ಬೆಂಗಳೂರು; ಆಡಳಿತಾತ್ಮಕ ಲೋಪ, ಲೆಕ್ಕಪತ್ರಗಳಲ್ಲಿನ ವ್ಯತ್ಯಾಸ, ನಿಯಮಬಾಹಿರ ಚಟುವಟಿಕೆಗಳೂ ಸೇರಿದಂತೆ ಇನ್ನಿತರೆ ಗಂಭೀರ ಲೋಪಗಳನ್ನು ಎಸಗಿರುವ ಆರೋಪಕ್ಕೆ ಗುರಿಯಾಗಿರುವ ಇಸ್ಕಾನ್-ಅಕ್ಷಯ ನಿಧಿ ಫೌಂಡೇಷನ್ ಇದೀಗ ಪೌರ ಕಾರ್ಮಿಕರಿಗೆ ಬಿಸಿಯೂಟ ಯೋಜನೆ ಗುತ್ತಿಗೆಯಿಂದ ಹಿಂದೆ ಸರಿದಿದೆ. ಆದರೆ ತನ್ನದೇ ಮತ್ತೊಂದು ಅಂಗಸಂಸ್ಥೆಯಾಗಿರುವ ಟಚ್ ಸ್ಟೋನ್ ಫೌಂಡೇಷನ್ ಮೂಲಕ ಬಿಸಿಯೂಟ ಯೋಜನೆ ಗುತ್ತಿಗೆ ಹಿಡಿಯಲು ಮುಂದಾಗಿರುವುದನ್ನು ‘ದಿ ಫೈಲ್’ ಇದೀಗ ಹೊರಗೆಡವುತ್ತಿದೆ.
ಈ ಮೊದಲು ಬಿಸಿಯೂಟ ಸರಬರಾಜಿನ ಗುತ್ತಿಗೆಯನ್ನು ಇಂದಿರಾ ಕ್ಯಾಂಟೀನ್ ಬದಲಿಗೆ ಅಕ್ಷಯ ನಿಧಿ ಫೌಂಡೇಷನ್‌ಗೆ ನೀಡಲು ಬಿಬಿಎಂಪಿಯು ಆರ್ಥಿಕ ಇಲಾಖೆಯ ಸಹಮತಿ ಕೋರಿತ್ತು. ಇದಕ್ಕೆ ಆರ್ಥಿಕ ಇಲಾಖೆ ಸಹಮತಿ ವ್ಯಕ್ತಪಡಿಸುವ ಮುನ್ನವೇ ಅಕ್ಷಯ ನಿಧಿ ಫೌಂಡೇಷನ್‌ನ ಮತ್ತೊಂದು ಅಂಗ ಸಂಸ್ಥೆ ಟಚ್ ಸ್ಟೋನ್ ಫೌಂಡೇಷನ್‌ಗೆ ಕಾರ್ಯಾದೇಶ ನೀಡಲು ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸಿದೆ.
ಇದೇ ಪ್ರಸ್ತಾವನೆಯನ್ನು ಒಪ್ಪಿರುವ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯು ಮುಖ್ಯ ಆಯುಕ್ತರು ಟಚ್ ಸ್ಟೋನ್ ಫೌಂಡೇಷನ್ ಪ್ರತಿಷ್ಠಾನದಿಂದ ಬಿಸಿಯೂಟ ಪಡೆದುಕೊಳ್ಳಲು ಮತ್ತು ಕೆಟಿಪಿಪಿ ಕಾಯ್ದೆಯ 4(ಜಿ) ಅಡಿ ವಿನಾಯಿತಿ ಕೋರಿ ಸರ್ಕಾರಕ್ಕೆ ಮರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2021ರ ಮೇ 26ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಇಂದಿರಾ ಕ್ಯಾಂಟೀನ್ ಮೂಲಕ ನೀಡುತ್ತಿದ್ದ ರೈಸ್‌ಬಾತ್, ಪಲಾವ್ ಇತ್ಯಾದಿಗಳ ಬದಲಿಗೆ ಪ್ರತಿ ದಿನ ಅನ್ನ ಸಾಂಬರ್, ಕರಿ, ಉಪ್ಪಿನಕಾಯಿಯನ್ನು 20 ರು. ದರದಲ್ಲಿಯೇ ವಿತರಿಸಲು ಅಕ್ಷಯ ನಿಧಿ ಫೌಂಡೇಷನ್‌ಗೆ ಬಿಬಿಎಂಪಿ ಷರತ್ತು ವಿಧಿಸಿತ್ತು. ಆದರೀಗ ದರದಲ್ಲಿ 3 ರು. ಹೆಚ್ಚಳ ಮಾಡಿ ಟಚ್ ಸ್ಟೋನ್ ಫೌಂಡೇಷನ್‌ಗೆ ಗುತ್ತಿಗೆ ನೀಡಲು ಪರಿಷ್ಕೃತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
‘ಅಕ್ಷಯ ನಿಧಿ ಫೌಂಡೇಷನ್‌ನ ಬದಲಾಗಿ ಟಚ್ ಸ್ಟೋನ್ ಫೌಂಡೇಷನ್ ಸಂಸ್ಥೆಯ ಹೆಸರಿನಲ್ಲಿ ಒಡಂಬಡಿಕೆ ಮಾಡಿಕೊಂಡು ಕಾರ್ಯಾದೇಶವನ್ನು ನೀಡಲು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ. ಕಚ್ಛಾ ವಸ್ತುಗಳು, ಅಡುಗೆ ಅನಿಲ ಹಾಗೂ ಇಂಧನ ವೆಚ್ಚವು ಅಧಿಕವಾಗಿರುವ ಕಾರಣ ಸಾರಿಗೆ ವೆಚ್ಚವೂ ಹೆಚ್ಚಾಗಿರುತ್ತದೆ. ಆದ್ದರಿಂದ ಪ್ರತಿ ಊಟಕ್ಕೆ 20 ರು.ಗಳಿಂದ 22 ರು.ಗಳಿಗೆ ಹೆಚ್ಚಿಸಲು ಕೋರಿರುತ್ತಾರೆ’ ಎಂದು ಬಿಬಿಎಂಪಿಯು ಸರ್ಕಾರಕ್ಕೆ ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸಿರುವುದು ದಾಖಲೆಯಿಂದ ಗೊತ್ತಾಗಿದೆ.
ಪ್ರತಿ ಊಟಕ್ಕೆ 22 ರು.ಗಳಿಗೆ ಹೆಚ್ಚಿಸಲು ಪ್ರಸ್ತಾವನೆ ಕೋರಿದ್ದ ಬಿಬಿಎಂಪಿಯು ‘ಟಚ್ ಸ್ಟೋನ್ ಫೌಂಡೇಷನ್ ಸಂಸ್ಥೆಯವರು ವಾರದ ಎಲ್ಲಾ 7 ದಿನಗಳಲ್ಲಿಯೂ ವೈವಿಧ್ಯಮಯವಾದ ಊಟ ನೀಡಲು ಸಿದ್ಧರಾಗಿರುವುದರಿಂದ ಪ್ರತಿ ಊಟಕ್ಕೆ ರು.22ಕ್ಕಿಂತ ಹೆಚ್ಚಿನ 1 ರು. ಗಳನ್ನು ಅಂದರೆ 23 ರು.ಗಳನ್ನು ಪಾವತಿಸಲು ಕೋರಿರುವುದು,’ ಪ್ರಸ್ತಾವನೆಯಿಂದ ತಿಳಿದು ಬಂದಿದೆ.
ಪ್ರಕರಣದ ಹಿನ್ನೆಲೆ
ಬಿಸಿಯೂಟ ಸರಬರಾಜಿನ ಗುತ್ತಿಗೆಯನ್ನು ಇಂದಿರಾ ಕ್ಯಾಂಟೀನ್ ಬದಲಿಗೆ ಅಕ್ಷಯ ನಿಧಿ ಫೌಂಡೇಷನ್‌ಗೆ ನೀಡಲು ಬಿಬಿಎಂಪಿಯು ಆರ್ಥಿಕ ಇಲಾಖೆಯ ಸಹಮತಿ ಕೋರಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಮಿಕರಿಗೆ ಇಸ್ಕಾನ್-ಅಕ್ಷಯ ನಿಧಿ ಫೌಂಡೇಷನ್ ಸೇವೆಯನ್ನು ಯಾವ ಅವಧಿಗೆ ಪಡೆಯಲು ಉದ್ದೇಶಿಸಿದೆ, ಹಾಗೂ ಬಿಬಿಎಂಪಿ ಅಧೀನದಲ್ಲಿರುವ ಇಂದಿರಾ ಕ್ಯಾಂಟೀನ್ ಬದಲಿಗೆ ಇನ್ನೊಂದು ಬಾಹ್ಯ ಸಂಸ್ಥೆಗೆ ಬದಲಾವಣೆ ಮಾಡುತ್ತಿರುವುದಕ್ಕೆ ಕಾರಣಗಳನ್ನು ಒದಗಿಸಬೇಕು ಎಂದು ಆರ್ಥಿಕ ಇಲಾಖೆಯು ನಗರಾಭಿವೃದ್ಧಿ ಇಲಾಖೆಗೆ 2021ರ ಫೆ.4ರಂದು ಸೂಚಿಸಿತ್ತು.
‘ಇಂದಿರಾ ಕ್ಯಾಂಟೀನ್ ಮೂಲಕ ನೀಡುತ್ತಿರುವ ರೈಸ್ ಬಾತ್, ಪಲಾವ್ ಇತ್ಯಾದಿಗಳ ಬದಲಿಗೆ ಪ್ರತಿ ದಿನ ಅನ್ನ, ಸಾಂಬರ್, ಕರಿ, ಉಪ್ಪಿನಕಾಯಿಯನ್ನು ಪಡೆದುಕೊಳ್ಳವುದು. ಈ ಕುರಿತು ಪರ್ಯಾಯವಾಗಿ ಟೆಂಡರ್ ಆಹ್ವಾನಿಸಿ ಸಮಂಜಸ ದರಗಳನ್ನು ನಿರ್ಧರಿಸಿ ಸರಬರಾಜುದಾರರನ್ನು ಆಯ್ಕೆ ಮಾಡಬೇಕು. ಈ ಹಿಂದೆ ಅಕ್ಷಯ ನಿಧಿ ಫೌಂಡೇಷನ್‌ನಿಂದ ಸರಬರಾಜು ಪಡೆಯಲಾದಂತೆ ಸರ್ಕಾರದ ಅನುಮೋದನೆ ಪಡೆದು ಪುನಃ ಅಕ್ಷಯ ನಿಧಿ ಫೌಂಡೇಷನ್‌ನಿಂದಲೇ ಸರಬರಾಜು ಪಡೆದುಕೊಳ್ಳಬೇಕು’ ಎಂದು 2020ರ ಜುಲೈ 28ರಂದು ನಡೆದಿದ್ದ ಬಿಬಿಎಂಪಿಯ ಕೌನ್ಸಿಲ್ ಸಭೆಯಲ್ಲಿ ವಿಷಯ ಮಂಡಿಸಲಾಗಿತ್ತು. ಅದರಂತೆ ಸರ್ಕಾರದ ಅನುಮೋದನೆ ಪಡೆದು ಇಸ್ಕಾನ್ ಅಕ್ಷಯ ನಿಧಿ ಫೌಂಡೇಷನ್‌ನಿಂದ ಬಿಸಿಯೂಟ ಪಡೆದುಕೊಳ್ಳಲು ಬಿಬಿಎಂಪಿಯು ತೀರ್ಮಾನಿಸಿತ್ತು.
ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು 2016ರ ನವೆಂಬರ್ 8ರಂದು ರಂದು ನಡೆದಿದ್ದ ಬಿಬಿಎಂಪಿಯು ಅಕ್ಷಯ ನಿಧಿ ಫೌಂಡೇಷನ್ ಜತೆ ಒಡಂಬಡಿಕೆಯನ್ನು ಮಾಡಿಕೊಂಡಿತ್ತು. ಪಾಲಿಕೆಯ 8 ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಯಂ, ಗುತ್ತಿಗೆ ಪೌರ ಕಾರ್ಮಿಕರು, ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಚಾಲಕರಿಗೆ, ವಾಹನ ಸಹಾಯಕರು, ಮೇಲ್ವಿಚಾರಕರಿಗೆ 2018ರ ಜುಲೈ 31ರವರೆಗೆ ಬಿಸಿಯೂಟ ಸರಬರಾಜು ಮಾಡಲು 2016ರ ನವೆಂಬರ್‌ನಲ್ಲಿ ಕಾರ್ಯಾದೇಶ ನೀಡಲಾಗಿತ್ತು.
ಒಡಂಬಡಿಕೆ ಮುಕ್ತಾಯಗೊಂಡ ನಂತರ ಪಾಲಿಕೆಯು ಬಿಸಿಯೂಟ ವ್ಯವಸ್ಥೆಯನ್ನು ಸರಬರಾಜು ಮಾಡುತ್ತಿದ್ದ ಅಕ್ಷಯ ನಿಧಿ ಫೌಂಡೇಷನ್‌ನಿಂದ ಸ್ಥಗಿತಗೊಳಿಸಿ ಇಂದಿರಾ ಕ್ಯಾಂಟಿನ್ ಮೂಲಕ ಬಿಸಿಯೂಟ ಸರಬರಾಜು ಮಾಡಲು 2018ರ ಫೆ.19ರಂದು ಪಾಲಿಕೆಯ ಸಾಮಾನ್ಯ ಸಭೆ ತೀರ್ಮಾನಿಸಿತ್ತು. ಅದರಂತೆ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 20 ಇಂದಿರಾ ಕ್ಯಾಂಟಿನ್ ಅಡಿಗೆ ಮನೆಗಳನ್ನು ತೆರೆಯಲಾಗಿತ್ತು.
ಅಡಿಗೆ ಮನೆಗಳಿಂದ ಪಾಲಿಕೆಯ ಎಲ್ಲಾ 198 ವಾರ್ಡ್‌ಗಳಲ್ಲಿ (173 ಇಂದಿರಾ ಕ್ಯಾಂಟೀನ್ ಮತ್ತು 25 ಮೊಬೈಲ್ ಕ್ಯಾಂಟೀನ್) ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿಯ ಊಟ ಸರಬರಾಜು ಮಾಡಲಾಗುತ್ತಿತ್ತು. ಒಟ್ಟು 198 ವಾರ್ಡ್‌ಗಳಲ್ಲಿನ 04 ವಲಯಗಳ 111 ವಾರ್ಡ್‌ಗಳಿಗೆ (ದಕ್ಷಿಣ, ಆರ್ ಆರ್ ನಗರ, ದಾಸರಹಳ್ಳಿ, ಪಶ್ಚಿಮ ವಲಯಗಳಲ್ಲಿನ 90 ಇಂದಿರಾ ಕ್ಯಾಂಟೀನ್, 20 ಮೊಬೈಲ್ ಕ್ಯಾಂಟೀನ್) ರೂರಲ್ ಎನ್ವಿರಾಮೆಂಟ್ ವಾಟರ್ ಅಸೆಟ್ಸ್ ರಿಪ್ರೊಡಕ್ಟೀವ್ ಮೂಲಕ ಮಹದೇವಪುರ, ಪೂರ್ವ, ಬೊಮ್ಮನಹಳ್ಳಿ, ಯಲಹಂಕ ವಲಯಗಳ 83 ಇಂದಿರಾ ಕ್ಯಾಂಟೀನ್ ಮತ್ತು 5 ಮೊಬೈಲ್ ಕ್ಯಾಂಟೀನ್‌ಗಳಿಗೆ ಇಂದಿರಾ ಕ್ಯಾಂಟೀನ್ ಮೂಲಕ ಒದಗಿಸಲು ಹೊರಗುತ್ತಿಗೆ ನೀಡಲಾಗಿತ್ತು.
ಇಂದಿರಾ ಕ್ಯಾಂಟೀನ್ ಮೂಲಕ ಕೆಲ ವಾರ್ಡ್‌ಗಳಿಗೆ ಸರಬರಾಜಾದ ಊಟವು ಸೇವನೆಗೆ ಯೋಗ್ಯವಾಗಿರಲಿಲ್ಲ ಮತ್ತು ಊಟ ಸರಬರಾಜುದಾರರು ಪೌರ ಕಾರ್ಮಿಕರೊಂದಿಗೆ ಒರಟಾಗಿ ನಡೆದುಕೊಂಡಿರುವುದು, ಅಡುಗೆ ಮಾಡುವ ಪಾತ್ರೆಗಳ ಗುಣಮಟ್ಟವು ಸರಿಯಾಗಿಲ್ಲ ಎಂಬ ಕಾರಣಗಳನ್ನು ಮುಂದಿಡಲಾಗಿತ್ತು.
ಅಕ್ಷಯ ಫೌಂಡೇಷನ್‌ನ ಚಟುವಟಿಕೆಗಳ ಬಗ್ಗೆ ಫೌಂಡೇಷನ್ ಟ್ರಸ್ಟಿಗಳ ಮಧ್ಯೆ ನಡೆಯುತ್ತಿದ್ದ ಶೀತಲ ಸಮರವನ್ನು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು 2020ರ ಅಕ್ಟೋಬರ್ 17ರಂದೇ ಬಯಲುಗೊಳಿಸಿದ್ದರು. ಈ ಕುರಿತು ಸರಣಿ ಟ್ವೀಟ್ ಮಾಡಿದ್ದ ಸುಗತ ಅವರು, ಫೌಂಡೇಷನ್‌ನ ಒಳಗುಟ್ಟುಗಳನ್ನು ಸಾರ್ವಜನಿಕ ವಲಯದಲ್ಲಿ ಮುನ್ನೆಲೆಗೆ ತಂದಿದ್ದನ್ನು ಸ್ಮರಿಸಬಹುದು. ಅಲ್ಲದೆ ಇದನ್ನಾಧರಿಸಿ ವಿಧಾನಪರಿಷತ್ ಸದಸ್ಯ ಲೆಹರ್‌ಸಿಂಗ್ ಅವರು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೂ ಪತ್ರ ಬರೆದಿದ್ದನ್ನು ಸ್ಮರಿಸಬಹುದು.