ಮಾರ್ಕಂಡೇಯ ಸಕ್ಕರೆ ಕಾರ್ಖಾನೆಯ ಹೆಚ್ಚುವರಿ ಸಾಲದ ಹೊಣೆ ಹೊರದ ಸಮೂಹ ಬ್ಯಾಂಕ್‌ಗಳು

ಬೆಂಗಳೂರು; ಬೆಳಗಾವಿ ತಾಲ್ಲೂಕಿನ ಕಾಕತಿಯಲ್ಲಿರುವ ಮಾರ್ಕಂಡೇಯ ಸಹಹಾರಿ ಸಕ್ಕರೆ ಕಾರ್ಖಾನೆಯು ಅಪೆಕ್ಸ್‌ ಬ್ಯಾಂಕ್‌ನಿಂದ ಪಡೆದಿದ್ದ ಸಾಲದ ಹೊರಬಾಕಿ ಇರಿಸಿಕೊಂಡಿದ್ದ 419.05 ಲಕ್ಷ ರು.ಗಳನ್ನು ಬಡ್ಡಿ ರಿಯಾಯಿತಿ ಯೋಜನೆಯಡಿ ಮನ್ನಾ ಮಾಡಿರುವುದನ್ನು ಬ್ಯಾಂಕ್‌ನ ಶಾಸನಬದ್ಧ ಲೆಕ್ಕ ಪರಿಶೋಧಕರು ಬಹಿರಂಗಪಡಿಸಿದ್ದಾರೆ.

ಅಲ್ಲದೆ ಸಮೂಹ ಬ್ಯಾಂಕ್‌ಗಳಿಂದ ನಿರಾಪೇಕ್ಷಣಾ ಪತ್ರ ಇಲ್ಲದಿದ್ದರೂ ಈ ಸಹಕಾರಿ ಸಕ್ಕರೆ ಕಾರ್ಖಾನೆಗೆ ಅಪೆಕ್ಸ್‌ ಬ್ಯಾಂಕ್‌ ಹೆಚ್ಚುವರಿ ಸಾಲವನ್ನು ಮಂಜೂರು ಮಾಡಿದೆ. ಹೆಚ್ಚುವರಿ ಸಾಲದ ಪಾಲನ್ನು ಸಮೂಹ ಬ್ಯಾಂಕ್‌ಗಳು ವಹಿಸಿಕೊಳ್ಳಲು ಮುಂದಾಗುವುದಿಲ್ಲ. ಹೀಗಾಗಿ ಹೆಚ್ಚುವರಿ ಸಾಲದ ಪೂರ್ತಿ ಜವಾಬ್ದಾರಿಯನ್ನು ಅಪೆಕ್ಸ್‌ ಬ್ಯಾಂಕ್‌ ವಹಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ ಎಂದು ಲೆಕ್ಕಪರಿಶೋಧಕರು ವರದಿಯಲ್ಲಿ ವಿವರಿಸಿದ್ದಾರೆ. ಲೆಕ್ಕಪರಿಶೋಧನೆ ವರದಿ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಮಾರ್ಕಂಡೇಯ ಸಹಕಾರಿ ಸಕ್ಕರೆ ಕಾರ್ಖಾನೆಯು ಸಮೂಹ ಬ್ಯಾಂಕ್‌ಗಳ ಸಾಲ ವ್ಯವಸ್ಥೆಯಡಿ ಸಾಲ ಪಡೆದಿದೆ. ಸಾಲಾರ ಕಂಪನಿಯ ಲೆಕ್ಕ ಪರಿಶೋಧನೆ ವರದಿ ಪ್ರಕಾರ 2018ರ ಮಾರ್ಚ್‌ ಅಂತ್ಯಕ್ಕೆ ಅಪೆಕ್ಸ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌ ಮತ್ತು ಯುಕೋ ಬ್ಯಾಂಕ್‌ಗೆ ಸಾಲದ ಹೊರಬಾಕಿಯು 138 ಕೋಟಿ ರು.ನಷ್ಟಿತ್ತು ಎಂಬುದು ಲೆಕ್ಕಪರಿಶೋಧನೆ ವರದಿಯಿಂದ ತಿಳಿದು ಬಂದಿದೆ.

ಟಿಸಿಡಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಮಾರ್ಕಂಡೇಯ ಸಹಕಾರಿ ಸಕ್ಕರೆ ಕಾರ್ಖಾನೆಯು 2007ರಲ್ಲಿ ಅಪೆಕ್ಸ್‌ ಬ್ಯಾಂಕ್‌ನಿಂದ 400 ಲಕ್ಷ ರು. ಸಾಲ ಪಡೆದಿತ್ತು. ಈ ಸಾಲದ ಪೈಕಿ 2018ರ ಆಗಸ್ಟ್‌ 24ರ ಅಂತ್ಯಕ್ಕೆ ಒಟ್ಟು 1250.87 ಲಕ್ಷ ರು. ಹೊರಬಾಕಿ ಇತ್ತು. ಆದರೂ ಅಪೆಕ್ಸ್‌ ಬ್ಯಾಂಕ್‌ 2018ರ ನವೆಂಬರ್‌ 3ರಂದು 600 ಕೋಟಿ ರು. ದುಡಿಯುವ ಬಂಡವಾಳ ಸಾಲವನ್ನಾಗಿ ಮಂಜೂರು ಮಾಡಿತ್ತು ಎಂಬುದು ಲೆಕ್ಕ ಪರಿಶೋಧನೆ ವರದಿಯಿಂದ ಗೊತ್ತಾಗಿದೆ.

ಅಲ್ಲದೆ 1219.05 ಲಕ್ಷ ರು. ಹೊರಬಾಕಿಯಲ್ಲಿ ಸಾಲಗಾರ ಕಂಪನಿಯು ತನ್ನ ಸ್ವಂತ ನಿಧಿಯಿಂದ 400 ಲಕ್ಷ ರು.ಗಳನ್ನು ಪಾವತಿಸಿದ್ದರೆ 400 ಲಕ್ಷ ರು.ಗಳನ್ನು ಹೊಸ ಸಾಲದಿಂದ ಬಂದ ಮೊತ್ತದಿಂದ ಪಾವತಿಸಿದೆ. ಉಳಿದ ಹೊರಬಾಕಿ 419.05 ಲಕ್ಷ ರು.ಗಳನ್ನು ಬಡ್ಡಿ ರಿಯಾಯಿತಿ ಯೋಜನೆಯಡಿ ಮನ್ನಾ ಮಾಡಿದೆ. ಅಷ್ಟೇ ಅಲ್ಲ 2018ರ ಸೆಪ್ಟಂಬರ್‌ 3ರಂದು ಬ್ಯಾಂಕ್‌ನ ಆಡಳಿತ ಮಂಡಳಿ ತೀರ್ಮಾನದ ಪ್ರಕಾರ ಸಾಲಗಾರ ಕಂಪನಿಯಿಂದ 800 ಲಕ್ಷ ರು ಪಡೆದು ಉಳಿದ ಮೊತ್ತ 419.05 ಲಕ್ಷ ರು.ಗಳನ್ನುಮನ್ನಾ ಮಾಡಲಾಗಿದೆ.

ಸಮೂಹ ಬ್ಯಾಂಕ್‌ಗಳ ಹೊರಬಾಕಿ

ಕೆನರಾ ಬ್ಯಾಂಕ್‌ 500 ಲಕ್ಷ, ಯುಕೋ ಬ್ಯಾಂಕ್‌ನಿಂದ 480 ಲಕ್ಷ ಸೇರಿ ಒಟ್ಟು 980 ಲಕ್ಷ ರು.ಹೊರಬಾಕಿ ಇದೆ. ಸಾಲ ವಸೂಲು ಮಾಡುವ ಬಗ್ಗೆ ಕೆನರಾ ಬ್ಯಾಂಕ್‌ ಅಪೆಕ್ಸ್‌ ಬ್ಯಾಂಕ್‌ ಗೆ ಪತ್ರ ಬರೆದಿತ್ತು. ಆದರೆ ಸಭೆ ಕರೆದಿರುವ ಬಗ್ಗೆ ಅಪೆಕ್ಸ್‌ ಬ್ಯಾಂಕ್‌ನಲ್ಲಿ ಯಾವುದೇ ದಾಖಲೆಗಳಿಲ್ಲ. ಸಮೂಹ ಬ್ಯಾಂಕ್‌ಗಳಿಂದ ನಿರಾಪೇಕ್ಷಣಾ ಪತ್ರ ಇಲ್ಲದಿರುವ ಕಾರಣ ಅಪೆಕ್ಸ್‌ ಬ್ಯಾಂಕ್‌ ಮಂಜೂರು ಮಾಡಿರುವ ಹೆಚ್ಚುವರಿ ಸಾಲವನ್ನು ಸಮೂಹ ಬ್ಯಾಂಕ್‌ಗಳು ವಹಿಸಿಕೊಂಡಿಲ್ಲ. ಹೀಗಾಗಿ ಹೆಚ್ಚುವರಿ ಸಾಲದ ಪೂರ್ತಿ ಜವಾಬ್ದಾರಿಯು ಅಪೆಕ್ಸ್‌ ಬ್ಯಾಂಕ್‌ನದ್ದಾಗಿದೆ ಎಂಬ ಸಂಗತಿ ಲೆಕ್ಕಪರಿಶೋಧನೆ ವರದಿಯಿಂದ ತಿಳಿದು ಬಂದಿದೆ.

ಈಡೇರದ ಸಾಲದ ಉದ್ದೇಶ

ಬ್ಯಾಂಕ್‌ನ ಸಾಲ ಮತ್ತು ಮುಂಗಡಗಳ ಕೈಪಿಡಿ ಸಂಖ್ಯೆ 9.2.7ರ ಮಾರ್ಗಸೂಚಿ ಪ್ರಕಾರ ಬ್ಯಾಂಕ್‌ ಮಂಜೂರಾದ ಸಾಲದ ಮಿತಿ 60 ಕೋಟಿ ರು.ನಲ್ಲಿ 1/3ನರಷ್ಟು ಪೂರ್ವಭಾವಿ ವೆಚ್ಚದ ಸಾಲವೆಂದು ಬಿಡುಗಡೆಗೊಳಿಸಬಹುದು. ಹಾಗೆಯೇ 2/3ರ ಮಿತಿಯಷ್ಟು ಸಕ್ಕರೆ ದಾಸ್ತಾನಿನ ಮೇಲೆ ಬಿಡುಗಡೆಗೊಳಿಸಬಹುದು. ಆದರೆ ಬ್ಯಾಂಕ್‌ 30 ಕೋಟಿ ರು.ಗಳನ್ನು ಪೂರ್ವಭಾವಿ ವೆಚ್ಚದ ಸಾಲವೆಂದು ಬಿಡುಗಡೆಗೊಳಿಸಿದೆ. ಇದರಿಂದ ಬ್ಯಾಂಕ್‌ನ ಮಾರ್ಗಸೂಚಿ ಪಾಲಸಿದಂತಾಗಿಲ್ಲ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಪೂರ್ವಭಾವಿ ವೆಚ್ಚದ ಸಾಲದ ಬಳಕೆ ಹೇಗಾಗಿದೆ?

2018ರ ನವೆಂಬರ್‌ 7ರಂದು ಬ್ಯಾಂಕ್‌ನ ಪರಿವೀಕ್ಷಣೆ ಪ್ರಕಾರ ಇಟಿಪಿ ಕಾಮಗಾರಿ ಪ್ರಗತಿಯಲ್ಲಿತ್ತು. ಅಂದರೆ ಉತ್ಪಾದನೆಗೂ ಮೊದಲು ಸಕ್ಕರೆ ಕಾರ್ಖಾನೆಯು ಇಟಿಪಿ ಯಂತ್ರೋಪಕರಣಗಳನ್ನು ಅಳವಡಿಸುವ ಕಾರ್ಯಕ್ಕೆ ಪೂರ್ವಭಾವಿ ವೆಚ್ಚದ ಸಾಲವನ್ನು ಉಪಯೋಗಿಸಿದೆ. ಇದರಿಂದ ಯಾವ ಉದ್ದೇಶಕ್ಕೆ ಸಾಲ ಒದಗಿಸಲಾಗಿತ್ತೋ ಆ ಉದ್ದೇಶಕ್ಕೆ ಸಾಲವನ್ನು ಬಳಸಿದಂತಾಗುವುದಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಬೃಹತ್‌ ಮತ್ತು ಕೈಗಾರಿಕೆ ಸಚಿವ ಮುರುಗೇಶ್‌ ಆರ್‌ ನಿರಾಣಿ ಅವರ ಒಡೆತನದ ನಿರಾಣಿ ಷುಗರ್ಸ್‌ ಲಿಮಿಟೆಡ್‌, ಸಹ-ಕಂಪನಿಗೆ ಸೇರಿರುವ ಸ್ಥಿರಾಸ್ತಿಯನ್ನು ಅಡಮಾನವಾಗಿರಿಸಿ 85.00 ಕೋಟಿ ರು. ಸಾಲವನ್ನು ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ನಿಂದ ಪಡೆದಿದ್ದನ್ನು ಸ್ಮರಿಸಬಹುದು.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ನಿರ್ದೇಶಕರಾಗಿರುವ ಹರ್ಷ ಷುಗರ್ಸ್‌ ಲಿಮಿಟೆಡ್‌ ಅಪೆಕ್ಸ್‌ ಬ್ಯಾಂಕ್‌ನಿಂದ ಮಂಜೂರು ಮಾಡಿಸಿಕೊಂಡ ಹೊಸ ಸಾಲದ ಮೊತ್ತದಲ್ಲಿ ಬಹುತೇಕ ಮೊತ್ತವನ್ನು ಹಳೇ ಸಾಲದ ಬಾಕಿಗೆ ಹೊಂದಾಣಿಕೆ ಮಾಡಿರುವುದನ್ನು ಲೆಕ್ಕ ಪರಿಶೋಧನೆ ವರದಿ ಹೊರಗೆಡವಿತ್ತು.

ಅಪೆಕ್ಸ್‌ ಬ್ಯಾಂಕ್‌ ಸಾಲ ಮಂಜೂರಾತಿ ಮಾಡಿದ್ದ 50.00 ಕೋಟಿ ರು. ಪೈಕಿ 30.81 ಕೋಟಿ ರು. ಗಳನ್ನು ಹಳೇ ಬಾಕಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಅಲ್ಲದೆ ಹೆಚ್ಚುವರಿ ಸಾಲ ಮಂಜೂರಾತಿಗೆ ಸಮೂಹ ಬ್ಯಾಂಕ್‌ಗಳಿಂದ ನಿರಾಪೇಕ್ಷಣಾ ಪತ್ರ ಪಡೆಯದ ಕಾರಣ, ಹೆಚ್ಚುವರಿ ಸಾಲದ ಹೊಣೆಯು ಅಪೆಕ್ಸ್‌ ಬ್ಯಾಂಕ್‌ ಮೇಲೆ ಬಿದ್ದಿದೆ ಎಂದು ಶಾಸನಬದ್ಧ ಲೆಕ್ಕಪರಿಶೋಧಕರು ಬಹಿರಂಗಗೊಳಿಸಿದ್ದನ್ನು ಸ್ಮರಿಸಬಹುದು.

ಮಾಜಿ ಶಾಸಕ ಪ್ರಕಾಶ್‌ ಖಂಡ್ರೆ ನಿರ್ದೇಶಕರಾಗಿರುವ ಬಾಲ್ಕೇಶ್ವರ ಷುಗರ್ಸ್‌ ಲಿಮಿಟೆಡ್‌ಗೆ ಸಮೂಹ ಬ್ಯಾಂಕ್‌ಗಳಿಂದ ನಿರಪೇಕ್ಷಣಾ ಪತ್ರ ಬರುವ ಮೊದಲೇ ಅಪೆಕ್ಸ್‌ ಬ್ಯಾಂಕ್‌ 60.00 ಕೋಟಿ ರು. ಸಾಲ ಮಂಜೂರು ಮಾಡಿತ್ತು.

ಬಾಲ್ಕೇಶ್ವರ ಷುಗರ್ಸ್‌ ಲಿಮಿಟೆಡ್‌ಗೆ ಅಪೆಕ್ಸ್‌ ಬ್ಯಾಂಕ್‌, ಪಿಎನ್‌ಬಿ, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ, ಕಾರ್ಪ್‌ ಬ್ಯಾಂಕ್‌, ಐಒಬಿ ಸೇರಿದಂತೆ ಇನ್ನಿತರೆ ಬ್ಯಾಂಕ್‌ಗಳು ನೀಡಿದ್ದ ಒಟ್ಟು ಸಾಲದ ಪೈಕಿ 1,51,07,62,364.00 ರಷ್ಟು ಹೊರಬಾಕಿ ಇದ್ದರೂ ಆ ಎಲ್ಲಾ ಬ್ಯಾಂಕ್‌ಗಳು ನಿರಪೇಕ್ಷಣಾ ಪತ್ರ ನೀಡುವ ಮುನ್ನವೇ ಅಪೆಕ್ಸ್‌ ಬ್ಯಾಂಕ್‌ 60.00 ಕೋಟಿ ರು. ಸಾಲ ಮಂಜೂರು ಮಾಡಿದ್ದನ್ನು ಲೆಕ್ಕ ಪರಿಶೋಧನೆ ವರದಿ ಹೊರಗೆಡವಿತ್ತು.

ಕಣ್ವ ಫ್ಯಾಷನ್ಸ್‌ ಕಂಪನಿಗೆ ಸಂಬಂಧದಪಟ್ಟ ಖಾತೆಯಲ್ಲಿ ಯಾವುದೇ ವ್ಯಾಪಾರ ವ್ಯವಹಾರಗಳು ಕಂಡು ಬಂದಿಲ್ಲ. 5.60 ಕೋಟಿ ಸಾಲದಲ್ಲಿ ಕಣ್ವ ಫ್ಯಾಷನ್ಸ್‌ಗೆ 4.97ಕೋಟಿ (ಶೇ.89) ಪಾವತಿಯಾಗಿದ್ದರೆ ಉಳಿದ 0.63 ಕೋಟಿ ಕಣ್ವ ಸ್ಟಾರ್‌ ಮತ್ತು ಹೋಟೆಲ್‌ ಪ್ರೈ ಲಿಮಿಟೆಡ್‌ಗೆ ಪಾವತಿಯಾಗಿತ್ತು. ಅಲ್ಲದೆ 2018ರ ಜೂನ್‌ 27ರಂದು 20.00 ಲಕ್ಷ ರು.ಗಳು ನಗದು ರೂಪದಲ್ಲಿ ಡ್ರಾ ಆಗಿದೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಲಾಗಿದೆ.

ಮಂಜೂರು ಮಾಡಿದ ಸಾಲವನ್ನು ಮೂಲ ಉದ್ದೇಶಕ್ಕೆ ಬಳಸಬೇಕು. ಆದರೆ ಕಣ್ವ ಗಾರ್ಮೆಂಟ್ಸ್‌ ಪ್ರೈ ಲಿಮಿಟೆಡ್‌ ಪ್ರಕರಣವನ್ನು ಪರಿಶೀಲಿಸಿದಾಗ ಹೆಚ್ಚಿನ ಮೊತ್ತವನ್ನು ಬೇರೆ ಸಂಸ್ಥೆಗಳಿಗೆ ವರ್ಗಾವಣೆ ಮಾಡಲಾಗಿದೆ. ಮಂಜೂರಾತಿ ಉದ್ದೇಶವನ್ನು ಸಾಲಗಾರರದಿಂದ ಬ್ಯಾಂಕ್‌ ದೃಢಪಡಿಸಿಕೊಳ್ಳದಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

ವಿಧಾನಪರಿಷತ್‌ ಸದಸ್ಯ ಕೆ ಪಿ ನಂಜುಂಡಿ ಅವರು ನಿರ್ದೇಶಕರಾಗಿರುವ ಲಕ್ಷ್ಮಿ ಗೋಲ್ಡ್‌ ಖಜಾನ ಪ್ರೈ ಲಿಮಿಟೆಡ್‌ ಕಂಪನಿಯು ಅಪೆಕ್ಸ್‌ ಬ್ಯಾಂಕ್‌ನಿಂದ ಸಾಲ ಪಡೆಯುವ ಸಂದರ್ಭದಲ್ಲಿ ಸ್ವತ್ತಿನ ಮೌಲ್ಯಮಾಪನವನ್ನು ಹೆಚ್ಚುವರಿಯಾಗಿ ಮೌಲ್ಯಮಾಪನ ಮಾಡಿಸಿತ್ತು. ಅಲ್ಲದೆ ಆದಾಯ ಇಲಾಖೆಯ ಜಫ್ತಿಗೊಳಪಟ್ಟಿದ್ದ ಸ್ವತ್ತನ್ನು ಸಾಲಕ್ಕೆ ಹೆಚ್ಚುವರಿ ಭದ್ರತೆಯನ್ನಾಗಿರಿಸಿತ್ತು ಎಂಬ ಸಂಗತಿಯನ್ನು ಲೆಕ್ಕ ಪರಿಶೋಧನೆ ವರದಿಯು ಬಹಿರಂಗಗೊಳಿಸಿತ್ತು.

Your generous support will help us remain independent and work without fear.

Latest News

Related Posts