ಜುಲೈ 10ರಂದೇ ರಾಜೀನಾಮೆ ಪತ್ರ; ಆಷಾಢ ಮಾಸದಲ್ಲಿ ರಾಜೀನಾಮೆ ಸಲ್ಲಿಸಲು ಹಿಂದೇಟು ಹಾಕಿದ್ದರೇ?

ಬೆಂಗಳೂರು; ಬಿ ಎಸ್‌ ಯಡಿಯೂರಪ್ಪ ಅವರು ತಮ್ಮನ್ನು ಮುಖ್ಯಮಂತ್ರಿ ಹುದ್ದೆ ಜವಾಬ್ದಾರಿಯಿಂದ ಬಿಡುಗಡೆಗೊಳಿಸಲು ಜುಲೈ 10ರಂದೇ ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನಿ ಮೋದಿ ಅವರಿಗೆ ನೀಡಿದ್ದರು ಎಂಬ ಸಂಗತಿಯನ್ನು ಖ್ಯಾತ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಬಹಿರಂಗಗೊಳಿಸಿದ್ದಾರೆ.

16 ದಿನದ ಮೊದಲೇ ರಾಜೀನಾಮೆ ಪತ್ರವನ್ನು ಯಡಿಯೂರಪ್ಪ ಅವರು ಮೋದಿ ಅವರಿಗೆ ನೀಡಿದ್ದರೂ ಈ ಕೊನೆಯ ದಿನಗಳಲ್ಲಿ ರಾಜೀನಾಮೆ ನಾಟಕವನ್ನಾಡುವ ಅವಶ್ಯಕತೆ ಇರಲಿಲ್ಲ. ಅಲ್ಲದೆ ಅವರ ಆರೋಗ್ಯದ ಕಾರಣದಿಂದ ಸ್ವಯಂ ಪ್ರೇರಿತರಾಗಿ ರಾಜೀನಾಮೆ ಪತ್ರವನ್ನು ಪ್ರಧಾನಿ ಮೋದಿಗೆ 2021ರ ಜುಲೈ 10ರಂದು ನೀಡಿದಾಕ್ಷಣವೇ ಅವರ ರಾಜಕೀಯ ಹಣೆಬರಹವೂ ನಿರ್ಧರಿತವಾಗಿತ್ತು ಎಂದು ಟೈಮ್ಸ್‌ ಆಫ್‌ ಇಂಡಿಯಾಗೆ ಬರೆದ ವಿಶೇಷ ವರದಿಯಲ್ಲಿ ಸುಗತ ಅವರು ವಿವರಿಸಿದ್ದಾರೆ.

ಪ್ರಧಾನಿಗೆ ಬರೆದ ಪತ್ರದ ಬಗ್ಗೆ ಯಡಿಯೂರಪ್ಪ ಅವರಿಗೆ ಪೂರ್ಣ ತಿಳಿವಳಿಕೆ ಇತ್ತು. ಹಾಗೂ ಜುಲೈ 16ರಂದು ಆದ ಮುಖಾಮುಖಿ ಭೇಟಿಯಲ್ಲಿ ರಾಜೀನಾಮೆಗೆ ಒಪ್ಪಿದ್ದರೂ ಸಹ ಈ ಕೊನೆಯ ದಿನಗಳಲ್ಲಿ ಯಡಿಯೂರಪ್ಪ ಅವರು ಬಿಜೆಪಿಯ ಕೇಂದ್ರ ನಾಯಕರ ಕರೆಗೆ ಅಥವಾ ನಿಶಾನೆಗೆ ಕಾಯುತ್ತಿದ್ದಂತೆ ಬಿಂಬಿಸಿದ್ದರು ಎಂಬ ಸಂಗತಿಯನ್ನು ಸುಗತ ಅವರು ಬರೆದಿರುವ ವರದಿಯು ಹೊರಗೆಡವಿದೆ.

ವಾಸ್ತವದಲ್ಲಿ ಬಿ ಎಸ್‌ ಯಡಿಯೂರಪ್ಪ ಅವರು ಆಗಸ್ಟ್‌ 15ರವರೆಗೂ ಮುಖ್ಯಮಂತ್ರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಬಯಸಿದ್ದರು. ಆದರೆ ಆಗಸ್ಟ್‌ವರೆಗೂ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಪ್ರಧಾನಿ ಮೋದಿ ಮತ್ತು ಪಕ್ಷ ಬಯಸಿರಲಿಲ್ಲ. ಹೀಗಾಗಿ ಬೇರೆ ದಾರಿಯಿಲ್ಲದೆ ಯಡಿಯೂರಪ್ಪ ಅವರು ಜುಲೈ 10ರಂದು ಮೋದಿ ಅವರಿಗೆ ಪತ್ರ ಬರೆದಿದ್ದರು. ಈ ಪತ್ರವು ಜುಲೈ 11ಕ್ಕೆ ಮೋದಿ ಕೈ ಸೇರಿತ್ತು ಎಂಬ ಸಂಗತಿ ವಿಶೇಷ ವರದಿಯಿಂದ ತಿಳಿದು ಬಂದಿದೆ.

ಯಡಿಯೂರಪ್ಪ ಅವರ ಪತ್ರವು ಜುಲೈ 11ಕ್ಕೆ ಕೈ ಸೇರಿದ ನಂತರವಷ್ಟೇ ಯಡಿಯೂಪ್ಪ ಅವರನ್ನು ಭೇಟಿಯಾಗಲು ಮೋದಿ ಒಪ್ಪಿಕೊಂಡಿದ್ದರು. ಕಡೆಗೆ ಜುಲೈ 16ರಂದು ಯಡಿಯೂರಪ್ಪ ಅವರು ಮೋದಿ ಭೇಟಿ ಮಾಡಲು ಅನುಮತಿ ದೊರೆತಿತ್ತು. ಅಲ್ಲಿಯವರೆಗೂ ಮೋದಿ ಅವರನ್ನು ಭೇಟಿ ಮಾಡಲು ಯಡಿಯೂರಪ್ಪ ಅವರು ಮಾಡಿದ್ದ ದೆಹಲಿ ಯಾತ್ರೆಗಳೆಲ್ಲವೂ ವಿಫಲವಾಗಿದ್ದವು ಎಂಬ ಅಂಶ ವಿಶೇಷ ವರದಿಯಿಂದ ಗೊತ್ತಾಗಿದೆ.

ಮೋದಿಗೆ ಬರೆದ ಪತ್ರದಲ್ಲೇನಿದೆ?

ಜನರ ಸೇವೆ ಮಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ನಾನು ನಿಮಗೆ ಕೃತಜ್ಞನಾಗಿದ್ದೇನೆ. ನನ್ನ ಪ್ರಸ್ತುತ ಆರೋಗ್ಯ ಪರಿಸ್ಥಿತಿ ಕಾರಣದಿಂದ ಆಡಳಿತಕ್ಕೆ ಪೂರ್ಣ ನ್ಯಾಯವನ್ನು ಒದಗಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ನನ್ನನ್ನು ಮುಖ್ಯಮಂತ್ರಿ ಹುದ್ದೆಯಿಂದ ಬಿಡುಗಡೆಗೊಳಿಸಬೇಕು. ಮುಂದಿನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಯಲ್ಲಿ ನಾನು ಪೂರ್ಣ ಸಹಕಾರವನ್ನು ನೀಡುತ್ತೇನೆ. ಮತ್ತು ಪಕ್ಷಕ್ಕೆ ಹಾಗೂ ಜನರ ಒಳಿತಿಗೆ ನನ್ನ ಕೆಲಸವನ್ನು ಮುಂದುವರೆಸುತ್ತೇನೆ. ನಿಮ್ಮ ನೇತೃತ್ವದಲ್ಲಿ ರಾಷ್ಟ್ರವನ್ನು ಕಟ್ಟುವ ಕಾರ್ಯದಲ್ಲಿ ನನ್ನ ಸೇವೆಯನ್ನು ಸಲ್ಲಿಸುತ್ತೇನೆ. ದಯವಿಟ್ಟು ನನ್ನ ರಾಜೀನಾಮೆಯನ್ನು ಅಂಗೀಕರಿಸಿ ಮತ್ತು ನನ್ನನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಎಂದು ಪತ್ರದಲ್ಲಿ ಕೋರಿದ್ದಾರೆ ಎಂಬ ಸಂಗತಿ ಸುಗತ ಅವರು ಬರೆದ ವರದಿಯಿಂದ ತಿಳಿದು ಬಂದಿದೆ.

ಆಷಾಢ ಮಾಸದಲ್ಲಿ ರಾಜೀನಾಮೆ ಸಲ್ಲಿಸಲು ಹಿಂದೇಟು ಹಾಕಿದ್ದರೇ?

ಕುತೂಹಲಕಾರಿ ಅಂಶವೆಂದರೆ ಮೋದಿ ಮತ್ತು ಯಡಿಯೂರಪ್ಪ ಅವರ ಮುಖಾಮುಖಿ ಭೇಟಿ ಕಳೆದ 10 ವರ್ಷದಲ್ಲಿ ಸಾಧ್ಯವಾಗಿರಲಿಲ್ಲ. ಮೋದಿ ಅವರ ಜತೆ ಭೇಟಿಯಲ್ಲಿ ಯಡಿಯೂರಪ್ಪ ಅವರು ಆಗಸ್ಟ್‌ 15ರವರೆಗೆ ಅಧಿಕಾರದಲ್ಲಿರಲು ಅವಕಾಶ ಕೊಡಿ ಎಂದು ಕೋರಿದ್ದರು. ಹಾಗೂ ಆಷಾಢ ಮಾಸದಲ್ಲಿ ರಾಜೀನಾಮೆ ಕೊಡಲು ಯಡಿಯೂರಪ್ಪ ಅವರು ಬಯಸಿರಲಿಲ್ಲ.

ಆದರೆ ಮೋದಿ ಅವರು ಯಡಿಯೂರಪ್ಪ ಅವರ ರಾಜೀನಾಮೆಗೆ ಜುಲೈ 26ರ ಗಡವುನ್ನು ನೀಡಿದ್ದರು. ಹೀಗಾಗಿ ರಾಜೀನಾಮೆ ನೀಡದೇ ಬೇರೆ ದಾರಿಯೂ ಯಡಿಯೂರಪ್ಪ ಅವರಿಗಿರಲಿಲ್ಲ. ವಿಶೇಷವೆಂದರೆ ಯಡಿಯೂರಪ್ಪ ಅವರು 2 ವರ್ಷದ ಅಧಿಕಾರ ಪೂರ್ಣಗೊಳ್ಳುವ ದಿನವೂ ಜುಲೈ 26ರಂದೇ ಆಗಿತ್ತು ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

the fil favicon

SUPPORT THE FILE

Latest News

Related Posts