ಕ್ಯಾನ್ಸರ್‌ ಘಟಕ ; ಹಿಮ್ಸ್‌ ಆಡಳಿತ ಮಂಡಳಿ ಧೋರಣೆಯಿಂದ ಸರ್ಕಾರದ ಸಮಯ ವ್ಯರ್ಥ

ಬೆಂಗಳೂರು; ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕ್ಯಾನ್ಸರ್‌ ಕೇರ್‌ ಘಟಕ ಸ್ಥಾಪನೆಯೂ ಸೇರಿದಂತೆ ವಿವಿಧ ರೀತಿಯ ಆಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಗೊಳಿಸಿರುವ 500 ಲಕ್ಷ ರು.ಮೊತ್ತದಲ್ಲಿ ಕೈಗೊಂಡಿರುವ ಕಾಮಗಾರಿಯು ಯಾವ ಹಂತದಲ್ಲಿದೆ ಎಂಬ ಮಾಹಿತಿಯನ್ನು ಆಡಳಿತ ಮಂಡಳಿಯು ವೈದ್ಯಕೀಯ ಶಿಕ್ಷಣ ಇಲಾಖೆಗೆ ನೀಡುತ್ತಿಲ್ಲ. ಅಲ್ಲದೆ, ಬಳಕೆಯಾಗಿರುವ ಅನುದಾನದ ಪೂರ್ಣ ಮಾಹಿತಿ ನೀಡದ ಕಾರಣ ಸರ್ಕಾರದ ಸಮಯವೂ ವ್ಯರ್ಥವಾಗುತ್ತಿರುವುದು ಇದೀಗ ಬಹಿರಂಗವಾಗಿದೆ.

ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಈ ವಿಳಂಬ ನೀತಿಯಿಂದಾಗಿಯೇ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ವೈದ್ಯಕೀಯ ಶಿಕ್ಷಣ ಇಲಾಖೆಯೂ ಇನ್ನಷ್ಟು ವಿಳಂಬ ಮಾಡುತ್ತಿದೆ. ಸಕಾಲದಲ್ಲಿ ಅನುದಾನ ದೊರಕದ ಕಾರಣ ಕ್ಯಾನ್ಸರ್‌ ಘಟಕ ಕಾಮಗಾರಿಯು 3ವರ್ಷಗಳಾದರೂ ಪೂರ್ಣಗೊಳ್ಳದೇ ತೆವಳುತ್ತಿದೆ. ಈ ಬಗ್ಗೆ ಹಾಸನ ಶಾಸಕ ಪ್ರೀತಂ ಗೌಡ ಅವರು ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದಿದ್ದಾರೆ ಎಂದು ಗೊತ್ತಾಗಿದೆ.

ಹಿಮ್ಸ್‌ನಲ್ಲಿ ಕ್ಯಾನ್ಸರ್‌ ಕೇರ್‌ ಘಟಕ ಆರಂಭಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಇತ್ತೀಚೆಗೆ ಪತ್ರ ವ್ಯವಹಾರಗಳು ನಡೆದಿವೆ. ಲಭ್ಯವಿರುವ ಟಿಪ್ಪಣಿ ಹಾಳೆ ಮತ್ತು ದಾಖಲೆಗಳ ಪ್ರಕಾರ ಹಿಮ್ಸ್‌ನ ಆಡಳಿತ ಮಂಡಳಿಯ ಧೋರಣೆಯೇ ಅನುದಾನ ಬಿಡುಗಡೆಯಲ್ಲಿನ ವಿಳಂಬವೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಕ್ಯಾನ್ಸರ್‌ ಕೇರ್‌ ಘಟಕವನ್ನು 1825.00 ಲಕ್ಷ ರು.ಗಳ ವೆಚ್ಚದಲ್ಲಿ ಸ್ಥಾಪಿಸಲು 2018ರ ಸೆಪ್ಟಂಬರ್‌ 17ರಂದು ಅನುಮೋದನೆ ನೀಡಿ ಆದೇಶ ಹೊರಡಿಸಿತ್ತು. ಈ ಪೈಕಿ 325.00 ಲಕ್ಷ ರು. ಆಂತರಿಕ ಸಂಪನ್ಮೂಲದಿಂದ ಭರಿಸಬೇಕಿದ್ದು, ಸರ್ಕಾರದಿಂದ 1,500.00 ಲಕ್ಷ ಸೇರಿ ಒಟ್ಟು 1,825 ಲಕ್ಷ ರು. ಗಳಿಗೆ ಅನುಮೋದನೆ ದೊರೆತಿತ್ತು . ಒಟ್ಟು ಮೊತ್ತದಲ್ಲಿ 500 ಲಕ್ಷ ರು.ಗಳನ್ನು 2018ರ ನವೆಂಬರ್‌ 16ರಂದು ಬಿಡುಗಡೆ ಮಾಡಲಾಗಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಘಟಕದ ಕಟ್ಟಡ ನಿರ್ಮಾಣಕ್ಕಾಗಿ ಅಗತ್ಯವಿರುವ ಹಾಗೂ ಈಗಾಗಲೇ ಬಿಡುಗಡೆಗೊಳಿಸಿರುವ 500.00 ಲಕ್ಷ ರು.ಗಳನ್ನೊಳಗೊಂಡಂತೆ ಹಾಗೂ ಘಟಕ ಸ್ಥಾಪನೆಗೆ ಮುಂದಿನ ದಿನಗಳಲ್ಲಿ ಬಿಡುಗಡೆಗೊಳಿಸಲಾಗುವ ಮೊತ್ತದಲ್ಲಿ 25 ಲಕ್ಷ ರು. ಹಾಗೂ ಕ್ಯಾನ್ಸರ್‌ ಘಟಕದ ಕಟ್ಟಡದ ಅಂದಾಜು ಪಟ್ಟಿಯಲ್ಲಿ ಹೆಚ್ಚುವರಿಯಾದ 110.00 ಲಕ್ಷ ರು.ಗಳನ್ನು ಸಂಸ್ಥೆಯ ಸ್ವಂತ ಸಂಪನ್ಮೂಲದಿಂದ ಭರಿಸಿಕೊಳ್ಳುವುದೂ ಸೇರಿದಂತೆ ಒಟ್ಟಾರೆ 635.00 ಲಕ್ಷ ರು.ಗಳ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿ 2020ರ ಜನವರಿ 22ರಂದು ಆದೇಶ ಹೊರಡಿಸಿತ್ತು.

ಒಟ್ಟು ಅನುದಾನ ಮೊತ್ತದ ಪೈಕಿ ಸರ್ಕಾರದಿಂದ ಇನ್ನು 975.00 ಲಕ್ಷ ರು.ಗಳನ್ನು ಮಾತ್ರ ಬಿಡುಗಡೆಯಾಗಬೇಕಿದೆ. ಆದರೆ ಕಾಮಗಾರಿಯು ಯಾವ ಹಂತದಲ್ಲಿದೆ ಎಂಬ ಮಾಹಿತಿಯನ್ನು ಹಿಮ್ಸ್‌ ಆಡಳಿತ ಮಂಡಳಿಯು ನೀಡಿಲ್ಲ.

‘ಈವರೆವಿಗೂ ಕಾಮಗಾರಿಗೆ ಬಿಡುಗಡೆ ಮಾಡಲಾದ ಮೊತ್ತದಲ್ಲಿ ಕಾಮಗಾರಿಯನ್ನು ಯಾವ ಹಂತದವರೆಗೆ ಕೈಗೊಂಡಿರುವ ಬಗ್ಗೆ ಮಾಹಿತಿಯನ್ನು ನೀಡಿರುವುದಿಲ್ಲ. ವಿವಿಧ ಆದೇಶಗಳಲ್ಲಿ ಬಿಡುಗಡೆ ಮಾಡಿರುವ ಅನುದಾನ ಬಳಕೆ ಪ್ರಮಾಣ ಪತ್ರವನ್ನು ಸಲ್ಲಿಸಿರುವುದಿಲ್ಲ. ಈ ಎಲ್ಲಾ ಮಾಹಿತಿಯನ್ನು ಒದಗಿಸುವಂತೆ ಸರ್ಕಾರವು 2021ರ ಮಾರ್ಚ್‌ 3ರಂದು ಪತ್ರ ಬರೆಯಲಾಗಿತ್ತು. ಆದರೆ ಈ ಯಾವ ಮಾಹಿತಿಯನ್ನೂ ನೀಡದೆಯೇ ಮತ್ತೊಮ್ಮೆ ಯಥಾವತ್ತಾಗಿ ಆಡಳಿತಾತ್ಮಕ ಅನುಮೋದನೆ ನೀಡಲಾದ ಅನುದಾನಕ್ಕಿಂತ ಹೆಚ್ಚುವರಿಯಾಗಿ 25.00 ಲಕ್ಷ ರು.ಗಳನ್ನು ಬಿಡುಗಡೆ ಮಾಡಬೇಕು ಎಂದು ಪ್ರಸ್ತಾವನೆ ಸಲ್ಲಿಸಿದೆ,’ ಎಂಬ ಮಾಹಿತಿ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಸರ್ಕಾರದ ಸಮಯ ವ್ಯರ್ಥ

‘1,825.00 ಲಕ್ಷದಲ್ಲಿ ಸರ್ಕಾರದಿಂದ ಭರಸಿಬೇಕಾದ 1500 ಲಕ್ಷಗಳ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಅನುದಾನದಲ್ಲಿ 525 ಲಕ್ಷ ರು.ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇನ್ನುಳಿದ 925 ಲಕ್ಷ ರುಗ.ಳನ್ನು ಮಾತ್ರ ಬಿಡುಗಡೆಗೊಳಿಸಲು ಬಾಕಿ ಇದೆ. ಆದರೆ ಈ ಅನುದಾನಕ್ಕಿಂತ ಹೆಚ್ಚುವರಿಯಾಗಿ 25 ಲಕ್ಷ ಒಳಗೊಂಡಂತೆ 1000 ಲಕ್ಷ ರು.ಗಳನ್ನು ಬಿಡುಗಡೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ರೀತಿ ಸರ್ಕಾರಕ್ಕೆ ಕೈಗೊಂಡ ಕಾಮಗಾರಿಯ ಮತ್ತು ಬಳಕೆಯಾಗಿರುವ ಅನುದಾನದ ಪೂರ್ಣ ಮಾಹಿತಿಯನ್ನು ನೀಡದೆಯೇ ಸರ್ಕಾರದ ಸಮಯವನ್ನು ವ್ಯರ್ಥ ಮಾಡುತ್ತಿರುವುದು ಸಮಂಜಸವಾಗಿರುವುದಿಲ್ಲ,’ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯು 2021ರ ಜುಲೈ 8ರಂದು ಅಸಮಾಧಾನ ವ್ಯಕ್ತಪಡಿಸಿದೆ.

ಕಾಮಗಾರಿ ವಿಳಂಬಕ್ಕೆ ಏನು ಕಾರಣ?

ಹಿಮ್ಸ್‌ನಲ್ಲಿ ಕ್ಯಾನ್ಸರ್‌ ಘಟಕದ ಕಾಮಗಾರಿ ವಿಳಂಬಕ್ಕೆ ತಾಂತ್ರಿಕ ಕಾರಣಗಳೂ ಇವೆ. ಘಟಕದ ಕಾಮಗಾರಿಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆಯ ಇಂಜಿನಿಯರಿಂಗ್‌ ವಿಭಾಗದ ಅನುಮತಿ ಪಡೆದ ನಂತರ 2020ರ ಫೆ.12ರಂದು ಟೆಂಡರ್‌ ಆಹ್ವಾನಿಸಲು ಕೋರಿತ್ತು. ಆದರೆ ಕಿದ್ವಾಯಿ ಕ್ಯಾನ್ಸರ್‌ ಸಂಸ್ಥೆಯ ನಿರ್ದೇಶಕರನ್ನೊಳಗೊಂಡ ತಾಂತ್ರಿಕ ಸಮಿತಿಯು ಘಟಕದ ಸಿವಿಲ್‌ ಕಾಮಗಾರಿಗಳನ್ನು ಮೊದಲು ಕೈಗೊಂಡು ನಂತರದಲ್ಲಿ ವೈದ್ಯಕೀಯ ಉಪಕರಣಗಳಿಗೆ ಟೆಂಡರ್‌ ಆಹ್ವಾನಿಸಿ ಉಪಕರಣಗಳನ್ನು ಸ್ಥಾಪಿಸುವ ಸಂದರ್ಭದಲ್ಲಿ ಕೈಗೊಂಡಿರುವ ಕಾಮಗಾರಿಯು ಉಪಕರಣಗಳಿಗೆ ಹೊಂದಾಣಿಕೆಯಾಗದಿದ್ದಲ್ಲಿ ತೊಂದರೆಯಾಗಬಹುದು ಎಂದು ತಿಳಿಸಿದ್ದರು ಎಂದು ಗೊತ್ತಾಗಿದೆ.

ಹೀಗಾಗಿ ಅಗತ್ಯ ವೈದ್ಯಕೀಯ ಉಪಕರಣಗಳಿಗೆ ಹೋಲುವಂತ ಕಾಮಗಾರಿಯನ್ನು ಸಹ ಕೈಗೊಳ್ಳಬೇಕಾಗಿರುವುದರಿಂದ ಉಪಕರಣ, ಕಾಮಗಾರಿ, ಎಲೆಕ್ಟ್ರಿಕ್‌ ಕಾಮಗಾರಿ ಎಲ್ಲವನ್ನೂ ಒಳಗೊಂಡಂತೆ ಟರ್ನ್‌ಕೀ ಪ್ರಾಜೆಕ್ಟ್‌ ಮೂಲಕ ಇ-ಟೆಂಡರ್‌ ಆಹ್ವಾನಿಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿದೆ ಎಂಬುದು ತಿಳಿದು ಬಂದಿದೆ.

SUPPORT THE FILE

Latest News

Related Posts