ಬೆಂಗಳೂರು; ಕೋವಿಡ್ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ , ಆಂಪೋಟೆರಿಸಿನ್ ಬಿ ಔಷಧ ಖರೀದಿಯಲ್ಲಿನ ಅಕ್ರಮ ಮತ್ತು ಮೊದಲ ಬಾರಿ ಕರೆದಿದ್ದ ದರಪಟ್ಟಿ ಅಂತಿಮಗೊಳಿಸದೆಯೇ ಸರ್ಕಾರಕ್ಕೆ ಕೋಟ್ಯಂತರ ರುಪಾಯಿನಷ್ಟು ನಷ್ಟ ಸಂಭವಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಯಾವುದೇ ದಾಖಲಾತಿ ಮತ್ತು ವಿವರಗಳನ್ನು ನೀಡದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನುಣುಚಿಕೊಳ್ಳುವ ಚಾಳಿಯನ್ನು ಮುಂದುವರೆಸಿದೆ.
ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್, ಆಂಪೋಟೆರಿಸಿನ್ ಚುಚ್ಚುಮದ್ದು ಸೇರಿದಂತೆ ಇನ್ನಿತರೆ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳ ಕುರಿತು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಕೇಳಿದ್ದ ಪ್ರಶ್ನಾವಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಗಡುವು ಮೀರಿದರೂ ಉತ್ತರ ನೀಡಿಲ್ಲ.
ಬದಲಿಗೆ ಮೂರು ವಾರಗಳ ಕಾಲಾವಕಾಶ ನೀಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ ಕೆ ಅನಿಲ್‌ಕುಮಾರ್ ಅವರು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಗೆ 2021ರ ಜುಲೈ 15ರಂದು ಪತ್ರ ಬರೆದಿದ್ದಾರೆ ಎಂದು ಗೊತ್ತಾಗಿದೆ.
ಸಮಿತಿ ಪ್ರಶ್ನಾವಳಿಗಳಿವು
ಮೊದಲ ಬಾರಿಗೆ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಕಿಟ್‌ಗಳನ್ನು ಖರೀದಿಸಲು ಆಹ್ವಾನಿಸಿದ್ದ ದರಪಟ್ಟಿಯನ್ನು ಯಾಕೆ ಅಂತಿಮಗೊಳಿಸಲಿಲ್ಲ?
ಬಹುಪಾಲು ಮೊದಲ ಬಾರಿ ದರಪಟ್ಟಿ ಸಲ್ಲಿಸಿದ್ದ ಕಂಪನಿಗಳೇ ಎರಡನೇ ಬಾರಿ ದರಪಟ್ಟಿ ಆಹ್ವಾನದ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರೂ ಟೆಂಡರ್ ಪ್ರಕ್ರಿಯೆಯನ್ನು ಅಂತಿಮಗೊಳಿಸುವಲ್ಲಿ ಏಕೆ ವಿಳಂಬವಾಯಿತು?
ಉತ್ತರ ಪ್ರದೇಶದ ದರಪಟ್ಟಿಯಂತೆ ಯಾವ ಕಾರಣದಿಂದ ದರವನ್ನು ನಿಗದಿಪಡಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಯಿತು?
ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಿಯೂ ವೆಂಟಿಲೇಟರ್‌ಗಳ ಅಭಾವವಿರಲಿಲ್ಲವೇ?
ಬೆಂಗಳೂರಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಸೋಂಕಿತರ ಅವಶ್ಯಕತೆ ಅನುಗುಣವಾಗಿ ವೆಂಟಿಲೇಟರ್‌ಗಳ ಲಭ್ಯತೆಯಿದೆಯೇ?
ಐವರ್ ಮೆಕ್ಟಿನ್ ಔಷಧವನ್ನು ಎಷ್ಟು ಪ್ರಮಾಣದಲ್ಲಿ ಖರೀದಿಸಲಾಗಿದೆ?
ಕೇಂದ್ರವು ಮಾರ್ಗಸೂಚಿಗಳನ್ನು (ಕೋವಿಡ್ ಸೋಂಕಿತರ ನಿರ್ವಹಣೆ) ನೀಡಿ ನಿರ್ಬಂಧ ಏರಿದ್ದರಿಂದ ಚಿಕಿತ್ಸಾ ಪದ್ಧತಿಗಳಲ್ಲಿ ಮಾಡಿರುವ ಬದಲಾವಣೆಗಳೇನು?
ಖರೀದಿಸಿದ ಐವರ್‌ಮೆಕ್ಟಿನ್ ಔಷಧಗಳು ಎಷ್ಟು ಪ್ರಮಾಣದಲ್ಲಿ ದಾಸ್ತಾನು ಉಳಿದಿದೆ ಮತ್ತು ಮುಂದಿನ ವಿಲೇವಾರಿ ಕ್ರಮಗಳೇನು?
ಮೈಲಾನ್ ಫಾರ್ಮಾಸ್ಯುಟಿಕಲ್ಸ್ ಸಂಸ್ಥೆ ಎರಡನೇ ಕನಿಷ್ಠ ಬಿಡ್‌ದಾರರಾಗಿದ್ದರೂ ಆ ಸಂಸ್ಥೆಯಿಂದ ಆಂಪೋಟೆರಿಸಿನ್ ಔಷಧ ಖರೀದಿಸಿದ್ದರಿಂದ ರಾಜ್ಯ ಬೊಕ್ಕಸಕ್ಕೆ ಹೆಚ್ಚುವರಿಯಾಗಿ ಖರ್ಚಾಗಿರುವ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುವುದು
ಕೇಂದ್ರ ಸರ್ಕಾರದ ಲಸಿಕೆ ಖರೀದಿ ನೀತಿಯಿಂದ (ಪರಿಷ್ಕೃತ ಮೇ 26) ನೀಡುವುದಕ್ಕೂ ಮುಂಚೆ ರಾಜ್ಯ ಸರ್ಕಾರವು 18ರಿಂದ 44 ವಯಸ್ಸಿನವರ ಲಸಿಕೆಗೆ ಮಾಡಲಾದ ವೆಚ್ಚಗಳ ವಿವರ (ಲಸಿಕೆ, ಲಸಿದೆ ದರ, ಕೇಂದ್ರಕ್ಕೆ ದೊರೆಯುವ ದರ ವ್ಯತ್ಯಾಸ)
ಬೆಡ್ ಹಂಚಿಕೆ ಕುರಿತಂತೆ ನಡೆದಿದೆಯೆನ್ನಲಾದ ಅಕ್ರಮದ ಕುರಿತು ಇಲಾಖೆಯು ತೆಗೆದುಕೊಂಡ ಕ್ರಮಗಳು?
ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆಯಿಂದ ಉಂಟಾದ ಸಾವಿನ ಪ್ರಕರಣ, ಇಲಾಖೆಯು ಆಕ್ಸಿಜನ್ ಪೂರೈಕೆಯಲ್ಲಿ ಅಳವಡಿಸಿಕೊಂಡಿದ್ದ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿ
ರಾಜ್ಯದಲ್ಲಾದ ಕೋವಿಡ್ ಸಾವಿನ ಬಗ್ಗೆ ನಿಖರವಾದ ಮಾಹಿತಿ (ಡೆತ್ ಆಡಿಟ್)
ರಾಜ್ಯದಲ್ಲಿ ನಿರ್ದಿಷ್ಟವಾಗಿ ಇಂತಹ ಸಮಯದಲ್ಲೇ ವ್ಯಾಕ್ಸಿನ್ ಪೋರ್ಟಲ್‌ನ್ನು ಏಕೆ ತೆರೆಯುತ್ತಿಲ್ಲ, ಇದರಿಂದ ಜನಸಾಮಾನ್ಯರು ತೊಂದರೆ ಅನುಭವಿಸಿಲಭ್ಯವಿರುವ ಲಸಿಕೆಯನ್ನು ತಮಗೆ ಬೇಕಾದವರಿಗೆ ನೀಡುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ. ಇದರ ಕುರಿತು ಮಾಹಿತಿ ನೀಡಿ
ವೈದ್ಯಕೀಯ ಉಪಕರಣ ಮತ್ತು ಔಷಧ ಖರೀದಿ ಸಂಬಂಧ ಕಂಪನಿಗಳಿಗೆ ಮತ್ತು ಸರಬರಾಜುದಾರರಿಗೆ ಖರೀದಿ ಆದೇಶವನ್ನೂ ನೀಡಲಾಗಿದೆ. ಇದರ ಸಮಗ್ರ ಮಾಹಿತಿಯೂ ಸರ್ಕಾರದ ಬಳಿ ಇದೆ. ಆದರೂ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಕೇಳಿರುವ ಪ್ರಶ್ನಾವಳಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಉತ್ತರಿಸದೇ ನುಣುಚಿಕೊಳ್ಳುತ್ತಿರುವುದು ಮತ್ತು ಉತ್ತರಿಸಲು ವಿಳಂಬ ಮಾಡುತ್ತಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.