ಠೇವಣಿದಾರರಿಗೆ ವಂಚನೆ; ಕಣ್ವ ಸೊಸೈಟಿ ವಹಿವಾಟಿನ ದಾಖಲಾತಿಗಳೇ ಲಭ್ಯವಿಲ್ಲ!

ಬೆಂಗಳೂರು; ಸಾರ್ವಜನಿಕರ ಕೋಟ್ಯಾಂತರ ರುಪಾಯಿ ವಂಚಿಸಿರುವ ಆರೋಪಕ್ಕೆ ಗುರಿಯಾಗಿರುವ ಕಣ್ವ ಸೌಹಾರ್ದ ಕೋ-ಆಪರೇಟಿವ್ ಕ್ರೆಡಿಟ್ ಲಿಮಿಟೆಡ್‌ನ ಅವ್ಯವಹಾರದ ಸ್ಪಷ್ಟ ಚಿತ್ರಣ ಇನ್ನೂ ದೊರೆತಿಲ್ಲ! ಹೀಗಾಗಿ ಠೇವಣಿದಾರರ ಹಿತರಕ್ಷಣೆ ಸದ್ಯಕ್ಕೆ ದೂರದ ಮಾತಾಗಿದೆ.

ಕಂಪನಿಯ ವ್ಯವಹಾರಗಳ ಕುರಿತು ಲೆಕ್ಕ ಪರಿಶೋಧನೆ ನಡೆದಿದ್ದರೂ ಸ್ಪಷ್ಟ ದಾಖಲಾತಿಗಳು ದೊರೆಯುತ್ತಿಲ್ಲ. ಕಂಪನಿಗೆ ಸಂಬಂಧಿಸಿದಂತೆ ಕಂಪ್ಯೂಟರ್‌ನಲ್ಲಿರುವ ದಾಖಲೆ ಹೊರತುಪಡಿಸಿ ಯಾವುದೇ ಲೆಡ್ಜರ್‌ಗಳು ಮತ್ತು ದಾಖಲಾತಿಗಳೇ ಲಭ್ಯವಿಲ್ಲ ಎಂಬ ಹೊಸ ಅಂಶ ಇದೀಗ ಬಹಿರಂಗಗೊಂಡಿದೆ.

ಕಣ್ವ ಸೌಹಾರ್ದ ಕೋ ಆಪರೇಟೀವ್‌ ಕ್ರೆಡಿಟ್‌ ಲಿಮಿಟೆಡ್‌ ಕಂಪನಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮ ಮತ್ತು ಅವ್ಯವಹಾರಗಳ ಬಗ್ಗೆ ಸ್ಪಷ್ಟ ಚಿತ್ರಣ ಪಡೆಯುವ ಸಂಬಂಧ ವಿಧಿ ವಿಜ್ಞಾನ ಲೆಕ್ಕಪರಿಶೋಧನೆ (ಫೋರೆನ್ಸಿಕ್‌ ಆಡಿಟ್‌) ನಡೆಸಬೇಕು ಎಂದು ಕಂಪನಿಯ ಸಕ್ಷಮ ಪ್ರಾಧಿಕಾರಿ 2021ರ ಜೂನ್‌ 25ರಂದು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ದೂಷಿತ ಕಂಪನಿಗೆ ಸಂಬಂಧಿಸಿದಂತೆ ಲೆಕ್ಕಪರಿಶೋಧನೆ ವಿಚಾರದಲ್ಲಿ ವಿಸ್ತೃತವಾದ ಚರ್ಚೆ ನಡೆದಿರುತ್ತದೆ. ಅದರಂತೆ ಸಭೆಯಲ್ಲಿ ಹಾಜರಿದ್ದ ತನಿಖಾಧಿಕಾರಿಗಳು ದೂಷಿತ ಸಂಸ್ಥೆಗೆ ಸಂಬಂಧಿಸಿದಂತೆ ಕೇವಲ ಕಂಪ್ಯೂಟರ್‌ನಲ್ಲಿ ಲಭ್ಯವಿರುವ ದಾಖಲೆಗಳನ್ನು ಹೊರತುಪಡಿಸಿ ಇತರೆ ಯಾವುದೇ ಲೆಡ್ಜರ್‌ಗಳು ಮತ್ತು ದಾಖಲಾತಿಗಳು ಲಭ್ಯವಿರುವುದಿಲ್ಲವೆಂದು ತಗಿಳಿಸಿ ಫೋರೆನ್ಸಿಕ್‌ ಆಡಿಟ್‌ನಿಂದ ಮಾತ್ರ ಅವ್ಯವಹಾರದ ಸ್ಪಷ್ಟ ಚಿತ್ರಣ ದೊರೆಯಬಹುದು,’ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವುದು ಪತ್ರದಿಂದ ತಿಳಿದು ಬಂದಿದೆ.

ಈ ವಿಚಾರದಲ್ಲಿ ಸಕ್ಷಮ ಪ್ರಾಧಿಕಾರವು ಕೆಪಿಐಡಿ ಕಾಯ್ದೆ 2004ರ ಅನ್ವಯ ಠೇವಣಿದಾರರ ಹಿತರಕ್ಷಣೆಗಾಗಿ ತುರ್ತಾಗಿ ಕಾರ್ಯನಿರ್ವಹಿಸಬೇಕು. ಕಣ್ವ ಸೌಹಾರ್ದ ಕೋ ಆಪರೇಟಿವ್‌ ಕ್ರೆಡಿಟ್‌ ಲಿಮಿಟೆಡ್‌ ದೂಷಿತ ಕಂಪನಿಗೆ ಫೋರೆನ್ಸಿಕ್‌ ಆಡಿಟ್‌ ಕಾರ್ಯ ತುರ್ತಾಗಿ ನಡೆಸಬೇಕು ಎಂದು ಎಂದು ಪತ್ರದಲ್ಲಿ ಸಕ್ಷಮ ಪ್ರಾಧಿಕಾರಿ ಕೋರಿದ್ದಾರೆ.

“ಸೊಸೈಟಿ ಸದಸ್ಯರು ಮತ್ತು ಸಾರ್ವಜನಿಕರಿಂದ 2019ರ ಮಾರ್ಚ್‌ ವೇಳೆಗೆ ಸುಮಾರು 642.31 ಕೋಟಿ ರೂ.ಗಳನ್ನು ಠೇವಣಿ ರೂಪದಲ್ಲಿ ಸಂಗ್ರಹಿಸಿದೆ ಮತ್ತು ಹಲವು ಕಂಪನಿಗಳು ಮತ್ತು ಸಂಸ್ಥೆಗಳಿಗೆ 416 ಕೋಟಿ ರೂ. ಸಾಲ ನೀಡಿದೆ. ಆದರೆ ಆ ಸಾಲ ವಸೂಲಿಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಹಾಗಾಗಿ ಇಡೀ ವಹಿವಾಟಿನ ಬಗ್ಗೆ ಫೊರೆನ್ಸಿಕ್‌ ಆಡಿಟ್‌ ನಡೆಸಬೇಕು,’’ ಎಂದು ಅರ್ಜಿದಾರರು ಕೋರಿದ್ದನ್ನು ಸ್ಮರಿಸಬಹುದು.

ಸಾರ್ವಜನಿಕರ ಕೋಟ್ಯಾಂತರ ರುಪಾಯಿ ವಂಚಿಸಿರುವ ಕಣ್ವ ಸೌಹಾರ್ದ ಕೋ-ಆಪರೇಟಿವ್ ಕ್ರೆಡಿಟ್ ಲಿಮಿಟೆಡ್’ನ ರೂ.255.17 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್.ನಂಜುಡಯ್ಯ ಮತ್ತವರ ಕುಟುಂಬಸ್ಥರಿಗೆ ಸೇರಿದ ಕೃಷಿ, ಕೃಷಿಯೇತರ ಭೂಮಿ, ಕಟ್ಟಡಗಳು, ರೆಸಾರ್ಟ್’ಗಳು, ಬ್ಯಾಂಕ್ ಖಾತೆಯಲ್ಲಿದ್ದ ಹಣ, ಸಂಸ್ಥೆಯ ಇತರ ನಿರ್ದೇಶಕರ ಹೆಸರಲ್ಲಿರುವ ಆಸ್ತಿ ಸೇರಿ ರೂ.255.17 ಕೋಟಿ ಮೌಲ್ಯದ ಆಸ್ತಿ-ಪಾಸ್ತಿ ಜಪ್ತಿ ಮಾಡಲಾಗಿದೆ.

ನಂಜುಂಡಯ್ಯ ಕುಟುಂಬಸ್ಥರ ಹೆಸರಿಲ್ಲಿಯೇ 160 ಚರ ಮತ್ತು ಸ್ಥಿರಾಸ್ತಿ ಇದ್ದು, ಇದನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ರಿಟರ್ನ್ ನೀಡುವಷ್ಟು ವಹಿವಾಟು ಅಥವಾ ಹಣದ ಹರಿವು ಇಲ್ಲದೇ ಇದ್ದರೂ ಹೂಡಿಕೆ ಮೇಲೆ ಹೆಚ್ಚಿನ ಬಡ್ಡಿ ಕೊಡುವುದಾಗಿ ಹೇಳಿ ರೂ.650 ಕೋಟಿಯನ್ನು ಕಣ್ವ ಸಂಗ್ರಹಿಸಿದೆ. ಆದರೆ, ಮೆಚ್ಯುರಿಟಿ ಬಳಿಕ ಠೇವಣಿ ಹಣ, ಬಡ್ಡಿ ಮರಳಿಸಿಲ್ಲ. ಸಾರ್ವಜನಿಕರು ಹೂಡಿಕೆ ಮಾಡಿದ ಹಣವನ್ನು ಸಾಲದ ರೂಪದಲ್ಲಿ ಬೇರೆಯವರಿಗೆ ವರ್ಗಾಯಿಸಿದ್ದಾರೆ.

ಮರುಪಾವತಿಗಳು ಮತ್ತು ಲಭ್ಯವಿರುವ ಸಂಪನ್ಮೂಲ ಸಾಮರ್ಥ್ಯ ಮೀರಿ ವಹಿವಾಟು ನಡೆಸಲಾಗಿದೆ. ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸಿ ವಹಿವಾಟು ನಡೆಸಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಇಡಿ ತಿಳಿಸಿತ್ತು.

ಶ್ರೀ ಕಣ್ವ ಸೌಹಾರ್ದ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಅವ್ಯವಹಾರ ಪ್ರಕರಣದಲ್ಲಿ ಠೇವಣಿದಾರರ ಹಿತಾಸಕ್ತಿ ರಕ್ಷಿಸಲು ಯಾವುದೇ ಕ್ರಮ ಕೈಗೊಳ್ಳದ ಸರಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್‌, ಸ್ವತಂತ್ರ ತನಿಖೆಗೆ ಆದೇಶಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.

SUPPORT THE FILE

Latest News

Related Posts