ಬೆಂಗಳೂರು; ವಿಧಾನಸೌಧ ಕೆಂಗಲ್ ದ್ವಾರದ ಎದುರಿನ ರಸ್ತೆಯಲ್ಲಿ ಡಾಂಬರು ಕುಸಿದು ದೊಡ್ಡ ರಂಧ್ರ ಬಿದ್ದು ಆತಂಕ ಸೃಷ್ಟಿಯಾಗಿದ್ದರ ಬೆನ್ನಲ್ಲೇ ಇದೀಗ ವಿಧಾಸೌಧದ ತಳಮಹಡಿಯಲ್ಲಿನ ವರಾಂಡವೂ ಕುಸಿದಿದೆ ಎಂಬ ಆತಂಕಕಾರಿ ಸಂಗತಿ ಹೊರಬಿದ್ದಿದೆ.
ವಿಧಾನಸೌಧದ ನೆಲ ಮಹಡಿಯಲ್ಲಿಯೇ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಕಾರ್ಯನಿರ್ವಹಿಸುತ್ತಿದ್ದರೂ ಕಚೇರಿಯ ಕಣ್ಣಳತೆಯಲ್ಲಿರುವ ತಳಮಹಡಿಯ ಕ್ಯಾಂಟೀನ್‌ನ ವರಾಂಡದಲ್ಲಿ ನೆಲ ಕುಸಿದಿದ್ದರೂ ಗಮನ ಹರಿಸದಿರುವುದು ಇಂಜಿನಿಯರ್ ಅವರ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ವರಾಂಡದಲ್ಲಿ ನೆಲ ಕುಸಿಯುತ್ತಿರುವುದನ್ನು ಕ್ಯಾಂಟೀನ್ ಗುತ್ತಿಗೆದಾರರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಗಮನಕ್ಕೆ ತರುವವರೆಗೂ ಲೋಕೋಪಯೋಗಿ ಇಲಾಖೆಯ ಎಇಇ ಗಮನಕ್ಕೆ ಬರದಿರುವುದು ಅಚ್ಚರಿ ಮೂಡಿಸಿದೆ.
ಈ ಸಂಬಂಧ ಕ್ಯಾಂಟೀನ್ ಗುತ್ತಿಗೆದಾರರು ಡಿಪಿಎಆರ್‌ನ ಸರ್ಕಾರದ ಕಾರ್ಯದರ್ಶಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ವಿಧಾನಸೌಧದ ತಳಮಹಡಿಯಲ್ಲಿರುವ ಉಪಾಹಾರ ಮಂದಿರದ ವರಾಂಡ ಕುಸಿಯುತ್ತಿದ್ದು ಓಡಾಡಲು ತೊಂದರೆಯಾಗಿದೆ, ತಕ್ಷಣವೇ ದುರಸ್ತಿಪಡಿಸಲು ಕ್ರಮ ಕೈಗೊಳ್ಳಬೇಕು,’ ಎಂದು ಗುತ್ತಿಗೆದಾರರು ದೂರಿನಲ್ಲಿ ತಿಳಿಸಿದ್ದರು.
ಈ ಸಂಬಂಧ ಕ್ರಮ ಕೈಗೊಂಡಿರುವ ಡಿಪಿಎಆರ್‌ನ ಸರ್ಕಾರದ ಕಾರ್ಯದರ್ಶಿ ಅವರು ತಳಮಹಡಿಯಲ್ಲಿರುವ ಉಪಹಾರ ಮಂದಿರವನ್ನು ದುರಸ್ತಿ ಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಪಿಡಬ್ಲ್ಯೂಡಿ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ 2021ರ ಸೆ.17ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ವಿಧಾನಸೌಧದ ತಳಮಹಡಿಯಲ್ಲಿರುವ ಕ್ಯಾಂಟೀನ್‌ಗೆ ದಿನವೊಂದಕ್ಕೆ ಕನಿಷ್ಠ 500ಕ್ಕೂ ಹೆಚ್ಚು ಮಂದಿ ಉಪಾಹಾರ, ಭೋಜನ ಮತ್ತು ಚಹಾ ಸೇವಿಸಲು ಬರುತ್ತಾರೆ. ಅಧಿಕಾರಿ ನೌಕರರಲ್ಲದೆ ರಾಜ್ಯದ ವಿವಿಧೆಡೆಯಿಂದಲೂ ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಕ್ಯಾಂಟೀನ್‌ಗೆ ಬರುತ್ತಿದ್ದರೂ ಅಲ್ಲಿನ ನೆಲವೇ ಕುಸಿಯಲಾರಂಭಿಸಿರುವುದು ಆತಂಕವನ್ನು ಹೆಚ್ಚು ಮಾಡಿದೆ.
ವಿಧಾನಸೌಧ ಕೆಂಗಲ್ ಗೇಟ್ ಎದುರಿನ ರಸ್ತೆಯಲ್ಲಿ ಡಾಂಬರು ಕುಸಿದು ದೊಡ್ಡ ರಂಧ್ರ ಬಿದ್ದಿದ್ದರಿಂದ ಸ್ಥಳದಲ್ಲಿ ಕೆಲ ಹೊತ್ತು ಆತಂಕ ಸೃಷ್ಟಿಯಾಗಿತ್ತು. ಅಧಿವೇಶನ ನಡೆಯುತ್ತಿದ್ದರಿಂದ ವಿಧಾನಸೌಧ ಸುತ್ತಮುತ್ತ ಬಿಗಿ ಭದ್ರತೆಯಿದ್ದರೂ ನೂರಾರು ಮಂದಿ, ವಿಧಾನಸೌಧ ಅಕ್ಕ–ಪಕ್ಕದಲ್ಲಿ ಓಡಾಡುತ್ತಿದ್ದಾರೆ. ಕೆಂಗಲ್ ಗೇಟ್ ಎದುರೇ ಗುರುವಾರ ಸಂಜೆ ಡಾಂಬರು ಕಿತ್ತು ರಸ್ತೆ ಕುಸಿದಿತ್ತು. ರಸ್ತೆಯ ಕೆಳಭಾಗದಲ್ಲಿ ಗುಹೆ ಆಕಾರದ ಜಾಗ ಕಂಡಿದ್ದನ್ನು ಸ್ಮರಿಸಬಹುದು.
ಅಧಿವೇಶನ ನಡೆಯುತ್ತಿರುವ ಹೊತ್ತಿನಲ್ಲೇ ಈ ಸಂಗತಿ ಬೆಳಕಿಗೆ ಬಂದಿದ್ದರೂ ಪಿಡಬ್ಲ್ಯೂಡಿ ಸಚಿವ ಸಿ ಸಿ ಪಾಟೀಲ್ ಅವರು ಈ ಎರಡೂ ಪ್ರಕರಣಗಳ ಕುರಿತು ಈವರೆಗೂ ಪ್ರತಿಕ್ರಿಯಿಸಿಲ್ಲ.