ಸೋಪ್‌ ನೂಡಲ್ಸ್‌ ಖರೀದಿ; 20 ಕೋಟಿ ಅವ್ಯವಹಾರ ಪ್ರಕರಣಕ್ಕೆ ಎಳ್ಳು ನೀರು?

ಬೆಂಗಳೂರು: ಸೋಪ್‌ ನೂಡಲ್ಸ್‌ ಖರೀದಿಯಲ್ಲಿ 20.00 ಕೋಟಿಗೂ ಅಧಿಕ ಮೊತ್ತದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಹಿರಿಯ ಐಎಎಸ್‌ ಅಧಿಕಾರಿ ಗುಂಜನ್‌ ಕೃಷ್ಣ ಅವರು ಮೈಸೂರ್‌ ಸ್ಯಾಂಡಲ್‌ ಸೋಪ್‌ ಕಾರ್ಖಾನೆಯ ಆರೋಪಿತ ಅಧಿಕಾರಿಗಳ ವಿರುದ್ಧದ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ವರದಿ ನೀಡಿರುವುದು ಇದೀಗ ಬಹಿರಂಗವಾಗಿದೆ.

ಈ ಪ್ರಕರಣದಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮದ ಕುರಿತು ಕ್ರಮಬದ್ಧವಾಗಿ ಮತ್ತು ವಸ್ತುನಿಷ್ಠವಾಗಿ ತನಿಖೆ ನಡೆಸಬೇಕಿದ್ದ ಗುಂಜನ್‌ ಕೃಷ್ಣ ಅವರು ಐಎಎಸ್‌ ಅಧಿಕಾರಿಗಳ ಲಾಬಿಗೆ ಮಣಿದು ಇಡೀ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ ಎಂಬ ಮತ್ತೊಂದು ಆರೋಪಕ್ಕೂ ಗುರಿಯಾಗಿದ್ದಾರೆ.

ಸೋಪ್‌ ನೂಡಲ್ಸ್‌ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕುರಿತು ಕಾರ್ಮಿಕ ಸಂಘಟನೆ ದಾಖಲೆ ಸಮೇತ ದೂರು ನೀಡಿದ್ದರೂ ಕ್ರಮಬದ್ಧವಾಗಿ ತನಿಖೆ ನಡೆಸಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಅಧಿಕಾರಿಗಳು ನೀಡಿದ್ದ ಲಿಖಿತ ಉತ್ತರ ಮತ್ತು ಸಮಜಾಯಿಷಿ ಆಧರಿಸಿ ಇಡೀ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ ಎಂಬ ಬಲವಾದ ಆರೋಪವೂ ಕೇಳಿ ಬಂದಿದೆ. ಗುಂಜನ್‌ ಕೃಷ್ಣ ಅವರು ನೀಡಿರುವ ತನಿಖಾ ವರದಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಂಪನಿ (ಕೆಎಸ್‌ಡಿಎಲ್‌) ಕಚ್ಚಾ ಸಾಮಗ್ರಿಗಳ ಪೈಕಿ ಒಂದಾದ ನೂಡಲ್ಸ್‌ ಖರೀದಿಯಲ್ಲಿ 20.00 ಕೋಟಿಗೂ ಅಧಿಕ ಮೊತ್ತದಲ್ಲಿ ಅವ್ಯವಹಾರ ನಡೆದಿದೆ ಎಂದು ಕಾರ್ಖಾನೆಯ ಕಾರ್ಮಿಕ ಸಂಘಟನೆಯು ದಾಖಲೆ ಸಮೇತ ದೂರು ಸಲ್ಲಿಸಿತ್ತು. ಆದರೂ ತನಿಖಾಧಿಕಾರಿ ಗುಂಜನ್‌ ಕೃಷ್ಣ ಅವರು ಪೂರಕ ದಾಖಲೆಗಳನ್ನು ಸಂಘಟನೆಯು ಹಾಜರುಪಡಿಸಿಲ್ಲ. ದಾಖಲೆಗಳು ಸುಳ್ಳು ಎಂದು ಸಾಬೀತುಪಡಿಸಲು ಯಾವುದೇ ದಾಖಲೆಗಳನ್ನು ಒದಗಿಸಿಲ್ಲ ಎಂದು ಷರಾ ಬರೆದಿದ್ದಾರೆ.

‘ಡಿಎಫ್‌ಎ ಸೋಪ್‌ ನೂಡಲ್‌ ಖರೀದಿಯಲ್ಲಿ 20 ಕೋಟಿಗೂ ಅದಿಕ ಅವ್ಯವಹಾರವಾಗಿದೆ ಎಂದು ಆಪಾದಿಸಿ ಯಾವ ರೀತಿ ಅವ್ಯವಹಾರವಾಗಿದೆ ಎಂಬ ಬಗ್ಗೆ ಪೂರಕ ದಾಖಲೆಳನ್ನಾಗಲೀ, ಮಾಹಿತಿಗಳನ್ನಾಗಲಿ ಒದಗಿಸದೇ ಇರುವುದರಿಂದ ತನಿಖೆಗೆ ಸೂಚಿಸಿರುವ ಆರೋಪದ ಅಂಶವು ಸಾಬೀತಾಗಿರುವುದಿಲ್ಲ,’ ಎಂದು ಗುಂಜನ್‌ ಕೃಷ್ಣ ಅವರು ಹೇಳಿರುವುದು ವರದಿಯಿಂದ ತಿಳಿದು ಬಂದಿದೆ.

ಸೋಪ್‌ ನೂಡಲ್ಸ್‌ ಸರಬರಾಜು ಸಂಬಂಧ ಪ್ರತಿಷ್ಠಿತ ಕಂಪನಿಗಳ ಬಿಡ್‌ಗಳನ್ನು ತಿರಸ್ಕರಿಸಿ ಅನುಭವವೇ ಇಲ್ಲದ ಕರ್ನಾಟಕ ಕೆಮಿಕಲ್ಸ್‌ ಕಂಪನಿಯ ಬಿಡ್‌ನ್ನು ಅನುಮೋದಿಸಿ ಅಕ್ರಮಕ್ಕೆ ದಾರಿಮಾಡಿಕೊಟ್ಟಿತ್ತು. ಇದರ ಹಿಂದೆ ದೊಡ್ಡಮಟ್ಟದಲ್ಲಿ ಕಮಿಷನ್‌ ವ್ಯವಹಾರ ನಡೆದಿದೆ ಎಂಬ ಗುರುತರವಾದ ಆರೋಪ ಕೇಳಿ ಬಂದಿತ್ತು.

ಈ ಪ್ರಕರಣದ ಕುರಿತು ಕಾರ್ಖಾನೆಯ ನೌಕರರ ಸಂಘ ದೂರು ನೀಡುವವರೆಗೂ ಕೈಗಾರಿಕೆ ಇಲಾಖೆಯ ಹಿಂದಿನ ಸಚಿವ ಜಗದೀಶ್‌ ಶೆಟ್ಟರ್‌ ಮತ್ತು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಗಮನಕ್ಕೂ ಬಂದಿರಲಿಲ್ಲ.

ನೂಡಲ್ಸ್‌ ಖರೀದಿಯಲ್ಲಿನ ಅಕ್ರಮವೂ ಸೇರಿದಂತೆ ಹಲವು ಅಕ್ರಮ ಪ್ರಕರಣಗಳೂ ನಡೆದಿವೆ. ಈ ಎಲ್ಲಾ ಪ್ರಕರಣಗಳ ಸಂಬಂಧ ಕೆಎಸ್‌ಡಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಹಿರಿಯ ಐಎಫ್‌ಎಸ್‌ ಅಧಿಕಾರಿ ಹರಿಕುಮಾರ್‌ ಝಾ ಸೇರಿದಂತೆ ಇನ್ನಿತರೆ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಸರ್ಕಾರವು ಹಿರಿಯ ಐಎಎಸ್‌ ಅಧಿಕಾರಿ ಗುಂಜನ್‌ ಕೃಷ್ಣ ಅವರನ್ನು ನೇಮಿಸಿ ಆದೇಶ ಹೊರಡಿಸಿತ್ತು.

ಅವ್ಯವಹಾರದಲ್ಲಿ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಇತರೆ ಅಧಿಕಾರಿಗಳ ವಿರುದ್ಧ ವಿಚಾರಣೆ ಮತ್ತು ತನಿಖೆ ನಡೆಸುವ ಸಲುವಾಗಿ ಸರ್ಕಾರ ತನಿಖಾ/ವಿಚಾರಣಾಧಿಕಾರಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ನೂಡಲ್ಸ್‌ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ 20 ಕೋಟಿ ಅಕ್ರಮದ ಬಗ್ಗೆ 10 ದಿನದ ಒಳಗೆ ವರದಿ ಸಲ್ಲಿಸಲು ಸೂಚಿಸಿತ್ತು.

ಪ್ರಕರಣದ ಹಿನ್ನೆಲೆ

ಸಾಬೂನು ತಯಾರಿಸಲು ಬಳಸುವ ಕಚ್ಛಾ ಸಾಮಗ್ರಿಯಾದ 17 ಸಾವಿರ ಮೆಟ್ರಿಕ್‌ ಟನ್‌ ಪ್ರಮಾಣದಲ್ಲಿ ಖರೀದಿಸಲು ನೂಡಲ್ಸ್‌ ಖರೀದಿಸಲು 2019ರಲ್ಲಿ ಟೆಂಡರ್‌ ಕರೆಯಲಾಗಿತ್ತು. ಆದರೆ ಕುಂಟು ನೆಪಗಳನ್ನೊಡ್ಡಿದ್ದ ಅಧಿಕಾರಿಗಳು ಟೆಂಡರ್‌ ಪ್ರಕ್ರಿಯೆಯನ್ನು 5 ಬಾರಿ ಮುಂದೂಡಿದ್ದರು. 6ನೇ ಬಾರಿಗೆ ಪುನಃ ಟೆಂಡರ್‌ ಕರೆದಿದ್ದ ಅಧಿಕಾರಿಗಳು ನೂಡಲ್ಸ್‌ ಪ್ರಮಾಣವನ್ನು 17 ಸಾವಿರ ಮೆಟ್ರಿಕ್‌ ಟನ್‌ನಿಂದ 12 ಸಾವಿರಕ್ಕಿಳಿಸಿದ್ದರು.

ಆದರೆ 6ನೇ ಬಾರಿ ಕರೆದಿದ್ದ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲಿಲ್ಲ. 2020ರ ಜನವರಿವರೆಗೆ ಪುನಃ 12 ಸಾವಿರ ಮೆಟ್ರಿಕ್‌ ಟನ್‌ ಟನ್‌ ಪ್ರಮಾಣಕ್ಕೆ ಕರೆಯಲಾಗಿತ್ತಾದರೂ ಏಪ್ರಿಲ್‌, ಆಗಸ್ಟ್‌, ಸೆಪ್ಟಂಬರ್‌ವರೆಗೂ ಮುಂದುವರೆಯಿತು. ಇದಾದ ನಂತರ ಅದಾನಿ ವಿಲ್‌ಮರ್‌ ಸಂಸ್ಥೆಗೆ ಪ್ರತಿ ಟನ್‌ಗೆ 59 ಸಾವಿರ ರು.ನಂತೆ ಖರೀದಿ ಆದೇಶ ನೀಡಲಾಗಿತ್ತು.

ಇದಾದ ನಂತರ ಮತ್ತೊಮ್ಮೆ ಟೆಂಡರ್‌ ಕರೆದಿದ್ದ ಅಧಿಕಾರಿಗಳು 6 ಸಾವಿರ ಮೆಟ್ರಿಕ್‌ ಟನ್‌ಗೆ 3 ಎಫ್‌ ಇಂಡಸ್ಟ್ರೀಸ್‌ಗೆ ಪ್ರತಿ ಮೆಟ್ರಿಕ್‌ ಟನ್‌ಗೆ 71,500 ರು.ಗೆ ಖರೀದಿ ಆದೇಶ ನೀಡಿದ್ದರು. ಪುನಃ ಅಕ್ಟೋಬರ್‌ 2020ಕ್ಕೆ ಟೆಂಡರ್‌ ಕರೆದಿದ್ದ ಅಧಿಕಾರಿಗಳು 2020ರ ನವೆಂಬರ್‌ 20ರಂದು ಪ್ರತಿ ಮೆಟ್ರಿಕ್‌ ಟನ್‌ 87,000 ರು.ಗಳಂತೆ, 104 ಕೋಟಿ 40 ಲಕ್ಷ ರು.ಗೆ ಕರ್ನಾಟಕ ಕೆಮಿಕಲ್‌ ಇಂಡಸ್ಟ್ರೀಸ್‌ಗೆ ಖರೀದಿ ಆದೇಶ ನೀಡಲಾಗಿತ್ತು. ಪದೇ ಪದೇ ಟೆಂಡರ್‌ ಕರೆದಿದ್ದ ಅಧಿಕಾರಿಗಳ ನಡೆ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು.

ಕರ್ನಾಟಕ ಕೆಮಿಕಲ್‌ ಮತ್ತು ಕರ್ನಾಟಕ ಅರೋಮಾ ಕಂಪನಿ ಸೋದರ ಸಂಸ್ಥೆಗಳಾಗಿವೆ. ಇವೆರಡೂ ಒಂದೇ ವಿಳಾಸದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಂತಹ ಸಂಸ್ಥೆಗಳಿಗೆ ಆರ್ಥಿಕ ಬಿಡ್‌ನಲ್ಲಿ ಅವಕಾಶ ನೀಡಿ ಕೆಟಿಪಿಪಿ ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. ಇನ್ನು ನೂಡಲ್ಸ್‌ ಹೊರತುಪಡಿಸಿ ಇನ್ನಿತರೆ ಸಾಮಗ್ರಿಗಳ ಖರೀದಿಗೆ ವಾರ್ಷಿಕ ಟೆಂಡರ್‌ ಕರೆಯುವ ಅಧಿಕಾರಿಗಳು ನೂಡಲ್ಸ್‌ ಖರೀದಿಗೆ ಮಾತ್ರ ಟೆಂಡರ್‌ನ್ನು ಪದೇ ಪದೇ ಮುಂದೂಡಿರುವುದು ಸಂಶಯಗಳಿಗೆ ಕಾರಣವಾಗಿತ್ತು.

ಅಲ್ಲದೆ ಜಾಗತಿಕ ಮಾರುಕಟ್ಟೆಯಲ್ಲಿ ಪಾನ್‌ ಸೆಂಚುರಿ, ಬಿರ್ಲಾ ಕಂಪನಿ, ಮಲೇಶಿಯಾ, ಕೆಎಲ್‌ಕೆ ಪಾಲ್ಮೋಸಾ, ಇಜೀಲ್‌ ಕೆಮಿಕಲ್ಸ್‌ ಪ್ರೈವೈಟ್‌ ಲಿಮಿಟೆಡ್‌ ಚೆನ್ನೈ, ಕರನೀತ್‌ ಎಂಟರ್‌ಪ್ರೈಸೆಸ್‌ ಇಂಡಿಯಾ ಪ್ರೈವೈಟ್‌ ಲಿಮಿಟೆಡ್‌, ಬೆಂಗಳೂರು ಬಿರ್ಲಾ ಲಿಮಿಟೆಡ್‌, ಮಲೇಷಿಯಾ ಕಂಪನಿ 3ಎಫ್‌ ಇಂಡಸ್ಟ್ರೀಸ್‌ ಇಂಡಿಯಾ ಸೇರಿದಂತೆ ಹಲವು ಕಂಪನಿಗಳು ನೂಡಲ್ಸ್‌ನ್ನು ಕೇವಲ 55ರಿಂದ 60 ಸಾವಿರ ರು.ಗೆ ಮಾರಾಟ ಮಾಡುತ್ತಿವೆ. ಆದರೆ ಕೆಎಸ್‌ಡಿಎಲ್‌ನ ಭ್ರಷ್ಟ ಅಧಿಕಾರಿಗಳು ಕರ್ನಾಟಕ ಕೆಮಿಕಲ್ಸ್‌ ಕಂಪನಿಯಿಂದ ಖರೀದಿಸಿ ಕಂಪನಿಯ ಬೊಕ್ಕಸಕ್ಕೆ ನಷ್ಟಕ್ಕೆ ಕಾರಣರಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದರು.

ಕರ್ನಾಟಕ ಕೆಮಿಕಲ್‌ ಕಂಪನಿಯು ತನ್ನ ಸೇವಾವಧಿಯಲ್ಲಿ ಎಂದಿಗೂ ಯಾರಿಗೂ 1 ಟನ್‌ನಷ್ಟೂ ನೂಡಲ್ಸ್‌ ಕೂಡ ಸರಬರಾಜು ಮಾಡಿಲ್ಲ. ಇಂತಹ ಕಂಪನಿಗೆ ಖರೀದಿ ಆದೇಶ ನೀಡಲಾಗಿದೆ. ಇದು ಅವ್ಯವಹಾರವಲ್ಲದೆ ಮತ್ತೇನು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದರು.

the fil favicon

SUPPORT THE FILE

Latest News

Related Posts