ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೇಶ್‌ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತಮಿಳುನಾಡು ಮೂಲದ ಹಂತಕರನ್ನು ಬಂಧಿಸಿದ್ದಾರೆ.
ಅಶ್ವತ್ಥ್, ಪುರುಷೋತ್ತಮ ಸೇರಿ ಐವರು ಆರೋಪಿಗಳನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇವರೆಲ್ಲಾ ಬೆಂಗಳೂರು ಮೂಲದ ಸುಪಾರಿ ಹಂತಕರು ಎನ್ನಲಾಗಿದ್ದು, ಬಸವರಾಜ್ ಮುತ್ತಗಿ ಕಡೆಯಿಂದ ಯೋಗೀಶ್‌ಗೌಡ ಕೊಲೆಗೆ ಸುಫಾರಿ ಪಡೆದಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಬಂಧನ ಭೀತಿಯಲ್ಲಿದ್ದ ಆರೋಪಿಗಳು ತಮಿಳುನಾಡಿಗೆ ಪರಾರಿಯಾಗುತ್ತಿದ್ದ ವೇಳೆಯಲ್ಲಿ ಅವರನ್ನು ವಶಕ್ಕೆ ಪಡೆದಿರುವ ಸಿಬಿಐ ಅಧಿಕಾರಿಗಳು ರಾತ್ರಿ ವೇಳೆಗೆ ಧಾರವಾಡ ನಾಲ್ಕನೇ ಹೆಚ್ಚುವರಿ ನ್ಯಾಯಾಧೀಶರ ನಿವಾಸಕ್ಕೆ ಆರೋಪಿಗಳನ್ನು ಸಿಬಿಐ ಅಧಿಕಾರಿಗಳು ಕರೆತರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
2016, ಜೂನ್ 15 ರಂದು ಧಾರವಾಡದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೇಶ್ ಗೌಡ ಹತ್ಯೆ ನಡೆದಿತ್ತು. ಸಪ್ತಾಪುರದ ಉದಯ್ ಜಿಮ್ ಬಳಿ ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದರು. ಜಿಮ್‌ನಲ್ಲಿ ಯೋಗೇಶ ಗೌಡ ಪೇಪರ್ ಓದುತ್ತಾ ಕುಳಿತುಕೊಂಡ ಸಂದರ್ಭದಲ್ಲಿ ನಾಲ್ವರು ದುಷ್ಕರ್ಮಿಗಳು ದಾಳಿ ನಡೆಸಿದ್ದರು.
ಯೋಗೇಶ್‌ಗೌಡ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಹಂತಕರು ಬಲಗೈಗೆ ಮಚ್ಚಿನಿಂದ ಕೊಚ್ಚಿದ್ದರು. ನಂತರ ಬೆನ್ನತ್ತಿದ ದುಷ್ಕರ್ಮಿಗಳು ಮಚ್ಚಿನಿಂದ ದಾಳಿ ನಡೆಸಿ, ಭೀಕರವಾಗಿ ಕೊಲೆಗೈದಿದ್ದರು. ಈ ಪ್ರಕರಣ ಧಾರವಾಡದಲ್ಲಿ ಸಂಚಲನ ಸೃಷ್ಟಿಸಿತ್ತು. ಹತ್ಯೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಮಾಜಿ ಸಚಿವ ವಿನಯ್ ಕುಲಕರ್ಣಿ ಹೆಸರು ಕೂಡಾ ಪ್ರಕರಣದಲ್ಲಿ ತಳಕು ಹಾಕಿಕೊಂಡಿದ್ದನ್ನು ಸ್ಮರಿಸಬಹುದು.
ಪ್ರಕರಣದ ಕುರಿತಾಗಿ ಆರು ಆರೋಪಿಗಳ ವಿರುದ್ಧ ಎಫ್.ಐ.ಆರ್ ದಾಖಲಿಸಿಕೊಂಡು ಸಿಬಿಐ ತನಿಖೆ ಕೈಗೆತ್ತಿಕೊಂಡಿತ್ತು. ಇದಕ್ಕೆ ಧಾರವಾಡ ವಿಭಾಗೀಯ ಪೀಠ ತಡೆ ನೀಡಿತ್ತು.
ಸಿಬಿಐ ತನಿಖೆಗೆ ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠದಿಂದ ಬಸವರಾಜ್ ಮುತ್ತಗಿ ಎಂಬುವವರು ತಡೆ ತಂದಿದ್ದರು. ಈ ಆದೇಶದ ವಿರುದ್ಧ ಸಿಬಿಐ ಅಧಿಕಾರಿಗಳು ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್‌ನ ನ್ಯಾ.ದೀಪಕ್ ಹೂಡಾ ನೇತೃತ್ವದ ದ್ವಿಸದಸ್ಯ ಪೀಠ ತಡೆಯಾಜ್ಞೆಯನ್ನು ತೆರವುಗೊಳಿಸಿತ್ತು