ಕಲ್ಯಾಣ ಯೋಜನೆ; ಸುದ್ದಿವಾಹಿನಿಗಳ ವಿಶೇಷ ಕಾರ್ಯಕ್ರಮಗಳಿಗೆ 57. 02 ಲಕ್ಷ ರು. ವೆಚ್ಚ

ಬೆಂಗಳೂರು; ಜನ ಸಾಮಾನ್ಯರ ಕಲ್ಯಾಣಕ್ಕಾಗಿ ರೂಪಿಸಿದ್ದ ಯೋಜನೆಗಳ ಸಮಗ್ರ ಚಿತ್ರಣವನ್ನೊಳಗೊಂಡ ಮತ್ತು ಕೋವಿಡ್‌ ನಿಯಂತ್ರಣಕ್ಕೆ ಕೈಗೊಂಡಿದ್ದ ಕ್ರಮಗಳ ಕುರಿತು 15ರಿಂದ 30 ನಿಮಿಷದ ಕಾರ್ಯಕ್ರಮ ಪ್ರಸಾರ ಮಾಡಿರುವ ಟಿ ವಿ ಚಾನಲ್‌ಗಳಿಗೆ ರಾಜ್ಯ ಬಿಜೆಪಿ ಸರ್ಕಾರವು 57. 02 ಲಕ್ಷ ರು. ಪಾವತಿಸಿದೆ.

15ರಿಂದ 30 ನಿಮಿಷ ಅವಧಿಯ ಕಾರ್ಯಕ್ರಮಗಳು ಸುದ್ದಿವಾಹಿನಿಗಳಲ್ಲಿ 2020ರ ಜುಲೈ 24ರಿಂದ 27ರವರೆಗೆ ಪ್ರಸಾರವಾಗಿದ್ದವು. ಸಾಮಾನ್ಯವಾಗಿ ವಿಶೇಷ ಕಾರ್ಯಕ್ರಮಗಳು ಸುದ್ದಿವಾಹಿನಿಗಳ ದೈನಂದಿನ ಕಾರ್ಯಕ್ರಮದ ಭಾಗವಾಗಿರುತ್ತದೆ. ಆದರಿಲ್ಲಿ ಬಿಜೆಪಿ ಸರ್ಕಾರವು ತನ್ನ ವರ್ಚಸ್ಸು ವೃದ್ಧಿಸಲು ವಿಶೇಷ ಕಾರ್ಯಕ್ರಮಗಳಿಗೆ ಜಾಹೀರಾತು ರೂಪದಲ್ಲಿ ಲಕ್ಷಾಂತರ ರುಪಾಯಿ ವೆಚ್ಚ ಮಾಡಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

ವೆಚ್ಚದ ವಿವರ ( ಟಿ ವಿ ಚಾನಲ್‌ವಾರು)

ಟಿ ವಿ 9 ಕನ್ನಡ (ಪ್ರತಿ ಸೆಕೆಂಡಿಗೆ 4,400) – 7, 92, 000 ರು.

ಸುವರ್ಣ ನ್ಯೂಸ್‌ ( 2, 100 ) – 7, 56, 000 ರು.

ಪಬ್ಲಿಕ್‌ ಟಿ ವಿ ( 3, 250) – 5, 85, 000 ರು.

ನ್ಯೂಸ್‌ 18 ( 2,300 ) 4, 14, 000 ರು.

ಬಿ ಟಿ ವಿ ನ್ಯೂಸ್‌ ( 2,000 ) 5, 40, 000 ರು

ಪ್ರಜಾ ಟಿ ವಿ ( 1,600 )- 2, 88, 000 ರು.

ಕಸ್ತೂರಿ ನ್ಯೂಸ್‌ ( 1,600 ) 2, 88, 000 ರು.

ರಾಜ್‌ ನ್ಯೂಸ್‌ ( 1,500 ) 2, 70, 000 ರು.

ದಿಗ್ವಿಜಯ ಟಿ ವಿ ( 2,000 ) 3, 60, 000 ರು.

ಟಿ ವಿ 5 ಕನ್ನಡ ( 1,500 ) 2, 70, 000 ರು.

ಪವರ್‌ ಟಿ ವಿ ( 1,500 ) 2, 70, 000 ರು.

ಜಿ ಎಸ್‌ ಟಿ ಸೇರಿದಂತೆ ಒಟ್ಟು ಈ ಎಲ್ಲಾ ಸುದ್ದಿ ವಾಹಿನಿಗಳಿಗೆ ಒಟ್ಟು 57.02 ಲಕ್ಷ ರು. ವೆಚ್ಚ ಮಾಡಿರುವುದು ತಿಳಿದು ಬಂದಿದೆ.

ರಾಜ್ಯ ಬಿಜೆಪಿ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬಕ್ಕೆ ಪತ್ರಿಕೆಗಳ ಪ್ರಾಯೋಜಿತ ಪುರವಣಿಗಳಿಗೆ 44.85 ಲಕ್ಷ ರು.ಗಳನ್ನು ವೆಚ್ಚ ಮಾಡಿದ್ದನ್ನು ಸ್ಮರಿಸಬಹುದು.
ಅತಿಥಿ ಉಪನ್ಯಾಸಕರಿಗೆ ಗೌರವ ಸಂಭಾವನೆ, ಆಟೋ ಚಾಲಕರು, ತರಕಾರಿ, ಹೂ ಬೆಳೆಗಾರರು, ನೇಕಾರರು, ಸವಿತಾ ಸಮಾಜ, ವಲಸೆ ಕಟ್ಟಡ ಕಾರ್ಮಿಕರು ಸೇರಿದಂತೆ ಇನ್ನಿತರರಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡದ ಸರ್ಕಾರ ಅಮಿತ್‌ ಶಾ ಕಾರ್ಯಕ್ರಮಗಳ ಜಾಹೀರಾತಿಗೆ 89 ಲಕ್ಷ ರು. ಖರ್ಚು ಮಾಡಿತ್ತು.

ಕೋವಿಡ್‌ ನಿಯಂತ್ರಣಕ್ಕೆ ಸರ್ಕಾರ ಹಮ್ಮಿಕೊಂಡಿರುವ ಯೋಜನೆ, ಕಾರ್ಯಕ್ರಮಗಳ ಸಮಗ್ರ ಚಿತ್ರಣವನ್ನು ಬಿಂಬಿಸುವ ನಾಲ್ಕು ಪುಟಗಳ ಪ್ರಾಯೋಜಿತ ಪುರವಣಿಗಾಗಿ 2020ರಲ್ಲಿ ಒಟ್ಟು 1.60 ಕೋಟಿ ರು.ಗಳನ್ನು ವೆಚ್ಚ ಮಾಡಿದೆ. ಈ ಪೈಕಿ ಹೊಸ ದಿಗಂತ ಪತ್ರಿಕೆ ಸಿಂಹಪಾಲು ಪಡೆದಿದ್ದು, ಉಳಿದೆಲ್ಲ ಪತ್ರಿಕೆಗಳಿಗಿಂತ ಅತಿ ಹೆಚ್ಚಿನ ಮೊತ್ತದ ಜಾಹೀರಾತು ನೀಡಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

the fil favicon

SUPPORT THE FILE

Latest News

Related Posts