ಬೆಂಗಳೂರು; ಮಾಜಿ ಶಾಸಕ ಪ್ರಕಾಶ್ ಖಂಡ್ರೆ ನಿರ್ದೇಶಕರಾಗಿರುವ ಬಾಲ್ಕೇಶ್ವರ ಷುಗರ್ಸ್ ಲಿಮಿಟೆಡ್‌ಗೆ ಸಮೂಹ ಬ್ಯಾಂಕ್‌ಗಳಿಂದ ನಿರಪೇಕ್ಷಣಾ ಪತ್ರ ಬರುವ ಮೊದಲೇ ಅಪೆಕ್ಸ್ ಬ್ಯಾಂಕ್ 60.00 ಕೋಟಿ ರು. ಸಾಲ ಮಂಜೂರು ಮಾಡಿರುವ ಪ್ರಕರಣ ಇದೀಗ ಹೊರಬಿದ್ದಿದೆ.
ಅಪೆಕ್ಸ್ ಬ್ಯಾಂಕ್‌ನ ಆರ್ಥಿಕ ಚಟುವಟಿಕೆಗಳ ಸಂಬಂಧಿಸಿದಂತೆ 2018-19ನೇ ಸಾಲಿನ ಶಾಸನಬದ್ಧ ಲೆಕ್ಕಪರಿಶೋಧನೆ ವರದಿಯು ಬಾಲ್ಕೇಶ್ವರ ಷುಗರ್ಸ್ ಕಂಪನಿಗೆ ಸಾಲ ಮಂಜೂರಾತಿಯಲ್ಲಿನ ನ್ಯೂನತೆಗಳನ್ನು ಹೊರಗೆಡವಿದೆ. ಶಾಸನಬದ್ಧ ಲೆಕ್ಕಪರಿಶೋಧನೆ ವರದಿ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಬಾಲ್ಕೇಶ್ವರ ಷುಗರ್ಸ್ ಲಿಮಿಟೆಡ್‌ಗೆ ಅಪೆಕ್ಸ್ ಬ್ಯಾಂಕ್, ಪಿಎನ್‌ಬಿ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಕಾರ್ಪ್ ಬ್ಯಾಂಕ್, ಐಒಬಿ ಸೇರಿದಂತೆ ಇನ್ನಿತರೆ ಬ್ಯಾಂಕ್‌ಗಳು ನೀಡಿದ್ದ ಒಟ್ಟು ಸಾಲದ ಪೈಕಿ 1,51,07,62,364.00 ರಷ್ಟು ಹೊರಬಾಕಿ ಇದ್ದರೂ ಆ ಎಲ್ಲಾ ಬ್ಯಾಂಕ್‌ಗಳು ನಿರಪೇಕ್ಷಣಾ ಪತ್ರ ನೀಡುವ ಮುನ್ನವೇ ಅಪೆಕ್ಸ್ ಬ್ಯಾಂಕ್ 60.00 ಕೋಟಿ ರು. ಸಾಲ ಮಂಜೂರು ಮಾಡಿರುವುದು ವರದಿಯಿಂದ ತಿಳಿದು ಬಂದಿದೆ.
ಅಲ್ಲದೆ 2017-18ರ ಲೆಕ್ಕಪರಿಶೋಧನಾ ವರದಿ ಪ್ರಕಾರ ಸಕ್ಕರೆ ಕಾರ್ಖಾನೆಯಲ್ಲಿ 359710 ಕ್ವಿಂಟಾಲ್ ಸಕ್ಕರೆ ಹಾಗೂ 18420 ಎಂ ಟಿ ಮೊಲಾಸಿಸ್ ದಾಸ್ತಾನಿತ್ತು. ಕಂಪನಿಯು ತೆರಿಗೆಗೆ ಮೊದಲು 597.74 ಲಕ್ಷ ರು.ನಷ್ಟವನ್ನು ಅನುಭವಿಸಿತ್ತು ಎಂಬುದು ವರದಿಯಿಂದ ಗೊತ್ತಾಗಿದೆ.
2019ರ ಮಾರ್ಚ್ 11ರಂದು ಸಮೂಹ ಬ್ಯಾಂಕ್‌ಗಳ ಸಭೆ ನಡವಳಿಪ್ರಕಾರ ಸಾಲಗಾರ ಕಂಪನಿಯು ತುರ್ತಾಗಿ ಸ್ಥಾವರದ ನಿರ್ವಹಣೆ ಮತ್ತು ಲೇಬರ್ ಗ್ಯಾಂಗ್‌ಗಳಿಗೆ ಪಾವತಿಸಬೇಕಾಗಿರುವುದರಿಂದ 60.00 ಕೋಟಿ ದುಡಿಯುವ ಬಂಡವಾಳವನ್ನು ಬಾಲ್ಕೇಶ್ವರ ಷುಗರ್ಸ್ ಪಡೆದಿತ್ತು. ಅಲ್ಲದೆ ಇದನ್ನು ತುರ್ತಾಗಿ ಮುಗಿಸಬೇಕಾದ ಕೆಲಸವಾದ ಕಾರಣ ಅಪೆಕ್ಸ್ ಬ್ಯಾಂಕ್‌ನಿಂದ ಸಾಲ ಪಡೆಯಲು ಸಮೂಹ ಬ್ಯಾಂಕ್‌ಗಳು ನಿರಾಪೇಕ್ಷಣಾ ಪತ್ರ ನೀಡಬೇಕು ಎಂದು ಕೇಳಿಕೊಂಡಿತ್ತು. ಆದರೆ ನಿರಪೇಕ್ಷಣಾ ಪತ್ರ ಬರುವ ಮುನ್ನವೇ ಅಪೆಕ್ಸ್ ಬ್ಯಾಂಕ್‌ನಿಂದ ಸಾಲವನ್ನು ಡ್ರಾ ಮಾಡಿತ್ತು ಎಂದು ಲೆಕ್ಕಪರಿಶೋಧನೆ ವರದಿಯು ಬಹಿರಂಗಗೊಳಿಸಿದೆ.
ಬ್ಯಾಂಕ್‌ನ ಸಾಲ ಮತ್ತು ಮುಂಗಡಗಳ ಕೈಪಿಡಿ ಸಂಖ್ಯೆ 9.2.7ರ ಮಾರ್ಗಸೂಚಿ ಪ್ರಕಾರ ಬ್ಯಾಂಕ್ ಮಂಜೂರಾದ ಸಾಲದ ಮಿತಿ 60.00 ಕೋಟಿಗಳಲ್ಲಿ 1/3ನ್ನು ಪೂರ್ವಭಾವಿ ವೆಚ್ಚದ ಸಾಲವೆಂದು ಬಿಡುಗಡೆಗೊಳಿಸಬಹುದು. ಸಕ್ಕರೆ ದಾಸ್ತಾನಿನ ಮೇಲೆ 20.00 ಕೋಟಿಗಳ ಪೂರ್ವಭಾವಿ ವೆಚ್ಚದ ಸಾಲ ಹಾಗೂ 2/3ರ ಮಿತಿಯಷ್ಟು ಬಿಡುಗಡೆಗೊಳಿಸಬಹುದು. ಆದರೆ ಬ್ಯಾಂಕ್ 2018ರ ಸೆಪ್ಟಂಬರ್ 7ರಂದು ಹೆಚ್ಚುವರಿಯಾಗಿ 400.00 ಲಕ್ಷ ಗಳನ್ನು ಪೂರ್ವಭಾವಿ ವೆಚ್ಚ ಸಾಲವೆಂದು ಬಿಡುಗಡೆಗೊಳಿಸಿತ್ತು. ಇದು ಬ್ಯಾಂಕ್‌ನ ಮಾರ್ಗಸೂಚಿಯನ್ನು ಪಾಲಿಸಿಲ್ಲ ಎಂದು ಲೆಕ್ಕಪರಿಶೋಧನೆ ವರದಿಯಲ್ಲಿ ವಿವರಿಸಲಾಗಿದೆ.
ಬೃಹತ್ ಮತ್ತು ಕೈಗಾರಿಕೆ ಸಚಿವ ಮುರುಗೇಶ್ ಆರ್ ನಿರಾಣಿ ಅವರ ಒಡೆತನದ ನಿರಾಣಿ ಷುಗರ್ಸ್ ಲಿಮಿಟೆಡ್, ಸಹ-ಕಂಪನಿಗೆ ಸೇರಿರುವ ಸ್ಥಿರಾಸ್ತಿಯನ್ನು ಅಡಮಾನವಾಗಿರಿಸಿ 85.00 ಕೋಟಿ ರು. ಸಾಲವನ್ನು ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನಿಂದ ಪಡೆದಿದ್ದನ್ನು ಸ್ಮರಿಸಬಹುದು.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಿರ್ದೇಶಕರಾಗಿರುವ ಹರ್ಷ ಷುಗರ್ಸ್ ಲಿಮಿಟೆಡ್ ಅಪೆಕ್ಸ್ ಬ್ಯಾಂಕ್‌ನಿಂದ ಮಂಜೂರು ಮಾಡಿಸಿಕೊಂಡ ಹೊಸ ಸಾಲದ ಮೊತ್ತದಲ್ಲಿ ಬಹುತೇಕ ಮೊತ್ತವನ್ನು ಹಳೇ ಸಾಲದ ಬಾಕಿಗೆ ಹೊಂದಾಣಿಕೆ ಮಾಡಿರುವುದನ್ನು ಲೆಕ್ಕ ಪರಿಶೋಧನೆ ವರದಿ ಹೊರಗೆಡವಿತ್ತು.
ಅಪೆಕ್ಸ್ ಬ್ಯಾಂಕ್ ಸಾಲ ಮಂಜೂರಾತಿ ಮಾಡಿದ್ದ 50.00 ಕೋಟಿ ರು. ಪೈಕಿ 30.81 ಕೋಟಿ ರು. ಗಳನ್ನು ಹಳೇ ಬಾಕಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಅಲ್ಲದೆ ಹೆಚ್ಚುವರಿ ಸಾಲ ಮಂಜೂರಾತಿಗೆ ಸಮೂಹ ಬ್ಯಾಂಕ್‌ಗಳಿಂದ ನಿರಾಪೇಕ್ಷಣಾ ಪತ್ರ ಪಡೆಯದ ಕಾರಣ, ಹೆಚ್ಚುವರಿ ಸಾಲದ ಹೊಣೆಯು ಅಪೆಕ್ಸ್ ಬ್ಯಾಂಕ್ ಮೇಲೆ ಬಿದ್ದಿದೆ ಎಂದು ಶಾಸನಬದ್ಧ ಲೆಕ್ಕಪರಿಶೋಧಕರು ಬಹಿರಂಗಗೊಳಿಸಿದ್ದನ್ನು ಸ್ಮರಿಸಬಹುದು.