ಬೆಂಗಳೂರು; ಉದ್ಯಾನದಲ್ಲಿ ಅನಧಿಕೃತವಾಗಿ ಮಾರುಕಟ್ಟೆ ಕಟ್ಟಡ ನಿರ್ಮಾಣವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲೇ ಸಚಿವ ಮುನಿರತ್ನ ಅವರು ಅರ್ಜಿದಾರರ ಮೇಲೆ ಒತ್ತಡ ಹೇರುತ್ತಿದ್ದಾರೆ. ಅಲ್ಲದೆ ಅರ್ಜಿದಾರರಿಗೆ ಜೀವ ಬೆದರಿಕೆ ಒಡ್ಡುವುದರಲ್ಲಿ ನಡೆದಿದೆ ಎನ್ನಲಾಗಿರುವ ಪಿತೂರಿಯಲ್ಲಿ ಬಿಬಿಎಂಪಿ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಮುನಿರತ್ನ ಅವರ ಕೈವಾಡವೂ ಇದೆ ಎಂಬ ಮತ್ತೊಂದು ಗಂಭೀರವಾದ ಆರೋಪವನ್ನು ಜನಾಧಿಕಾರ ಸಂಘರ್ಷ ಪರಿಷತ್ ಹೊರಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಮುನಿರತ್ನ ಅವರ ವಿರುದ್ಧ ಕೇಳಿ ಬಂದಿರುವ ಇಂತಹದ್ದೊಂದು ಆರೋಪವು ಮಹತ್ವ ಪಡೆದುಕೊಂಡಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲಿ ಅರ್ಜಿದಾರರಿಗೆ ಕರೆ ಮಾಡಿರುವ ಸಚಿವ ಮುನಿರತ್ನ ಅವರು ಅರ್ಜಿಯನ್ನು ಪುನರ್ ಪರಿಶೀಲಿಸಬೇಕು, ಇದೊಂದು ರಾಜಕೀಯ ಪ್ರೇರಿತ, ಯೋಜನೆಯನ್ನು ಹಾಳುಗೆಡವಬಾರದು ಎಂದು ಅರ್ಜಿದಾರ ರೊಲ್ಯಾಂಡ್ ಅವರಿಗೆ ಕರೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಸಚಿವ ಮುನಿರತ್ನ ಅವರು ಅರ್ಜಿದಾರರಿಗೆ ಮಾಡಿರುವ ಕರೆಯನ್ನು ಜನಾಧಿಕಾರ ಸಂಘರ್ಷ ಪರಿಷತ್ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದೆ. ಅಲ್ಲದೆ ಇಡೀ ಪ್ರಕರಣದಲ್ಲಿ ನಡೆದಿರುವ ಬೆಳವಣಿಗೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ.
ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ, ಹೀಗಾಗಿ ನೀವಾಗಲೀ ನಾವಾಗಲಿ ಮಾತಾಡುವುದು ಸರಿಯಲ್ಲ, ಕಟ್ಟಡ ನಿರ್ಮಾಣದಲ್ಲಿ ಕಾನೂನುಗಳನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರು ಸಮರ್ಥನೆ ನೀಡಿದರೂ ಸಚಿವ ಮುನಿರತ್ನ ಅವರು ಪ್ರಕರಣವನ್ನು ಪುನರ್ ಪರಿಶೀಲಿಸಿ ಎಂದು ಒತ್ತಡ ಹೇರಿರುವುದು ಆಡಿಯೋದಿಂದ ತಿಳಿದು ಬಂದಿದೆ.
ಪ್ರಕರಣದ ಹಿನ್ನೆಲೆ
ಮತ್ತಿಕೆರೆಯ ಜೆ. ಪಿ. ಪಾರ್ಕ್ ಆಟದ ಮೈದಾನದಲ್ಲಿ ಬಿಬಿಎಂಪಿಯು ಅನಧಿಕೃತವಾಗಿ ಮಾರುಕಟ್ಟೆ ಕಟ್ಟಡ ನಿರ್ಮಾಣ ಮಾಡುತ್ತಿದೆ ಎಂದು ಫ್ಯೂಚರ್ ಇಂಡಿಯ ಆರ್ಗನೈಸೇಷನ್ ಸಂಸ್ಥೆಯ ಅಧ್ಯಕ್ಷರಾದ “ರೋಲ್ಯಾಂಡ್ ಸೋನ್ಸ್ ಅವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕಾ ಹಿತಾಸಕ್ತಿ ಅರ್ಜಿ (ಸಂಖ್ಯೆ WP ಓo. 52613/2019) ಸಲ್ಲಿಸಿದ್ದರು.
ಈ ಸಂಬಂಧ ಉಚ್ಚ ನ್ಯಾಯಾಲಯವು ಪ್ರಕರಣದಲ್ಲಿ ಆಕ್ಷೇಪ ಸಲ್ಲಿಕೆ ಮತ್ತು ಜೆ ಪಿ ಪಾರ್ಕ್ ಆಟದ ಮೈದಾನ ಜಂಟಿ ಅಳತೆ ಮಾಡುವುದು ಅನಿವಾರ್ಯ ಎಂದು 2021ರ ಮಾರ್ಚ್ 23ರಲ್ಲಿ ನೀಡಿದ್ದ ದೈನಂದಿನ ಆದೇಶದಲ್ಲಿ ಹೇಳಿತ್ತು. ಜಂಟಿ ಅಳತೆ ಸಂದರ್ಭದಲ್ಲಿ ಅರ್ಜಿದಾರರು ಪಾಲ್ಗೊಳ್ಳಬೇಕು ಎಂದು ಬಿಬಿಎಂಪಿ ವಕೀಲರು ವಾದ ಮಂಡಿಸಿದ್ದರು. ಜಂಟಿ ಅಳತೆ ಸಂದರ್ಭದಲ್ಲಿ ಅರ್ಜಿದಾರರು ಪಾಲ್ಗೊಂಡಲ್ಲಿ ಅವರ ಪ್ರಾಣಕ್ಕೆ ತೊಂದರೆ ಇದೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು.
ಇದನ್ನು ಆಲಿಸಿದ್ದ ನ್ಯಾಯಾಲಯವು ಪ್ರಾಣ ಬೆದರಿಕೆ ಇದ್ದಲ್ಲಿ ಅರ್ಜಿದಾರರು ಸ್ಥಳೀಯ ಪೊಲೀಸರಿಂದ ರಕ್ಷಣೆ ತೆಗೆದುಕೊಳ್ಳಬಹುದು ಎಂದೂ ಸೂಚಿಸಿತ್ತು. ಅದರಂತೆ ಅರ್ಜಿದಾರ ರೊಲ್ಯಾಂಡ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ಉಪ ಆಯುಕ್ತರು (ಬೆಂಗಳೂರು ಉತ್ತರ ವಿಭಾಗ), ಸಹಾಯಕ ಆಯುಕ್ತರಿಗೆ (ಯಶವಂತಪುರ ಉಪ ವಿಭಾಗ) ಅರ್ಜಿ ಸಲ್ಲಿಸಿ ಸೂಕ್ತ ಭದ್ರತೆಗೆ ಕೋರಿದ್ದರು ಎಂಬುದು ತಿಳಿದು ಬಂದಿದೆ.
ಸಿಗದ ಪೊಲೀಸ್ ಭದ್ರತೆ
2021ರ ಜುಲೈ 29ರಂದು ಯಶವಂತಪುರ ಪೊಲೀಸ್ ಇನ್ಸ್‌ಪೆಕ್ಟರ್ ಸುರೇಶ್ ಎಂಬುವರಿಗೆ ಕರೆ ಮಾಡಿದ್ದ ಅರ್ಜಿದಾರ ರೋಲ್ಯಾಂಡ್ ಅವರು ಸೂಕ್ತ ಭದ್ರತೆ ಒದಗಿಸುವ ಸಂಬಂಧ ಮಾತನಾಡಿದ್ದರು. ಪೊಲೀಸರು ಭದ್ರತೆ ಒದಗಿಸಿದ್ದಾರೆ ಎಂಬ ನಂಬಿಕೆ ಮೇರೆಗೆ ರೊಲ್ಯಾಂಡ್ ಅವರು ಜಂಟಿ ಅಳತೆ ನಡೆಯುತ್ತಿದ್ದ ಸ್ಥಳಕ್ಕೆ ಸ್ನೇಹಿತರೊಂದಿಗೆ ತೆರಳಿದ್ದರು. ಆದರೆ ಜೆ ಪಿ ಪಾರ್ಕ್‌ನಲ್ಲಿರುವ ಆಟದ ಮೈದಾನದಲ್ಲಿ ಯಾವೊಬ್ಬ ಪೊಲೀಸ್ ಸಿಬ್ಬಂದಿಯೂ ಅಲ್ಲಿರಲಿಲ್ಲ. ಇದನ್ನು ಮೊದಲೇ ಊಹಿಸಿದ್ದ ರೊಲ್ಯಾಂಡ್ ಅವರು ಒಬ್ಬ ವಿಡಿಯೋಗ್ರಾಫರ್‌ನನ್ನು ಕರೆದು ಕೊಂಡು ಹೋಗಿದ್ದರು ಎಂಬ ಸಂಗತಿ ಗೊತ್ತಾಗಿದೆ.
ಜಂಟಿ ಅಳತೆ ಕಾರ್ಯಕ್ಕೆ ಚಾಲನೆ ಸಿಗುವ ಮುನ್ನವೇ ಬಿಬಿಎಂಪಿ ಕಾರ್ಯಪಾಲಕ ಅಭಿಯಂತರ ಮೋಹನ್ ರವರ ಮೊಬೈಲ್ ಸಂಖ್ಯೆಗೆ ಸಚಿವ ಮುನಿರತ್ನ ಅವರು ಕರೆ ಮಾಡಿ ರೋಲ್ಯಾಂಡ್ ರವರಿಗೆ ನೀಡುವಂತೆ ಸೂಚಿಸಿದ್ದರು. ಮುನಿರತ್ನ ಅವರ ಸೂಚನೆಯಂತೆ ಮೋಹನ್’ರವರು ತಮ್ಮ ಮೊಬೈಲ್ ಫೋನ್‌ನ್ನು ರೋಲ್ಯಾಂಡ್ ರವರಿಗೆ ನೀಡಿದ್ದರು.
ಮುನಿರತ್ನ ಕರೆ ಮಾಡಿದ್ದೇಕೆ?
ಆ ವೇಳೆಯಲ್ಲಿ ಮುನಿರತ್ನ ಅವರು ಅರ್ಜಿಯನ್ನು ಪುನರ್ ಪರಿಶೀಲಿಸಬೇಕು, ಇದೊಂದು ರಾಜಕೀಯ ಪ್ರೇರಿತ, ಯೋಜನೆಯನ್ನು ಹಾಳುಗೆಡವಬಾರದು. “ಇಷ್ಟೆಲ್ಲಾ ಹೇಳಿದ್ರು ನೀವು ಹೀಗೆ ಮುಂದುವರೆಯುವುದಾದರೆ ಮುಂದೆ ನಿಮಗೆ ಬಿಟ್ಟಿದ್ದು” ಎಂದು ಪರೋಕ್ಷವಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಇಲ್ಲಿಯವರೆಗೂ ಹಲವು ಬಾರಿ ರೊಲ್ಯಾಂಡ್ ಅವರ ಮೊಬೈಲ್ 9611219711 ಸಂಖ್ಯೆಗೆ 9844400531 ಸಂಖ್ಯೆಯಿಂದ ಕರೆಮಾಡಿ ಬೆದರಿಕೆ ಒಡ್ಡಿದ್ದಾರೆ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ನ ಆದರ್ಶ ಐಯ್ಯರ್ ಮತ್ತು ಅರ್ಜಿದಾರ ರೊಲ್ಯಾಂಡ್ ಅವರು ಆರೋಪಿಸಿದ್ದಾರೆ.
ಅಪರಿಚಿತ ವ್ಯಕ್ತಿಗಳ ಪ್ರವೇಶ
ಜಂಟಿ ಅಳತೆ ಕಾರ್ಯ ಚಾಲನೆಯ ನಂತರ ಬಿಬಿಎಂಪಿ ತಯಾರಿಸಿದ್ದ ಮಹಜರ್ ಪತ್ರಕ್ಕೆ ರೋಲ್ಯಾಂಡ್ ಹಾಗು ಇನ್ನಿತರೇ ಸಾಕ್ಷಿಗಳು ಸಹಿ ಮಾಡಿ ಅಲ್ಲಿಂದ ಊಟ ಮಾಡಲು ಮಧ್ಯಾಹ್ನ ಸುಮಾರು 1:00 ಗಂಟೆಗೆ ತೆರಳಿದ್ದರು. ಮಧ್ಯಾಹ್ನ ಸುಮಾರು 2:45 ಗಂಟೆಯ ಸುಮಾರಿಗೆ ರೋಲ್ಯಾಂಡ್ ರವರ ತಾಯಿ ಅವರಿಗೆ ಕರೆ ಮಾಡಿ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನ (ಸಂಖ್ಯೆ ಏಂ 04 ಏಈ 1714)ದಲ್ಲಿ ಬಂದು ಅವರ ಬಗ್ಗೆ ಹಾಗೂ ಅವರ ಸಂಸ್ಥೆಯ ಬಗ್ಗೆ ವಿಚಾರಿಸುತ್ತಿದ್ದರು. ಹಾಗೆಯೇ ಈ ವ್ಯಕ್ತಿಗಳನ್ನು ವಿಚಾರಿಸಿದ್ದ ರೋಲ್ಯಾಂಡ್ ರವರ ತಾಯಿಗೂ ಬೆದರಿಕೆ ಹಾಕಿದ್ದರು ಎಂದು ಆಪಾದಿಸಲಾಗಿದೆ.
ತಕ್ಷಣವೇ ರೊಲ್ಯಾಂಡ್ ಅವರು ಆ ವ್ಯಕ್ತಿಗಳನ್ನು ಅಲ್ಲಿಯೇ ಇರಿಸಿಕೊಳ್ಳಿ, ಪೊಲೀಸರನ್ನು ಕಳಿಸಿಕೊಡುತ್ತೇನೆ ಎಂದು ತಮ್ಮ ತಾಯಿಗೆ ತಿಳಿಸಿದ್ದರು. ಇದನ್ನು ಅರಿತ ಅಪರಿಚಿತ ವ್ಯಕ್ತಿಗಳು ಪರಾರಿಯಾಗಲು ಯತ್ನಿಸಿದ್ದರು. ಆಗ ರೊಲ್ಯಾಂಡ್ ಅವರ ತಾಯಿ ಮತ್ತಿಬ್ಬರ ಮಹಿಳೆಯರ ನೆರವಿನೊಂದಿಗೆ ಅಪರಿಚಿತ ವ್ಯಕ್ತಿಗಳು ಪರಾರಿಯಾಗದಂತೆ ನೋಡಿಕೊಂಡಿದ್ದರು. ಆ ವೇಳೆಗೆ ಪೊಲೀಸರು ಧಾವಿಸಿದ್ದರಲ್ಲದೆ ಅಪರಿಚಿತ ವ್ಯಕ್ತಿಗಳನ್ನು ಠಾಣೆಗೆ ಕರೆದೊಯ್ದಿದ್ದರು. ಅಪರಿಚಿತರ ಪೈಕಿ ಒಬ್ಬಾತ ರೊಲ್ಯಾಂಡ್ ಅವರ ನೆರೆಯವರ ಮೊಬೈಲ್ ಸಂಖ್ಯೆಯಿಂದ ರೆಡ್ಡಿಯಮ್ಮ ಎಂಬುವರ ಮೊಬೈಲ್‌ಗೆ (8921226288) ಕರೆ ಮಾಡಿದ್ದ. ನೆರೆಯವರ ಮೊಬೈಲ್‌ಗಳನ್ನು ರೊಲ್ಯಾಂಡ್ ಅವರು ತಮ್ಮ ವಶದಲ್ಲಿರಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಅಪರಿಚಿತರ ಮೊಬೈಲನಲ್ಲಿತ್ತು ಸಿಬಿಐಗೆ ಸಲ್ಲಿಸಿದ್ದ ದೂರಿನ ಪ್ರತಿ
ನಂತರ ವಿಲ್ಸನ್ ಗಾರ್ಡನ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮಠಪತಿ ಎಂಬುವರು ಇಬ್ಬರು ಅಪರಿಚಿತರನ್ನು ರೋಲ್ಯಾಂಡ್’ರವರ ಸಮ್ಮುಖದಲ್ಲಿ ಪ್ರಶ್ನಿಸಿದ್ದರು. ಅದರಲ್ಲಿ ಒಬ್ಬ ತನ್ನ ಹೆಸರನ್ನು ಮಧು ಎಂದು ತಿಳಿಸಿದ್ದ. ಈ ಇಬ್ಬರನ್ನು ಪಿ.ವಿ.ಸಿ ಡೋರ್’ಗಳ ಅಳತೆ ತೆಗೆದುಕೊಂಡು ಬರಲು ಅವರ ಬಾಸ್ ಸದ್ದಾಮ್ ಎಂಬಾತನು ಕಳುಹಿಸಿಕೊಟ್ಟಿದ್ದರು ಎಂದು ಮಾಹಿತಿ ನೀಡಿದ್ದರು. ಆದರೆ ರೊಲ್ಯಾಂಡ್ ಅವರು ಈ ಪ್ರಕರಣದ ಬಗ್ಗೆ ಸಿಬಿಐನಲ್ಲಿ ಸಲ್ಲಿಸಿದ್ದ ದೂರಿನ ಪ್ರತಿಯು ಆ ಇಬ್ಬರ ಮೊಬೈಲ್ ವಾಟ್ಸಾಪ್’ನಲ್ಲಿತ್ತು ಎಂಬುದನ್ನು ಪತ್ತೆ ಹಚ್ಚಿದ್ದರು.
ರೊಲ್ಯಾಂಡ್ ಅವರು ಸಿಬಿಐಗೆ ನೀಡಿದ್ದ ದೂರಿನ ಪ್ರತಿಯನ್ನು ಸದ್ದಾಮ್ ಎಂಬಾತ ತಮಗೆ ಕಳಿಸಿದ್ದು ಎಂದು ಇಬ್ಬರು ಅಪರಿಚಿತ ವ್ಯಕ್ತಿಗಳು ಪೊಲೀಸರಿಗೆ ತಿಳಿಸಿದ್ದರು. ಇವರನ್ನು ಇನ್ನಷ್ಟು ವಿಚಾರಣೆ ಮಾಡುವ ಮುನ್ನವೇ ಅಂದು ಸಂಜೆ ಸುಮಾರು 4-00 ರಿಂದ 4-30ರ ಮಧ್ಯೆ ವಿಲ್ಸನ್ ಗಾರ್ಡನ್ ಪೊಲೀಸ್ ಇನ್ಸ್‌ಪೆಕ್ಟರ್ ಶಂಕರ್ ಆಚಾರ್ ಎಂಬುವರ ಮೊಬೈಲ್‌ಗೆ ಕರೆ ಬರುತ್ತಿದ್ದಂತೆ ಎಲ್ಲರನ್ನೂ ಅವರ ಕೊಠಡಿಯಲ್ಲಿ ಕರೆಸಿಕೊಂಡಿದ್ದರು. ಆ ನಂತರ ನಡೆದ ವಿಚಾರಣೆಯಲ್ಲಿ ರೊಲ್ಯಾಂಡ್ ಅವರು ಇನ್ಸ್‌ಪೆಕ್ಟರ್ ಕೇಳಿದ್ದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಅದೇ ಸಂದರ್ಭದಲ್ಲಿ ಶಂಕರ್ ಆಚಾರ್ ಅವರಿಗೆ ಕರೆ ಬಂದಿತ್ತು.
ಎಫ್‌ಐಆರ್ ದಾಖಲಿಸದ ಇನ್ಸ್‌ಪೆಕ್ಟರ್
ಕರೆ ಮಾಡಿದ್ದಾತನೊಂದಿಗೆ ಮಾತನಾಡಿದ್ದ ಆಚಾರ್ ಅವರು ಏನದು ಸೂರಿ ಎಂದು ಪ್ರಶ್ನಿಸಿದ್ದರು. ಕರೆಯಲ್ಲಿದ್ದ ವ್ಯಕ್ತಿಯು “ಗುರು ನಮ್ ಹುಡುಗರು, ಕೇಸ್ ಏನು ಆಗ್ದೇ ಇರೋ ಹಾಗೆ ನೋಡ್ಕೊಂಡು ಕಳಿಸ್ಬಿಡು” ಎಂದು ಹೇಳಿದ್ದರು. ಅದಕ್ಕೆ ಶಂಕರ್’ರವರು “ನಾನು ನೋಡ್ಕೋತೀನಿ ಬಿಡು ಸೂರಿ” ಎಂದು ಹೇಳಿ ರೋಲ್ಯಾಂಡ್ ರವರನ್ನು ಹೊರಕ್ಕೆ ಕಳುಹಿಸಿದ್ದರು. ಇದಾದ ನಂತರ ರೋಲ್ಯಾಂಡ್ ರವರನ್ನು ಪುನಃ ಒಳಕ್ಕೆ ಕರೆಸಿಕೊಂಡಿದ್ದ ಶಂಕರ್ ಆಚಾರ್ ‘ನೀವು ನೀಡಿರುವ ದೂರು ಅಸಂಜ್ಞೆಯವಾಗಿ ಕಂಡುಬರುತ್ತಿದೆ. ನೀವು ಕೋರ್ಟಿಗೆ ಹೋಗಿ ನಿಮ್ಮ ವಿಚಾರವನ್ನು ಇತ್ಯರ್ಥ ಮಾಡಿಕೊಳ್ಳಿ ಎಂದು ಹೇಳಿದ್ದರಲ್ಲದೆ ರೋಲ್ಯಾಂಡ್ ರವರು ನೀಡಿರುವ ದೂರಿಗೆ ಯಾವುದೇ ಎನ್‌ಸಿಆರ್ ಅಥವಾ ಎಫ್‌ಐಆರ್ ದಾಖಲಿಸದೆಯೇ ಎಲ್ಲರನ್ನು ಬಿಟ್ಟು ಕಳುಹಿಸಿದ್ದರು ಎಂದು ತಿಳಿದು ಬಂದಿದೆ.
ರೊಲ್ಯಾಂಡ್‌ರನ್ನು ಹಿಂಬಾಲಿಸಿದ್ದ ಅಪರಿಚಿತರು
ರೋಲ್ಯಾಂಡ್‌ರವರು ಮನೆಗೆ ವಾಪಸ್ ಹೋಗುತ್ತಿದ್ದ ಮಾರ್ಗದಲ್ಲೇ ಅಪರಿಚಿತ ವ್ಯಕ್ತಿಗಳಲ್ಲಿ ಒಬ್ಬನಾದ ಮಧು ಎಂಬಾತನ ಇನ್ನು ಹಲವು ವ್ಯಕ್ತಿಗಳೊಂದಿಗೆ ರೋಲ್ಯಾಂಡ್ ರವರನ್ನು ಹಿಂಬಾಲಿಸಿದ್ದರು. ಈ ಎಲ್ಲವೂ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸದರಿ ಅಪರಿಚಿತ ವ್ಯಕ್ತಿಗಳು ಅಲ್ಲೇ ಇದ್ದ ಬಿ.ಬಿ.ಎಂ.ಪಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ದಿನೇಶ್ ಕುಮಾರ್ ರವರೊಂದಿಗೆ ತುಂಬಾ ಪರಿಚಯವಿರುವಂತೆ ಮಾತನಾಡುತ್ತಿರುವುದು ಕೂಡ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಯಶವಂತಪುರ ಪೊಲೀಸ್ ಇನ್ಸ್‌ಪೆಕ್ಟರ್ ಸುರೇಶ್‌ರವರು ಜಂಟಿ ಅಳತೆ ಕಾರ್ಯ ಸಂದರ್ಭದಲ್ಲಿ ರೋಲ್ಯಾಂಡ್ ರವರಿಗೆ ಸೂಕ್ತ ಭದ್ರತೆಯನ್ನು ನೀಡಿದ್ದರೆ ಇಂತಹ ಯಾವೊಬ್ಬ ವ್ಯಕ್ತಿಯೂ ಅವರನ್ನು ಹಿಂಬಾಲಿಸಿ ಅವರ ಮನೆಯ ತನಕ ಹೋಗುವ ದುಸ್ಸಾಹಸಕ್ಕೆ ಕೈಹಾಕುತ್ತಿರಲಿಲ್ಲ. ಇಲ್ಲಿ ಸುರೇಶ್ ರವರು ಉದ್ದೇಶಪೂರ್ವಕವಾಗಿ ರೋಲ್ಯಾಂಡ್ ರವರಿಗೆ ಹೆದರಿಸುವ ಅಥವಾ ಕೆಡಕು ಮಾಡುವ ಸಲುವಾಗಿಯೇ ಸೂಕ್ತ ಭದ್ರತೆಯನ್ನು ಒದಗಿಸಿರುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎನ್ನುತ್ತಾರೆ ಜನಾಧಿಕಾರ ಸಂಘರ್ಷ ಪರಿಷತ್‌ನ ಆದರ್ಶ ಐಯ್ಯರ್.
ಇಷ್ಟೆಲ್ಲಾ ಬೆಳವಣಿಗೆಗಳು ನಡೆದ ನಂತರವೂ ಪೊಲೀಸರು ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ. ಹೀಗಾಗಿ ರೋಲ್ಯಾಂಡ್‌ರವರು ಮರುದಿನವೇ (2021ರ ಜುಲೈ 30) ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸುವಂತೆ ಅರ್ಜಿ ಸಲ್ಲಿಸಿದ್ದರು. ಸಿಸಿಟಿವಿ ಡಿವಿಆರ್ ಹಾಳಾಗಿದೆ ಎಂದು ಪೊಲೀಸರು ಉತ್ತರಿಸಿದ್ದರು. ಅಲ್ಲದೆ ತಮ್ಮ ಮನೆಯ ಬಳಿ ಇರುವ ಎಲ್ಲಾ ಸಿಸಿಟಿವಿಗಳ ದೃಶ್ಯಾವಳಿಗಳು ನಾಶವಾಗುವ ಮುನ್ನ ಸಂಗ್ರಹಿಸಿಕೊಳ್ಳಬೇಕು ಎಂದು ರೊಲ್ಯಾಂಡ್ ಅವರು ಪೊಲೀಸರಿಗೆ ಮತ್ತೊಂದು ಅರ್ಜಿ ಸಲ್ಲಿಸಿದ್ದರು.
ನೀಲಿ ಬಣ್ಣದ ಪೆನ್‌ನಲ್ಲೇನಿತ್ತು?
ಇದಲ್ಲದೆ ರೋಲ್ಯಾಂಡ್‌ರವರು 2021ರ ಆಗಸ್ಟ್ 1ರಂದು ಬೆಳಗ್ಗೆ ಸುಮಾರು 10:00 ಗಂಟೆಗೆ ತಮ್ಮ ಮನೆಯ ಮುಂದಿರುವ ಗಿಡಗಳಿಗೆ ನೀರು ಹಾಕುತ್ತಿರುವಾಗ ಒಂದು ಪಾಟಿನ ಹಿಂದೆ ಬಿದ್ದಿದ್ದ ನೀಲಿ ಬಣ್ಣದ ಪೆನ್‌ನ್ನು ಪತ್ತೆ ಹಚ್ಚಿದ್ದರು. ಆ ಪೆನ್ ಹೊಸಾ ಪೆನ್ ರೀತಿಯಲ್ಲಿ ಕಾಣುತ್ತಿದ್ದುದರಿಂದ ತೆಗೆದುಕೊಳ್ಳಲು ಮುಂದಾಗಿದ್ದರು. ಅದರ ಹತ್ತಿರ ಹೋಗುತಿದ್ದ ಹಾಗೆ ಪೆನ್ನಿನ ಕ್ಯಾಪ್ ಪಾರದಶಕವಾಗಿದ್ದುದರಿಂದ ಅದರೊಳಗೆ ಒಂದು ಬ್ಲೇಡ್ ಇದ್ದದ್ದನ್ನು ಪತ್ತೆ ಹಚ್ಚಿದ್ದರು. ಹೀಗಾಗಿ ಆ ಪೆನ್‌ನ್ನು ಮುಟ್ಟದೆ ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದರು.
ಮಾಹಿತಿ ನೀಡಿ ಒಂದು ದಿನ ಕಳೆದರೂ ಪೊಲೀಸರು ವಸ್ತುವನ್ನು ಸಂಗ್ರಹಿಸಲಿಲ್ಲ. ಹೀಗಾಗಿ ರೋಲ್ಯಾಂಡ್, 2021ರ ಆಗಸ್ಟ್ 2ರಂದು ಇನ್ಸ್‌ಪೆಕ್ಟರ್ ಶಂಕರ್ ಆಚಾರ್ ರವರಿಗೆ ಕರೆ ಮಾಡಿದ್ದರಲ್ಲದೆ ವಸ್ತುವನ್ನು ಸಂಗ್ರಹಿಸಿಕೊಳ್ಳದಿದ್ದರೆ ಆಯುಕ್ತರಿಗೆ ದೂರು ನೀಡಬೇಕಾಗುವುದು ಎಂದು ಎಚ್ಚರಿಸಿದ್ದರು. ಹೀಗಾಗಿ ಸ್ಥಳಕ್ಕೆ ಮಠಪತಿ ಹಾಗು ಮತ್ತೊಬ್ಬರು ಬಂದು ವಸ್ತುವನ್ನು ವಶಕ್ಕೆ ಪಡೆದಿದ್ದರು.
ಈ ಮಧ್ಯೆ ರೋಲ್ಯಾಂಡ್ ತಮ್ಮ ಮನೆಯ ಬಳಿ ಹಾಕಲಾಗಿರುವ ಸಿ.ಸಿ.ಟಿ.ವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದರು. ಅದರಲ್ಲಿ ಮಧು ಎಂಬ ಅಪರಿಚಿತ ವ್ಯಕ್ತಿಯನ್ನು ಸ್ಥಳೀಯರು ಹಿಡಿದುಕೊಂಡು ಹೋಗುವಾಗ ಎಲ್ಲರ ಗಮನ ತಪ್ಪಿಸಿ ಮಧು ಮತ್ತೊಬ್ಬನ ಕೈಗೆ ಅನುಮಾನಾಸ್ಪದವಾಗಿ ವಸ್ತುವೊಂದನ್ನು ನೀಡಿದ್ದು ಸೆರೆಯಾಗಿತ್ತು ಎಂದು ರೊಲ್ಯಾಂಡ್ ಅವರು ವಿವರಿಸಿದ್ದಾರೆ.