ಪರಿಶಿಷ್ಟರ ಕಲ್ಯಾಣಕ್ಕೆ 8,086.60 ಕೋಟಿ ಖರ್ಚಾಗಿದ್ದರೂ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲ

ಬೆಂಗಳೂರು; ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳುವ ರಾಜ್ಯ ವಲಯ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೂ ಸೇರಿದಂತೆ ವಿವಿಧ ಇಲಾಖೆಗಳಿಂದ ಜಿಲ್ಲೆಗಳಿಗೆ ಬಿಡುಗಡೆ ಆಗುತ್ತಿರುವ ಕೋಟ್ಯಂತರ ರು.ಮೊತ್ತದ ಅನುದಾನದ ಬಗ್ಗೆಯೂ ಯಾವುದೇ ಮಾಹಿತಿಯೂ ಇಲ್ಲ.

ವಿಕಾಸಸೌಧದಲ್ಲಿ ಸಮಾಜ ಕಲ್ಯಾಣ ಸಚಿವ ಶ್ರೀನಿವಾಸ ಕೋಟಾ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ 2021ರ ಸೆಪ್ಟಂಬರ್‌ 22ರಂದು ನಡೆಯಲಿರುವ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ನೋಡಲ್‌ ಏಜೆನ್ಸಿ ಸಭೆಗೆ ಸಮಾಜ ಕಲ್ಯಾಣ ಇಲಾಖೆಯು ಮಂಡಿಸಿರುವ ವಿವರಣೆಗಳ ಟಿಪ್ಪಣಿಯಲ್ಲಿ ‘ಜಿಲ್ಲಾ ಮಟ್ಟದ ಆಧಿಕಾರಿಗಳಿಗೆ ಮಾಹಿತಿಯೇ ಇಲ್ಲ’ ಎಂಬ ಅಂಶವನ್ನು ನಮೂದಿಸಲಾಗಿದೆ. ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆಯು ಮಂಡಿಸಲಿರುವ 79 ಪುಟಗಳ ಮಾಹಿತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ಇತ್ತೀಚೆಗೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲೆಗಳಲ್ಲಿ ನಡೆಸಿದ ಎಸ್‌ಸಿಎಸ್‌ಪಿ, ಟಿಎಸ್‌ಪಿ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ರಾಜ್ಯ ವಲಯ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಹೆಚ್ಚಿನ ಮಾಹಿತಿ ಇಲ್ಲದೇ ಇರುವುದನ್ನು ಗಮನಿಸಲಾಗಿದೆ. ರಾಜ್ಯ ವಲಯ ಕಾರ್ಯಕ್ರಮಗಳಡಿ ವಿವಿಧ ಇಲಾಖೆಗಳಿಂದ ಜಿಲ್ಲೆಗಳಿಗೆ ಬಿಡುಗಡೆ ಮಾಡುವ ಅನುದಾನದ ಬಗ್ಗೆಯೂ ಸಹ ಯಾವುದೇ ಮಾಹಿತಿ ಇರುವುದಿಲ್ಲ,’ ಎಂದು ಜಿಲ್ಲಾ ಮೇಲ್ವಿಚಾರಣೆ ಸಮಿತಿಗಳ ಸಭೆಗಳಲ್ಲಿ ಜಿಲ್ಲಾಧಿಕಾರಿಗಳು ತಿಳಿಸಿರುವುದು ಕಾರ್ಯಸೂಚಿಯಲ್ಲಿನ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಆಸ್ಪತ್ರೆ ನಿರ್ವಹಣೆ, ಶುಚಿ ಯೋಜನೆ, ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ರೋಗ ಪತ್ತೆ ಪರೀಕ್ಷೆ, ಆಯುಷ್ಮಾನ್‌ ಭಾರತ್‌ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ 447.04 ಕೋಟಿ ಬಿಡುಗಡೆಯಾಗಿ ಈ ಪೈಕಿ 431.72 ಕೋಟಿ ರು. ವೆಚ್ಚ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಂಕಿ ಅಂಶಗಳ ಮಾಹಿತಿಯನ್ನು ಒದಗಿಸಿದೆಯಾದರೂ ಈ ಇಲಾಖೆಯಡಿ ಯಾವುದೇ ಕಾರ್ಯಕ್ರಮಗಳಿಗೆ ಜಿಲ್ಲೆಗಳಿಗೆ ಅನುದಾನ ಬಿಡುಗಡೆ ಆಗುತ್ತಿಲ್ಲ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ. ಅದೇ ರೀತಿ ಮಹಿಳಾ ಅಭಿವೃದ್ಧಿ ನಿಗಮದಿಂದಲೂ ಜಿಲ್ಲೆಗಳಿಗೆ ಅನುದಾನ ಬಿಡುಗಡೆಯಾಗಿಲ್ಲ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳು ತಿಳಿಸಿರುವುದು ಗೊತ್ತಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಡಿ ವಿವಿಧ ಯೋಜನೆಯಡಿ ಅನುಷ್ಠಾನಗೊಂಡಿರುವ ಕಾಮಗಾರಿಗಳ ವಿವರಗಳನ್ನು ಸಭೆಗೆ ನೀಡಿಲ್ಲ. ಇನ್ನು ವಸತಿ ಇಲಾಖೆಯಡಿ ಪ್ರಧಾನಮಂತ್ರಿ ಆವಾಸ್‌ ಯೋಜನೆ, ಡಾ ಬಿ ಆರ್‌ ಅಂಬೇಡ್ಕರ್‌ ನಿವಾಸ್‌ ಯೋಜನೆ, ಕೊಳಚೆಗಳ ಸುಧಾರಣೆ, ಪ್ರಧಾನಮಂತ್ರಿ ಆವಾಸ್‌ ಯೋಜನೆ (ಗ್ರಾಮ) ಅಡಿಯಲ್ಲಿ ಎಷ್ಟು ಫಲಾನುಭವಿಗಳಿಗೆ ಅನುದಾನ ಬಿಡುಗಡೆಯಾಗಿದೆ ಎಂಬ ಮಾಹಿತಿ ಜಿಲ್ಲೆಗಳಲ್ಲಿ ಲಭ್ಯವಿಲ್ಲ. ಅಲ್ಲದೆ ಜಿಲ್ಲೆಗಳಿಂದ ನೀಡಿರುವ ಮಾಹಿತಿಯಂತೆ ಕಳೆದ 3 ವರ್ಷಗಳಿಂದ ಎಸ್‌ಸಿಎಸ್‌ಪಿ ಮತ್ತು ಟಿ ಎಸ್‌ಪಿ ಕಾರ್ಯಕ್ರಮಗಳಡಿ ಯಾವುದೇ ಗುರಿಯನ್ನೂ ನಿಗದಿಪಡಿಸಿಲ್ಲ ಎಂಬ ಅಂಶ ತಿಳಿದು ಬಂದಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ನೀಡಲು ವಿವಿಧ ನಿಗಮಗಳಿಗೆ 337.01 ಕೋಟಿ ರು.ಗಳನ್ನು ನೀಡಿದೆ. ಆದರೆ ಜಿಲ್ಲೆಗಳಲ್ಲಿ ಬಸ್‌ ಪಾಸ್‌ ಪಡೆದಿರುವ ಪ.ಜಾತಿ, ಪ.ಪಂಗಡದ ವಿದ್ಯಾರ್ಥಿಗಳ ಸಂಖ್ಯಾ ವಿವರದ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೇ ಮಾಹಿತಿ ಇಲ್ಲ.

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಹಿಂದಿನ ಸಾಲಿನಲ್ಲಿ ಕೈಗೆತ್ತಿಕೊಂಡಿದ್ದ ಕೊಳವೆ ಬಾವಿ, ತೆರೆದ ಬಾವಿ, ಚೆಕ್‌ ಡ್ಯಾಂ ಕಾಮಗಾರಿಗಳಿಗೆ ಎಸ್‌ಎಸ್‌ಪಿ ಅಡಿ 471.00 ಕೋಟಿ ಮತ್ತು ಟಿಎಸ್‌ಪಿ ಅಡಿ 185.00 ಕೋಟಿ ರು. ಬಾಕಿ ಇದೆ. ಪ್ರಸಕ್ತ ಸಾಲಿನಲ್ಲಿ ಹೊಸ ಕಾಮಗಾರಿಗಳನ್ನು ತೆಗೆದುಕೊಳ್ಳಲು ಅನುಮತಿ ನೀಡಿಲ್ಲ ಎಂಬುದು ಗೊತ್ತಾಗಿದೆ.

ಪ್ರತಿ ವರ್ಷ 14 ಸರ್ಕಾರಿ ವಿಶ್ವವಿದ್ಯಾಲಯಗಳ ಪೈಕಿ ಪ.ಜಾತಿ, ಪ.ಪಂಗಡದ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಹಾಗೂ ಇತರೆ ಕಾರ್ಯಕ್ರಮಗಳಿಗೆ ಅನುದಾನ ಹಂಚಿಕೆ ಮಾಡಲಾಗುತ್ತಿತ್ತು. ಪ್ರಸಕ್ತ ಸಾಲಿನಲ್ಲಿ ಕೇವಲ 4 ವಿಶ್ವವಿದ್ಯಾಲಯಗಳಿಗೆ ಮಾತ್ರ ಅನುದಾನ ಹಂಚಿಕೆ ಮಾಡಲಾಗಿದೆ. ವಿವಿಧ ವಿಶ್ವವಿದ್ಯಾಲಯಗಳಿಂದ ಪಡೆದಿರುವ ಮಾಹಿತಿಯಂತೆ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಹಾಗೂ ಲ್ಯಾಪ್‌ಟಾಪ್‌ ನೀಡಲು 60.82 ಕೋಟಿ ಅನುದಾನ ಅಗತ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ.

ಇನ್ನು, 2021-22ನೇ ಸಾಲಿನ ಸೆಪ್ಟಂಬರ್‌ ಅಂತ್ಯಕ್ಕೆ ಬಿಡುಗಡೆಯಾಗಿದ್ದ 11,226.71 ಕೋಟಿ ರು.ನಲ್ಲಿ 8,086.60 ಕೋಟಿ ಖರ್ಚು ಮಾಡಿ ಇನ್ನೂ 3,140.11 ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಇದು ಒಟ್ಟು ಬಿಡುಗಡೆಗೆ ಶೇ.31.09ರಷ್ಟು ಪ್ರಗತಿ ಸಾಧಿಸಿದಂತಾಗಿದೆ. ಈ ಸಾಲಿನಲ್ಲಿ ಹಂಚಿಕೆಯಾಗಿದ್ದ ಒಟ್ಟು 26,005.01 ಕೋಟಿ ರು.ನಲ್ಲಿ 11,226.71 ಕೋಟಿ ರು. ಬಿಡುಗಡೆ ಮಾಡಿದ್ದರೆ ಬಿಡುಗಡೆಗೆ ಇನ್ನೂ 14,778.3 ಕೋಟಿ ರು. ಬಾಕಿ ಇದೆ.

2020-21ನೇ ಸಾಲಿನಲ್ಲಿ ಸೆಪ್ಟಂಬರ್‌ ಅಂತ್ಯಕ್ಕೆ ಒಟ್ಟು ಹಂಚಿಕೆಯ 27,503.90 ಕೋಟಿ ರು. ನಲ್ಲಿ ಕೇವಲ 5,603.36 ಕೋಟಿ ರು. ವೆಚ್ಚ ಮಾಡಿ 21,900.54 ಕೋಟಿ ರು. ಖರ್ಚು ಮಾಡದೆಯೇ ಬಾಕಿ ಉಳಿಸಿಕೊಂಡಿತ್ತು. ಇದು ಒಟ್ಟು ಹಂಚಿಕೆಯಲ್ಲಿ ಶೇ. 20.37ರಷ್ಟು ಮಾತ್ರ ಪ್ರಗತಿ ಕಂಡಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಶೇ.10.72ರಷ್ಟು ಮಾತ್ರ ಏರಿಕೆಯಾಗಿದೆ.

ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ 35 ಇಲಾಖೆಗಳ ವ್ಯಾಪ್ತಿಯಲ್ಲಿ 2021ರ ಸೆಪ್ಟಂಬರ್‌ ಅಂತ್ಯಕ್ಕೆ ಒಟ್ಟು 18,331.54 ಕೋಟಿ ರು. ಹಂಚಿಕೆಯ ಪೈಕಿ ಬಿಡುಗಡೆ ಮಾಡಿದ್ದು 8,856.24 ಕೋಟಿ ರು. ಮಾತ್ರ. ಈ ಪೈಕಿ ವೆಚ್ಚ ಮಾಡಿರುವುದು 5,885.52 ಕೋಟಿ ರು., ಇದು ಒಟ್ಟು ಹಂಚಿಕೆ, ಬಿಡುಗಡೆಯಲ್ಲಿ ಶೇ.32.11ರಷ್ಟು ಪ್ರಗತಿ ಸಾಧಿಸಲಾಗಿದೆ.

ಪರಿಶಿಷ್ಟ ಬುಡಕಟ್ಟು ಉಪಯೋಜನೆಯಡಿಯಲ್ಲಿ 35 ಇಲಾಖೆಗಳಿಗೆ ಒಟ್ಟು 7,673.47 ಕೋಟಿ ರು. ಹಂಚಿಕೆ ಮಾಡಲಾಗಿದ್ದು ಈ ಪೈಕಿ 3,340.79 ಕೋಟಿ ರು. ಬಿಡುಗಡೆಯಾಗಿದೆ. ಇದರಲ್ಲಿ ವೆಚ್ಚ ಮಾಡಿರುವುದು 2,200.80 ಕೋಟಿ ರು. ಮಾತ್ರ. ಇದು ಒಟ್ಟು ಹಂಚಿಕೆ ಮತ್ತು ಬಿಡುಗಡೆಯಲ್ಲಿ  ಶೇ. 28.68ರಷ್ಟು ಮಾತ್ರ ಪ್ರಗತಿ ಕಂಡಿದೆ.

the fil favicon

SUPPORT THE FILE

Latest News

Related Posts