ಬೆಂಗಳೂರು; 2018ನೇ ಸಾಲಿನ ಎಂಬಿಬಿಎಸ್ ಮೊದಲ ವರ್ಷದ ಪ್ರವೇಶಾತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷೆ ಪ್ರಾಧಿಕಾರವು ಪ್ರಕಟಿಸಿದ್ದ ಪಟ್ಟಿಗೆ ವಿರುದ್ಧವಾಗಿ 210 ವಿದ್ಯಾರ್ಥಿಗಳಿಗೆ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾನ್ಯತೆ, ಸಂಯೋಜನೆ ಪಡೆದ ಕೆಲ ಖಾಸಗಿ ಕಾಲೇಜುಗಳು ಪ್ರಭಾವಿಗಳ ಮಕ್ಕಳಿಗೆ ಪ್ರವೇಶಾನುಮತಿ ನೀಡಿದೆ. ಅಲ್ಲದೆ ಪ್ರಭಾವಿಗಳ ಮಕ್ಕಳಿಗೆ ಪರೀಕ್ಷೆಗೂ ಅವಕಾಶ ಕಲ್ಪಿಸಿ ಇದೀಗ ಫಲಿತಾಂಶ ಪ್ರಕಟಿಸಿರುವ ಪ್ರಕರಣ ಇದೀಗ ಬಹಿರಂಗವಾಗಿದೆ.
ಈ ಪೈಕಿ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಹಾಲಿ ಕುಲಸಚಿವ ರಾಮಕೃಷ್ಣರೆಡ್ಡಿ ಅವರ ಪುತ್ರ ತರುಣ್ ರೆಡ್ಡಿ ಪ್ರಕರಣವೂ ಒಂದು. ಈತನ ಪ್ರವೇಶಾತಿಯೂ ನಿಯಮಬಾಹಿರವಾಗಿದೆ ಎಂಬ ಆರೋಪ ಕೇಳಿ ಬಂದಿದ್ದರ ಬೆನ್ನಲ್ಲೇ ಇದೀಗ ಫಲಿತಾಂಶವೂ ಪ್ರಕಟವಾಗಿದೆ.
ಈ ಪ್ರಕರಣದಲ್ಲಿ ಕುಲಸಚಿವ ರಾಮಕೃಷ್ಣರೆಡ್ಡಿ ಅವರು ಸ್ವಜನಪಕ್ಷಪಾತದ ಆರೋಪಕ್ಕೆ ಗುರಿಯಾಗಿದ್ದಾರೆ. ಅಲ್ಲದೆ ತಮ್ಮ ಪುತ್ರ ಪರೀಕ್ಷೆಯಲ್ಲಿ ಹಾಜರಾಗುತ್ತಿರುವುದು ಗೊತ್ತಿದ್ದರೂ ಪರೀಕ್ಷಾಂಗ ಕುಲಸಚಿವ ಹುದ್ದೆಯ ಕಾರ್ಯನಿರ್ವಹಣೆಯಿಂದ ಹಿಂದೆ ಸರಿಯದೇ ಅದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸಿರುವುದು ವಿವಾದಕ್ಕೆ ದಾರಿಮಾಡಿಕೊಟ್ಟಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ನೀಟ್ ಪ್ರವೇಶ ಪರೀಕ್ಷೆಯಲ್ಲಿ ಒಟ್ಟು 210 ವಿದ್ಯಾರ್ಥಿಗಳು ಅನರ್ಹಗೊಂಡಿದ್ದರು. ಈ ಪೈಕಿ ರಾಮಕೃಷ್ಣರೆಡ್ಡಿ ಅವರ ಪುತ್ರ ತರುಣ್ ರೆಡ್ಡಿ ಕೂಡ ಒಬ್ಬ ಎಂದು ಗೊತ್ತಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದ್ದ ಪಟ್ಟಿಗೆ ವಿರುದ್ಧವಾಗಿ ತರುಣ್ ರೆಡ್ಡಿ ಅವರಿಗೆ ಸಪ್ತಗಿರಿ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಕಲ್ಪಿಸಲಾಗಿತ್ತು. ಇದು ಗೊತ್ತಿದ್ದರೂ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂಬುದು ತಿಳಿದು ಬಂದಿದೆ.
ಅಲ್ಲದೆ 210 ವಿದ್ಯಾರ್ಥಿಗಳ ಪ್ರವೇಶಾನುಮತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದ್ದರೂ ತರುಣ್ ರೆಡ್ಡಿ ಅವರಿಗೆ ಪರೀಕ್ಷೆ ಹಾಜರಾಗಲು ಅವಕಾಶಮಾಡಿಕೊಟ್ಟಿದ್ದಲ್ಲದೆ ಉತ್ತೀರ್ಣಗೊಳಿಸಿ ಫಲಿತಾಂಶವನ್ನು ಪ್ರಕಟಿಸಿರುವುದರ ಹಿಂದೆ ಅಕ್ರಮ ನಡೆದಿದೆ ಎಂಬ ಆಪಾದನೆ ಕೇಳಿ ಬಂದಿದೆ.
ಈ ಪ್ರಕರಣದಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ರಾಮಕೃಷ್ಣರೆಡ್ಡಿ ಅವರ ವಿರುದ್ಧ ಸ್ವಜನಪಕ್ಷಪಾತ ಆರೋಪ ಕೇಳಿ ಬಂದಿದೆಯಲ್ಲದೆ, ನ್ಯಾಯಾಲಯದ ಆದೇಶ, ಎಂಸಿಐ ನಿಯಮ ಮತ್ತು ವಿಶ್ವವಿದ್ಯಾಲಯಗಳ ಅಧಿನಿಯಮಗಳನ್ನೂ ಉಲ್ಲಂಘಿಸಲಾಗಿದೆ ಎಂಬ ಗುರುತರ ಆರೋಪಕ್ಕೂ ಗುರಿಯಾಗಿದ್ದಾರೆ.
ಅಲ್ಲದೆ ಕರ್ನಾಟಕ ಉಚ್ಛ ನ್ಯಾಯಾಲಯವು ಎಂಬಿಬಿಎಸ್ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಆದರೆ ಇದರಲ್ಲಿ ತರುಣ್ ರೆಡ್ಡಿ ಸೇರಿದಂತೆ 210 ವಿದ್ಯಾರ್ಥಿಗಳು ಒಳಗೊಳ್ಳುವುದಿಲ್ಲ ಎಂದು ಹೇಳಲಾಗಿದೆ. ಆದರೂ ವಾಮಮಾರ್ಗದಲ್ಲಿ ತರುಣ್ ರೆಡ್ಡಿಗೆ ಪರೀಕ್ಷೆಗೆ ಹಾಜರಾಗಲು ಅವಕಾಶ ಮಾಡಿಕೊಟ್ಟು ಉತ್ತೀರ್ಣಗೊಳಿಸಲಾಗಿದೆ. ಹಾಗೆಯೇ ಇದೇ ಅವಧಿಯಲ್ಲಿ 171 ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಮರು ಮೌಲ್ಯಮಾಪನದಲ್ಲಿ ಹೆಚ್ಚು ಅಂಕಗಳನ್ನು ನೀಡುವ ಮೂಲಕ ಉತ್ತೀರ್ಣಗೊಳಿಸಿರುವುದರ ಹಿಂದೆ ಅಕ್ರಮ ನಡೆದಿದೆ ಎಂಬ ಗುರುತರ ಆರೋಪವೂ ಕೇಳಿ ಬಂದಿದೆ.
ತರುಣ್ ರೆಡ್ಡಿ ಪ್ರಕರಣದ ವಿವರ
ವಿಶ್ವವಿದ್ಯಾಲಯದ ಕುಲಸಚಿವ ರಾಮಕೃಷ್ಣಾರೆಡ್ಡಿ ಅವರ ಪುತ್ರ ತರುಣ್ ರೆಡ್ಡಿ 2018ರಲ್ಲಿ ಸಪ್ತಗಿರಿ ಮೆಡಿಕಲ್ ಕಾಲೇಜಿಗೆ ಮೊದಲ ವರ್ಷದ ಎಂಬಿಬಿಎಸ್‌ಗೆ ಪ್ರವೇಶ ಪಡೆದಿದ್ದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅನರ್ಹಗೊಂಡಿದ್ದ 210 ವಿದ್ಯಾರ್ಥಿಗಳಲ್ಲಿ ತರುಣ್ ರೆಡ್ಡಿಯೂ ಇದ್ದರೂ ಸಪ್ತಗಿರಿ ಮೆಡಿಕಲ್ ಕಾಲೇಜಿನಲ್ಲಿ ಅಕ್ರಮವಾಗಿ ಪ್ರವೇಶ ನೀಡಲಾಗಿತ್ತು. 2018, 2019 ಮತ್ತು 2021ನೇ ಸಾಲಿನಲ್ಲಿ ನಡೆದಿದ್ದ ಮೂರು ಪರೀಕ್ಷೆಗಳಲ್ಲಿ ಅನುತ್ತೀರ್ಣನಾಗಿದ್ದ ಎಂದು ತಿಳಿದು ಬಂದಿದೆ.
2021ರ ಫೆಬ್ರುವರಿಯಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಇವರಲ್ಲಿ ತರುಣ್ ರೆಡ್ಡಿ ಇರಲಿಲ್ಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪ್ರವೇಶಾತಿಗೆ ನಿರಾಕರಣೆಗೊಂಡಿದ್ದ 210 ವಿದ್ಯಾರ್ಥಿಗಳ ಪ್ರಕರಣದಲ್ಲಿ ತರುಣ್ ರೆಡ್ಡಿಯೂ ಇದ್ದುದ್ದರಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿರಲಿಲ್ಲ ಎಂದು ಗೊತ್ತಾಗಿದೆ.
ಆದರೂ ಪರೀಕ್ಷಾಂಗ ಕುಲಸಚಿವ ರಾಮಕೃಷ್ಣರೆಡ್ಡಿ ಅವರು ಈ ಪ್ರಕರಣದಲ್ಲಿ ಪ್ರಭಾವ ಬೀರಿ ತನ್ನ ಪುತ್ರ ತರುಣ್ ರೆಡ್ಡಿಯ ಉತ್ತರ ಪತ್ರಿಕೆಗಳನ್ನು ನಿಯಮಬಾಹಿರವಾಗಿ ಮರು ಮೌಲ್ಯಮಾಪನ ಮಾಡಿಸಲಾಗಿದೆ ಎಂಬ ಆಪಾದನೆ ಕೇಳಿ ಬಂದಿದೆ.
ಅಲ್ಲದೆ ಈ ಪ್ರಕ್ರಿಯೆಯಲ್ಲಿ ತಮ್ಮ ಆಪ್ತೇಷ್ಠ ಸಹದ್ಯೋಗಿಗಳು ಎಂದು ಹೇಳಲಾಗಿರುವ ರಾಜೀವ್‌ಗಾಂಧಿ ಆರೊಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಡಾ ರವೀಶ್, ಡಾ ಮಂಜುನಾಥ್ ರೆಡ್ಡಿ ಮತ್ತು ಡಾ ಹೇಮಂತ್‌ರಾವ್ ಎಂಬುವರನ್ನು ಬಳಸಿಕೊಂಡು ಒಟ್ಟು 5 ಬಾರಿ ಮರು ಮೌಲ್ಯಮಾಪನ ನಡೆಸಿ ತರುಣ್ ರೆಡ್ಡಿಯನ್ನು ಉತ್ತೀರ್ಣಗೊಳಿಸಲಾಗಿದೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ.
ಪ್ರಕರಣ ನಡೆದು ಹಲವು ದಿನಗಳಾದರೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಅವರು ಈ ಕುರಿತು ಗಮನಹರಿಸಿಲ್ಲ. ಅಲ್ಲದೆ ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ರಾಜೀವ್‌ಗಾಂಧಿ ಆರೊಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ತುಟಿಬಿಚ್ಚದಿರುವುದು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ..