ್ತಿಲ್ಲ’ ಎಂದು ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.
2019–20ರಲ್ಲಿ ಕೇಂದ್ರ ತೆರಿಗೆಯಲ್ಲಿ ರಾಜ್ಯದ ಪಾಲು ₹1,993 ಕೋಟಿಯಷ್ಟು ಕಡಿತವಾಗಿದೆ. ರಾಜಸ್ವ ಸಂಪನ್ಮೂಲ ಇಳಿಕೆಯಾಗಿದೆ. ಜಿಎಸ್‌ಟಿ ಉಪಕರದ ನಿರೀಕ್ಷಿತ ಸಂಗ್ರಹ ಖೋತಾ ಕಾರಣ ಸುಮಾರು ₹3000 ಕೋಟಿ ರೂಪಾಯಿ ರಾಜ್ಯದ ಪಾಲು ಕಡಿಮೆಯಾಗಿದೆ. ಹೀಗಾಗಿ ಅನಿವಾರ್ಯವಾಗಿ ಕೆಲ ಇಲಾಖೆಗಳ ವೆಚ್ಚ ಕಡಿಮೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.
ಪ್ರಾದೇಶಿಕ ಅಸಮತೋಲನ ನಿವಾರಣೆ, ಕೃಷಿ, ಕೈಗಾರಿಕೆ, ಪ್ರವಾಸೋದ್ಯಮಕ್ಕೆ ನಮ್ಮ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ಕೌಶಲ ಅಭಿವೃದ್ಧಿ ಮೂಲಕ ನಿರುದ್ಯೋಗ ನಿವಾರಣೆಗೆ ಗಮನ ಹರಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ನೆರೆ ಪರಿಹಾರಕ್ಕೆ ಆದ್ಯತೆ: ಪ್ರಕೃತಿಯ ಮುನಿಸು, ನೈಸರ್ಗಿಕ ವಿಕೋಪ ಪರಿಹಾರಕ್ಕೆ ಆದ್ಯತೆ ನೀಡಿದ್ದೇವೆ. ಒಂದೆಡೆ ನೆರೆ, ಮತ್ತೊಂದೆಡೆ ಬರವನ್ನು ರಾಜ್ಯ ಏಕಕಾಲಕ್ಕೆ ಎದುರಿಸಿತು. 7 ಲಕ್ಷ ಜನರ ಬದುಕಿಗೆ ತೊಂದರೆಯಾಯಿತು. 4.69 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಹಾನಿಗೀಡಾಯಿತು. ರಸ್ತೆ, ಸೇತುವೆ, ಶಾಲೆ, ಅಂಗನವಾಡಿಗಳಿಗೆ ಹಾನಿಯಾಯಿತು. ₹35,160 ಕೋಟಿ ನಷ್ಟವಾಗಿದೆ. ಕೇಂದ್ರ ಸರ್ಕಾರ ₹1869 ಕೋಟಿ ನೀಡಿದೆ ಎಂದು ಮುಖ್ಯಮಂತ್ರಿ ಮಾಹಿತಿ ಒದಗಿಸಿದರು.